ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರಯತ್ನ, ಅರಿವು ಯೋಜನೆ ಗುರಿ ಹೆಚ್ಚಳ: ವಿಧಾನಸಭೆಯಲ್ಲಿ ಸರ್ಕಾರದ ಭರವಸೆ
ಉಕ್ರೇನ್ನಿಂದ ಬಂದವರ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಮೀಟಿಂಗ್ ನಡೆಸಲಾಗಿದೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ತಂಡವೂ ಸಭೆ ನಡೆಸಿದೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರು: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ಒದಗಿಸುವ ‘ಅರಿವು’ ಯೋಜನೆಯ ಅನುದಾನ ಕಡಿಮೆ ಆಗಿರುವ ಕುರಿತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಿದರು. 2019-20 ಹಾಗೂ 2021-22ರ ಅವಧಿಯಲ್ಲಿ ಶೈಕ್ಷಣಿಕ ಸಾಲ ಯೋಜನೆಯ ಅನುದಾನ ಕಡಿಮೆ ಆಗಿದೆ. ಸಿಇಟಿ ಮತ್ತು ನೀಟ್ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯಡಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬೇರೆ ಕೋರ್ಸ್ ಮಾಡುವ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು. ಅರಿವು ಯೋಜನೆಯನ್ನು ಹಿಂದಿನ ಮಾರ್ಗದರ್ಶಿಗಳ ಪ್ರಕಾರವೇ ಮಾಡಬೇಕು. ಈ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು. ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ, ಅರಿವು ಯೋಜನೆಯನ್ನು ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣಕ್ಕೆ ಸಹಾಯ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈಗ ಪ್ರೊಫೆಷನಲ್ ಕೋರ್ಸ್ಗೆ ಯೋಜನೆಯನ್ನು ಸೀಮಿತಗೊಳಿಸಲಾಗಿದೆ. ಈ ವರ್ಷದಿಂದ ಫಲಾನುಭವಿಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಯಾವ ರೀತಿ ಮಾರ್ಪಾಡು ಮಾಡಬೇಕು ಎಂಬ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಸುವಿಧಾ ಆ್ಯಪ್ನಲ್ಲಿ ದೋಷ
ಸುವಿಧಾ ಆ್ಯಪ್ನಲ್ಲಿ ದೋಷ ಕಾಣಿಸಿಕೊಂಡಿರುವುದರಿಂದ ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಹಾಕಲು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ಸರ್ಕಾರ ಶೀಘ್ರ ಈ ಬಗ್ಗೆ ಗಮನ ಹರಿಸಬೇಕು, ಸಮಸ್ಯೆ ಪರಿಹರಿಸಬೇಕು ಎಂದು ಕಾಂಗ್ರೆಸ್ನ ಯು.ಬಿ.ವೆಂಕಟೇಶ ಒತ್ತಾಯಿಸಿದರು. ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸುವಿಧಾ ಸಾಫ್ಟ್‌ವೇರ್ ಗೊಂದಲದ ಬಗ್ಗೆ ಈ ಮೊದಲೂ ಚರ್ಚೆ ಆಗಿದೆ. ಇನ್ನು ಎರಡು-ಮೂರು ದಿನಗಳಲ್ಲಿ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಯಚೂರು: ಮೀಸಲಾತಿ ಸಮಸ್ಯೆ
ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು ಮಂಡಳಿಯು 371-ಜೆ ವಿಧಿಯ ಅನ್ವಯ ಕೊಡಬೇಕಾದ ಮೀಸಲಾತಿ ಕೊಡುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಕೊಡಲು ಆಗಲ್ಲ ಎಂದು ಕೋರ್ಟ್ನಿಂದ ತಡೆಯಾಜ್ಞೆ ತಂದಿದೆ. ನಮ್ಮ ಸೌಲಭ್ಯ ತೆಗೆದುಕೊಂಡು ನಮ್ಮ ಮಕ್ಕಳಿಗೆ ಮೀಸಲಾತಿ ಕೊಡುವುದಿಲ್ಲ ಎಂದರೆ ಹೇಗೆ? ನಾವು ಜನರ ಮುಂದೆ ಹೇಗೆ ಮುಖ ತೋರಿಸುವುದು? ಸರ್ಕಾರದ ವಕೀಲರು ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕು ಎಂದು ಶಾಸಕ ಶಿವರಾಜ್ ಪಾಟೀಲ್ ಆಗ್ರಹಿಸಿದರು. ಈ ವಿಚಾರ ಪರಿಶೀಲಿಸಲು ಸದನ ಸಮಿತಿ ರಚಿಸಬೇಕು ಎಂದು ಸುರಪುರ ಶಾಸಕ ರಾಜೂ ಗೌಡ ಒತ್ತಾಯಿಸಿದರು. ಚರ್ಚೆಗೆ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಪ್ರತಿಭಟಿಸಿದ ಬಳಿಕ ಮತ್ತೆ ಸೇರಿಸಿಕೊಂಡಿದ್ದಾರೆ. ಅಡ್ವೋಕೇಟ್ ಜನರಲ್ ಖುದ್ದು ನ್ಯಾಯಾಲಯಕ್ಕೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ವಸತಿ ಶಾಲೆ ಮಕ್ಕಳಿಗೆ ಅಕ್ಕಿ
ಕರ್ನಾಟಕದ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಊಟದ ಅಕ್ಕಿ ವಿತರಣೆ ಆಗುತ್ತಿಲ್ಲ ಎಂದು ಸದಸ್ಯ ಸಲೀಂ ಅಹಮದ್ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. 2021ರ ಆಗಸ್ಟ್ ಬಳಿಕ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಅಕ್ಕಿ ಬಳಕೆಯ ಪ್ರಮಾಣ ಪತ್ರ ಸಲ್ಲಿಕೆ ಮಾಡಿಲ್ಲ. ಇದರಿಂದ ಕೇಂದ್ರ ಸರ್ಕಾರ ಪಡಿತರ ಅಕ್ಕಿಯನ್ನು ವಸತಿ ಶಾಲೆಗಳಿಗೆ ವಿತರಣೆ ಮಾಡಿಲ್ಲ. ಮೊರಾರ್ಜಿ ದೇಸಾಯಿ, ಅಂಬೇಡ್ಕರ್ ವಸತಿ ಶಾಲೆ, ಏಕಲವ್ಯ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ರಾಜ್ಯದ 826 ವಸತಿ ಶಾಲೆಗಳಿಗೆ ಅಕ್ಕಿ ಪೂರೈಕೆ ಆಗಿಲ್ಲ. ಚರ್ಚೆಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಕ್ಕಿ ಬಳಕೆ ಪ್ರಮಾಣ ಪತ್ರ ನೀಡಲು ವಿಳಂಬ ಆಗಿತ್ತು. ಆದರೆ ಪತ್ರಿಕೆಗಳಲ್ಲಿ ಬಂದ ವರದಿಯು ಹಿಂದಿನ ಹಳೆಯ ಮಾಹಿತಿ ಆಧರಿಸಿದೆ. ಈಗ ಯಾವೊಂದು ಮಗುವಿಗೂ ಅಕ್ಕಿಯ ಕೊರತೆ ಆಗಿಲ್ಲ. ವಸತಿ ಶಾಲೆಗಳಿಗೆ ಸರಿಯಾದ ರೀತಿಯಲ್ಲಿ ಅಕ್ಕಿ ಪೂರೈಕೆ ಆಗುತ್ತಿದೆ ಎಂದರು.
ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ
ಉಕ್ರೇನ್ನಿಂದ ವಾಪಸಾದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕುರಿತು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಪ್ರಸ್ತಾಪಿಸಿದರು. ನೀಟ್ ಪ್ರವೇಶಕ್ಕೆ ಪಿಯು, ನೀಟ್ ಅಂಕದಲ್ಲಿ ಶೇ 50ರಷ್ಟನ್ನು ಪರಿಗಣಿಸಬೇಕು. ಇಲ್ಲವಾದರೆ ರಾಜ್ಯದ ಮಕ್ಕಳಿಗೆ ವಂಚನೆಯಾಗುತ್ತದೆ. ಮಕ್ಕಳು ಬೇರೆಬೇರೆ ಕಡೆ ಹೋಗುವ ಅನಿವಾರ್ಯತೆ ಆಗುತ್ತದೆ ಎಂದು ಹೇಳಿದರು. ಯು.ಟಿ.ಖಾದರ್ ಮಾತಿಗೆ ಉತ್ತರಿಸಿದ ಸಚಿವ ಡಾ.ಕೆ.ಸುಧಾಕರ್, ಉಕ್ರೇನ್ನಿಂದ ಬಂದವರ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಮೀಟಿಂಗ್ ನಡೆಸಲಾಗಿದೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ತಂಡವೂ ಸಭೆ ನಡೆಸಿದೆ. ಇದರ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇವೆ. ನೀಟ್ ಮೇಲೆ ಯಾವ ರಾಜ್ಯಗಳಿಗೂ ಹಿಡಿತವಿಲ್ಲ. ಆಲ್ ಇಂಡಿಯಾ ಕೌನ್ಸಿಲ್ ಅದನ್ನು ನಿರ್ವಹಣೆ ಮಾಡುತ್ತದೆ. ಸೀಟಿನಲ್ಲಿ ಶೇ 50ರಷ್ಟು ರಾಜ್ಯಕ್ಕೆ, ಶೇ 50ರಷ್ಟು ಕೇಂದ್ರಕ್ಕೆ ಹಂಚಿಕೆಯಾಗುತ್ತದೆ.
ಇದನ್ನೂ ಓದಿ: ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ರೈತ ಮಹಿಳೆ ಆತ್ಮಹತ್ಯೆ ಪ್ರಕರಣ; ಗದಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣ
ಇದನ್ನೂ ಓದಿ: ನವೀನ್ ಮೃತದೇಹ ಸಿಕ್ಕಿದೆ, ಉಕ್ರೇನಿನ ಶವಾಗಾರದಲ್ಲಿ ಇಡಲಾಗಿದೆ: ಬಸವರಾಜ ಬೊಮ್ಮಾಯಿ ಮಾಹಿತಿ