Karnataka Politics: ಯಡಿಯೂರಪ್ಪ ಸರ್ಕಾರದಲ್ಲಿ ಸಿ.ಪಿ ಯೋಗೀಶ್ವರ್​ಗೆ ಇದ್ದ ಸಮಸ್ಯೆ ಏನಾಗಿತ್ತು?

BS Yediyurappa: ಉತ್ತರ ಕರ್ನಾಟಕ ಭಾಗದಿಂದ ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಯೋಗೀಶ್ವರ್ ಕೈ ಜೋಡಿಸಲಿಲ್ಲ. ತಮ್ಮ ಸ್ನೇಹಿತ ರಮೇಶ್ ಜಾರಕಿಹೊಳಿ ಬೆಂಬಲವನ್ನು ಪಡೆಯಲಿಲ್ಲ.

Karnataka Politics: ಯಡಿಯೂರಪ್ಪ ಸರ್ಕಾರದಲ್ಲಿ ಸಿ.ಪಿ ಯೋಗೀಶ್ವರ್​ಗೆ ಇದ್ದ ಸಮಸ್ಯೆ ಏನಾಗಿತ್ತು?
ಸಿಎಂ ಯಡಿಯೂರಪ್ಪ ಮತ್ತು ಸಚಿವ ಸಿ.ಪಿ.ಯೋಗೇಶ್ವರ್
Follow us
S Chandramohan
| Updated By: preethi shettigar

Updated on: Jul 28, 2021 | 8:21 AM

ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಎರಡು ಸರಕಾರಗಳು ಬದಲಾಗಿವೆ. ಆದರೆ, ಈ ಎರಡು ಸರ್ಕಾರಗಳನ್ನು (Karnataka Politics) ಉರುಳಿಸಬೇಕೆಂದು ಯತ್ನಿಸಿದ ಒಬ್ಬ ನಾಯಕನೆಂದರೇ ಬಿಜೆಪಿಯ ಸಿ.ಪಿ.ಯೋಗೀಶ್ವರ್. ಜೆಡಿಎಸ್‌ ಪಕ್ಷದ ಕುಮಾರಸ್ವಾಮಿ ಸರ್ಕಾರ ಉರುಳಿಸಲು ಬಿಜೆಪಿಯ  ಯೋಗೀಶ್ವರ್ ಗೆ (CP Yogeshwar) ಸೂಕ್ತ ಕಾರಣಗಳಿದ್ದವು. ಆದರೆ, ಬಿಜೆಪಿ ನಾಯಕ ಯೋಗೀಶ್ವರ್ ಕೊನೆಗೆ ತಮ್ಮದೇ ಪಕ್ಷದ ನಾಯಕನ ವಿರುದ್ಧವೂ ಬಂಡಾಯ ಸಾರಿದ್ದು ಏಕೆ ಎನ್ನುವುದು ಕುತೂಹಲಕ್ಕೂ ಕಾರಣವಾಗಿದೆ.

ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಗೆ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ನಡುವೆ 2019ರಲ್ಲಿ ನಡೆದಿದ್ದ ಒಪ್ಪಂದವೂ ಕಾರಣ. 2019ರಲ್ಲೇ ಯಡಿಯೂರಪ್ಪ 75 ವರ್ಷ ದಾಟಿದ್ದರು. ಹೀಗಾಗಿ 2019ರ ಜುಲೈ ತಿಂಗಳಲ್ಲಿ ಸರ್ಕಾರ ರಚನೆಯಾದಾಗ ನಿಮಗೆ ಒಂದು ವರ್ಷ ಮಾತ್ರ ಸಿಎಂ ಹುದ್ದೆ ನೀಡುತ್ತೇವೆ. ಬಳಿಕ ನೀವು ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ಸೂಚಿಸಿತ್ತು. ಇದಕ್ಕೆ ಯಡಿಯೂರಪ್ಪ ಕೂಡ ಒಪ್ಪಿಕೊಂಡಿದ್ದರು. ಆದರೆ, ಕೊರೊನಾ, ಲಾಕ್ ಡೌನ್ ಕಾರಣದಿಂದ ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿ 2 ವರ್ಷದ ಅವಧಿವರೆಗೂ ಮುಂದುವರಿದಿದ್ದಾರೆ. ಈಗ ಜುಲೈ 26ಕ್ಕೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆದರೆ, ಈ 2 ವರ್ಷದ ಅವಧಿಯಲ್ಲಿ ಯಡಿಯೂರಪ್ಪರಿಂದ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷದ ವರ್ಚಸ್ಸು ಹೆಚ್ಚಾಗುತ್ತಿಲ್ಲ ಎಂಬ ಅಸಮಾಧಾನ ಬಿಜೆಪಿ ಪಕ್ಷ, ಸರ್ಕಾರದಲ್ಲೇ ಸೃಷ್ಟಿಯಾಗಿತ್ತು. ಈ ಅಸಮಾಧಾನ ರಾಜ್ಯದಿಂದ ಹಿಡಿದು,  ದೆಹಲಿಯ ಬಿಜೆಪಿ ಹೈಕಮಾಂಡ್ ವರೆಗೂ ತಲುಪಿದೆ. ಹೀಗೆ ಬಿಜೆಪಿ ಪಕ್ಷ, ಸರ್ಕಾರದೊಳಗೆ ಯಡಿಯೂರಪ್ಪ ವಿರುದ್ಧ ಸಮರ ಸಾರಿದ ಇಬ್ಬರು ನಾಯಕರೆಂದರೇ, ಓರ್ವ ಬಸನಗೌಡ ಪಾಟೀಲ್ ಯತ್ನಾಳ್. ಮತ್ತೊಬ್ಬರು ಚನ್ನಪಟ್ಟಣದ ಸೈನಿಕ ಸಿ.ಪಿ.ಯೋಗೀಶ್ವರ್.

ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಯಡಿಯೂರಪ್ಪರಂತೆಯೇ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದರೇ, ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪ ವಿರುದ್ಧವೇ ಬಹಿರಂಗ ಸಮರ ಸಾರಿ ಯಶಸ್ಸು ಸಾಧಿಸಿರುವವರು ಬಸನಗೌಡ ಪಾಟೀಲ್ ಯತ್ನಾಳ್. ಇದರ ಜೊತೆಗೆ ಸಿ.ಪಿ.ಯೋಗೀಶ್ವರ್ ಪಾತ್ರವೂ ಕೂಡ ಯಡಿಯೂರಪ್ಪ ರಾಜೀನಾಮೆಯ ಹಿಂದೆ ಇದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ 2 ವರ್ಷ ಪೂರೈಸುತ್ತಿದ್ದಂತೆ, ರಾಜೀನಾಮೆ ಪಡೆಯಲು ಯೋಗಿಶ್ವರ್ ಹೈಕಮಾಂಡ್ ನಾಯಕರಿಗೆ ನೀಡಿದ ದೂರು, ನೀಡಿದ ದಾಖಲೆ, ಕೊಟ್ಟ ಹೇಳಿಕೆ ಎಲ್ಲವೂ ಕಾರಣವಾಗಿದೆ.

ಕುಮಾರಸ್ವಾಮಿ ಭಯ? 2018ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಆಸ್ತಿತ್ವಕ್ಕೆ ಬಂದ ಜೆಡಿಎಸ್‌-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದು ಕೂಡ ಸೈನಿಕ ಯೋಗಿಶ್ವರ್. ಚನ್ನಪಟ್ಟಣದಲ್ಲಿ ತಮ್ಮನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ ಸಿಎಂ ಹುದ್ದೆಯಲ್ಲಿ ಹೆಚ್ಚು ದಿನ ಮುಂದುವರಿದರೆ, ಚನ್ನಪಟ್ಟಣದಲ್ಲಿ ತಮ್ಮ ರಾಜಕೀಯ ಬೇರುಗಳು ಅಲುಗಾಡುತ್ತಾವೆ ಎಂಬ ಭಯ, ಭೀತಿ ಯೋಗೀಶ್ವರ್​ಗೆ ಇತ್ತು. ಚನ್ನಪಟ್ಟಣದಲ್ಲಿ ತಮ್ಮ ರಾಜಕೀಯ ಬೇರು ಅಲುಗಾಡಿದರೆ ಸಮಸ್ಯೆ ಇರುತ್ತಿರಲಿಲ್ಲ, ಆ ಬೇರುಗಳನ್ನೇ ಕುಮಾರಸ್ವಾಮಿ ಕಿತ್ತೆಸೆದರೆ, ರಾಜಕೀಯವಾಗಿ ಮೂಲೆಗುಂಪು ಆಗಬೇಕಾಗುತ್ತೆ ಎಂಬ ಭಯ, ಭೀತಿ ಯೋಗೀಶ್ವರ್ ರಲ್ಲಿತ್ತು. ಹೀಗಾಗಿಯೇ ಸಿಎಂ ಹುದ್ದೆಗೇರಲು ಯತ್ನಿಸಿ ವಿಫಲವಾಗಿದ್ದ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರ ಗ್ಯಾಂಗ್ ಸೇರಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಯೋಗೀಶ್ವರ್ ರಹಸ್ಯ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯೂ 18 ಬಾರಿ ವಿಫಲವಾಗಿದೆ. ಆದರೂ, ಉತ್ಸಾಹ, ಹುಮ್ಮಸ್ಸು, ಆತ್ಮವಿಶ್ವಾಸ ಕಳೆದುಕೊಳ್ಳದೇ ಮರಳಿ ಯತ್ನವ ಮಾಡು ಎಂಬಂತೆ ಮರಳಿ ಯತ್ನ ಮಾಡಿ 2019ರ ಜುಲೈನಲ್ಲಿ ಯಶಸ್ವಿಯಾಗಿದ್ದರು. ಒಕ್ಕಲಿಗ ಸಮುದಾಯದ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸುವಲ್ಲಿ ತೆರೆಮರೆಯಲ್ಲೇ ಕಾರ್ಯಾಚರಣೆ ನಡೆಸಿದವರು ಸಿ.ಪಿ.ಯೋಗೀಶ್ವರ್. ಕಾಂಗ್ರೆಸ್, ಜೆಡಿಎಸ್‌ ಪಕ್ಷದ ಅನೇಕ ಶಾಸಕರ ಮನೆ ಬಾಗಿಲಿಗೆ ಸಿ.ಪಿ.ಯೋಗೇಶ್ವರ್ ಅಲೆದಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಬಿಟ್ಟು ಬರುವಂತೆ ಶಾಸಕರನ್ನು ಮನವೊಲಿಸಿದ್ದರು. ಮುಂದೆ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರುತ್ತೆ, ಆಗ ಮಂತ್ರಿಸ್ಥಾನ ನೀಡುತ್ತೇವೆ ಎನ್ನುವ ಭರವಸೆಯನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಯೋಗೀಶ್ವರ್ ನೀಡಿದ್ದರು. ಅಷ್ಟೇ ಅಲ್ಲ, ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಮನೆಗೆ ಕೋಟಿಗಟ್ಟಲೇ ಹಣವನ್ನು ತೆಗೆದುಕೊಂಡು ಕೂಡ ಸಿ.ಪಿ.ಯೋಗೀಶ್ವರ್ ಹೋಗಿದ್ದರು, ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿಗೆ ಬರುವಂತೆ ಹಣ ನೀಡಲು ಬಂದಿದ್ದರು ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ವಿಧಾನಸಭೆ ಒಳಗೆ, ಹೊರಗೆ ಹೇಳಿದ್ದಾರೆ.

ಶ್ರೀನಿವಾಸಗೌಡರಂತೆ ಅನೇಕ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಅಪರೇಷನ್ ಕಮಲದ ಮೂಲಕ ಬಿಜೆಪಿ ತೆಕ್ಕೆಗೆ ತರಲು ಸಿ.ಪಿ.ಯೋಗೇಶ್ವರ್ ಯತ್ನಿಸಿದ್ದಾರೆ. ಆಗ 15ಕ್ಕಿಂತ ಹೆಚ್ಚಿನ ಶಾಸಕರು ಬಿಜೆಪಿಗೆ ಬಂದರಷ್ಟೇ, ಕುಮಾರಸ್ವಾಮಿ ಸರಕಾರ ಉರುಳುತ್ತೆ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಆಸ್ತಿತ್ವಕ್ಕೆ ಬರುತ್ತೆ ಎಂಬ ಲೆಕ್ಕಾಚಾರ ಸಿ.ಪಿ.ಯೋಗೇಶ್ವರ್ ಮತ್ತು ಟೀಮ್ ದ್ದಾಗಿತ್ತು. ಈ ಅಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಯೋಗೀಶ್ವರ್ ಅಂಡ್ ಟೀಮ್ ಯಶಸ್ವಿ ಆಗಿದ್ದು ಈಗ ರಾಜ್ಯದ ರಾಜಕೀಯ ಇತಿಹಾಸದ ಪುಟ ಸೇರಿದೆ. ಜೆಡಿಎಸ್‌, ಕಾಂಗ್ರೆಸ್ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಜಭವನಕ್ಕೆ ಬಂದಾಗ, ಯೋಗೀಶ್ವರ್ ಕೂಡ ಕಾರಿನಲ್ಲಿ ರಾಜಭವನದ ಹೊರಗೆ ಬಂದು ನಿಂತು ಎಲ್ಲವನ್ನೂ ನೋಡುತ್ತಿದ್ದರು. ಎಲ್ಲವೂ ತಮ್ಮ ಪ್ಲ್ಯಾನ್ ಪ್ರಕಾರ ನಡೆಯುತ್ತಿದೆಯೇ ಎಂದು ಹತ್ತಿರದಿಂದಲೇ ನೋಡಲು ಯೋಗೀಶ್ವರ್ ಕಾರಿನಲ್ಲಿ ರಾಜಭವನದವರೆಗೂ ಬಂದಿದ್ದರು.  ರಸ್ತೆಯಲ್ಲಿ ಕಾರಿನಿಂದ ಇಳಿದು ಎಲ್ಲವನ್ನೂ ವೀಕ್ಷಣೆ ಮಾಡಿದ್ದರು. ಆದರೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಅಲ್ಲಿಂದ ಹೊರಟು ಹೋಗಿದ್ದರು.

ಆಪರೇಷನ್ ಕಮಲದ ತೆರೆಮರೆ ಸೂತ್ರಧಾರ ಯೋಗೀಶ್ವರ್. 2019ರ ಜುಲೈ ವೇಳೆಗೆ ಯೋಗೀಶ್ವರ್ ರಾಜಕೀಯ ಲೆಕ್ಕಾಚಾರದಂತೆಯೇ ಕುಮಾರಸ್ವಾಮಿ ಸರ್ಕಾರ ಪತನಗೊಂಡು, ಯಡಿಯೂರಪ್ಪ ಸರ್ಕಾರ ಆಸ್ತಿತ್ವಕ್ಕೆ ಬಂತು. ಅಪರೇಷನ್ ಕಮಲ ಯಶಸ್ವಿಗೊಳಿಸಿದ್ದಕ್ಕೆ ಗಿಫ್ಟ್ ರೂಪದಲ್ಲಿ ಯೋಗೀಶ್ವರಗೆ ಯಡಿಯೂರಪ್ಪ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿದ್ದರು. ಬಳಿಕ ತಮ್ಮ ಕ್ಯಾಬಿನೆಟ್​ನಲ್ಲಿ ಮಂತ್ರಿಯನ್ನಾಗಿಯೂ ನೇಮಿಸಿಕೊಂಡರು. ಆದರೇ, ಯೋಗೀಶ್ವರ್ ಗೆ ಬೇರೆಯದ್ದೇ ಸಮಸ್ಯೆ ಯಡಿಯೂರಪ್ಪ ಸರ್ಕಾರದಲ್ಲಿ ಶುರುವಾಯಿತು. ತಮ್ಮ ಸ್ವಂತ ಜಿಲ್ಲೆಯಾದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಿಲ್ಲ ಎಂಬ ಅಸಮಾಧಾನ ಶುರುವಾಯಿತು. ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಸಿಗದೇ ಇದ್ದುದ್ದರಿಂದ ಜಿಲ್ಲೆಯಲ್ಲಿ ಯೋಗೀಶ್ವರ್ ಗೆ ಅಧಿಕಾರಿಗಳ ಮೇಲೆ ನಿಯಂತ್ರಣ ಸಿಗಲಿಲ್ಲ. ಡಾಕ್ಟರ್ ಅಶ್ವಥ್ ನಾರಾಯಣ್ ರಾಮನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು.

ಯಡಿಯೂರಪ್ಪ ಸರ್ಕಾರದಲ್ಲಿ ಯೋಗೀಶ್ವರ್ ಗೆ ಸಮಸ್ಯೆ ಏನು? ಸ್ವಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲೇ ತಾವು ಆಡಳಿತರೂಢ ಬಿಜೆಪಿಯ ನಾಯಕರಾದರೂ, ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ, ಮಾಜಿ ಸಿಎಂ ಕುಮಾರಸ್ವಾಮಿ ಮಾತು ಕೇಳುತ್ತಿದ್ದಾರೆ. ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಮಾತು, ಮನವಿ ಪುರಸ್ಕರಿಸಿ, ಚನ್ನಪಟ್ಟಣಕ್ಕೆ ಅನುದಾನ ನೀಡುತ್ತಿದ್ದಾರೆ ಎಂಬ ಅಸಮಾಧಾನ ಯೋಗೀಶ್ವರ್ ಗೆ ಶುರುವಾಯಿತು. ಸಿಎಂ ಯಡಿಯೂರಪ್ಪ-ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಅಘೋಷಿತ ದೋಸ್ತಿಯನ್ನು ಅರಗಿಸಿಕೊಳ್ಳಲು ಯೋಗೀಶ್ವರ್ ಗೆ ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಚನ್ನಪಟ್ಟಣಕ್ಕೆ ಸಂಬಂಧಿಸಿದಂತೆ, ಕುಮಾರಸ್ವಾಮಿ ಮಾತಿಗೆ ಮನ್ನಣೆ ನೀಡಿ, ಅಧಿಕಾರಿಗಳ ವರ್ಗಾವಣೆ, ಹಣ ಮಂಜೂರು ಮಾಡಿದರೆ, ತಾವು ಮತ್ತೆ ರಾಜಕೀಯ ಮೂಲೆಗುಂಪು ಆಗಬೇಕಾಗುತ್ತೆ ಎಂಬ ರಾಜಕೀಯ ಭವಿಷ್ಯದ ಬಗೆಗಿನ ಭಯ, ಆತಂಕ ಮತ್ತೆ ಶುರುವಾಯಿತು.

ಯಡಿಯೂರಪ್ಪ-ಕುಮಾರಸ್ವಾಮಿ ದೋಸ್ತಿಯಿಂದ ತಮಗೆ ಸಂಕಷ್ಟ ಎದುರಾಗಿದೆ ಎನ್ನುವುದನ್ನು ಯೋಗೀಶ್ವರ್ ಹೈಕಮಾಂಡ್ ನಾಯಕರ ಗಮನಕ್ಕೂ ತಂದರು. ಕೆಲವೊಮ್ಮೆ ಬಹಿರಂಗ ಹೇಳಿಕೆಗಳನ್ನು ಕೊಟ್ಟರು. ಆದರೂ, ಬಿಎಸ್‌ವೈ-ಕುಮಾರಸ್ವಾಮಿ ಅಘೋಷಿತ ದೋಸ್ತಿ ಮುರಿಯಲಾಗಲಿಲ್ಲ. ಇದರಿಂದಾಗಿ ಸಿಎಂ ಹುದ್ದೆಯಿಂದ ಯಡಿಯೂರಪ್ಪರನ್ನೇ ಬದಲಾವಣೆ ಮಾಡಬೇಕೆಂದು ಯೋಗೀಶ್ವರ್ ಪ್ರಯತ್ನ ಶುರು ಮಾಡಿದ್ದರು. ಆದರೆ,  ಬಿಜೆಪಿಯಲ್ಲಿ ಯಡಿಯೂರಪ್ಪಗೆ ಪರ್ಯಾಯವಾದ ಸಮರ್ಥ ಲಿಂಗಾಯತ ನಾಯಕರಿಲ್ಲ ಎಂಬ ಕೊರಗು ಕೂಡ ಯೋಗೀಶ್ವರ್ ಗೆ ಇತ್ತು. ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಇಳಿಸಿದರೇ, ಮತ್ತೊಬ್ಬ ಲಿಂಗಾಯತ ನಾಯಕರನ್ನೇ ಸಿಎಂ ಆಗಿ ಮಾಡಬೇಕು. ಆತ ಕೂಡ ಯಡಿಯೂರಪ್ಪರಂತೆ ಸಮರ್ಥ, ಜನಪ್ರಿಯ ನಾಯಕರಾಗಿರಬೇಕು ಎಂಬುದು ಯೋಗೀಶ್ವರ್ ಲೆಕ್ಕಾಚಾರ.

ಆದರೆ,  ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧವೂ ಯೋಗೀಶ್ವರ್ ಬಹಿರಂಗ ಹೇಳಿಕೆ ನೀಡಿದ್ದಾರೆ. ನಾನು ಸಚಿವ. ನನ್ನ ಅಧಿಕಾರವನ್ನು ನನ್ನ ಮಗ ಚಲಾಯಿಸುವುದನ್ನು ನಾನು ಒಪ್ಪಲ್ಲ ಎಂದು ಹೇಳಿದ್ದರು. ಈ ಮೂಲಕ ಸರ್ಕಾರದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪವನ್ನು ತಾವು ಸಹಿಸಲ್ಲ ಎಂಬ ಸಂದೇಶ ರವಾನಿಸಿದ್ದರು.

ಏಕಾಂಗಿ ಹೋರಾಟ ಸಿ.ಪಿ.ಯೋಗೀಶ್ವರ್ ರದ್ದು ಯಡಿಯೂರಪ್ಪ ಹಠಾವೋ, ಬಿಜೆಪಿ ಬಚಾವೋ ಅಂತ ಏಕಾಂಗಿ ಸೈನಿಕನ ಹೋರಾಟ. ಅತ್ತ ಉತ್ತರ ಕರ್ನಾಟಕ ಭಾಗದಿಂದ ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಯೋಗೀಶ್ವರ್ ಕೈ ಜೋಡಿಸಲಿಲ್ಲ. ತಮ್ಮ ಸ್ನೇಹಿತ ರಮೇಶ್ ಜಾರಕಿಹೊಳಿ ಬೆಂಬಲವನ್ನು ಪಡೆಯಲಿಲ್ಲ. ಎಲ್ಲವನ್ನೂ ಹೈಕಮಾಂಡ್ ಗೆ ಹೇಳಿದ್ದೇವೆ. ಸಿಎಂ ಬದಲಾವಣೆಯ ಪರೀಕ್ಷೆ ಬರೆದಿದ್ದೇವೆ. ಫಲಿತಾಂಶ ಬಂದಾಗ, ಪಾಸಾಗಿದ್ದೇವೆಯೇ, ಫೇಲಾಗಿದ್ದೇವೆಯೇ ಎಂದು ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿಯೂ ಹೇಳಿದ್ದರು.

ಎರಡು ಮೂರು ವರ್ಷದಲ್ಲಿ 2 ಸರ್ಕಾರವನ್ನು ಉರುಳಿಸಲು ಯೋಗೀಶ್ವರ್ ಯತ್ನಿಸಿ ಯಶಸ್ವಿಯಾಗಿದ್ದಾರೆ. ಯೋಗೀಶ್ವರ್ ಹೇಳಿದ್ದು ಕೊನೆಗೂ ನಿಜವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಯೋಗೀಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಒಂದು ಟೀಮ್ ಆಗಿ ಕೆಲಸ ಮಾಡಿಲ್ಲ. ಇಬ್ಬರೂ ಒಂದಾಗಿಲ್ಲ. ಇಬ್ಬರಿಗೂ ಬೇರೆ ಬೇರೆ ಕಾರಣಗಳಿಗೆ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಮೇಲೆ ಅಸಮಾಧಾನ. ಆ ಅಸಮಾಧಾನ, ಆಕ್ರೋಶವನ್ನೇ ದೆಹಲಿಯ ಹೈಕಮಾಂಡ್ ವರೆಗೂ ತೆಗೆದುಕೊಂಡು ಹೋಗಿ ತಲುಪಿಸಿದ್ದಾರೆ.  ಈಗ ಮುಂದೆ ಸಿಎಂ ಆಗುವವರೂ ಯೋಗೀಶ್ವರ್ , ಬಸನಗೌಡ ಪಾಟೀಲ್ ಯತ್ನಾಳ್ ರಂಥ ನಾಯಕರನ್ನು ವಿಶೇಷವಾಗಿ ಮುತುವರ್ಜಿ ಕೊಟ್ಟು ಅವರ ಬೇಕು, ಬೇಡಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೇ, ಮುಂದೆ ಸಿಎಂ ಆಗುವವರ ಸರ್ಕಾರವನ್ನ ತೆಗೆಯುತ್ತೇವೆ ಅಂತ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಒಂದಾಗದ ಈ ಜೋಡಿ ಮತ್ತೆ ಯತ್ನಿಸಬಹುದು. ಬಸನಗೌಡ ಪಾಟೀಲ್ ಯತ್ನಾಳ್, ಯೋಗೀಶ್ವರ್ ರಾಜಕೀಯ ರಂಗದಲ್ಲಿ ಕೂಗುಮಾರಿಗಳು ಇದ್ದ ಹಾಗೆ. ಆಡಳಿತರೂಢರ ಭ್ರಷ್ಟಾಚಾರ, ಅವ್ಯವಹಾರ, ಸ್ವಜನಪಕ್ಷಪಾತದ ವಿರುದ್ಧ ಧ್ವನಿ ಎತ್ತುವ ಕೂಗುಮಾರಿಗಳು ಪ್ರಜಾಪ್ರಭುತ್ವಕ್ಕೂ ಅಗತ್ಯ.

ಇದನ್ನೂ ಓದಿ: 

Basavaraj Bommai: ಯಡಿಯೂರಪ್ಪ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ, ಹೋರಾಟದ ಹಾದಿಯಲ್ಲಿ ಅರಳಿದ ನಾಯಕ

BS Yediyurappa: ಪ್ರವಾಹ, ಕೋವಿಡ್ ಸಂಕಷ್ಟ, ಆಪರೇಷನ್ ಕಮಲ, ಜೈಲು ವಾಸ; ಸವಾಲುಗಳನ್ನು ಮೆಟ್ಟಿ ನಿಂತ ಛಲಗಾರ ಯಡಿಯೂರಪ್ಪ

(Karnataka Politics What was the problem of CP Yogeshwar in the Yediyurappa government)

ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್