ಕರ್ನಾಟಕದಲ್ಲಿ 20ರಂದು ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ; ಹಳ್ಳಿಗಳಿಗೆ ಡಿಸಿ, ಎಸಿ, ತಹಶೀಲ್ದಾರ್ ಭೇಟಿ: ಆರ್​.ಅಶೋಕ ಘೋಷಣೆ

R Ashoka: ಹಳ್ಳಿಗಳಿಗೆ ಭೇಟಿ ನೀಡುವ ಕಂದಾಯ ಇಲಾಖೆ ಅಧಿಕಾರಿಗಳು ಬೆಳಿಗ್ಗೆ 10 ಗಂಟೆಯಿಂದಲೇ ಕೆಲಸ ಆರಂಭಿಸುತ್ತಾರೆ. ಅಂಗವಿಕಲರು, ಪಿಂಚಣಿದಾರರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ.

  • TV9 Web Team
  • Published On - 14:17 PM, 16 Feb 2021
ಕರ್ನಾಟಕದಲ್ಲಿ 20ರಂದು ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ; ಹಳ್ಳಿಗಳಿಗೆ ಡಿಸಿ, ಎಸಿ, ತಹಶೀಲ್ದಾರ್ ಭೇಟಿ: ಆರ್​.ಅಶೋಕ ಘೋಷಣೆ
ಕಂದಾಯ ಸಚಿವ ಆರ್.ಅಶೋಕ

ಬೆಂಗಳೂರು: ರಾಜ್ಯದ ಒಟ್ಟು 227 ಕಡೆ, ಇದೇ 20ರಂದು ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ ನಡೆಯಲಿದೆ. ಹಳ್ಳಿಗಳಿಗೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೇಟಿ ನೀಡಿ ಜನರ ಕಷ್ಟಸುಖ ಆಲಿಸಲಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ವೃದ್ಧಾಪ್ಯ ವೇತನ, ಖಾತೆ, ಪಹಣಿ, ಪಿಂಚಣಿ, ಅಂಗವಿಕಲರ ಸಮಸ್ಯೆಗಳನ್ನು ಪರಿಹರಿಸಲು ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಆದೇಶ ಮಾಡಲಿದ್ದಾರೆ ಕಂದಾಯ ಸಚಿವ ಆರ್.ಅಶೋಕ ಮಂಗಳವಾರ ಘೋಷಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಹೊಸಹಳ್ಳಿ ಗ್ರಾಮದಲ್ಲಿ ನಾನು ಗ್ರಾಮವಾಸ್ತವ್ಯ ಮಾಡುತ್ತೇನೆ. ಆ ಊರಿನ ಹಾಸ್ಟೆಲ್​ನಲ್ಲಿ ರಾತ್ರಿ ಕಳೆಯುತ್ತೇನೆ. ದಿನವಿಡೀ ಗ್ರಾಮದಲ್ಲಿಯೇ ಇದ್ದು ಜನರ ಸಮಸ್ಯೆ ಆಲಿಸುತ್ತೇನೆ ಎಂದು ಅಶೋಕ ಹೇಳಿದರು.

ಪ್ರತಿ ತಿಂಗಳ 3ನೇ ಶನಿವಾರ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಬೇಕು. ಒಂದು ದಿನವಿಡೀ ಹಳ್ಳಿಗಳಲ್ಲಿಯೇ ಇದ್ದು, ಜನರ ಸಮಸ್ಯೆ ಆಲಿಸಬೇಕು. ವಿಸಿಟಿಂಗ್ ಆಫೀಸರ್​ಗಳಂತೆ ಹೀಗೆ ಹೋಗಿ, ಹಾಗೆ ಬರುವುದಲ್ಲ. ಅಂದು ರಾತ್ರಿ ಅದೇ ಹಳ್ಳಿಯ ಶಾಲೆಯಲ್ಲಿ ಮಲಗಬೇಕು. ಮಹಿಳಾ ಅಧಿಕಾರಿಗಳೂ ಗ್ರಾಮವಾಸ್ತವ್ಯಕ್ಕೆ ಒಪ್ಪಿದ್ದಾರೆ. ಅಧಿಕಾರಿಗಳ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಜನಪ್ರತಿನಿಧಿಗಳೂ ಉಪಸ್ಥಿತರಿರಬೇಕು. ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹರಿಸಬೇಕು ಎಂದು ಅಶೋಕ ಸೂಚಿಸಿದರು.

ರಾಜ್ಯದಲ್ಲಿ ಒಟ್ಟು 227 ಕಡೆ ‘ಹಳ್ಳಿಗೆ ನಡೆಯಿರಿ’ ಕಾರ್ಯಕ್ರಮ ಘೋಷಿಸಿದ್ದೇವೆ. ಈ ಕಾರ್ಯಕ್ರಮ ಇನ್ನು ಮುಂದೆ ಪ್ರತಿತಿಂಗಳ 3ನೇ ಶನಿವಾರ ನಡೆಯಲಿದೆ. ಅಧಿಕಾರಿಗಳು ಯಾವ ಹಳ್ಳಿಗೆ ಹೋಗುತ್ತಾರೋ, ಆ ಹಳ್ಳಿಗಳವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಹವಾಲು ಹೇಳಿಕೊಳ್ಳಬಹುದು. ಇತರ ಗ್ರಾಮಗಳವರು ಭಾಗಿಯಾಗುವಂತಿಲ್ಲ. ಗ್ರಾಮ ವಾಸ್ತವ್ಯದ ವೇಳೆ ಖಾತೆ, ಪಹಣಿ, ಪಿಂಚಣಿ, ಅಂಗವಿಕಲರ ಸಮಸ್ಯೆಗಳನ್ನು ಪರಿಹರಿಸಿ ಅಧಿಕಾರಿಗಳು ಸ್ಥಳದಲ್ಲೇ ಆದೇಶ ಮಾಡಬೇಕು ಎಂದು ಸೂಚಿಸಿದರು.

ಪಿಂಚಣಿ ಬಳಕೆಯಾಗದಿದ್ದರೆ ಬ್ಯಾಂಕ್ ಖಾತೆ ಸ್ಥಗಿತ
ಸರ್ಕಾರದಿಂದ ವಿವಿಧ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವವರು 9 ತಿಂಗಳ ಅವಧಿಯಲ್ಲಿ ಹಣವನ್ನು ಡ್ರಾ ಮಾಡದಿದ್ದರೆ ಅಂಥ ಖಾತೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಸೂಚಿಸುತ್ತೇವೆ. ಪ್ರತಿ ವರ್ಷ 4 ಲಕ್ಷ ಹೊಸ ಪಿಂಚಣಿದಾರರು ಸೇರ್ಪಡೆಯಾಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಅಧಿಕಾರಿಗಳ ವರ್ಗಾವಣೆ: ಸ್ಪಷ್ಟನೆ
43 ಐಎಎಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ನಿರ್ಧಾರವನ್ನು ನಾನು ಅನಿವಾರ್ಯವಾಗಿ ಅಲ್ಲ, ಮುಕ್ತವಾಗಿಯೇ ಒಪ್ಪಿಕೊಂಡಿದ್ದೇನೆ ಎಂದು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮ್ಮ ಮತ್ತು ಮುಖ್ಯಮಂತ್ರಿ ನಡುವೆ ಗೊಂದಲ ಇದೆ ಎಂಬ ವದಂತಿಯನ್ನು ಅಲ್ಲಗಳೆದರು.

ಬಿಪಿಎಲ್ ಕಾರ್ಡ್ ಗೊಂದಲ
ಟಿವಿ, ಫ್ರಿಡ್ಜ್​, ಬೈಕ್ ಇದ್ದವರು ಬಿಪಿಎಲ್​ ಕಾರ್ಡ್​ ಹಿಂದಿರುಗಿಸಬೇಕೆಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ, ಈಗ 5 ಸಾವಿರ ರೂಪಾಯಿಗೆ ಟಿವಿ ಸಿಗುತ್ತೆ. ಅದನ್ನು ಬಿಪಿಎಲ್ ಕಾರ್ಡ್​ ಹಿಂಪಡೆಯಲು ಮಾನದಂಡವಾಗಿ ಇರಿಸಿಕೊಳ್ಳುವುದು ಸರಿಯಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡುತ್ತೇನೆ. ಉಮೇಶ ಕತ್ತಿ ಅವರಿಗೂ ಅಂಥ ಅಭಿಪ್ರಾಯವಿಲ್ಲ. ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ನುಡಿದರು.

ಇದನ್ನೂ ಓದಿ: Ahinda-Hinda | ರಾಜಕೀಯ ವಿಶ್ಲೇಷಣೆ: ಶಂಖದಿಂದ ಬಂದರೇ ತೀರ್ಥ! ಈ ಗಾದೆ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತು, ಅದಕ್ಕೇ..