KMDC ಸಾಲಕ್ಕೆ ಬಡ್ಡಿ ಮನ್ನಾ, ಒನ್ ಟೈಮ್ ಸೆಟ್ಲ್‌ಮೆಂಟ್: ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳ ಕಿಡಿ
ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (KMDC) ಸಾಲಗಳ ಮೇಲಿನ ಬಡ್ಡಿ ಮನ್ನಾಗೆ 'ಒನ್ ಟೈಮ್ ಸೆಟ್ಲ್‌ಮೆಂಟ್' (OTS) ಯೋಜನೆ ಅನುಮೋದಿಸಿದೆ. ಇದು ರಾಜಕೀಯ ವಿವಾದ ಸೃಷ್ಟಿಸಿದ್ದು, ವಿಪಕ್ಷಗಳು ತುಷ್ಟೀಕರಣ ರಾಜಕಾರಣವೆಂದು ಆರೋಪಿಸಿವೆ. 714.13 ಕೋಟಿ ರೂ. ಬಾಕಿ ಇರುವಾಗ, ಈ ಯೋಜನೆ ಜಾರಿಯಿಂದ ಕನಿಷ್ಠ 150 ಕೋಟಿ ರೂ. ಮರುಪಾವತಿ ನಿರೀಕ್ಷಿಸಲಾಗಿದೆ. ಹಣಕಾಸು ಇಲಾಖೆಯ ವಿರೋಧದ ನಡುವೆಯೂ, KMDC ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಬೆಂಗಳೂರು, ಫೆಬ್ರವರಿ 09: 2013–14 ರಿಂದ 2018–19ರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾದ ಸಾಲಗಳ ಮೇಲಿನ ಬಡ್ಡಿ ಮನ್ನಾಗೆ ಒನ್‌ಟೈಮ್ ಸೆಟ್ಲ್‌ಮೆಂಟ್ (OTS) ಯೋಜನೆಗೆ ಇತ್ತೀಚೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ವಿಚಾರವೀಗ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ವಿಪಕ್ಷಗಳು ಕಿಡಿ ಕಾರಿದ್ದು, ಅಲ್ಪಸಂಖ್ಯಾತರಿಗೆ ಮಾತ್ರ ಸಾಲದ ಬಡ್ಡಿ ಮನ್ನಾ ಮಾಡಿ ರೈತರು ಮತ್ತು ಹಿಂದುಳಿದ ವರ್ಗಗಳು ಸೇರಿ ಇತರ ಸಮುದಾಯಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿವೆ. ಸರ್ಕಾರ ತುಷ್ಠೀಕರಣ ರಾಜಕಾರಣ ನಡೆಸುತ್ತಿದೆ ಎಂದೂ ಕಿಡಿ ಕಾರಿವೆ.
714.13 ಕೋಟಿ ಹಣ ಇನ್ನೂ ಬಾಕಿ
ಈ ಅವಧಿಯಲ್ಲಿನ ಮೂಲ ಸಾಲ ಮೊತ್ತ 981 ಕೋಟಿಯಾಗಿದ್ದು, ಇದರಲ್ಲಿ ಇದುವರೆಗೆ ಕೇವಲ 98.18 ಕೋಟಿ ಮಾತ್ರ ವಸೂಲಾಗಿದೆ. ಉಳಿದ 714.13 ಕೋಟಿ ಹಣ ಇನ್ನೂ ಬಾಕಿಯಾಗಿದೆ. ಹೀಗಾಗಿ ಪ್ರಸ್ತಾವಿತ ಯೋಜನೆಯಡಿ KMDCಯಿಂದ ಸಾಲ ಪಡೆದ 1.94 ಲಕ್ಷ ಫಲಾನುಭವಿಗಳು ಬಡ್ಡಿ ಸಂಪೂರ್ಣ ಮನ್ನಾದೊಂದಿಗೆ ಕೇವಲ ಮೂಲಧನವನ್ನು ಮಾತ್ರ ಮರುಪಾವತಿಸಬಹುದು ಎಂದು ಹೇಳಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ ಲಭ್ಯ ಮಾಹಿತಿಯ ಪ್ರಕಾರ ಹಣಕಾಸು ಇಲಾಖೆ ಈ ಒಟಿಎಸ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಒಂದು ನಿಗಮದಲ್ಲಿ ಈ ರೀತಿ ಬಡ್ಡಿ ಮನ್ನಾ ಮಾಡಿದರೆ, ಉಳಿದ ನಿಗಮಗಳಿಂದಲೂ ಇಂತಹ ಬೇಡಿಕೆ ವ್ಯಕ್ತವಾಗಬಹುದು. ಇದು ಸರ್ಕಾರದ ಆದಾಯದ ಮೇಲೆ ಪರಿಣಾಮ ಬೀರಬಹುದೆಂದು ಎಚ್ಚರಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಸಿಎಂ ಪುತ್ರ ಯತೀಂದ್ರ ದಳ್ಳುರಿ; ತನ್ವೀರ್ ಸೇಠ್ ಕ್ಷೇತ್ರದಲ್ಲೂ ಹಸ್ತಕ್ಷೇಪದ ಆರೋಪ, ಆಕ್ಷೇಪ
ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಮತ್ತೊಂದೆಡೆ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ಮೆಲೆ ಮುಗಿಬಿದ್ದಿದ್ದು, ಇದೇ ರೀತಿಯ ಸೌಲಭ್ಯವನ್ನು ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ ಮತ್ತು ಇತರೆ ಹಿಂದುಳಿದ ವರ್ಗಗಳ ನಿಗಮಗಳ ಫಲಾನುಭವಿಗಳಿಗೆ ಯಾಕೆ ನೀಡುತ್ತಿಲ್ಲ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಮಾಜಿ ಸಿಎಂ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಕೂಡ ಈ ಬಗ್ಗೆ ಕಿಡಿ ಕಾರಿದ್ದು, ರಾಜ್ಯ ಸರ್ಕಾರವು ವ್ಯಾಪಕ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸುವ ಬದಲು ಮತಬ್ಯಾಂಕ್ ರಾಜಕಾರಣದಲ್ಲೇ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಧಾರ ಸಮರ್ಥಿಸಿಕೊಂಡ KMDC
ಆದರೆ KMDC ಮಾತ್ರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಒಟಿಎಸ್ ಜಾರಿಯಾದಲ್ಲಿ ಕನಿಷ್ಠ 150 ಕೋಟಿ ಹಣ ವಸೂಲಿಸಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದೆ. ಬಡ್ಡಿಯಾಗಿ ಸುಮಾರು 14 ಕೋಟಿ ರೂ. ಮನ್ನಾ ಮಾಡಿದರೂ, ಸಂಪೂರ್ಣ ಸಾಲ ಬಾಕಿಯಾಗಿರುವುದಕ್ಕಿಂತ ಮೂಲಧನವನ್ನು ವಸೂಲಿಸುವುದು ಉತ್ತಮ ಎಂದು ನಿಗಮ ವಾದಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:24 pm, Mon, 9 February 26
