ಅತ್ತ ಗುರು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆ: ಇತ್ತ ಶಿಷ್ಯ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು!

ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​ ಸುದ್ದಿಗೋಷ್ಠಿ ಮಾಡಿದರು. ಮಲ್ಲಿಕಾರ್ಜುನ ಖರ್ಗೆಗೆ ಹಾಗೂ ಬೆಂಬಲಿಸಿದ ಎಲ್ಲಾ ನಾಯಕರಿಗೂ ಡಿ.ಕೆ.ಶಿವಕುಮಾರ್​ ಧನ್ಯವಾದ ಸಲ್ಲಿಸಿದರು.

ಅತ್ತ ಗುರು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆ: ಇತ್ತ ಶಿಷ್ಯ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು!
ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 19, 2022 | 4:20 PM

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್​ ಸಮಿತಿ (All India Congress Committee – AICC) ಅಧ್ಯಕ್ಷ ಸ್ಥಾನಕ್ಕೆ ಅ 17ರಂದು ಮತದಾನ ನಡೆದಿತ್ತು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarju Kharge) ಮತ್ತು ಶಶಿ ತರೂರ್ (Shashi Tharoor)​ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿದ್ದರು. ಸದ್ಯ ಎಐಸಿಸಿ ನೂತನ ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಪಟ್ಟಗಿಟ್ಟಿಸಿಕೊಂಡಿದ್ದಾರೆ. 7,897 ಮತಗಳನ್ನ ಮಲ್ಲಿಕಾರ್ಜುನ ಖರ್ಗೆ ಪಡೆದಿದ್ದು, 1,072 ಮತಗಳನ್ನ ಪಡೆದ ‘ಕೈ’ ನಾಯಕ ಶಶಿ ತರೂರ್ ಪಡೆದುಕೊಂಡಿದ್ದಾರೆ. 24 ವರ್ಷದ ಬಳಿಕ ಗಾಂಧಿಯೇತರ ನಾಯಕನಿಗೆ ಅಧ್ಯಕ್ಷ ಪಟ್ಟ ಒದಗಿದೆ. 9,385 ಮತಗಳು ಚಲಾವಣೆಯಾಗಿದ್ದು, 416 ಮತಗಳು ಅಮಾನ್ಯವಾಗಿವೆ. 1975ರಲ್ಲಿ ಎಸ್​.ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ದರು. ಬಳಿಕ ಖರ್ಗೆಗೆ​​ ಅಧ್ಯಕ್ಷ ಪಟ್ಟ ಒಲಿದಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ.

ಮಲ್ಲಿಕಾರ್ಜುನ ಖರ್ಗೆಗೆ ಧನ್ಯವಾದ ಸಲ್ಲಿಕೆ-ಡಿ.ಕೆ ಶಿವಕುಮಾರ

ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​ ಸುದ್ದಿಗೋಷ್ಠಿ ಮಾಡಿದರು. ಮಲ್ಲಿಕಾರ್ಜುನ ಖರ್ಗೆಗೆ ಹಾಗೂ ಖರ್ಗೆ ಬೆಂಬಲಿಸಿದ ಎಲ್ಲಾ ನಾಯಕರಿಗೂ ಡಿ.ಕೆ.ಶಿವಕುಮಾರ್​ ಧನ್ಯವಾದ ಸಲ್ಲಿಸಿದ್ದು, ಜೊತೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿದರು. ಖರ್ಗೆ ಆಯ್ಕೆಯಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್​ಗೆ ಮತ್ತಷ್ಟು ಬಲ ಬಂದಿದೆ. ನಿಜಲಿಂಗಪ್ಪ ಬಳಿಕ ಕನ್ನಡಿಗ ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ ಒದಗಿದೆ. ಮಲ್ಲಿಕಾರ್ಜುನ ಖರ್ಗೆ ಪಕ್ಷಕ್ಕಾಗಿ 50 ವರ್ಷ ಸೇವೆ ಸಲ್ಲಿಸಿದ್ದಾರೆ. ಪಕ್ಷ ವಹಿಸಿದ ಎಲ್ಲಾ ಹುದ್ದೆಗಳನ್ನು ಜವಾಬ್ದಾರಿಯಾಗಿ ನಿಭಾಯಿಸಿದ್ದಾರೆ. ಪಕ್ಷನಿಷ್ಠೆ, ತ್ಯಾಗ, ಹೋರಾಟದ ಛಲ ಇದ್ದರೆ ಒಳ್ಳೆ ಅವಕಾಶ ಸಿಗುತ್ತೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೇ ಸಾಕ್ಷಿ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟು ಪ್ರಜಾಪ್ರಭುತ್ವ ಉಳಿಯಿತು:

ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟು ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆ ಸಾಕ್ಷಿಯಾಗಿದೆ. ದೇಶಕ್ಕೂ ಪ್ರಜಾಪ್ರಭುತ್ವ ಕೊಟ್ಟಿದ್ದೇವೆ, ನಮ್ಮಲ್ಲೂ ಪ್ರಜಾಪ್ರಭುತ್ವ ಉಳಿಸಿದ್ದೇವೆ. 24 ವರ್ಷಗಳ ನಂತರ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾತನಾಡುವ ಮೊದಲು ಸೋನಿಯಾ ಗಾಂಧಿಯವರಿಗೆ ಎಲ್ಲ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಕೇಸರಿ ಕಾಲವಾದ ಬಳಿಕ ಕಾಂಗ್ರೆಸ್ ಪಕ್ಷದ ಕೈ ಹಿಡಿದು ಕಷ್ಟದ ಸಂದರ್ಭದಲ್ಲಿ ಸೋನಿಯಾ ದೇಶಕ್ಕೆ ಶಕ್ತಿ ನೀಡಿದರು ಎಂದು ಹೇಳಿದರು.

ಯಾವ ಪಾರ್ಟಿಯಲ್ಲೂ ಇಂಥ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ

ರಾಹುಲ್ ಗಾಂಧಿ ನೈತಿಕತೆ ಹೊಣೆ ಹೊತ್ತು ರಾಜಿನಾಮೆ ನೀಡಿದರು. ಎಷ್ಟೇ ಸಮಸ್ಯೆ ಇದ್ದರೂ ಹಿಂಜರಿಯದೇ ನಮ್ಮ ಮನವಿಗೆ ಒಪ್ಪಿ ಸೋನಿಯಾ ಜವಾಬ್ದಾರಿ ನಿಭಾಯಿಸಿದ್ದಾರೆ. ಗಾಂಧಿ ಕುಟುಂಬ ಹೊರತಾಗಿ ಜವಾಬ್ದಾರಿ ವಹಿಸಿಕೊಳ್ಳಲಿ ಅಂತ ಚುನಾವಣೆ ಮಾಡಿದ್ದಾರೆ. 78 ಲಕ್ಷ ಸದಸ್ಯರು ನೋಂದಾಯಿಸಿಕೊಂಡು ದಾಖಲೆ ಬರೆದಿದೆ ನಮ್ಮ ಕಾಂಗ್ರೆಸ್. 503 ಮಂದಿ ಮತದಾನದ ಹಕ್ಕು ಪಡೆದುಕೊಂಡಿದ್ದರು. ಬಹಳ ಜನ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದರು. ಕರ್ನಾಟಕಕ್ಕೆ ಶಕ್ತಿ ಬಂದೇ ಬರುತ್ತದೆ. ಇಡೀ ರಾಷ್ಟ್ರಕ್ಕೆ ಒಂದು ಸಂದೇಶ ರವಾನೆಯಾಗಿದೆ. ಯಾವ ಪಾರ್ಟಿಯಲ್ಲೂ ಇಂಥ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಬಿಜೆಪಿಯವರು ಸಾವಿರ ಮಾತಾಡುತ್ತಿರಬಹುದು. ನಮ್ಮ ಟೀಕೆ ಮಾಡುವುದನ್ನು ಆರೋಗ್ಯಕರವಾಗಿ ಮಾಡುವುದನ್ನು ಬಿಟ್ಟು ಬಿಜೆಪಿ ನಮ್ಮನ್ನು ಬರೀ ಹಳದಿ ಕಣ್ಣಿನಿಂದ ನೋಡುತ್ತಿದ್ದಾರೆ. ನಡ್ಡಾರವರನ್ನು ಯಾರ ರಿಮೋಟ್ ಕಂಟ್ರೋಲ್ ಅಂತ ಕರೆಯೋಣ? ನಡ್ಡಾ ಅಮಿತ್ ಶಾ ಯಾವ ರಾಜ್ಯದವರು ಎಂದು ಪ್ರಶ್ನಿಸಿದರು.

ಖರ್ಗೆಗೆ ಗಣ್ಯರಿಂದ ಶುಭಾಶಯ

ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಹಿನ್ನೆಲೆ ಖರ್ಗೆಗೆ ಗಣ್ಯರಿಂದ ಶುಭಾಶಯ ಹರಿದು ಬರುತ್ತಿದೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, ಸಿಎಲ್​​ಪಿ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸೇರಿದಂತೆ ಹಲವರಿಂದ ಶುಭ ಕೋರಲಾಗಿದೆ. ಇನ್ನು ಕೆಪಿಸಿಸಿ ಕಚೇರಿ ಮುಂದೆ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಅನೇಕರು ಭಾಗಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:15 pm, Wed, 19 October 22