ಮೇಕೆದಾಟು ಜಲಾಶಯಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ: ಬಿಜೆಪಿಯಲ್ಲಿ ಗರಿಗೆದರಿಗೆ ಚರ್ಚೆ
ಪಾದಯಾತ್ರೆಯ ಬಗ್ಗೆ ಹೆಚ್ಚು ಮಾತನಾಡಿದರೆ ನಾವೇ ಪ್ರಾಮುಖ್ಯತೆ ನೀಡಿದಂತೆ ಆಗುತ್ತದೆ. ಪಾದಯಾತ್ರೆಯಲ್ಲಿ ನಿಯಮಾವಳಿ ಉಲ್ಲಂಘಿಸಿದರೆ ಆಗ ಪ್ರತಿಕ್ರಿಯೆ ನೀಡಬೇಕು ಎಂದು ಬಿಜೆಪಿ ನಿರ್ಧರಿಸಿದೆ.
ಬೆಂಗಳೂರು: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಲು ಮುಂದಾಗಿದೆ. ಈ ಬೆಳವಣಿಗೆಯನ್ನು ಹೇಗೆ ಅರ್ಥೈಸಬೇಕು ಎನ್ನುವ ಬಗ್ಗೆ ಬಿಜೆಪಿಯಲ್ಲಿ ಗೊಂದಲ ಕಂಡುಬರುತ್ತಿದೆ. ಪಾದಯಾತ್ರೆಯನ್ನು ವಿರೋಧಿಸುವುದರಿಂದ ನಮಗೆ (ಬಿಜೆಪಿಗೆ) ಏನೂ ಲಾಭ ಇಲ್ಲ. ಹಾಗೆಂದು ಪಾದಯಾತ್ರೆಗೆ ಅನಗತ್ಯವಾಗಿ ಪ್ರಾತಿನಿಧ್ಯದ ಅವಶ್ಯಕತೆಯೂ ಇಲ್ಲ. ಪಾದಯಾತ್ರೆಯ ಬಗ್ಗೆ ಹೆಚ್ಚು ಮಾತನಾಡಿದರೆ ನಾವೇ ಪ್ರಾಮುಖ್ಯತೆ ನೀಡಿದಂತೆ ಆಗುತ್ತದೆ. ಪಾದಯಾತ್ರೆಯಲ್ಲಿ ನಿಯಮಾವಳಿ ಉಲ್ಲಂಘಿಸಿದರೆ ಆಗ ಪ್ರತಿಕ್ರಿಯೆ ನೀಡಬೇಕು. ಪಾದಯಾತ್ರೆ ಆರಂಭಕ್ಕೂ ಮುನ್ನ ನಾವೇ ಪ್ರಚಾರ ಸಿಗುವಂತೆ ಮಾಡಬಾರದು ಎಂದು ಹೇಳಿದರು. ಕಾಂಗ್ರೆಸ್ ಪಾದಯಾತ್ರೆಯು ರಾಮನಗರ ಜಿಲ್ಲೆಗಷ್ಟೇ ಸೀಮಿತವಾಗಿದೆ. ಬಿಜೆಪಿ ನಾಯಕರು ಪಾದಯಾತ್ರೆಯ ಬದಲು ಇತರ ವಿಚಾರಗಳ ಬಗ್ಗೆ ಗಮನಹರಿಸಬೇಕು. ಪಾದಯಾತ್ರೆಯನ್ನು ಕೇವಲ ಪ್ರತಿಭಟನೆಯಂತೆ ಪರಿಗಣಿಸಿ, ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರೆ ಸಾಕು ಎಂದು ಬಿಜೆಪಿ ಹಿರಿಯ ನಾಯಕರು ಸಚಿವರು, ಮುಖಂಡರಿಗೆ ಸಲಹೆ ನೀಡಿದ್ದಾರೆ.
ಸಂಪುಟ ಬದಲಾವಣೆ ವದಂತಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಕೆಲ ಹಿರಿಯ ಸಚಿವರ ಬದಲಾವಣೆ ಕುರಿತು ಎದ್ದಿರುವ ಊಹಾಪೋಹಗಳ ಬಗ್ಗೆ ದೇವನಹಳ್ಳಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರ ಬದಲಾವಣೆ ಇಲ್ಲ ಎಂದು ಅರುಣ್ಸಿಂಗ್ ಸ್ಪಷ್ಟಪಡಿಸಿರುವುದಾಗಿ ಅವರು ಹೇಳಿದ್ದಾರೆ. 2023ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಎಲ್ಲ ಸಚಿವರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು. ಹಿರಿಯ ಸಚಿವರ ಬದಲಾವಣೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಸ್ಪಷ್ಟಪಡಿಸಿದರು.
ಇದು ರಾಜಕಾರಣ ಅಲ್ಲ: ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆಯನ್ನು ಬಿಜೆಪಿ ನಾಯಕರು ರಾಜಕೀಯ ಉದ್ದೇಶದ ಪಾದಯಾತ್ರೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ಇದು ಅಭಿವೃದ್ಧಿಗಾಗಿ ನಡೆಸುತ್ತಿರುವ ಪಾದಯಾತ್ರೆ ಎಂದು ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ಹೇಳಿದರು. ಕಾಂಗ್ರೆಸ್ ನಾಯಕರ ಪಾದಯಾತ್ರೆಯಲ್ಲಿ ರಾಜಕಾರಣ ಇಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಡಿಪಿಆರ್ ಪ್ರಕ್ರಿಯೆ ಆರಂಭಿಸಿದ್ದೆವು. ಸಮ್ಮಿಶ್ರ ಸರ್ಕಾರದಲ್ಲಿ ಅದನ್ನು ಬದಲಾವಣೆ ಮಾಡಿ ಅನುಮೋದನೆಗೆ ಕಳಿಸಿದ್ದೆವು ಎಂದು ನೆನಪಿಸಿಕೊಂಡರು. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಆಕ್ಷೇಪ ಬಂದಿರುವ ಕುರಿತು ಪ್ರಸ್ತಾಪಿಸಿದ ಅವರು, ನಮ್ಮ ಭೂಮಿ, ನಮ್ಮ ಹಣದಲ್ಲಿ ಮಾಡುತ್ತಿರುವ ಯೋಜನೆಯಿದು. ಕೇಂದ್ರ ಪರಿಸರ ಇಲಾಖೆ ಅನುಮತಿಯಷ್ಟೆ ಬಾಕಿಯಿದೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಮೇಕೆದಾಟು ಜಲಾಶಯ ನಿರ್ಮಾಣ ವಿವಾದ; ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್ ಇದನ್ನೂ ಓದಿ: ನೀರಿಗಾಗಿ ಮನೆಗೊಬ್ಬರಂತೆ ಚಳವಳಿಗೆ ಬನ್ನಿ: ಮೇಕೆದಾಟು ಹೋರಾಟ ಸಭೆಯಲ್ಲಿ ಸಿದ್ದರಾಮಯ್ಯ ಕರೆ
Published On - 10:04 pm, Mon, 3 January 22