Lok Sabha Elections: ಬಿಜೆಪಿಗೆ ಬಿಕ್ಕಟ್ಟು ಶಮನವೇ ಸವಾಲು, ಯಾವ ಕ್ಷೇತ್ರದಲ್ಲಿ ಯಾರು ಬಂಡಾಯ ಅಭ್ಯರ್ಥಿ? ಇಲ್ಲಿದೆ ವಿವರ

| Updated By: Ganapathi Sharma

Updated on: Mar 30, 2024 | 2:26 PM

ಲೋಕಸಭೆ ಚುನಾವಣೆಗೆ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಬಿಜೆಪಿಗೆ ಇದೀಗ ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ಕ್ಷೇತ್ರದಲ್ಲಿ ಯಾರೆಲ್ಲ ಬಂಡಾಯ ಎದ್ದಿದ್ದಾರೆ? ಯಾರೆಲ್ಲ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

Lok Sabha Elections: ಬಿಜೆಪಿಗೆ ಬಿಕ್ಕಟ್ಟು ಶಮನವೇ ಸವಾಲು, ಯಾವ ಕ್ಷೇತ್ರದಲ್ಲಿ ಯಾರು ಬಂಡಾಯ ಅಭ್ಯರ್ಥಿ? ಇಲ್ಲಿದೆ ವಿವರ
ಬಿವೈ ವಿಜಯೇಂದ್ರ & ಆರ್ ಅಶೋಕ
Follow us on

ಬೆಂಗಳೂರು, ಮಾರ್ಚ್ 30: ಲೋಕಸಭೆ ಚುನಾವಣೆಗೆ (Lok Sabha Elections) ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸಿರುವ ಬಿಜೆಪಿಗೆ (BJP) ಈಗ ಚುನಾವಣೆ ಎದುರಿಸುವುದಕ್ಕಿಂತಲೂ ಬಂಡಾಯ ಶಮನವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಿಜೆಪಿಯಲ್ಲಿ ಸ್ಫೋಟಗೊಂಡಿರುವ ಬಂಡಾಯದ ಬೆಂಕಿ ಭುಗಿಲೇಳುತ್ತಲೇ ಇದೆ. ಅಸಮಾಧಾನ ಶಮನವಾಗೋ ಲಕ್ಷಣವೇ ಕಾಣಿಸುತ್ತಿಲ್ಲ. ಬಂಡಾಯ ಶಮನ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ಕ್ಷೇತ್ರದಲ್ಲಿ ಯಾರಿಂದ ಬಂಡಾಯ ಎದುರಾಗಿದೆ? ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವವರು ಯಾರೆಂಬ ವಿವರ ಇಲ್ಲಿದೆ.

ಉತ್ತರ ಕನ್ನಡದಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕೆ?

ಉತ್ತರ ಕನ್ನಡ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂಸದ ಅನಂತಕುಮಾರ್​ ಹೆಗಡೆಗೆ ಶಾಕ್​ ಎದುರಾಗಿದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸಲು ಉತ್ತರ ಕನ್ನಡ ಜಿಲ್ಲಾ ಬಿಜೆಪಿಯಲ್ಲೇ ತಂತ್ರಗಾರಿಕೆ ನಡೆದಿದೆ. ಕಾಗೇರಿ ವಿರುದ್ಧ ತೊಡೆ ತಟ್ಟಲು ಮತ್ತೊಂದು ಬಣ ಮುಂದಾಗಿದೆ. ಹಿಂದೂ ಪರ ವೋಟ್​ ಆಧರಿಸಿ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸೋಕೆ ಯೋಜನೆ ರೂಪಿಸಲಾಗುತ್ತಿದೆ.

ಚಿತ್ರದುರ್ಗದಲ್ಲಿ ರಘುಚಂದನ್​ ಪಕ್ಷೇತರ ಸ್ಪರ್ಧೆ ಸಾಧ್ಯತೆ

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳಗೆ ಟಿಕೆಟ್​ ಕೊಟ್ಟಿದ್ದಕ್ಕೆ ತೀವ್ರ ವಿರೋಧವ್ಯಕ್ತವಾಗಿದೆ. ಹಾಲಿ ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್​ಗೆ ಟಿಕೆಟ್​ ಕೈ ತಪ್ಪಿದ್ದಕ್ಕೆ ಪಕ್ಷೇತರವಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಏಪ್ರಿಲ್​ 2ರವರೆಗೂ ಶಾಸಕ ಚಂದ್ರಪ್ಪ ಕಾದುನೋಡಲಿದ್ದಾರಂತೆ. ರಘುಚಂದನ್​ ಬೆಂಬಲಿಗರು ‘ಗೋಬ್ಯಾಕ್​ ಕಾರಜೋಳ’ ಅಭಿಯಾನ ನಡೆಸುತ್ತಿದ್ದಾರೆ. ಇತ್ತ ಬಿಜೆಪಿ ನಾಯಕರು ಅಸಮಾಧಾನ ಶಮನಕ್ಕೆ ಪ್ರಯತ್ನಿಸುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಬಿಎಸ್​ ಯಡಿಯೂರಪ್ಪ ಅಥವಾ ವರಿಷ್ಠರು ಭೇಟಿ ಮಾಡಿ ಮನವೊಲಿಸವು ಸಾಧ್ಯತೆ ಇದೆ.

ಸ್ವಪಕ್ಷೀಯರ ಅಸಮಾಧಾನ ಮಧ್ಯೆಯೂ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಟೆಂಪಲ್​ ರನ್​ ನಡೆಸುತ್ತಿದ್ದಾರೆ. ಉಚ್ಚಂಗಿ ಯಲ್ಲಮ್ಮ ದೇಗುಲ, ಕಬೀರಾನಂದಾಶ್ರಮ, ನೀಲಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ರಾಯಚೂರಿನಲ್ಲಿ ಬಿವಿ ನಾಯಕ್​ ಬಂಡಾಯ: ವರಿಷ್ಠರಿಗೆ ಟೆನ್ಷನ್

ರಾಯಚೂರಿನಲ್ಲಿ ಬಿಜೆಪಿ ಬಂಡಾಯ ತಾರಕಕ್ಕೇರಿದೆ. ಟಿಕೆಟ್​ ನಿರೀಕ್ಷೆಯಲ್ಲಿದ್ದ ಬಿವಿ ನಾಯಕ್​ಗೆ ಶಾಕ್ ಎದುರಾಗಿದೆ. ಅಸಮಾಧಾನ ಶಮನಕ್ಕೆ ಬಂದ ವೀಕ್ಷಕರ ಎದುರೇ ಕಾರ್ಯುಕರ್ತರು ಕಿಡಿಕಾರಿದ್ದರು. ಟಿಕೆಟ್​ ಮರುಪರಿಶೀಲಿಸುವಂತೆ ಬಿವಿ ನಾಯಕ್ ಪಟ್ಟು ಹಿಡಿದಿದ್ದಾರೆ. ಕ್ಷೇತ್ರದಲ್ಲೇ ಬಹಿರಂಗ ಸಮಾವೇಶ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಬೆಂಬಲಿಗರು 4 ದಿನದ ಡೆಡ್​ಲೈನ್ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಂಡಾಯ ಸ್ಪರ್ಧೆಗೆ ಪ್ರಧಾನಿ ಮೋದಿ, ಅಮಿತ್ ಶಾ ಕಾರಣವೇ? ಈಶ್ವರಪ್ಪ ಸ್ಫೋಟಕ ಹೇಳಿಕೆ

ಬಂಡಾಯದ ಬಿಸಿ ಮಧ್ಯೆಯೇ ಬಳ್ಳಾರಿಯ ಕಣ ಜಿದ್ದಾಜಿದ್ದಿಗೆ ಕಾರಣವಾಗಿದೆ. ಬಳ್ಳಾರಿಯಲ್ಲಿ ಹಿಡಿತಕ್ಕಾಗಿ ಬಿಜೆಪಿ, ಕಾಂಗ್ರೆಸ್​ ಮಧ್ಯೆ ಫೈಟ್​ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ರಾಮುಲು ಪರ ಜನಾರ್ದನ ರೆಡ್ಡಿ ನಿಂತಿರೋದು ಬಲ ಬಂದಂತಾಗಿದೆ. ಜೊತೆಗೆ ರೆಡ್ಡಿಗೆ ಕಲ್ಯಾಣ ಕರ್ನಾಟಕ ಸೇರಿ 5 ಕ್ಷೇತ್ರ ಗೆಲ್ಲಿಸುವ ಟಾಸ್ಕ್ ನೀಡಲಾಗಿದೆ. ಮಿಂಚಿನ ಪ್ರಚಾರ, ತಂತ್ರಗಾರಿಕೆಯ ಮೂಲಕ ತಂತ್ರ ಹೆಣೆಯುವ ಅನಿವಾರ್ಯತೆಯೂ ಇದೆ.

‘ಪಂಚ’ ಸವಾಲು ಗೆದ್ರೆ ರೆಡ್ಡಿ ಗತವೈಭವ

ಜನಾರ್ದನ ರೆಡ್ಡಿಗೆ ಬಳ್ಳಾರಿಯಿಂದ ಶ್ರೀರಾಮುಲು ಗೆಲ್ಲಿಸೋ ಜವಾಬ್ದಾರಿ ಇದೆ. ರಾಯಚೂರಿನಿಂದ ರಾಜಾ ಅಮರೇಶ್ವರ್ ನಾಯಕ ಗೆಲ್ಲಿಸಿಕೊಂಡು ಬರಬೇಕು. ಕೊಪ್ಪಳದಿಂದ ಡಾ. ಬಸವರಾಜ್ ಕ್ಯಾವಟರ್​, ಚಿತ್ರದುರ್ಗದಿಂದ ಗೋವಿಂದ ಕಾರಜೋಳರನ್ನ ಗೆಲ್ಲಿಸಬೇಕು, ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣರನ್ನ ಗೆಲ್ಲಿಸೋ ಟಾಸ್ಕ್ ನೀಡಲಾಗಿದೆ.

ಒಟ್ಟಾರೆಯಾಗಿ 28 ಕ್ಷೇತ್ರಗಳಿಗೂ ಅಭ್ಯರ್ಥಿ ಫೈನಲ್​ ಆದರೂ ಬಂಡಾಯದ ಬೆಂಕಿ ಮಾತ್ರ ತಣ್ಣಗಾಗುತ್ತಿಲ್ಲ. ಅಸಮಾಧಾನ ಶಮನಕ್ಕೆ ಬಿಜೆಪಿ ನಾಯಕರು ಸರ್ಕಸ್​ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ