Lok Sabha Elections: ರಂಗೇರುತ್ತಿರುವ ಮಂಡ್ಯ ಅಖಾಡ, ಸುಮಲತಾ – ಕುಮಾರಸ್ವಾಮಿ ಭೇಟಿಗೆ ಡಿಕೆಶಿ ಟೀಕೆ
ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಈ ಬಾರಿಯೂ ಸದ್ದು ಮಾಡುತ್ತಿದೆ. ಸಂಸದೆ ಸುಮಲತಾ ನಡೆ ನಿಗೂಢವಾಗಿರುವುದೇ ಇದಕ್ಕೆ ಕಾರಣ. ಈ ಮಧ್ಯೆ, ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಭಾನುವಾರ ಸುಮಲತಾ ಅವರನ್ನು ಭೇಟಿಯಾಗಿ ಬೆಂಬಲ ಕೇಳಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರು, ಏಪ್ರಿಲ್ 1: ಹಾಲಿ ಸಂಸದೆ ಸುಮಲತಾ (Sumalatha) ನಡೆ ಇನ್ನೂ ನಿಗೂಢವಾಗಿರುವುದರಿಂದ ಮಂಡ್ಯ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿದೆ. ಈ ಮಧ್ಯೆ ಸುಮಲತಾ ಮನವೊಲಿಕೆಗೆ ಖುದ್ದು ಮೈತ್ರಿ ಅಭ್ಯರ್ಥಿ, ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿಯೇ (HD Kumaraswamy) ಅಖಾಡಕ್ಕಿಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಮಂಡ್ಯ ಅಖಾಡ ಸದ್ದು ಮಾಡಿತ್ತು. ಈ ಬಾರಿಯೂ ಹೆಚ್ಡಿಕೆ ಸ್ಪರ್ಧೆಯಿಂದ ಮತ್ತೆ ಕಾವೇರಿದೆ. ನಾಮಪತ್ರ ಸಲ್ಲಿಕೆಗೆ 4 ದಿನ ಬಾಕಿ ಇದೆ. ಏಪ್ರಿಲ್ 3ಕ್ಕೆ ನಿರ್ಧಾರ ತಿಳಿಸುವುದಾಗಿ ಸುಮಲತಾ ಹೇಳಿರುವುದು ಮಂಡ್ಯ ಯುದ್ಧಕ್ಕೆ ಹೊಸ ಆಯಾಮ ಕೊಟ್ಟಿದೆ.
ಹೆಚ್ಡಿಕೆ ಭಾನುವಾರ ಸುಮಲತಾರನ್ನು ಭೇಟಿಯಾಗಿದ್ದು, ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಹಕಾರ ಕೊಡಿ ಅಂತಾ ಮನವಿ ಮಾಡಿದ್ದಾರೆ. ನಂತರ ಮಾತನಾಡಿದ ಅವ್ರು, ಸುಮಲತಾ ನನ್ನ ವೈರಿ ಅಲ್ಲ ಎಂದು ಹೇಳಿದ್ದಾರೆ.
ನಾನೇನು ವೈರಿಯಾ, ವಿಷ ಹಾಕಿದ್ನಾ? ಡಿಕೆ ತಿರುಗೇಟು
ಸುಮಲತಾ ನನ್ನ ವೈರಿ ಅಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ನಾನೇನು ವೈರಿಯಾ, ವಿಷ ಹಾಕಿದ್ನಾ ಎಂದು ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಡಿಕೆಯಷ್ಟು ಹಿತೈಷಿ ಯಾರೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅತ್ತ ಸಂಸದೆ ಸಮಲತಾ ಕೂಡ ನಾವೇನಾದರೂ ವಿಷ ಹಾಕಿದ್ದೆವಾ ಎಂದು ಗುಡುಗಿದ್ದಾರೆ.
ಈ ಮಧ್ಯೆ, ಅಂಬರೀಶ್ ಕಾಂಗ್ರೆಸ್ ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದರು? ಕಾಂಗ್ರೆಸ್ನಲ್ಲಿ ನಮ್ಮ ಕುಟುಂಬ 25 ವರ್ಷ ಸೇವೆ ಸಲ್ಲಿಸಿದೆ. ಈ 5 ವರ್ಷದಲ್ಲಿ ಕಾಂಗ್ರೆಸ್ ನಾಯಕರಿಗೆ ಅದು ನೆನಪಾಗಲಿಲ್ಲವಾ ಎಂದು ಡಿಸಿಎಂ ಡಿಕೆ ಶಿವಕುಮಾರ್ಗೆ ಸಂಸದೆ ಸುಮಲತಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಅಮಿತ್ ಶಾ ಪ್ರಚಾರ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಲೋಕಸಭೆ ಚುನಾವಣೆ ಅಖಾಡದಲ್ಲಿ ವಿಷದ ವಿಚಾರ ಭಾರೀ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಸಂಸದೆ ಸುಮಲತಾ ಮುಂದಿನ ನಡೆ ಏನು ಎಂಬುದು ಕುತೂಹಲದ ವಿಚಾರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




