ಪ್ರಾಸಿಕ್ಯೂಷನ್ ಕಿಚ್ಚು: ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ವಾಗ್ದಾಳಿ, ಬೆಂಕಿ ಅನಾಹುತ
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ಮಾಡಿದರು. ಪ್ರತಿಭಟನೆ ವೇಳೆ ವಾಗ್ದಾಳಿ, ಅಲ್ಲಲ್ಲಿ ಅನಾಹುತ ಸಂಭವಿಸಿದವು.
ಬೆಂಗಳೂರು, ಆಗಸ್ಟ್ 19: ಮೈಸೂರು ಅಭಿವೃದ್ಧಿ ಪ್ರಾಧಿಕಾರ (Muda) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕೇಳಿ ಬಂದಿರುವ ಆರೋಪದ ತನಿಖೆಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅನುಮತಿ ನೀಡಿದ್ದಾರೆ. ಇದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ (Karnataka Congress) ನಾಯಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದರು. ರಾಜ್ಯ ಕಾಂಗ್ರೆಸ್ನ ಶಾಸಕರು, ಸಚಿವರು, ಮಾಜಿ ಸಚಿವರು, ಶಾಸಕರು ಮತ್ತು ಸ್ಥಳೀಯ ಮುಖಂಡರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿರುವ ಪಕ್ಷ ಷಡ್ಯಂತ್ರಕ್ಕೆ ಸವಾಲು ಎಂದು ಬೀದಿಗಿಳಿದು ತೊಡೆತಟ್ಟಿದೆ. ಬೆಂಕಿ ಹಚ್ಚಿ, ಧಿಕ್ಕಾರ ಕೂಗಿ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದರು. ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ ಹಾಗೂ ಶಾಸಕರು ಸೇರಿದಂತೆ ಅನೇಕ ನಾಯಕರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.
ಪ್ರತಿಭಟನೆ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು. ಪ್ರತಿಭಟನೆಯಲ್ಲಿ ಮಾತನಾಡಿದ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಮತ್ತು ಕೃಷ್ಣಭೈರೇಗೌಡ ರಾಜ್ಯಪಾಲರು ಮತ್ತು ಬಿಜೆಪಿ-ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಜಯನಗರದ 4ನೇ ಬ್ಲಾಕ್ನಲ್ಲಿ ಸಿಎಂ ಸಿದ್ದರಾಮಯ್ಯ ಪರ ಮಾಜಿ ಎಂಎಲ್ಸಿ ಎಂ.ಸಿ ವೇಣುಗೋಪಾಲ್ ವಿಶೇಷ ಪೂಜೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯಗೆ ಜಯವಾಗಲಿ, ಕಾನೂನು ಹೋರಾಟದಲ್ಲಿ ಜಯ ಸಿಗಲಿ ಅಂತ ಈಡುಗಾಯಿ ಒಡೆದರು.
ರಾಜ್ಯಪಾಲರ ಅಣಕು ಶವಯಾತ್ರೆ, ಚಪ್ಪಲಿ ಏಟು
ದಾವಣಗೆರೆಯ ಅಂಬೇಡ್ಕರ್ ಸರ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಜೋರಾಗಿ ನಡೆಯಿತು. ಅಂಬೇಡ್ಕರ್ ಪ್ರತಿಮೆ ಮುಂಭಾಗ ರಾಜ್ಯಪಾಲರ ಅಣಕು ಶವಯಾತ್ರೆ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳದ ಅಶೋಕ್ ಸರ್ಕಲ್‌ನಲ್ಲಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಹೋರಾಟ ನಡೆಯಿತು. ರೊಚ್ಚಿಗೆದ್ದ ಕಾರ್ಯಕರ್ತರು ಪ್ರಧಾನಿ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರು.
ಚಾಮುಂಡಿಬೆಟ್ಟದಲ್ಲಿ ಅಂಗಡಿಗಳು ಬಂದ್
ಸಿಎಂ ತವರು ಜಿಲ್ಲೆ ಮೈಸೂರಿಲ್ಲಿ ಆಕ್ರೋಶ ಭುಗಿಲೆದ್ದಿದೆ. ಚಾಮುಂಡಿಬೆಟ್ಟದಲ್ಲಿ ಅಂಗಡಿ ಮುಂಗಟ್ಟುಗಳನ್ನು ಕಂಪ್ಲೀಟ್ ಆಗಿ ಬಂದ್ ಮಾಡಿದ ವ್ಯಾಪಾರಿಗಳು ರಾಜ್ಯಪಾಲರ ವಿರುದ್ಧ ಪ್ರತಿಭಟನೆಯಲ್ಲಿ ನಡೆಸಿದರು. ಇದರಿಂದ ಬೆಟ್ಟಕ್ಕೆ ಬಂದಿದ್ದ ಭಕ್ತರು ಪರದಾಡುವಂತಾಯ್ತು.
ಪ್ರತಿಭಟನೆ ವೇಳೆ ಅನಾಹುತಗಳು
ಮಂಗಳೂರಿನಲ್ಲಿ ಖಾಸಗಿ ಬಸ್ಗೆ ಕಲ್ಲು ತೂರಾಟ
ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆ ಟೈರ್ ಸುಟ್ಟು ಆಕ್ರೋಶ ಹೊರಹಾಕಿದರು. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಗೆ ಕಲ್ಲು ತೂರಿದರು. ಕಲ್ಲು ತೂರಿದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ: ರಾಜ್ಯದಲ್ಲಿ ಗದ್ದಲ, ದಾಂಧಲೆ, ಹಲ್ಲೆಗಳಾದರೆ ರಾಜ್ಯಪಾಲರೇ ಹೊಣೆ; ಜಮೀರ್
ಪ್ರತಿಭಟನೆ ವೇಳೆ ಕುಸಿದು ಬಿದ್ದ ಮಹಿಳೆ
ಮಂಡ್ಯ ಜಿಲ್ಲೆಯಲ್ಲಿ ಕೂಡ ಪ್ರತಿಭಟನೆ ಕಿಚ್ಚು ಜೋರಾಗಿತ್ತು. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹೋರಾಟ ನಡೀತಿದ್ದಾಗ, ಮಹಿಳೆಯೊಬ್ಬರು ಕುಸಿದುಬಿದ್ದರು. ತಕ್ಷಣವೇ ಕಾರ್ಯಕರ್ತರು ಮಹಿಳೆಗೆ ನೀರು ಕುಡಿಸಿದರು. ಮಹಿಳೆ ಚೇತರಿಸಿಕೊಂಡರು.
ಕೈ ಕಾರ್ಯಕರ್ತರಿಗೆ ತಗುಲಿದ ಬೆಂಕಿ
ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ವೇಳೆ ಇಬ್ಬರು ಕಾರ್ಯಕರ್ತರಿಗೆ ಬೆಂಕಿ ತಗುಲಿತು. ಜಿಲ್ಲಾಧಿಕಾರಿ ಸರ್ಕಲ್‌ನಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸಲಾಯಿತು. ಈ ವೇಳೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಹನಮಂತ ಮತ್ತು ದ್ಯಾಮಪ್ಪ ಎಂಬ ಕಾರ್ಯಕರ್ತರ ಮುಖ, ಎದೆ, ಭುಜಕ್ಕೆ ಬೆಂಕಿ ತಗುಲಿದೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸುಟ್ಟ ಪೊಲೀಸ್ ಪೇದೆ ತಲೆಗೂದಲು
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರಿನ ಬಿ.ಎಂ.ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿದರು. ಬೆಂಕಿ ನಂದಿಸಲು ಬಂದ ಮಹಿಳಾ ಪೊಲೀಸ್ ಠಾಣೆ ಪೇದೆ ಸಂಜು ಬಂದಿದ್ದರು. ಈ ವೇಳೆ ಬೆಂಕಿ ದಿಢೀರ್ನೆ ಜೋರಾಗಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳುವೆ ವೇಳೆ ಪೇದೆ ಸಂಜು ಕೆಳೆಗೆ ಬಿದ್ದಿದ್ದಾರೆ. ಆಗ ಬೆಂಕಿ ಜಳಕ್ಕೆ ಪೊಲೀಸ್ ಪೇದೆ ಸಂಜು ಅವರ ತಲೆಯ ಕೂದಲು ಸುಟ್ಟು ಹೋಗಿವೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಕುರ್ಚಿ ವಿಚಾರಕ್ಕೆ ಗಲಾಟೆ
ಕುರ್ಚಿ ವಿಚಾರಕ್ಕೆ ರಾಯಚೂರಿನಲ್ಲಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡರು. ಸಚಿವ ಬೋಸರಾಜ್ ಸಮ್ಮುಖದಲ್ಲೇ ಗೊಂದಲದ ವಾತಾವಾರಣ ಸೃಷ್ಟಿಯಾಯಿತು. ಗಲಾಟೆ ಮಾಡುತ್ತಿದ್ದವರನ್ನು ಪೊಲೀಸರು ಸಮಾಧಾನಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Mon, 19 August 24