ಬೆಂಗಳೂರು, (ಜನವರಿ 29): ದೇಶದ 15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ (Karnataka Rajya Sabha Election) ನಡೆಯಲಿದೆ. ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಮತ್ತು ಸೈಯದ್ ನಾಸಿರ್ ಹುಸೇನ್ ಅವರ ಅವಧಿ ಏಪ್ರಿಲ್ 2 ರಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು, ಚುನಾವಣೆ ದಿನಾಂಕ ಘೋಷಿಸಿದ್ದು, ಇದೇ ಫೆಬ್ರವರಿ 27 ಮತದಾನ ಮತ್ತು ಮತ ಎಣಿಕೆ ನಡೆಯಲಿದೆ.
ಫೆಬ್ರವರಿ 8 ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಫೆಬ್ರವರಿ 15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಫೆಬ್ರವರಿ 27 ಮತದಾನ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಫೆಬ್ರವರಿ 27 ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಯಿಂದ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Rajya Sabha Election: ಫೆಬ್ರವರಿ 27ರಂದು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ
ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಪಕ್ಷವೇ ರಾಜ್ಯಸಭೆಯಲ್ಲಿ ಪಾರುಪತ್ಯ ಸಾಧಿಸುತ್ತದೆ. ಹೀಗಾಗಿ ರಾಜ್ಯಗಳಲ್ಲಿ ಬಹುಮತ ಸಾಧಿಸಿದ ಪಕ್ಷವೇ ಸಹಜವಾಗಿ ಹೆಚ್ಚು ಸದಸ್ಯರನ್ನು ತನ್ನ ಪಕ್ಷದಿಂದ ರಾಜ್ಯಸಭೆಗೆ ಕಳಿಸಬಹುದು.
ರಾಜ್ಯಸಭಾ ಚುನಾವಣೆಯಲ್ಲಿ ತಮ್ಮತಮ್ಮ ಪಕ್ಷದ ಅಧಿಕೃತ ಪ್ರತಿನಿಧಿ/ಏಜೆಂಟ್‌ಗಳಿಗೆ ತೋರಿಸಿಯೇ ಮತ ಚಲಾಯಿಸಬೇಕು. ಹಾಗಂತ, ವಿಪ್ ಉಲ್ಲಂಘಿಸಿ ಕ್ರಾಸ್ ವೋಟಿಂಗ್ ಮಾಡಬಾರದು ಎನ್ನುವ ಕಾನೂನೇನೂ ಇಲ್ಲ. ಒಂದು ವೇಳೆ ಅಡ್ಡಮತದಾನ ಮಾಡಿದರೆ ಆಯಾ ಪಕ್ಷದಿಂದ ಪಕ್ಷ ವಿರೋಧಿ ಚಟುವಟಿಕೆ ಅಡಿಯಲ್ಲಿ ಕ್ರಮಕೈಗೊಳ್ಳುವ ಅವಕಾಶವೂ ಇದೆ.
ರಾಜ್ಯಸಭೆಯ ಸದಸ್ಯರನ್ನು ರಾಜ್ಯ ವಿಧಾನಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ. ಓರ್ವ ರಾಜ್ಯಸಭಾ ಅಭ್ಯರ್ಥಿ ಗೆಲ್ಲಲು 45 ಬೇಕು. ಈಗಾಗಲೇ ಕಾಂಗ್ರೆಸ್ ಕಾಂಗ್ರೆಸ್ ಬಳಿ 136 ವಿಧಾನಸಭಾ ಸ್ಥಾನಗಳು ಇದ್ದರೆ, ಬಿಜೆಪಿ ಬಳಿ 66 ಹಾಗೂ ಜೆಡಿಎಸ್ 16 ಸ್ಥಾನಗಳನ್ನು ಹೊಂದಿದೆ. ಹಾಗಾಗಿ ಕಾಂಗ್ರೆಸ್ ಮತ್ತೆ ಮೂರು ಸ್ಥಾನ ಹಾಗೂ ಬಿಜೆಪಿ 1 ಸ್ಥಾನದಲ್ಲಿ ನಿರಾಯಾಸವಾಗಿ ಗೆಲ್ಲಲಿದೆ. ಒಂದು ವೇಳೆ ಐದನೇ ಅಭ್ಯರ್ಥಿ ಕಣಕ್ಕಿಳಿದರೆ ಮಾತ್ರ ಚುನಾವಣೆ ನಡೆಯಲಿದೆ.
ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳಿಗೆ ತಲಾ 45 ಮತಗಳ ಹಂಚಿಕೆಯಾದರೆ ಅಲ್ಲಿಗೆ ಬರೋಬ್ಬರಿ 135 ಮತಗಳು ಪೂರ್ಣಗೊಂಡು ಕೇವಲ 1 ಮತ ಮಾತ್ರ ಹೆಚ್ಚುವರಿಯಾಗಿ ಉಳಿಯಲಿದೆ. ಇನ್ನು ಬಿಜೆಪಿಯ 66 ಸ್ಥಾನಗಳ ಪೈಕಿ ಓರ್ವ ಅಭ್ಯರ್ಥಿಗೆ 45 ಮತ ಬಿದ್ದರೆ, ಇನ್ನೂ ಹೆಚ್ಚುವರಿಯಾಗಿ 21 ಮತಗಳು ಉಳಿಯಲಿವೆ. ಇನ್ನು ಜೆಡಿಎಸ್ ಬಳಿ 16 ಮತಗಳು ಇವೆ. ಹೀಗಾಗಿ ಬಿಜೆಪಿ ತನ್ನ ಮೊದಲ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಳಿಕ ಜೆಡಿಎಸ್ನ 19 ಮತಗಳ ಬೆಂಬಲದೊಂದಿಗೆ 2ನೇ ಅಭ್ಯರ್ಥಿ ಗೆಲುವಿಗಾಗಿ ಕಸರತ್ತು ನಡೆಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ