ನಿಗಮ-ಮಂಡಳಿಗಳಿಗೆ ಯಾವ ಯಾವ ಭಾಗದ ನಾಯಕರು ನೇಮಕ? ಸುಳಿವು ನೀಡಿದ ಡಿಕೆ ಶಿವಕುಮಾರ್
ಹಿರಿಯ ನಾಯಕರ ಜೊತೆ ಇನ್ನೊಂದು ಸುತ್ತಿನ ಚರ್ಚೆ ಮಾಡಬೇಕು. ಈಗ ಪಂಚರಾಜ್ಯ ಚುನಾವಣೆಗಳು ನಡೆಯುತ್ತಿವೆ. ನಾನು (ಡಿಕೆ ಶಿವಕುಮಾರ್) ಮತ್ತು ಮುಖ್ಯಮಂತ್ರಿಗಳು ಪ್ರಚಾರಕ್ಕೆ ಹೋಗಬೇಕು. ಆನಂತರ ಚರ್ಚೆ ಮಾಡಿ ಪಟ್ಟಿ ಅಂತಿಮಗೊಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ನ.22: ನಿಗಮ-ಮಂಡಳಿಗಳಿಗೆ (Corporation-Board) ಅಧ್ಯಕ್ಷರ ನೇಮಕಾತಿ ಕುತೂಹಲ ಹುಟ್ಟುಹಾಕಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ನೇತೃತ್ವದಲ್ಲಿ ಮಂಗಳವಾರ ತಡರಾತ್ರಿವರೆಗು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಸಭೆ ನಡೆದರೂ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಪಕ್ಷ ಸಂಘಟನೆ ಹಾಗೂ ನಿಗಮ-ಮಂಡಳಿ ನೇಮಕದ ಬಗ್ಗೆ ಚರ್ಚೆ ಆಗಿದೆ. ನಿಗಮ ಮಂಡಳಿ ವಿಚಾರವಾಗಿ ಮೊದಲ ಸುತ್ತಿನ ಮಾತುಕತೆ ಆಗಿದೆ. ಹೆಸರುಗಳನ್ನ ದೆಹಲಿ ನಾಯಕರಿಗೆ ಕಳುಹಿಸುತ್ತೇವೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬರೀ ಬೆಂಗಳೂರು ಮಾತ್ರವಲ್ಲದೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮದ್ಯ ಕರ್ನಾಟಕ ಶಾಸಕರ ಬಗ್ಗೆ ಕೂಡ ಚರ್ಚೆ ಆಗಿದೆ. ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಇನ್ನೊಂದು ಸುತ್ತಿನ ಮಾಡುತ್ತೇವೆ. ಈಗ ಪಂಚರಾಜ್ಯ ಚುನಾವಣೆಗಳು ನಡೆಯುತ್ತಿವೆ. ನಾನು (ಡಿಕೆ ಶಿವಕುಮಾರ್) ಮತ್ತು ಮುಖ್ಯಮಂತ್ರಿಗಳು ಪ್ರಚಾರಕ್ಕೆ ಹೋಗಬೇಕು. ಆನಂತರ ಚರ್ಚೆ ಮಾಡಿ ಪಟ್ಟಿ ಅಂತಿಮಗೊಳಿಸುತ್ತೇವೆ ಎಂದರು.
ಗೃಹ ಸಚಿವ ಪರಮೇಶ್ವರ್ ಮುನಿಸಿಕೊಂಡಿದ್ದಾರೆಂಬ ವಿಚಾರವಾಗಿ ಮಾತನಾಡಿದ ಅವರು ಗೃಹ ಸಚಿವರು ಯಾಕೆ ಮುನಿಸಿಕೊಳ್ತಾರೆ? ಬೆಳಗಾವಿಯಿಂದ ಬಂದು ಹೋಗಿದ್ದಾರೆ. ಮೊದಲು ಎಲ್ಲ ಚರ್ಚೆ ಆಗಬೇಕು. ಲೋಕಸಭೆ ಚುನಾವಣೆಗೆ ಕೆಲವರು ವರದಿ ನೀಡಿದ್ದಾರೆ. ಇನ್ನೂ ಕೆಲವರು ಕೊಡಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪತ್ಯೇಕ ಪಟ್ಟಿ ಸಿದ್ಧ, ಇಲ್ಲಿದೆ ಇಬ್ಬರ ಲೆಕ್ಕಾಚಾರ
ಎಷ್ಟು ಮಂದಿಗೆ ಅವಕಾಶ?: ಸರ್ಕಾರದ ಅಧೀನದಲ್ಲಿ ಒಟ್ಟಾರೆ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಸರದಿ ಬಂದಾಗ ನೇಮಕಗಳನ್ನು ಮಾಡುತ್ತವೆ.
ಕೆಲವು ನಿಗಮ-ಮಂಡಳಿ ಹೊರತುಪಡಿಸಿದರೆ ಅಧ್ಯಕ್ಷರಾದವರಿಗೆ ಸರಾಸರಿ ವೇತನ 40,000 ರೂ. ಇರಲಿದೆ. ಶಾಸಕರಾದವರಿಗೆ ಸಂಪುಟ ದರ್ಜೆ ಸ್ನಾನ ಮಾನ ನೀಡಿದರೆ ಮಾತ್ರ ಹೆಚ್ಚಿನ ಲಾಭ. ಅದೇ ರೀತಿ ಆತಿಥ್ಯ ವೆಚ್ಚ 16 ಸಾವಿರ ರೂ., ಪ್ರವಾಸ ಭತೆಯ ಪ್ರತಿ ದಿನ 2 ಸಾವಿರ ರೂ. ಗೃಹ ಭತ್ಯೆ ಅಥವಾ ಬಾಡಿಗೆ ಒಂದು ಲಕ್ಷ ರೂ. ಸಾವಿರ ಲೀಟರ್ ಪೆಟ್ರೋಲ್ ಮತ್ತು ಒಬ್ಬ ಆಪ್ತ ಕಾರ್ಯದರ್ಶಿ, ಇಬ್ಬರು ಆಪ್ತ ಸಹಾಯಕರು, ಇಬ್ಬರು ಪರಿಚಾರಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ