ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ: ಬೆಳಗಾವಿಯಲ್ಲಿ ಬದಲಾದ ರಾಜಕೀಯ ಲೆಕ್ಕಾಚಾರ
ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಸಂಘಟನೆ ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೂ ಕೊಡಬಹುದು ಎಂದು ಮಂಗಳಾ ಸುಳಿವು ನೀಡಿದ್ದಾರೆ.
ಬೆಳಗಾವಿ, ಜನವರಿ 27: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagdish Shettar) ಮತ್ತೆ ಬಿಜೆಪಿ (BJP) ಸೇರ್ಪಡೆಯಾಗಿರುವುದರಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ಶೆಟ್ಟರ್ ಸೇರ್ಪಡೆಯಿಂದ ಸಂಸದೆ ಮಂಗಳಾ ಅಂಗಡಿ (Mangala Angadi) ಕುಟುಂಬಕ್ಕೆ ಶಕ್ತಿ ಬಂದಂತಾಗಿದೆ. ಶೆಟ್ಟರ್, ಅಂಗಡಿ ಇಬ್ಬರೂ ಬೀಗರಾಗಿರುವ ಹಿನ್ನೆಲೆ ಅವರಿಗೆ ರಾಜಕೀಯ ಲಾಭ ದೊರೆಯುವ ನಿರೀಕ್ಷೆ ಇದೆ. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಮಂಗಳಾ ಪರ ಶೆಟ್ಟರ್ ಕೆಲಸ ಮಾಡಿದ್ದರು.
ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾಗುವ ಮುನ್ನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳಾಗೆ ಟಿಕೆಟ್ ಡೌಟ್ ಎಂಬ ಬಗ್ಗೆ ಚರ್ಚೆಯಾಗಿತ್ತು. ಬೆಳಗಾವಿ ಲೋಕಸಭಾ ಟಿಕೆಟ್ಗೆ 8ಕ್ಕೂ ಹೆಚ್ಚು ಆಕಾಂಕ್ಷಿಗಳು ಲಾಬಿಯನ್ನೂ ಮಾಡುತ್ತಿದ್ದಾರೆ. ಆದರೀಗ ಶೆಟ್ಟರ್ ಸೇರ್ಪಡೆಯಿಂದ ಬಹುತೇಕ ಆಕಾಂಕ್ಷಿಗಳಿಗೆ ಹೊಸ ತಲೆಬಿಸಿ ಶುರುವಾಗಿದೆ.
ಮಂಗಳಾ ಇಲ್ಲವೇ ಶ್ರದ್ಧಾಗೆ (ಜಗದೀಶ್ ಶೆಟ್ಟರ್ ಸೊಸೆ) ಟಿಕೆಟ್ ನೀಡುವಂತೆ ಶೆಟ್ಟರ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಅಂಗಡಿ ಕುಟುಂಬಕ್ಕೆ ಟಿಕೆಟ್ ಫಿಕ್ಸ್ ಆಗಿದೆ ಎಂದು ಸಂಸದೆ ಮಂಗಳಾ ಅಂಗಡಿ ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗದ ಏಕೈಕ ಮಹಿಳಾ ಸಂಸದೆ ಆಗಿರುವ ಮಂಗಳಾ ಅಂಗಡಿಗೆ ಟಿಕೆಟ್ ಕೊಡದಿದಿದ್ದರೆ ತಪ್ಪು ಸಂದೇಶ ಹೋಗಬಹುದು ಎಂಬ ಆತಂಕವೂ ಬಿಜೆಪಿ ಪಾಳಯದಲ್ಲಿದೆ ಎನ್ನಲಾಗಿದೆ.
ಟಿಕೆಟ್ ಸಿಗುವುದು ಬಹುತೇಕ ಖಚಿತ: ಮಂಗಳಾ
ಬೆಳಗಾವಿ ಲೋಕಸಭಾ ಟಿಕೆಟ್ ವಿಚಾರವಾಗಿ ಬೆಳಗಾವಿಯಲ್ಲಿ ‘ಟಿವಿ9’ಗೆ ಸಂಸದೆ ಮಂಗಲಾ ಅಂಗಡಿ ಹೇಳಿಕೆ ನೀಡಿದ್ದು, ನಮ್ಮ ಕುಟುಂಬಕ್ಕೇ ಟಿಕೆಟ್ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ನಾವು ಟಿಕೆಟ್ಗಾಗಿ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಸಂಸದೆಯಾಗಿ ಕೆಲಸ ಮಾಡುತ್ತಿದ್ದೇನೆ. ಜಗದೀಶ್ ಶೆಟ್ಟರ್ ಪಕ್ಷಕ್ಕೆ ಮರಳಿರುವುದರಿಂದ ಬಹಳ ಸಂತೋಷ ಆಗಿದೆ. ನಮ್ಮ ಪಾರ್ಟಿಗೂ ಬಲ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಚೆನ್ನಾಗಿ ಕೆಲಸ ಮಾಡಬಹುದು. ಪಕ್ಷದ ಕೆಲಸ ಮಾಡುತ್ತಿದ್ದೆವು. ಅವರು ಪಕ್ಷ ಬಿಟ್ಟ ಮೇಲೆ ಸ್ವಲ್ಪ ಹಿನ್ನಡೆಯಾಗಿತ್ತು. ಈಗ ಸಾಕಷ್ಟು ಜನ ಟಿಕೆಟ್ ಕೇಳುತ್ತಿದ್ದಾರೆ, ಎಲ್ಲರೂ ಕೇಳುವವರೇ. ಅಂತಿಮವಾಗಿ ಹೈಕಮಾಂಡ್ ಹೇಳಿದಂತೆ ನಡೆಯುತ್ತೇವೆ ಎಂದು ಮಂಗಳಾ ಹೇಳಿದ್ದಾರೆ.
ಇದನ್ನೂ ಓದಿ: ಯಾವುದೇ ಆಪರೇಷನ್ ಗುರಿ ಇಲ್ಲ, ಲೋಕಸಭಾ ಚುನಾವಣೆಯೇ ನಮ್ಮ ಗುರಿ: ಬಿವೈ ವಿಜಯೇಂದ್ರ
ಶೆಟ್ಟರ್ಗೆ ಬೆಳಗಾವಿ ಟಿಕೆಟ್ ಸುಳಿವು
ಕಾರ್ಯಕರ್ತರು ಕೂಡ ಟಿಕೆಟ್ ಬಿಟ್ಟು ಕೊಡಬೇಡಿ ಎಂಬುದಾಗಿ ಹೇಳುತ್ತಿದ್ದಾರೆ. ಶೆಟ್ಟರ್ ಅವರ ಬಂದ ಮೇಲೆ ಶಕ್ತಿ ಬಂದಿದೆ, ಬಲ ಬಂದಿದೆ ಎಂದು ಅವರು ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧೆ ಮಾಡುತ್ತಾರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಬೆಳಗಾವಿಯಲ್ಲಿ ಸಂಘಟನೆ ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೂ ಕೊಡಬಹುದು ಎಂದು ಮಂಗಳಾ ಸುಳಿವು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ