DK Shivakumar: ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿರುವ ನಾಲಾಯಕ್ ಡಿಜಿಪಿ ಪ್ರವೀಣ್ ಸೂದ್; ಡಿಕೆಶಿ ಕೆಂಡಾಮಂಡಲ
ಡಿಜಿಪಿ ಪ್ರವೀಣ್ ಸೂದ್ ಒಬ್ಬ ನಾಲಾಯಕ್. ಆಡಳಿತಾರೂಢ ಬಿಜೆಪಿಯನ್ನು ರಕ್ಷಿಸುವ ಅವರು ನಮ್ಮ ಪಕ್ಷದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರು: ಡಿಜಿಪಿ ಪ್ರವೀಣ್ ಸೂದ್ (DGP Praveen Sood) ಒಬ್ಬ ನಾಲಾಯಕ್. ಆಡಳಿತಾರೂಢ ಬಿಜೆಪಿಯನ್ನು ರಕ್ಷಿಸುವ ಅವರು ನಮ್ಮ ಪಕ್ಷದವರ (Congress) ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರವೀಣ್ ಸೂದ್ ಒಬ್ಬ ನಿಷ್ಪ್ರಯೋಜಕ. ತಕ್ಷಣವೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು. ಚುನಾವಣಾ ಆಯೋಗ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ಆತನ (ಪ್ರವೀಣ್ ಸೂದ್) ಮೂರು ವರ್ಷಗಳ ಸೇವೆ ಕೊನೆಗೊಂಡಿದೆ. ಆತನನ್ನು ಎಷ್ಟು ದಿನ ಹುದ್ದೆಯಲ್ಲೇ ಇಟ್ಟುಕೊಂಡು ಪೂಜಿಸಬೇಕೆಂದಿದ್ದೀರಿ? ಆತ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಪ್ರಕರಣಗಳನ್ನು ದಾಖಲಿಸುತ್ತಾನೆ. ನಮ್ಮ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾನೆ’ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ಪ್ರವೀಣ್ ಸೂದ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ 2023ರ ಮೇ ಅಂತ್ಯದ ಒಳಗಾಗಿ ಚುನಾವಣೆ ನಡೆಯಲಿದೆ. 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದೆ ಎಂದು ಡಿಕೆಶಿ ತಿಳಿಸಿದ್ದಾರೆ. ಜೆಡಿಎಸ್ ಈಗಾಗಲೇ 93 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಇನ್ನಷ್ಟೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿವೆ.
ಇದನ್ನೂ ಓದಿ: ಹೆಚ್ಡಿ ರೇವಣ್ಣ, ಶಾಸಕ ಶಿವಲಿಂಗೇಗೌಡ ಆಡಿಯೋ ವೈರಲ್: ಪಕ್ಷ ಬಿಟ್ಟು ಹೋಗದಂತೆ ಮನವೊಲಿಸಿರುವ ರೇವಣ್ಣ
ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. ಮಹಾರಾಷ್ಟ್ರ ಸರ್ಕಾರದಿಂದ ಬೆಳಗಾವಿ ಗಡಿ ಭಾಗದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 54 ಕೋಟಿ ರೂ. ಬಿಡುಗಡೆಯಾಗಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಡಿಕೆಶಿ, ಇದು ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ನಡೆ. ನಾಡಿನ ಹಿತಕ್ಕೆ ಜೀವ ಪಣಕ್ಕಿಟ್ಟು ಹೊರಡಲು ನಾವು ಸಿದ್ಧ. ಕನ್ನಡಿಗರ ಸ್ವಾಭಿಮಾನ, ಕನ್ನಡದ ನೆಲ ಬಲಿ ಕೊಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.
ರಾಮನಗರದಿಂದ ಕಣಕ್ಕಿಳಿಯಲಿದ್ದಾರಾ ಡಿಕೆ ಸುರೇಶ್?
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ರಾಮನಗರದಲ್ಲಿ ಸಂಸದ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆ ಆಗಿದೆ ಎಂದು ಮಂಗಳವಾರ ಡಿಕೆಶಿ ತಿಳಿಸಿದ್ದರು. ಡಿಕೆ ಸುರೇಶ್ ಸ್ಪರ್ಧಿಸಬೇಕು ಎಂದು ಬಹಳ ದಿನಗಳಿಂದ ಈ ಭಾಗದ ನಮ್ಮ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಂದು ಇತಿಹಾಸ ಇದೆ. ಪಕ್ಷ ಸೂಚಿಸಿದ ಮೇಲೆ ಏನೂ ಮಾಡಲಾಗದು. ನಾನು ಸಚಿವನಾಗಿದ್ದವನು ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ರಾಜಕೀಯದಲ್ಲಿ ಕೆಲವು ಸಂದರ್ಭಗಳಲ್ಲಿ ಅನಿವಾರ್ಯ ಎದುರಾಗುತ್ತದೆ ಎಂದು ಅವರು ಹೇಳಿದ್ದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ