ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ; ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ: ಸಿದ್ದರಾಮಯ್ಯ

TV9 Digital Desk

| Edited By: ganapathi bhat

Updated on:Sep 06, 2021 | 4:09 PM

Karnataka Congress: ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವರು ಇದ್ದಾರೆ. ಮೂರು ಜನ ಬಿಜೆಪಿ ಶಾಸಕರಿದ್ದಾರೆ, ನಮ್ಮ ಶಾಸಕರಿಲ್ಲ. ರಾಜ್ಯದಲ್ಲಿಯೂ ಅವರದೇ ಸರ್ಕಾರ ಇದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳು ಅವರಿಗೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ; ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ: ಸಿದ್ದರಾಮಯ್ಯ
ಸಿದ್ದರಾಮಯ್ಯ


ಬೆಂಗಳೂರು: ಬೆಳಗಾವಿಯಲ್ಲಿ ಬಿಜೆಪಿ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಅಂದುಕೊಂಡಿದ್ದೇವೆ. ಆದರೆ ಹುಬ್ಬಳ್ಳಿ-ಧಾರವಾಡದಲ್ಲಿ ಅತಂತ್ರ ಪರಿಸ್ಥಿತಿ ಇದೆ. ಕಲಬುರಗಿಯಲ್ಲಿಯೂ ಯಾರಿಗೂ ಬಹುಮತ ಬಂದಿಲ್ಲ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ತರೀಕೆರೆಯಲ್ಲಿ ಕಾಂಗ್ರೆಸ್ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ದೊಡ್ಡಬಳ್ಳಾಪುರದಲ್ಲಿಯೂ ಅತಂತ್ರ ಪರಿಸ್ಥಿತಿ ಇದೆ. ಮೈಸೂರು ಪಾಲಿಕೆ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಾರೆ. ಅಲ್ಲಿ ಮೊದಲು ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು ಎಂದು ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವರು ಇದ್ದಾರೆ. ಮೂರು ಜನ ಬಿಜೆಪಿ ಶಾಸಕರಿದ್ದಾರೆ, ನಮ್ಮ ಶಾಸಕರಿಲ್ಲ. ರಾಜ್ಯದಲ್ಲಿಯೂ ಅವರದೇ ಸರ್ಕಾರ ಇದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳು ಅವರಿಗೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪ ಇದೆ. ಕಲಬುರಗಿಯಲ್ಲಿ ನಮ್ಮವರನ್ನು ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪಾಲಿಕೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಬೆಳಗಾವಿ ಪಾಲಿಕೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ನಮಗೆ ಬೆಂಬಲ ಕೊಟ್ಟ ಎಲ್ಲ ಮತದಾರರಿಗೆ ಅಭಿನಂದನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಏನಾದರೂ ಹೇಳಬಹುದು. ರಾಜ್ಯದಲ್ಲಿ ಬಿಜೆಪಿ ಪರವಾದ ಒಲವು ಎಲ್ಲಿದೆ ಎಂದು ಪ್ರಶ್ನೆ ಇದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಅಂದುಕೊಂಡಿರಲಿಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಏಕೆ ಗೆದ್ದಿಲ್ಲ. ಏಕೆ ಅಲ್ಲಿ ಅವರ ಪರವಾಗಿ ಮತದಾರರು ಇಲ್ಲವಾ? ಬಿಜೆಪಿಯವರು ಹಣ, ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಪಾಲಿಕೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರಷ್ಟೇ. ಸ್ಥಳೀಯ ವಿಚಾರಗಳ ಮೇಲೆ ಚುನಾವಣೆ ನಡೆಯುತ್ತದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಚಾಯತ್ ಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟೂ ಕಾಂಗ್ರೆಸ್‌ನವರೇ ಗೆಲ್ಲುತ್ತೇವೆ. ಬಿಬಿಎಂಪಿ ಚುನಾವಣೆಗೆ ದಿನಾಂಕ ಘೋಷಣೆಯಾಗಲಿ. ಈಗಲೇ ಆ ಬಗ್ಗೆ ಹೇಳುವುದಕ್ಕೆ ಆಗಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿಯವರು ಮತದಾರರನ್ನು ಹೆದರಿಸಿದ್ದಾರೆ. ಇದು ಅಧಿಕಾರ ದುರುಪಯೋಗವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದೆ ಎಂದು ನಾನು ಒಪ್ಪಿಕೊಳ್ತೇನೆ. ಬಿಜೆಪಿಗೆ ಈ ಚುನಾವಣೆ ಎಚ್ಚರಿಕೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಫಲಿತಾಂಶ ಜನರು ಬಿಜೆಪಿ ಪರವಾಗಿ ಇದ್ದಾರೆ ಎಂದು ಸೂಚಿಸುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿರುವ ವಿಚಾರವಾಗಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪರ ಜನರು ಇದ್ರೆ ಹುಬ್ಬಳ್ಳಿ ಧಾರವಾಡದಲ್ಲಿ ಗೆಲ್ಲಬೇಕಿತ್ತು. ಹಣ ಅಧಿಕಾರ ಅವರ ಪರವಗಿತ್ತು. ಬೆಳಗಾವಿಯಲ್ಲಿ ನಮ್ಮ ಶಸಾಸಕರು ಇಲ್ಲ. ಆದ್ರೂ ನಮ್ಮ ಪರವಾಗಿ ಸಿಟ್ ಬಂದಿದೆ. ಕಲ್ಬುರ್ಗಿಯಲ್ಲಿ ಬಿಜೆಪಿ ಗೆದ್ದಿಲ್ಲ, ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಹಾಗಾದ್ರೆ ಬಿಜೆಪಿ ಪರವಾದ ಅಲೆ ಎಲ್ಲಿದೆ ಎಂದು ಕೇಳಿದ್ದಾರೆ.

ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ
3 ಪಾಲಿಕೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ. ಜನರು ಬಿಜೆಪಿಯನ್ನು ಒಂದು ರೀತಿ ತಿರಸ್ಕಾರ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ ತಿರಸ್ಕಾರ ಮಾಡಿದ್ದಾರೆ. ನಾನು ಯಾವತ್ತೂ ಪಾಲಿಕೆ ಚುನಾವಣೆಗೆ ಪ್ರಚಾರ ಮಾಡಿಲ್ಲ. ರಾಜಕಾರಣಕ್ಕಾಗಿ ನೀಡುವ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಮೂರ್ಖತನದ ಹೇಳಿಕೆಗೆ ಪ್ರತಿಕ್ರಿಯೆ ಕೊಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಲ್ಬುರ್ಗಿಯಲ್ಲಿ ಕಾಂಗ್ರೆಸ್, ಪಕ್ಷೇತರರು ಮತ್ತು ಜೆಡಿಎಸ್ ಜತೆ ಹೊಂದಾಣಿಕೆ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಪಕ್ಷದ ಹಿರಿಯರು ಇದ್ದಾರೆ. ಅವರ ಜತೆ ಚರ್ಚೆ ಮಾಡಿ ಅಂತಿಮ ಮಾಡ್ತೀವಿ. ನಾನು ಈಗಲೇ ಈ ಬಗ್ಗೆ ಮಾತನಾಡಲ್ಲ.

ಇದನ್ನೂ ಓದಿ: Karnataka Municipal Election Results 2021: ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಮಾಸ್ಟರ್​ ಪ್ಲಾನ್ ಮಾಡಿದ್ದ ಬಿಜೆಪಿ: ಇಲ್ಲಿದೆ ಒಳ ಚಿತ್ರಣ

ಇದನ್ನೂ ಓದಿ: ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada