R Shankar: ವಾಣಿಜ್ಯ ತೆರಿಗೆ ಇಲಾಖೆ ದಾಳಿಗೆ ಆರ್ ಶಂಕರ್ ಅಸಮಾಧಾನ; ಸ್ವಪಕ್ಷ ಬಿಜೆಪಿ ವಿರುದ್ಧವೇ ಆಕ್ರೋಶ
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸಿರುವುದಕ್ಕೆ ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ (Commercial Taxes Department) ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸಿರುವುದಕ್ಕೆ ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್. ಶಂಕರ್ (BJP MLC R Shankar) ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿರುದ್ಧ ಸಂಚು ಹೂಡಲಾಗಿದೆ ಎಂದು ಆರೋಪಿಸಿರುವ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ದೊರೆಯದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಗೆ ಅಗತ್ಯವಿದ್ದ ಸಂದರ್ಭದಲ್ಲಿ ನಾನು ಬೆಂಬಲ ನೀಡಿದ್ದೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ನಾನೂ ಕಾರಣ. ಬಸವರಾಜ ಬೊಮ್ಮಾಯಿ ಮತ್ತು ಆರ್ ಅಶೋಕ ನನ್ನ ಮನೆಗೆ ಬಂದು ಬೆಂಬಲ ಕೋರಿದ್ದರು. ಅದಾದ ನಂತರ ಅವರು ಪ್ರತಿ ದಿನ ನನ್ನನ್ನು ನೋಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಆರು ಖಾಲಿ ಸ್ಥಾನಗಳಿದ್ದರೂ ನಮ್ಮನ್ನು ಪರಿಗಣಿಸಿಲ್ಲ ಎಂದು ಅವರು ದೂರಿದ್ದಾರೆ.
ಬಿಜೆಪಿ ಶಾಸಕ ಅರುಣ್ಕುಮಾರ್ ಪೂಜಾರ್ ನನ್ನನ್ನು ರಾಜಕೀಯವಾಗಿ ಮುಗಿಸಿಹಾಕಲು ಯತ್ನಿಸುತ್ತಿದ್ದಾರೆ. ನಾನು ಬೆಂಬಲವನ್ನು ಮುಂದುವರಿಸಬಹುದು, ಆದರೆ ಸ್ಥಳೀಯ ಶಾಸಕ ನನ್ನ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಸಂಚು ಹೂಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ವಾಣಿಜ್ಯ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಗೃಹಕಚೇರಿಯ ಸಭಾಂಗಣದಲ್ಲಿ ಹಲವು ವಸ್ತುಗಳು ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವುಗಳನ್ನು ಚಾರಿಟೇಬಲ್ ಟ್ರಸ್ಟೊಂದರ ಅಡಿಯಲ್ಲಿ ಜನರಿಗೆ ವಿತರಣೆ ಮಾಡಲು ತಂದಿಟ್ಟಿದ್ದಾಗಿ ತಿಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಆರ್. ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟ ಹಾಗೂ ಎಲ್ಕೆಜಿ ಪದವಿ ಕಾಲೇಜು ಮಕ್ಕಳಿಗೆ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್ ಸಿಕ್ಕಿದ್ದವು.
ಐದು ವರ್ಷಕ್ಕೊಮ್ಮೆ ನನ್ನ ಕ್ಷೇತ್ರದ ಮಹಿಳೆಯರಿಗೆ ಸೀರೆ ಹಂಚುತ್ತೇನೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಂಚುವುದಕ್ಕಾಗಿ ಬ್ಯಾಗ್ಗಳನ್ನು ಇಡಲಾಗಿತ್ತು. ಇವುಗಳನ್ನು ಕಳೆದ ವರ್ಷ ನವೆಂಬರ್‌ನಲ್ಲಿ ವಿತರಣೆ ಮಾಡಬೇಕಿತ್ತು ಆದರೆ ಗುತ್ತಿಗೆದಾರರು ಪೂರೈಕೆ ವಿಳಂಬ ಮಾಡಿದ್ದರಿಂದ ತಡವಾಯಿತು. ಇವುಗಳನ್ನು ಬಡವ, ಶ್ರೀಮಂತ ಎಲ್ಲ ಜಾತಿಯ ಜನರಿಗೂ ಹಂಚುತ್ತಿದ್ದೇನೆ. ನಾನು ಅದನ್ನು ನನ್ನ ಚಾರಿಟೇಬಲ್ ಟ್ರಸ್ಟೊಂದರ ಬ್ಯಾನರ್ ಅಡಿಯಲ್ಲಿ ವಿತರಿಸುತ್ತಿದ್ದೇನೆ. ಇದು ಯಾವುದೇ ಪಕ್ಷದ ಪರವಾಗಿ ಅಲ್ಲ ಹಾಗೂ ನನ್ನ ಸ್ವಂತ ಹಣದಿಂದ ಹಂಚುತ್ತಿರುವುದು ಎಂದು ಆರ್. ಶಂಕರ್ ಸ್ಪಷ್ಟಪಡಿಸಿದ್ದಾರೆ. ಎಲ್ಲ ವಸ್ತುಗಳ ರಶೀದಿ ಸಲ್ಲಿಕೆ ಮಾಡಲು ಒಂದು ವಾರ ಕಾಲಾವಕಾಶ ಕೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಎಂಎಲ್ಸಿ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ, ಹಲವು ವಸ್ತುಗಳು ಪತ್ತೆ
ಶಂಕರ್ ಮನೆ, ಕಚೇರಿ ಮೇಲೆ ಮಾರ್ಚ್ 14ರ ತಡರಾತ್ರಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ, ಆರ್. ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟ ಹಾಗೂ ಎಲ್ಕೆಜಿ ಪದವಿ ಕಾಲೇಜು ಮಕ್ಕಳಿಗೆ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್ ಸಿಕ್ಕಿದ್ದವು.
ಶಂಕರ್ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ರಾಣೇಬೆನ್ನೂರಿನಿಂದ ಪ್ರಜ್ಞಾವಂತ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ನಂತರ ಬಿಜೆಪಿಗೆ ಮರಳಲು ನಿರ್ಧರಿಸಿದ್ದರು. ಅನರ್ಹಗೊಂಡ ಶಾಸಕರ ಪೈಕಿ ಶಂಕರ್ ಸಹ ಒಬ್ಬರಾಗಿದ್ದರು. ಹಿಗಾಗಿ ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದ ಬಿಜೆಪಿ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿತ್ತು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ