ನಾ ಕಂಡ ಯಡಿಯೂರಪ್ಪ: ವರದಿಗಾರ ರಾಮ್ ಮೈಸೂರು ವಿಶೇಷ ಬರಹ

TV9 Digital Desk

| Edited By: guruganesh bhat

Updated on:Jul 26, 2021 | 7:41 PM

ನನ್ನ ಪ್ರಯತ್ನ ಫಲ ನೀಡಿತು. ಯಡಿಯೂರಪ್ಪ ಮಾತಾಡಲು ಮುಂದಾದರು. ನನ್ನ ಮೊದಲ ಪ್ರಶ್ನೆ ಸರ್,  ನೀವು ಸಿಎಂ ಬಿಬಿಎಂಪಿ ಚುನಾವಣೆಗೆ ಇಷ್ಟೊಂದು ಪ್ರಾಮುಖ್ಯತೆ ಏಕೆ ಅಂತಾ ? ಆಗ ಅವರು ಕೊಟ್ಟ ಉತ್ತರ ನಿಜಕ್ಕೂ ಈಗಲೂ ನನ್ನ ಕಿವಿಯಲ್ಲಿ ಗುಯ್​ಗುಡುತ್ತಿದೆ.

ನಾ ಕಂಡ ಯಡಿಯೂರಪ್ಪ: ವರದಿಗಾರ ರಾಮ್ ಮೈಸೂರು ವಿಶೇಷ ಬರಹ
ಬಿ ಎಸ್ ಯಡಿಯೂರಪ್ಪ ಅವರ ಹಳೆಯ ಚಿತ್ರಗಳು
Follow us

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು..! ಈ ಧ್ವನಿ ನಾಡು ಕಂಡ ಅಪರೂಪದ ರಾಜಕಾರಣಿ ಯಡಿಯೂರಪ್ಪ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದು ಈಗ ಇತಿಹಾಸ. ಯಡಿಯೂರಪ್ಪ ಅಂದರೆ ಹೋರಾಟ, ಹೋರಾಟ ಅಂದ್ರೆ ಯಡಿಯೂರಪ್ಪ, ಅನ್ನೋದು ಎಲ್ಲರೂ ಒಪ್ಪಲೇಬೇಕಾದ ಕಟು ಸತ್ಯ. ಅದನ್ನು ತೀರಾ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ‌ ನೀಡುವವರೆಗೂ ಯಡಿಯೂರಪ್ಪ ಸಾಬೀತುಪಡಿಸಿದ್ದಾರೆ. ಬರೋಬ್ಬರಿ 49 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯಡಿಯೂರಪ್ಪ ಅವರ ರಾಜಕೀಯ ಜೀವನ ಅಸ್ತಂಗತದತ್ತ ಹೊರಳಿದೆ. ಇದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ಟಿವಿ9 ಕನ್ನಡದ ಮೈಸೂರು ವರದಿಗಾರ ರಾಮ್ ತಾವು ಕಂಡ ಹಾಗೂ ಕೇಳಿದ ಯಡಿಯೂರಪ್ಪ ಅವರ ವ್ಯಕ್ತಿತ್ವ ಕಟ್ಟಿಕೊಟ್ಟಿದ್ದಾರೆ.

ಹುಟ್ಟು ಹೋರಾಟಗಾರ ಯಡಿಯೂರಪ್ಪ ಸಿಎಂ ಆಗಿ ಜನಮನ್ನಣೆ ಗಳಿಸಿದ್ದಕ್ಕಿಂತ ವಿರೋಧ ಪಕ್ಷದ ನಾಯಕನಾಗಿ ಇಷ್ಟವಾಗಿದ್ದೇ ಹೆಚ್ಚು‌. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅನ್ನೋ ಘೋಷಣೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಅಷ್ಟರಮಟ್ಟಿಗೆ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿ ಮಿಂಚು ಹರಿಸಿದ್ದರು. ತಮ್ಮ ಪಕ್ಷದ ಶಾಸಕರ ಸಂಖ್ಯೆ ಕಡಿಮೆಯಿದ್ದರೂ, ಅಧಿಕೃತ ವಿರೋಧ ಪಕ್ಷವಾಗಿಲ್ಲದಿದ್ದರೂ, ರಾಜ್ಯದ ಘಟಾನುಘಟಿ ಸಿಎಂಗಳು ಯಡಿಯೂರಪ್ಪ ಅವರ ಮಾತಿನ ಚಾಟಿಗೆ ಬೆಚ್ಚುತ್ತಿದ್ದರು ಅಂದರೆ ಅವರ ಖದರ್ ಹೇಗಿತ್ತು ಅನ್ನೋದು ಗೊತ್ತಾಗುತ್ತಿತ್ತು. ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಲು ನಿಂತರೆ ಯಡಿಯೂರಪ್ಪ ಅಕ್ಷರಶಃ ತಮ್ಮನ್ನೇ ತಾವು ಮರೆತುಬಿಡುತ್ತಿದ್ದರು. ಆ ಸಮಸ್ಯೆಗೆ ಸರ್ಕಾರ ಪರಿಹಾರ ನೀಡುವವರೆಗೂ, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವವರೆಗೂ ಯಡಿಯೂರಪ್ಪ ವಿಶ್ರಮಿಸುತ್ತಿರಲಿಲ್ಲ ಅನ್ನೋದು ಯಡಿಯೂರಪ್ಪ ಅವರನ್ನು ಹತ್ತಿರದಿಂದ ಬಲ್ಲ ಎಲ್ಲವರಿಗೂ ಗೊತ್ತಿದ್ದ ವಿಚಾರ. ಈ ಹೋರಾಟದ ಹಾದಿಯೇ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯವರೆಗೂ ತಂದು ಕೂರಿಸಿತ್ತು.

ನಾಲ್ಕು ಬಾರಿ ಸಿಎಂ – ಅರ್ಧಕ್ಕೆ ಮೊಟಕುಗೊಂಡ ಅಧಿಕಾರ ಬಿ. ಎಸ್. ಯಡಿಯೂರಪ್ಪ ಸಿಎಂ ಸ್ಥಾನದ ಕನಸನ್ನು ಕಂಡವರಲ್ಲ. ತಾವಾಯ್ತು, ತಮ್ಮ ಹೋರಾಟ, ಪಕ್ಷ ಅಂತಾ ಇದ್ದು ವಿರೋಧ ಪಕ್ಷಕ್ಕೆ ಸೀಮಿತವಾಗಿದ್ದ ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಅದೃಷ್ಟ, ಅನುಕಂಪ, ಜತೆಗೆ ಅರ್ಹವಾಗಿ ಬಂದು ಒದಗಿದ್ದು ಈಗ ಇತಿಹಾಸ. ಅದು ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಬಾರಿ ಯಡಿಯೂರಪ್ಪ ಕರ್ನಾಟಕ ರಾಜ್ಯದ ಸಿಎಂ ಗಾದಿಯನ್ನು ಅಲಂಕರಿಸಿದ್ದರು. ಆದರೆ ನಾಲ್ಕು ಬಾರಿಯೂ ತಮ್ಮ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸದ್ದು ಮಾತ್ರ ದುರಂತ. ಅದರಲ್ಲೂ ಪ್ರತಿಬಾರಿ ಸಿಎಂ ಆದಾಗಲೂ ಯಡಿಯೂರಪ್ಪ ಅವರದ್ದು ಹಗ್ಗದ ಮೇಲಿನ ನಡಿಗೆಯಾಗಿದ್ದು ಅಷ್ಟೇ ಸತ್ಯ. ಮೊದಲ ಬಾರಿಗೆ 2007 ನವೆಂಬರ್ 12 ರಂದು ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಜೆಡಿಎಸ್ ಬೆಂಬಲ ಕೊಡದ ಹಿನ್ನೆಲೆಯಲ್ಲಿ ಕೇವಲ 7 ದಿನಕ್ಕೆ ಅಂದರೆ 2007 ನವೆಂಬರ್ 19ರಂದು ಭಾರದ ಮನಸಿನಿಂದ ರಾಜೀನಾಮೆ ನೀಡಿ ಹೊರನಡೆದರು. ಇದ್ದ 7 ದಿನವೂ ಯಡಿಯೂರಪ್ಪ ತಮ್ಮ ಸ್ಥಾನ ಉಳಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಅವರು ಅವತ್ತು ಅನುಭವಿಸಿದ ನೋವು ಇಡೀ ಕರ್ನಾಟಕದ ಜನತೆಯ ನೋವಾಗಿ ಪರಿವರ್ತಿತವಾಯಿತು. ಅದರಲ್ಲೂ ಯಡಿಯೂರಪ್ಪ ಅವರ ಲಿಂಗಾಯತ ಸಮುದಾಯ ಒಕ್ಕೊರಲಿನಿಂದ, ಬೇಷರತ್ತಾಗಿ ಅವರ ಬೆನ್ನಿಗಿ ನಿಂತಿತು. ಅದರ ಫಲವಾಗಿ 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಅನ್ನೋದಕ್ಕಿಂತ, ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿದರು. ಆದರೂ ಪೂರ್ಣ ಬಹುಮತ ಸಿಗಲಿಲ್ಲ. ಅದಾದ ನಂತರ ಆಪರೇಷನ್ ಕಮಲ, ಅದು, ಇದು ಸರ್ಕಸ್ ಮಾಡಿ ಸಿಎಂ ಆದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಸಿಎಂ ಆಗಿ ಅಧಿಕಾರ ಮಾಡಿದ್ದು ಮೂರೇ ವರ್ಷ. ಮತ್ತದೆ ಹಗ್ಗದ ನಡಿಗೆ, ಕುರ್ಚಿ ಕಾದಾಟ, ಷಡ್ಯಂತ್ರ, ಪಕ್ಷದ ಒಳಬೇಗುದಿಗೆ ಬಲಿಯಾದ ಯಡಿಯೂರಪ್ಪ ಸಿಎಂ ಸ್ಥಾನ ಕಳೆದುಕೊಂಡಿದ್ದು ಮಾತ್ರವಲ್ಲ ಜೈಲಿಗೆ ಸಹ ಹೋದರು‌.

BS Yediyurappa Old Photos

ಬಿ ಎಸ್ ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿ

ಎಲ್ಲರೂ ಯಡಿಯೂರಪ್ಪ ರಾಜಕೀಯ ಎರಾ ಮುಗಿಯಿತು ಅಂತಲೇ ಭಾವಿಸಿದ್ದರು. ಆದ್ರೆ ಫೀನಿಕ್ಸ್‌‌ನಂತೆ ಎದ್ದು ಬಂದ ಯಡಿಯೂರಪ್ಪ ಪಕ್ಷ ಕಟ್ಟಿ ಹೋರಾಡಿ, ಮತ್ತೆ ಪಕ್ಷಕ್ಕೆ ವಾಪಸ್ಸು ಬಂದು ಬಿಜೆಪಿ ಪಕ್ಷವನ್ನು ಅಧಿಕಾರದ ಹೊಸ್ತಿಲಿಗೆ ತಂದು ಮೂರನೇ ಬಾರಿ ಸಿಎಂ ಆದರು. ಆದರೆ ಅಧಿಕಾರ ಉಳಿದಿದ್ದು 2 ದಿನ ಮಾತ್ರ. ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸಿಎಂ ಆಗಿ ಮುಂದುವರಿಯುವ ಕನಸು ನನಸಾಗಲಿಲ್ಲ. ಮತ್ತೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದರು. ಮತ್ತೆ ಒಂದು ವರ್ಷ ಅಜ್ಞಾತವಾಸದ ನಂತರ 2019ರ ಜುಲೈ 29ರಂದು ನಾಲ್ಕನೇ ಬಾರಿಗೆ ಸಿಎಂ ಆದ ಯಡಿಯೂರಪ್ಪ ಅಧಿಕಾರ ಪೂರೈಸಿದ್ದು 2 ವರ್ಷ ಮಾತ್ರ. ಆದರೆ ಈ ನಾಲ್ಕು ಬಾರಿ ಸಿಎಂ ಆದಾಗಲೂ ಯಡಿಯೂರಪ್ಪ ಒಂದು ದಿನವೂ ನೆಮ್ಮದಿಯಾಗಿರಲಿಲ್ಲ. ಪ್ರತಿದಿನ ಪ್ರತಿಕ್ಷಣ ತಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತು ಮಾಡುತ್ತಲೆ ಇದ್ದರು. ಮುಳ್ಳಿನ ಕುರ್ಚಿಯ ಮೇಲೆ ಕುಳಿತೇ ಕಾಲ ದೂಡಿದರು.

ದಣಿವರಿಯದ ನಾಯಕ ಬಿ.ಎಸ್. ಯಡಿಯೂರಪ್ಪ ದಣಿವರಿಯದ ನಾಯಕ ಇದರಲ್ಲಿ ಎರಡು ಮಾತಿಲ್ಲ. ಇದರ ಅನುಭವ ನನಗೆ ಆಗಿದ್ದು 2009ರಲ್ಲಿ ಆಗ ತಾನೇ ನಾನು ಟಿವಿ9ಗೆ ಸೇರಿದ್ದೆ. ನನ್ನದು ಸಿಎಂ ಬೀಟ್. ಪ್ರತಿದಿನ ಬೆಳಗ್ಗೆ ಸಿಎಂ ರೇಸ್‌ಕೋರ್ಸ್‌ ಮನೆ ಬಳಿ ಹೋಗಿ ಅಲ್ಲಿ ನಡೆಯುವ ಬೆಳವಣಿಗೆಗಳ ವರದಿ ಮಾಡುವುದು ನನ್ನ ಕೆಲಸವಾಗಿತ್ತು. ಇದರ ಜೊತೆಗೆ ಬೆಂಗಳೂರಿನಲ್ಲಿ ನಡೆಯುವ ಸಿಎಂ ಕಾರ್ಯಕ್ರಮಗಳ ಅಸೈನ್‌ಮೆಂಟ್ ಸಹ ನನ್ನದಾಗಿತ್ತು. ಅದು ಬಿಬಿಎಂಪಿ ಚುನಾವಣೆ ಸಮಯ. ಸಿಎಂ ಆಗಿದ್ದ ಬಿ. ಎಸ್. ಯಡಿಯೂರಪ್ಪ ಅವರ ಪ್ರಚಾರ ನಿಗದಿಯಾಗಿತ್ತು. ನಿಗದಿಯಂತೆ ಬೆಳಗ್ಗೆ 7 ಗಂಟೆಗೆ ಸಿಎಂ ಯಡಿಯೂರಪ್ಪ ಅವರ ಪ್ರಚಾರ ಆರಂಭವಾಯ್ತು. ಬೆಂಗಳೂರಿನ ಮೂಲೆ ಮೂಲೆಯಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿದ ಯಡಿಯೂರಪ್ಪ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮುಗಿಸಿ ಮತ್ತೆ ರೇಸ್‌ಕೋರ್ಸ್ ಮನೆಗೆ ಮರಳಿದಾಗ ಗಂಟೆ ರಾತ್ರಿ 10.30 ಆಗಿತ್ತು‌.

ಬೆಳಗ್ಗೆ ಅವರ ಪ್ರಚಾರ ಆರಂಭವಾದಾಗ ಅವರ ಇಂಟರ್‌ವ್ಯೂವ್ ಮಾಡಿದ್ದ ನಾನು, ಅಂದು ಪೂರ್ತಿ ದಿನ ಅವರ ಹಿಂದೆ, ಮುಂದೆ ಓಡಾಡಿಕೊಂಡು ಅವರ ಪ್ರಚಾರದ ಹೈಲೈಟ್ಸ್‌ಗಳ ಸಂಪೂರ್ಣ ವರದಿ ಮಾಡಿದ್ದೆ.‌ ರಾತ್ರಿ ಅವರ ಪ್ರಚಾರದ ಅನುಭವದ ಮಾತುಗಳ ಜೊತೆ ನನ್ನ ಅಸೈನ್‌ಮೆಂಟ್ ಮುಗಿಸುವ ಪ್ಲ್ಯಾನ್‌ ನನ್ನದಾಗಿತ್ತು. ಆದ್ರೆ ಅಷ್ಟೊಂದು ಬಳಲಿದ್ದ ಯಡಿಯೂರಪ್ಪ ನಿಜವಾಗಲೂ ಮಾತನಾಡುತ್ತಾರಾ ? ಅನ್ನೋ ಅನುಮಾನವಂತು ಇದ್ದೇ ಇತ್ತು. ಆದರೂ ಪ್ರಯತ್ನ ಬಿಡದ ನಾನು ಅಂದು ಸಿಎಂ ಜೊತೆಗಿದ್ದ ಜಗದೀಶ್ ಅವರ ಬೆನ್ನು ಹತ್ತಿ ಒಮ್ಮೆ ಮಾತಾಡುವಂತೆ ಕೇಳಿಕೊಂಡೆ. ನನ್ನ ಪ್ರಯತ್ನ ಫಲ ನೀಡಿತು. ಯಡಿಯೂರಪ್ಪ ಮಾತಾಡಲು ಮುಂದಾದರು. ನನ್ನ ಮೊದಲ ಪ್ರಶ್ನೆ ಸರ್,  ನೀವು ಸಿಎಂ ಬಿಬಿಎಂಪಿ ಚುನಾವಣೆಗೆ ಇಷ್ಟೊಂದು ಪ್ರಾಮುಖ್ಯತೆ ಏಕೆ ಅಂತಾ ? ಆಗ ಅವರು ಕೊಟ್ಟ ಉತ್ತರ ನಿಜಕ್ಕೂ ಈಗಲೂ ನನ್ನ ಕಿವಿಯಲ್ಲಿ ಗುಯ್​ಗುಡುತ್ತಿದೆ. ನಾನು ಮೊದಲು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ. ಆಮೇಲೆ ಸಿಎಂ. ನಾನು ಸಿಎಂ ಆಗಿರುವುದು ಪಕ್ಷದ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮ ತ್ಯಾಗದಿಂದ. ಇದು ಈಗ ನನಗೆ ಸಿಕ್ಕಿರುವ ಅವಕಾಶ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ನನಗೆ ಅಧಿಕಾರ ಸಿಗಲು ಕಾರಣರಾದವರಿಗೆ ಅಧಿಕಾರ ಕೊಡಿಸುವ ಜವಾಬ್ದಾರಿ. ಅದನ್ನು ನಾನು ಮಾಡುತ್ತಿದ್ದೇನೆ ಅಂದರು. ಅದಾದ‌ ನಂತರ ಸೋಲು, ಗೆಲುವು, ಜನಪ್ರಿಯತೆ ಅದು ಇದು ಅಂತಾ ಎಷ್ಟೋ ವಿಚಾರ ಹೇಳಿದರು. ಆದರೆ ಅವರು ಪಕ್ಷದ ಬಗ್ಗೆ ಪಕ್ಷದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳು ಮಾತ್ರ ನಾನು ಎಂದಿಗೂ ಮರೆಯುವುದಿಲ್ಲ.

BS Yediyurappa

ಬಿ ಎಸ್ ಯಡಿಯೂರಪ್ಪ

ಅಜಾತ ಶತ್ರು,ಮಡಿಲಲ್ಲಿ ಕೆಂಡ ಯಾರು ಏನೇ ಹೇಳಿದರು ಯಡಿಯೂರಪ್ಪ ತಮ್ಮ ಸುದಿರ್ಘ ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದವರು. ಎಂದೂ ಅವರು ದ್ವೇಷದ ಸೇಡಿನ ರಾಜಕಾರಣ ಮಾಡಿದವರಲ್ಲ. ಯಾರನ್ನೋ ಹಣಿಯಬೇಕು ಅಂತಾ ರಾಜಕಾರಣ ಮಾಡಿದವರಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದಲೇ ಕಂಡವರು. ಇದಕ್ಕೆ ಸಾಕ್ಷಿ ಅವರು ಸಿಎಂ ಆದಾಗ ಅವರ ಬಳಿ ಆಡಳಿತ ಪಕ್ಷದವರು ಮಾತ್ರವಲ್ಲ, ವಿಪಕ್ಷದ ನಾಯಕರು ಬಂದು ತಮ್ಮ ಕೆಲಸ ಮಾಡಿಸಿಕೊಂಡಿರುವುದು. ಇದಕ್ಕೆ ಸಿಎಂ ಗೃಹ ಕಚೇರಿ ಕೃಷ್ಣ ಹಾಗೂ ಅಲ್ಲಿನ ಸಿಬ್ಬಂದಿಗಳೇ ಸಾಕ್ಷಿ. ಇದನ್ನು ಎಷ್ಟೋ ಬಾರಿ ಯಡಿಯೂರಪ್ಪ ಸಹ ಹೇಳಿದ್ದಾರೆ. ಅವರ ಬಳಿ ಕೆಲಸ ಮಾಡಿಸಿಕೊಂಡ ರಾಜಕೀಯ ಎದುರಾಳಿಗಳು ಸಹ ಹೇಳಿದ್ದಾರೆ. ಆಡಳಿತದ ವಿಚಾರದಲ್ಲೂ ಯಡಿಯೂರಪ್ಪ ಅಷ್ಟಾಗಿ ಎಡವಿದವರಲ್ಲ. ಎಲ್ಲವನ್ನೂ ನಾಜೂಕಾಗಿ ತಮ್ಮ ಜನಪ್ರಿಯತೆಗೆ ಧಕ್ಕೆ ಬಾರದಂತೆ ನಿರ್ವಹಿಸಿದವರು. ಆದರೆ ಅವರ ಆಡಳಿತದ ಪ್ರತಿ ಹಂತದಲ್ಲೂ ಎದುರಾದ ಪ್ರಮುಖ ಆರೋಪ, ಕುಟುಂಬದ ಹಸ್ತಕ್ಷೇಪ ಹಾಗೂ ಅತಿಯಾದ ಕುಟುಂಬ ವ್ಯಾಮೋಹ ಮತ್ತು ಅತಿಯಾದ ಭ್ರಷ್ಟಾಚಾರ. ಅದರಲ್ಲೂ ಈ ಬಾರಿ ಇದು ಮಿತಿ ಮೀರಿತ್ತು ಒಂದು ಕಾಲದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರಕ್ಕೆ ತಂದ ಪಕ್ಷದ ಹಲವು ಪ್ರಮುಖ ನಾಯಕರೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪದಿಂದ ಬೇಸತ್ತು, ಯಡಿಯೂರಪ್ಪ ಅವರ ವಿರುದ್ದ ತಿರುಗಿ ಬಿದ್ದು ಇಂದಿನ ಸ್ಥಿತಿಗೆ ಕಾರಣರಾದರೂ ಅನ್ನೋದು ಸದ್ಯ ಚಾಲ್ತಿಯಲ್ಲಿರುವ ಚರ್ಚೆ. ಏನೇ ಇರಲಿ, ನಾಡು ಕಂಡ ಅಪರೂಪದ ಹೋರಾಟಗಾರ, ಮುತ್ಸದ್ದಿ ರಾಜಕಾರಣಿ, ನೇರ, ನಿಷ್ಠುರ ಮಾತಿನ ಸಂಸತ್ ಪಟುವಿನ ರಾಜಕೀಯ ಜೀವನದ ಪ್ರಮುಖ ಅಧ್ಯಾಯ ಭಾಗಶಃ ಮುಗಿಯುವ ಹಂತ ತಲುಪಿದೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ. ಆಲ್ ದ ಬೆಸ್ಟ್ ಯಡಿಯೂರಪ್ಪ ಅವರೇ!

ಕೊನೆ ಮಾತು ಇದನ್ನು ನಾನು ಹೇಳಲೇಬೇಕು. ಯಡಿಯೂರಪ್ಪ ತಾವು ರಾಜೀನಾಮೆ ನೀಡುತ್ತೇನೆ ಅಂತಾ ಘೋಷಣೆ ಮಾಡಿದ ಸಮಯ ಗದ್ಗದಿತರಾದರು. ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಧ್ವನಿ ಭಾರವಾಗಿತ್ತು‌. ಯಾವ ಧ್ವನಿಯಿಂದ ವಿಧಾನಸೌಧವೇ ನಡುಗುತಿತ್ತೋ ಆ ಧ್ವನಿಯೇ ನಡುಗುತಿತ್ತು. ಇದನ್ನು ಹಲವರು ಗೇಲಿ ಮಾಡಿದರು, ಕುಹಕವಾಡಿದರೂ, ನಾಟಕ ಅಂದರು. ಇದು ಬೇಕಿತ್ತಾ ? ಅಂತೆಲ್ಲಾ ಅಂದರು. ಆದರೆ ಯಡಿಯೂರಪ್ಪ ಅವರ ಈ ವರ್ತನೆ ಮಾನವ ಸಹಜ ವರ್ತನೆಯಾಗಿತ್ತು. ಅವರ ಸ್ಥಾನದಲ್ಲೇ ಯಾರೇ ಇದ್ದರೂ ನಾನು ನೀವೇ ಇದ್ದರು ಅದೇ ರೀತಿಯಾಗುತಿತ್ತು. ಮಾನವ ಭಾವನಾತ್ಮಕ ಜೀವಿ. ಬಡವ, ಶ್ರೀಮಂತ, ಸಿಎಂ, ಪಿಎಂ ಇತ್ಯಾದಿ ಇತ್ಯಾದಿ ಯಾರೇ ಆದರೂ ಇದಕ್ಕೆ ಹೊರತಾಗಿಲ್ಲ. ಉದಾಹರಣೆಗೆ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಹೋಗುವ ವಿದ್ಯಾರ್ಥಿ. ಒಂದು ಮನೆಯಿಂದ ಮತ್ತೊಂದು‌ ಮನೆಗೆ ಹೋಗುವ ಬಾಡಿಗೆದಾರ. ವರ್ಗಾವಣೆಯಾದಾಗ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಅಧಿಕಾರಿ, ತವರು ಬಿಟ್ಟು ಪತಿ ಮನೆಗೆ ಹೋಗುವ ನವವಧು. ಅಷ್ಟೇ ಏಕೆ, ತಮ್ಮ ಕ್ಷೇತ್ರ ಬಿಟ್ಟು ಹೋಗುವಾಗ ಘಟಾನುಘಟಿಗಳು ತಮ್ಮ ನೋವನ್ನು ಕಣ್ಣೀರಿನ ಮೂಲಕ ಹೊರಹಾಕಿ ಗದ್ಗದಿತರಾದ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ.‌ ಈಗಿರುವಾಗ ದಶಕಗಳ ಕಾಲ ಮಗುವಂತೆ ಪೋಷಿಸಿ, ಕಟ್ಟಿ, ಬೆಳೆಸಿದ ಪಕ್ಷದ ವಿಚಾರ ಬಂದಾಗ ಇದು ಸಹಜ. ಈಗಾಗಿ ಈ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಟೀಕಿಸುವ, ಗೇಲಿ ಮಾಡುವ ಮನಸುಗಳು ಸಾಧ್ಯವಾದರೆ ಅವರ ಭಾವನೆಯನ್ನು ಅರ್ಥ ಮಾಡಿಕೊಂಡು ಗೌರವಿಸಬಹುದು ಅಥವಾ ಇಲ್ಲವೇ ಸುಮ್ಮನಿದ್ದು ಬಿಡಬಹುದು ಎಂದಷ್ಟೇ ಅನಿಸುತ್ತಿದೆ.

ವಿಶೇಷ ವರದಿ: ರಾಮ್ , ಮೈಸೂರು

ಇದನ್ನೂ ಓದಿ: BS Yediyurappa: ಪ್ರವಾಹ, ಕೋವಿಡ್ ಸಂಕಷ್ಟ, ಆಪರೇಷನ್ ಕಮಲ, ಜೈಲು ವಾಸ; ಸವಾಲುಗಳನ್ನು ಮೆಟ್ಟಿ ನಿಂತ ಛಲಗಾರ ಯಡಿಯೂರಪ್ಪ 

ಯಡಿಯೂರಪ್ಪ ರಾಜೀನಾಮೆಯಿಂದ ಬೂಕನಕೆರೆಯಲ್ಲಿ ಸೂತಕದ ಛಾಯೆ, ಗ್ರಾಮ ದೇವತೆ ಗೋಗಲಮ್ಮ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲವೆಂದ ಗ್ರಾಮಸ್ಥರು

(BS Yediyurappa Reporter Ram Mysore Special Writing about his experience)

ತಾಜಾ ಸುದ್ದಿ

Related Stories

Click on your DTH Provider to Add TV9 Kannada