ಈ ಬಾರಿಯೂ ಸುಮಲತಾ ಪರ ಡಿ ಬಾಸ್ ಪ್ರಚಾರ: ಹೆತ್ತ ತಾಯಿನ ಬಿಟ್ಟು ಕೊಡೋಕಾಗುತ್ತಾ ಎಂದ ದರ್ಶನ
ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅಮ್ಮನ ಕೈಬಿಟ್ಟರೆ ಆಗುತ್ತಾ? ಹೆತ್ತ ತಾಯಿನ ಬಿಟ್ಟು ಕೊಡೋಕಾಗುತ್ತಾ ಎಂದು ಹೇಳುವ ಮೂಲಕ ನಟ ದರ್ಶನ ಈ ಬಾರಿಯೂ ಸಂಸದೆ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪರೋಕ್ಷವಾಗಿ ಹೇಳಿದರು.
ಮಂಗಳೂರು, ಮಾರ್ಚ್ 10: ಹೆತ್ತ ತಾಯಿನ ಬಿಟ್ಟು ಕೊಡೋಕಾಗುತ್ತಾ ಎಂದು ಹೇಳುವ ಮೂಲಕ ನಟ ದರ್ಶನ (Actor Darshan) ಈ ಬಾರಿಯೂ ಸಂಸದೆ ಸುಮಲತಾ ಅಂಬರೀಶ್ (Sumalata Ambareesh) ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪರೋಕ್ಷವಾಗಿ ಹೇಳಿದರು. ಈ ಬಾರಿಯೂ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತೀರಾ ಎಂಬ ಮಂಗಳೂರಿನಲ್ಲಿ (Mangaluru) ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅಮ್ಮನ ಕೈಬಿಟ್ಟರೆ ಆಗುತ್ತಾ ಎಂದರು.
ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಸ್ಯಾಂಡಲ್ವುಡ್ ನಟ ದರ್ಶನ್ ಭೇಟಿ ಕೊಟ್ಟಿದ್ದಾರೆ. ಕೊರಗಜ್ಜನ ದರ್ಶನ ಪಡೆದ ದರ್ಶನ್ ಅವರು ಕೊರಗಜ್ಜನ ಆದಿಸ್ಥಳ ಕುತ್ತಾರು ಕೊರಗಜ್ಜ ದೇವಸ್ಥಾನಕ್ಕೆ ಇದೇ ಮೊದಲಬಾರಿಗೆ ಭೇಟಿ ಕೊಟ್ಟಿರುವುದು ವಿಶೇಷವಾಗಿದೆ. ಈ ವೇಳೆ ಮಾತನಾಡಿದ ಅವರು, ಮಂಗಳೂರಿಗೆ ಸುಮಾರು ಸಲ ಬಂದಿದ್ದೆ ಆದರೆ ಕುತ್ತಾರಿಗೆ ಬರಲು ಆಗಿರಲಿಲ್ಲ. ಕುತ್ತಾರು ಏನು ಡಿಫರೆನ್ಸ್ ಇಲ್ಲ ಎಲ್ಲ ದೇವಸ್ಥಾನ ಒಂದೇ. ಎಲ್ಲರು ಈ ಕ್ಷೇತ್ರದ ಬಗ್ಗೆ ಹೇಳುತ್ತಿದ್ದರು. ಹೀಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ. ನಾನು ಭೇಟಿ ನೀಡಿದಕ್ಕೆ ಯಾವುದೇ XYZ ಕಾರಣ ಇಲ್ಲ ಎಂದರು.
ಇದನ್ನೂ ಓದಿ: ಮಂಡ್ಯ ಕ್ಷೇತ್ರದ ಟಿಕೆಟ್ ಬಿಜೆಪಿ ವರಿಷ್ಠರು ತನಗೆ ಮಾತ್ರ ಮೀಸಲಿಟ್ಟಿದ್ದಾರೆ ಎನ್ನುವಂತಿದೆ ಸುಮಲತಾ ಅಂಬರೀಶ್ ಮಾತಿನ ವರಸೆ
ನನ್ನ ಪರ ಪ್ರಚಾರ ಮಾಡ್ತಾರೆ ದರ್ಶನ್
ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಅವರು ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದರು. ಸುಮಲತಾ ಗೆಲುವು ಕಾಣಲು ದರ್ಶನ್ ಕೂಡ ಪ್ರಮುಖ ಕಾರಣ. ಈಗ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದಾರೆ. ಅವರ ಪರ ದರ್ಶನ್ ಪ್ರಚಾರ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸುಮಲತಾ ಉತ್ತರ ನೀಡಿದ್ದರು. ‘ಯಾವುದೇ ಪಕ್ಷದಲ್ಲಿ ನಿಂತರೂ ಪ್ರಚಾರ ಮಾಡುವುದಾಗಿ ದರ್ಶನ್ ಹೇಳಿದ್ದರು.
ಇನ್ನೂ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದರೂ ಕರ್ನಾಟಕದಿಂದ ಯಾವುದೇ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಿಲ್ಲ. ಆದರೆ, ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಭಾರಿ ಕುತೂಹಲ ಮೂಡಿಸಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಟಿಕೆಟ್ ಯಾರಿಗೆ ಸಿಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಒಂದೆಡೆ, ಜೆಡಿಎಸ್ಗೆ ಮಂಡ್ಯ ಕ್ಷೇತ್ರದ ಟಿಕೆಟ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್ಡಿ ಕುಮಾರಸ್ವಾಮಿ ಅವರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಕ್ಷೇತ್ರದ ಟಿಕೆಟ್ 100 ಪರ್ಸೆಂಟ್ ನನಗೆ ಸಿಗಲಿದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದರು. ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ನನ್ನ ಹೆಸರು ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ