ಕ್ಷೇತ್ರ ಮರುವಿಂಗಡಣೆ ವಿಚಾರ: ಅಮಿತ್ ಶಾ ಹೇಳಿಕೆ ನಂಬಿಕೆಗೆ ಅರ್ಹವಲ್ಲ ಎಂದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಕ್ಷೇತ್ರ ಮರುವಿಂಗಡಣೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಹೇಳಿಕೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆ ಅಥವಾ ಲೋಕಸಭಾ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಮಾಡಬೇಕೆಂಬ ಪ್ರಶ್ನೆಯನ್ನು ಸಿದ್ದರಾಮಯ್ಯ ಎತ್ತಿದ್ದಾರೆ.

ಬೆಂಗಳೂರು, ಫೆಬ್ರವರಿ 27: ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಗೆ ಮಾಹಿತಿ ಕೊರತೆ ಎಂದ ಸಿಎಂ
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವರ ಬೀಸು ಹೇಳಿಕೆಯನ್ನು ನೋಡಿದರೆ ಅವರಿಗೆ ಒಂದೋ ಮಾಹಿತಿಯ ಕೊರತೆ ಇದೆ, ಇಲ್ಲವಾದರೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಅನ್ಯಾಯ ಮಾಡುವ ದುರುದ್ದೇಶ ಇದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ಪ್ರಧಾನಿ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಗೆ ತೋರುತ್ತಿರುವ ಅತ್ಯುತ್ಸಾಹವನ್ನು ನೋಡಿದರೆ ತಮ್ಮ ಪಕ್ಷದ ಕೀರ್ತಿಪತಾಕೆ ಹಾರಿಸುವುದಕ್ಕೆ ಪ್ರತಿರೋಧ ಒಡ್ಡುತ್ತಿರುವ ದಕ್ಷಿಣದ ರಾಜ್ಯಗಳ ಜನತೆಗೆ ಶಿಕ್ಷಿಸುವ ದುರುದ್ದೇಶ ಇರುವಂತೆ ಕಾಣಿಸುತ್ತಿದೆ. ಕರ್ನಾಟಕದ ಜನತೆ ಬಿಜೆಪಿಯನ್ನು ಬೆಂಬಲಿಸದೆ ಇದ್ದರೆ… pic.twitter.com/Fgkq5UG2HH
— Siddaramaiah (@siddaramaiah) February 27, 2025
ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಬಾರದೆಂಬ ಸದುದ್ದೇಶ ಕೇಂದ್ರ ಸರ್ಕಾರ ಹೊಂದಿರುವುದಾಗಿದ್ದರೆ ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮಾಡಲಾಗುವುದೋ? ಇಲ್ಲವೇ ಲೋಕಸಭಾ ಸದಸ್ಯರ ಈಗಿನ ಸಂಖ್ಯೆಯ ಅನುಪಾತದಲ್ಲಿ ಮಾಡಲಾಗುವುದೋ? ಎಂಬ ಮುಖ್ಯ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇತ್ತೀಚಿನ ಜನಸಂಖ್ಯೆಯ ಅನುಪಾತದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗಿದೆ. ಈ ಅನ್ಯಾಯವನ್ನು ತಪ್ಪಿಸಲಿಕ್ಕಾಗಿಯೇ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಹಿಂದಿನ ಎರಡು ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಎಐಸಿಸಿ ಆಕ್ಷೇಪಣೆಗಳಿಗೆ, ‘ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂವಾಗೇ ಸಾಯುತ್ತೇನೆ’ ಎಂದ ಡಿಕೆ ಶಿವಕುಮಾರ್
ಕಳೆದ 50 ವರ್ಷಗಳಲ್ಲಿ ದಕ್ಷಿಣದ ರಾಜ್ಯಗಳು ಪರಿಣಾಮಕಾರಿ ಕ್ರಮಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಿರುವುದು ಮಾತ್ರವಲ್ಲ, ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿವೆ. ಇದೇ ವೇಳೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ಉತ್ತರದ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಮಾತ್ರವಲ್ಲ, ಅಭಿವೃದ್ದಿಯ ಹಾದಿಯಲ್ಲಿ ಇನ್ನೂ ಕುಂಟುತ್ತಾ ಸಾಗಿದೆ ಎಂದಿದ್ದಾರೆ.
ಇದರಿಂದಾಗಿ ಕ್ಷೇತ್ರ ಮರುವಿಂಗಡಣೆಯನ್ನು ಇತ್ತೀಚಿನ ಜನಗಣತಿಯಿಂದ ಪಡೆದ ಜನಸಂಖ್ಯೆಯ ಅನುಪಾತದ ಮೇಲೆ ನಡೆಸಿದರೆ ಜನಸಂಖ್ಯೆಯ ನಿಯಂತ್ರಣ ಮಾಡಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಒಂದೋ ಕಡಿಮೆಯಾಗಲಿದೆ. ಇಲ್ಲದೆ ಇದ್ದರೆ ಉತ್ತರದ ರಾಜ್ಯಗಳ ಕ್ಷೇತ್ರಗಳ ಪ್ರಮಾಣದಲ್ಲಿ ಏರಿಕೆ ಆಗಲಾರದು. ಈ ಎರಡೂ ಬೆಳವಣಿಗಳಿಂದ ದಕ್ಷಿಣದ ರಾಜ್ಯಗಳೇ ನಷ್ಟ ಅನುಭವಿಸಲಿದೆ ಎನ್ನುವುದು ಅಮಿತ್ ಶಾ ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ @AmitShah ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ. ಕೇಂದ್ರ ಗೃಹ ಸಚಿವರ ಬೀಸು ಹೇಳಿಕೆಯನ್ನು ನೋಡಿದರೆ ಅವರಿಗೆ ಒಂದೋ ಮಾಹಿತಿಯ ಕೊರತೆ ಇದೆ, ಇಲ್ಲವಾದರೆ… pic.twitter.com/6IA7pON7e3
— Siddaramaiah (@siddaramaiah) February 27, 2025
ಕ್ಷೇತ್ರ ಮರುವಿಂಗಡಣೆಯ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಇವುಗಳ ಪ್ರಕಾರ ಇತ್ತೀಚಿನ ಜನಗಣತಿಯನ್ನು (2021 ಇಲ್ಲವೇ 2031) ಮಾತ್ರ ಆಧರಿಸಿ ಕ್ಷೇತ್ರ ಮರುವಿಂಗಡಣೆ ನಡೆದರೆ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 26ಕ್ಕೆ ಇಳಿಯುವ ಸಾಧ‍್ಯತೆ ಇದೆ. ಇದೇ ರೀತಿ ಆಂಧ್ರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ರಿಂದ 34, ಕೇರಳದ ಸಂಖ್ಯೆ 20ರಿಂದ 12ಕ್ಕೆ, ತಮಿಳುನಾಡಿನ ಸಂಖ್ಯೆ 39ರಿಂದ 31ಕ್ಕೆ ಇಳಿಯಲಿದೆ. ಇದೇ ವೇಳೆ ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80ರಿಂದ 91, ಬಿಹಾರದ ಸಂಖ್ಯೆ 40ರಿಂದ 50, ಮಧ್ಯಪ್ರದೇಶದ ಸಂಖ್ಯೆ 29ರಿಂದ 33ಕ್ಕೆ ಏರಿಕೆಯಾಗಲಿದೆ. ಇದನ್ನು ಅನ್ಯಾಯ ಎನ್ನದೆ ನ್ಯಾಯ ಎನ್ನಲು ಸಾಧ್ಯವೇ?
ಈ ಅನ್ಯಾಯವನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ. ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದೆಂದರೆ ಒಂದೋ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಜನಸಂಖ್ಯೆಯ ಮಾನದಂಡವನ್ನು ಕೈಬಿಟ್ಟು ಈಗಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಅನುಪಾತಕ್ಕನುಗುಣವಾಗಿ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯ ಘಟಕದಲ್ಲಿ ಬಣಗಳಿಲ್ಲ, ಬಂಡಾಯವಿಲ್ಲ; ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ: ಬಿ ಶ್ರೀರಾಮುಲು
ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನೋಡಿಯೂ ರಾಜ್ಯದಿಂದ ಲೋಕಸಭೆಗೆ ಆರಿಸಿಹೋಗಿರುವ ಹದಿನೇಳು ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸದಸ್ಯರು ಜೀತದಾಳುಗಳಂತೆ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾ ಬೀದಿ ಜಗಳದಲ್ಲಿ ಮಗ್ನರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂತಹ ಸಂದರ್ಭದಲ್ಲಿ ಜಾತಿ-ಧರ್ಮ ಪಕ್ಷ -ಪಂಥಗಳ ಭೇದವನ್ನು ಮರೆತು ಕನ್ನಡಿಗರೆಲ್ಲರೂ ಒಂದಾಗಿ ಒಂದೇ ದನಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತಬೇಕಾಗಿದೆ. ಈ ಅನ್ಯಾಯದ ವಿರುದ್ದ ಸಮಗ್ರ ರೂಪದ ಹೋರಾಟವನ್ನು ನಡೆಸಲು ನೆರೆಯ ದಕ್ಷಿಣದ ರಾಜ್ಯಗಳ ಜೊತೆಯಲ್ಲಿಯೂ ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ಯಾಯಕ್ಕೀಡಾಗಿರುವ ಎಲ್ಲ ರಾಜ್ಯಗಳ ಜೊತೆಗೂಡಿ ಸಂಘಟಿತವಾದ ಹೋರಾಟ ನಡೆಸಲಾಗುವುದು ಎಂದಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.