Karnataka BJP Crisis: ಅರವಿಂದ ಬೆಲ್ಲದ್​ ಅವರ ರಾಜಕೀಯ ಚದುರಂಗದಾಟ ಅವರಿಗೇ ಮುಳುವಾಗಬಲ್ಲುದೇ?

Karnataka BJP Crisis: ಅರವಿಂದ ಬೆಲ್ಲದ್​ ಅವರ ರಾಜಕೀಯ ಚದುರಂಗದಾಟ ಅವರಿಗೇ ಮುಳುವಾಗಬಲ್ಲುದೇ?
Aravind Bellad - BJP

Aravind Bellad: ದಿವಂಗತ, ಕೆ.ಎಚ್​. ಪಾಟೀಲ್​ ಅವರನ್ನು ಬಿಟ್ಟರೆ, ಪ್ರಾಯಶಃ ಅರವಿಂದ ಬೆಲ್ಲದ್ ಇರಬಹುದು, ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮುಖ್ಯಮಂತ್ರಿಯೊಬ್ಬರನ್ನು ಇಳಿಸಲು ಮುಂದಾಗಿರುವ ಮತ್ತೊಬ್ಬ ನಾಯಕ. ಕರ್ನಾಟಕದ ರಾಜಕೀಯದ ಇತಿಹಾಸ ನೋಡಿದರೆ, ಬೆಲ್ಲದ್​ ಅವರಿಗೆ ಯಶಸ್ಸು ಸಿಗುವುದು ಕಷ್ಟ ಎನಿಸುತ್ತಿದೆ.

bhaskar hegde

|

Jun 16, 2021 | 4:39 PM

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್​ ಸಿಂಗ್​ ಇಂದು ಬೆಂಗಳೂರು ತಲುಪಿದ್ದಾರೆ. ತಮ್ಮ ಎರಡು ದಿನದ ಭೇಟಿಯಲ್ಲಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಜೊತೆ ಮಾತಾಡುವ ಕಾರ್ಯಕ್ರಮ ಇದೆ. ಕೊನೆಗೆ ಆರ್​ಎಸ್​ಎಸ್​ ನಾಯಕರನ್ನು ಭೇಟಿ ಮಾಡಿ ದೆಹಲಿಗೆ ತೆರಳಿ ತಮ್ಮ ವರದಿ ಸಲ್ಲಿಸುತ್ತಾರೆ. ಅರುಣ್​ ಸಿಂಗ್​ ಕೊಡುವ ವರದಿಯೇ ಅಂತಿಮವಾಗಿರುವುದಿಲ್ಲ. ಪ್ರಾಯಶಃ ಇನ್ನೋರ್ವ ನಾಯಕ, ಭೂಪೇಂದ್ರ ಯಾದವ್​ ಅವರ ಭೇಟಿ, ಅವರು ನೀಡುವ ವರದಿ ಆಧರಿಸಿ ಬಿಜೆಪಿ ಕೇಂದ್ರ ನಾಯಕರು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ಶಾಸಕರು ಮಂತ್ರಿಗಳು ಯಾವ ಅಭಿಪ್ರಾಯ ಕೊಟ್ಟರೂ, ಇದು ಈ ಹಂತದಲ್ಲಿಯೇ ಇತ್ಯರ್ಥವಾಗುವುದಿಲ್ಲ ಎಂಬುದು ಖಂಡಿತ.

ಅರವಿಂದ್​ ಬೆಲ್ಲದ್​ ತೊಡೆತಟ್ಟಿದ್ದು ಯಾಕೆ?

ಪ್ರವಾಸೋದ್ಯಮ ಮಂತ್ರಿ ಸಿ.ಪಿ. ಯೋಗಿಶ್ವರ್​ ಅವರು ಸರಕಾರವನ್ನು ತೆಗೆದು ಹಾಕುತ್ತಾರೆ ಎಂಬ ನಿರೀಕ್ಷೆ ಕೆಲವು ನಾಯಕರುಗಳಲ್ಲಿ ಇತ್ತು. ಅದು ಆಗಲಿಲ್ಲ. ಪಕ್ಷದ ಕೇಂದ್ರ ನಾಯಕರು ಯಾವಾಗ ಅತ್ಯಂತ ಕಠಿಣ ಸಂದೇಶ ನೀಡಿದರೋ, ಆ ದಿನವೇ ಯೋಗಿಶ್ವರ್ ಅವರು ಶಸ್ತ್ರ ಕೆಳಗಿಟ್ಟರು. ಒಂದು ತಿಂಗಳೊಳಗಾಗಿ ಆ ಟಾಸ್ಕಿಗೆ ಅರವಿಂದ​ ಬೆಲ್ಲದ್​ ಬಂದಿದ್ದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ಫ್ರಾನ್ಸ್​ನ ಅತ್ಯುತ್ತಮ ವ್ಯವಹಾರ ನಿರ್ವಹಣಾ ವಿಶ್ವವಿದ್ಯಾಲಯದಲ್ಲಿ (Management Institute) ಸ್ನಾತಕೋತ್ತರ ಪದವಿ ಪಡೆದ ಅರವಿಂದ​ ಬೆಲ್ಲದ್​ ಮೃದು ಮಾತಿನ ಯುವ ನೇತಾರ. ಬೇರೆಯವರ ತರಹ, ತಮ್ಮ ಲಿಂಗಾಯತ ಗುರುತನ್ನು ತಮ್ಮ ತೋಳಿಗೆ ಹಚ್ಚಿಕೊಂಡು ಓಡಾಡುವ ರಾಜಕಾರಿಣಿ ಅಲ್ಲ. ದೇಶಗಳನ್ನು ಓಡಾಡಿದವರು, ಓದಿಕೊಂಡವರು. ಅಚ್ಚರಿ ಹುಟ್ಟಿಸುವಷ್ಟರ ಮಟ್ಟಿಗಿನ ಅವರ ಮೃದುತ್ವ ಇರುವ ಧಾರವಾಡದ ಇವರು ಎರಡನೇ ತಲೆಮಾರಿನ ರಾಜಕಾರಿಣಿ. ತಂದೆ ಚಂದ್ರಕಾಂತ್​ ಬೆಲ್ಲದ್​ ಮೊದಲು ಜನತಾ ಪರಿವಾರದಲ್ಲಿದ್ದವರು. ಆಮೇಲೆ ಬಿಜೆಪಿಗೆ ಬಂದರು. ಅವರ ಕ್ಷೇತ್ರವನ್ನು ಮಗ ಅರವಿಂದ ಈಗ​ ಪ್ರತಿನಿಧಿಸುತ್ತಿದ್ದಾರೆ.

ಯಾವಾಗ ಯೋಗಿಶ್ವರ್​ ಅವರು ಮುಖ್ಯಮಂತ್ರಿಯನ್ನು ಇಳಿಸುವಲ್ಲಿ ವಿಫಲರಾದರೋ, ಅರವಿಂದ್​ ಅವರು ಅಖಾಡಕ್ಕಿಳಿದರು. ಇನ್ನು ಈ ರೀತಿಯ ರಾಜಕೀಯ ಚಾಣಾಕ್ಷ ನೀತಿಗೆ ಹೊಸಬರಾಗಿರುವ ಅರವಿಂದ​ ಅವರನ್ನು ಅಖಾಡಾಕ್ಕೆ ಇಳಿಸಿದವರ ಲೆಕ್ಕಾಚಾರ ಬೇರೆ ಇದೆ. ನಂಬಿಕೆ ಕೊರತೆಯಿಂದಾಗಿ (trust deficit) ಯೋಗಿಶ್ವರ್​ ಅವರ ಕೂಟ ನೀತಿ ವಿಫಲವಾಯ್ತು. ಆದ್ದರಿಂದ, ಓರ್ವ ಲಿಂಗಾಯತ​ ಮುಖ್ಯಮಂತ್ರಿ ಇಳಿಸಲು ಮತ್ತೋರ್ವ ಲಿಂಗಾಯತ ನಾಯಕನನ್ನೆ ಅಖಾಡಾಕ್ಕೆ ಇಳಿಸಬೇಕು ಎಂದು, ಅರವಿಂದ​ ಅವರನ್ನು ಇಳಿಸಲಾಗಿದೆ. ಅಂದರೆ, ಇವರ ಹಿಂದೆ ಯಾರೋ ದೊಡ್ಡ ಬಿಜೆಪಿ ಕುಳ ಇರುವುದು ನಿಜ.

ಅರವಿಂದ್​ ಬೆಲ್ಲದ್​ ಯಶಸ್ಸು ಗಳಿಸುವರೇ?

ಕರ್ನಾಟಕದ ರಾಜಕೀಯದಲ್ಲಿ ಅತ್ಯಂತ ಪ್ರಬಲ ಮತ್ತು ಯಶಸ್ವೀಯಾಗಿರುವ ಪ್ರಸ್ತುತ ನಾಯಕರುಗಳಲ್ಲಿ, ಬಿ.ಎಸ್​. ಯಡಿಯೂರಪ್ಪ ಕೂಡ ಒಬ್ಬರು. ಅವರನ್ನು ತೆಗೆಯಬೇಕೆಂದು ಬಿಜೆಪಿ ಕೇಂದ್ರ ನಾಯಕರೇ ನಿರ್ಧರಿಸಿದರೂ ಅಷ್ಟೇ ಪ್ರಭಾವಿ ಮತ್ತೋರ್ವ ಬಿಜೆಪಿ ನಾಯಕರನ್ನು ಹುಡುಕುವುದು ಕಷ್ಟವಾಗಿದೆ. ಹಾಗಾಗಿ ಈ ವಿಚಾರ ತಲೆನೋವಾಗಿರುವುದು ನಿಜ. ಹಾಗಾಗಿ ಅರವಿಂದ​ ಬೆಲ್ಲದ್ ಅವರು ಲಿಂಗಾಯತ ಎಂಬ ಗುರುತಿನ ಚೀಟಿಯೊಂದಿಗೆ ನಾಯಕತ್ವ ಬದಲಾವಣೆ ಮಾಡುವ ತಂತ್ರಗಾರಿಕೆಗೆ ಇಳಿದರೆ ಅವರಿಗೆ ಗೆಲುವು ಸಿಗಬಹುದು ಎಂಬ ವಿಚಾರಕ್ಕೆ ಯಾವ ತಾರ್ಕಿಕ ಬೆಂಬಲವೂ ಸಿಗುತ್ತಿಲ್ಲ. ದೆಹಲಿಯಲ್ಲಿ ಒಂದು ಚಳುವಳಿ ಮೂಲಕ ಹೇಗೆ ಅರವಿಂದ್​ ಕೇಜ್ರೀವಾಲ್​ ಅಧಿಕಾರಕ್ಕೆ ಬಂದರೋ, ಅದೇ ರೀತಿ ಚಳುವಳಿ ನಡೆಸಿ, ಹೋರಾಟ ಮಾಡಿ ಮುನ್ನೆಲೆಗೆ ಬಂದರೆ ಜನ ಪ್ರೀತಿಸುವುದು ನಿಜ. ಅರವಿಂದ ಅವರಿಗೆ ಇಂತಹ ಅವಕಾಶ ಸಿಕ್ಕಿಲ್ಲದ ಕಾರಣ ಅವರಿನ್ನೂ ಇಡೀ ರಾಜ್ಯವೇ ಪ್ರೀತಿಸುವ ನಾಯಕರಾಗಿ ಬೆಳೆದಿಲ್ಲ. ಇದು ಸತ್ಯ.

​ಇನ್ನು ಕರ್ನಾಟಕದ ಇತಿಹಾಸ ತೆಗೆದುಕೊಂಡರೆ, ಇಲ್ಲೀವರೆಗೆ ಯಾವ ರೆಬೆಲ್​ ನಾಯಕರು ತಮ್ಮ ತಂತ್ರಗಾರಿಕೆಯಲ್ಲಿ ಯಶಸ್ಸು ಕಂಡಿಲ್ಲ. ಅವಿಭಾಜಿತ ಧಾರವಾಡ ಜಿಲ್ಲೆಯಿಂದ ಬಂದಿದ್ದ ಈಗಿನ ಎಚ್​.ಕೆ. ಪಾಟೀಲರ ಅಪ್ಪ ಕೆ.ಎಚ್​. ಪಾಟೀಲರು ಮುಖ್ಯಮಂತ್ರಿ ಆಗಲೇಬೇಕೆಂದು ಏನೆಲ್ಲ ಮಾಡಿದರು. ಅವರನ್ನು ಹುಲಕೋಟಿಯ ಹುಲಿ ಎಂದು ಕರೆಯುತ್ತಿದ್ದರು. ಆದರೆ, ಅವರು ಕೊನೆಗೂ ಮುಖ್ಯಮಂತ್ರಿ ಆಗಲೇ ಇಲ್ಲ. ಅದೇ ಹಾಸನ ಮೂಲದ ಎಚ್​.ಸಿ. ಶ್ರೀಕಂಠಯ್ಯ ಅವರು ಸಹ ಇದೇ ರೀತಿ ಮಾಡಿ ನೇಪಥ್ಯಕ್ಕೆ ಸರಿದರು. ತೊಂಬತ್ತರ ದಶಕದಲ್ಲಿ ಎಸ್​.ಬಂಗಾರಪ್ಪ ಅವರನ್ನು ಇಳಿಸಲು ಎಸ್​.ಎಮ್​. ಕೃಷ್ಟ ಏನೆಲ್ಲ ಮಾಡಿದರೂ ಅವರು ಆಗ ಮುಖ್ಯಮಂತ್ರಿ ಆಗಲಿಲ್ಲ. ಆಗ ಆಗಿದ್ದು ಎಮ್​.ವೀರಪ್ಪ ಮೊಯ್ಲಿ. ಮುಂದೆ ಐದು ವರ್ಷ ಬಿಟ್ಟು, ಕೃಷ್ಣ ಮುಖ್ಯಮಂತ್ರಿ ಆದರು. ಆಗ ಪರಿಸ್ಥಿತಿ ಬೇರೆಯೇ ಆಗಿತ್ತು. ಇವೆಲ್ಲ ಹಿಂದಿನ ಕಥೆ ಎಂದುಕೊಂಡಿರಾ? 2010 ರಲ್ಲಿ ಲೋಕಾಯುಕ್ತ ವರದಿ ಆಧಾರದ ಮೇಲೆ ಹೈ ಕಮಾಂಡ್​ ಹೇಳಿದ್ದಕ್ಕೆ ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪ ಇಳಿದರೂ ಕೂಡ, ತಮ್ಮ ಮಾತು ನಡೆಯಬಹುದಾದ ಡಿ.ವಿ. ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದರು.

ಈ ಐತಿಹಾಸಿಕ ಮಾಹಿತಿಯನ್ನು ಸರಿಯಾಗಿ ಅವಲೋಕಿಸಿದರೆ, ಒಂದು ಅರ್ಥವಾಗುವುದು ಸ್ವಷ್ಟ: ಹೈಕಮಾಂಡ್​ ಬೆಂಬಲ ಇಲ್ಲದೇ ರೆಬೆಲ್​ ಆದರೆ, ಯಾ ನಾಯಕ ಈ ರೀತಿಯ ಕಿತಾಪತಿ ಮಾಡುತ್ತಾನೋ ಆ ನಾಯಕ ನೇಪಥ್ಯಕ್ಕೆ ಸೇರೋದು ಗ್ಯಾರೆಂಟಿ. ಈ ಬಾರಿ ಯಡಿಯೂರಪ್ಪ ಇರುತ್ತಾರೋ, ಇಲ್ಲವೋ ಇದನ್ನು ಈಗ ಹೇಳಲು ಸಾಧ್ಯವಿಲ್ಲ. ಆದರೆ, ಅರವಿಂದ್​ ಬೆಲ್ಲದ್​ ಮಾತ್ರ ಮುಂದೆ ಪಕ್ಷದಲ್ಲಿ ಬೆಳೆಯುವುದು ಕಷ್ಟವಾಗಬಹುದು. ಈ ರೀತಿಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಇನ್ನೊಂದು ಕೆಲಸ ಮಾಡುತ್ತವೆ. ರೆಬೆಲ್​ ಆಗಲು ಇಚ್ಛಿಸುವ ಬೇರೆ ನಾಯಕರಿಗೆ ಕೂಡ ಸಂದೇಶ ಕಳಿಸುತ್ತಾರೆ. ಅದೇ ರೀತಿ ಆದರೆ ಬೆಲ್ಲದ್​ ಅವರಿಗೆ, ಬಿಜೆಪಿ ಕಹಿ ತಿನ್ನಿಸಿದರೆ ಆಶ್ಚರ್ಯವಿಲ್ಲ. ಒಂದೊಮ್ಮೆ ನಾಯಕತ್ವ ಬದಲಾದರೂ, ಅರವಿಂದ ಬೆಲ್ಲದ್​ ಅವರ ಈ ರೆಬೆಲ್​ ಗುಣವನ್ನು ಗಮನಿಸಿದ ಪಕ್ಷ ತನ್ನ ಆಟವನ್ನು ಆಡದೇ ಬಿಡುವುದಿಲ್ಲ ಎಂಬುದು ನಿಜ.

ಇದನ್ನೂ ಓದಿ:

ಕೆಲವೇ ಕ್ಷಣಗಳಲ್ಲಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ, ಬಿರುಸುಗೊಂಡ ಶಾಸಕ ಅರವಿಂದ ಬೆಲ್ಲದ್​ ಚಟುವಟಿಕೆ

(Opinion on BJP MLA Aravind Bellad’s rebellism may not pay dividends considering the Karnataka political history)

Follow us on

Related Stories

Most Read Stories

Click on your DTH Provider to Add TV9 Kannada