ಸುದೀರ್ಘ ಜನಸೇವೆಯ ಸಾರ್ಥಕ ಕ್ಷಣ: ನಿಮ್ಮೆಲ್ಲರ ಸೇವೆಗೈಯ್ಯುವ ಈ ಅವಕಾಶಕ್ಕಾಗಿ ಚಿರಋಣಿ; ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಆಗಿ ದೇವರಾಜ ಅರಸು ದಾಖಲೆ ಮುರಿಯುವ ಮೂಲಕ ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ಎಲ್ಲೆಡೆ ಸಂಭ್ರಮಾಚರಣೆ ಮಾಡಲಾಗಿದೆ. ಖುದ್ಧು ಈ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದಿದ್ದಾರೆ.

ಬೆಂಗಳೂರು, ಜನವರಿ 06: ದೇವರಾಜ ಅರಸು (Devaraj Urs) ಅವರ ದಾಖಲೆಯನ್ನು ಮುರಿಯುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಆಪ್ತ ಬಳಗ ಸೇರಿದಂತೆ ರಾಜ್ಯಕೀಯ ಗಣ್ಯರು ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ: ಸಿದ್ದರಾಮಯ್ಯ
ದೀರ್ಘಾವಧಿ ಮುಖ್ಯಮಂತ್ರಿ ಆಗಿ ದಾಖಲೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು… pic.twitter.com/oVV1gv2sHb
— Siddaramaiah (@siddaramaiah) January 6, 2026
ನನ್ನ ರಾಜಕೀಯ ಜೀವನಕ್ಕೆ ಹಲವು ಹಿರಿಯರ ಚಿಂತನೆ ಮತ್ತು ಸಾಧನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ದೇವರಾಜ ಅರಸು ಪ್ರಮುಖರು. ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ಸಹಮತ ಮತ್ತು ನಾನು ಕೂಡಾ ಅವರಂತೆ ಮೈಸೂರಿನ ಮಣ್ಣಿನ ಮಗ ಎನ್ನುವ ಕಾರಣಕ್ಕೆ ನನ್ನ ಹೃದಯದಲ್ಲಿ ಅವರಿಗೆ ವಿಶೇಷವಾದ ಸ್ಥಾನ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ಕೆಎನ್ ರಾಜಣ್ಣ ಖಡಕ್ ಮಾತು
ಸಾಮಾಜಿಕ ನ್ಯಾಯದ ಬಂಡಿಯ ಪಯಣಕ್ಕೆ ಕರ್ನಾಟಕದಲ್ಲಿ ದೀರ್ಘ ಪರಂಪರೆ ಇದೆ. ಬಸವಣ್ಣನವರಿಂದ ಪ್ರಾರಂಭಗೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ.ದೇವರಾಜ ಅರಸು ವರೆಗೆ ಹಲವಾರು ಮಹನೀಯರು ಈ ಬಂಡಿಯನ್ನು ಎಳೆದುಕೊಂಡು ಬಂದಿದ್ದಾರೆ. ಇದನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯದ ಸ್ಥಿತ್ಯಂತರಗಳ ಇತಿ-ಮಿತಿಯಲ್ಲಿ ಜವಾಬ್ದಾರಿಯಾಗಿ ನಾನು ಸ್ವೀಕರಿಸಿ, ಮುನ್ನಡೆಯುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ದೇವರಾಜ ಅರಸು ದಾಖಲೆ ಬ್ರೇಕ್: ಹೊಸ ಇತಿಹಾಸ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ
ಅಧಿಕಾರ, ಸಂಪತ್ತು ಮತ್ತು ಅವಕಾಶಗಳ ಹೆಬ್ಬಾಗಿಲನ್ನು ಸರ್ವರಿಗೂ ತೆರೆದು ಸಮಾನವಾಗಿ ಹಂಚಿಕೆ ಮಾಡದ ಹೊರತು ಸುಸ್ಥಿರವಾದ ಅಭಿವೃದ್ದಿಯನ್ನು ಕಾಣಲು ಸಾಧ್ಯ ಇಲ್ಲ ಎನ್ನುವುದು ಅರಸರ ಅಚಲ ನಂಬಿಕೆಯಾಗಿತ್ತು. ಇದಕ್ಕಾಗಿಯೇ ಅವಕಾಶ ವಂಚಿತ ಸಮುದಾಯಗಳಿಗೆ ಸೇರಿರುವ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದರು. ಭೂಸುಧಾರಣೆಯ ಮೂಲಕ ಸಂಪತ್ತಿನ ಸಮಾನ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸಿದರು. ಮೀಸಲಾತಿಯ ಮೂಲಕ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೂಡಾ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು. ಜನಪ್ರತಿನಿಧಿಗಳೆಲ್ಲರಿಗೂ ಈ ಸಾಧನೆ ಪ್ರೇರಣೆಯಾಗಬೇಕು. ಇಂದಿನ ದಿನದ ವಿಶೇಷ ಸಂದರ್ಭದಲ್ಲಿ ನಮಗೆಲ್ಲ ಪ್ರೇರಣಾದಾಯಿಗಳು ಮತ್ತು ಪೂಜನೀಯರೂ ಆಗಿರುವ ಡಿ.ದೇವರಾಜ ಅರಸು ಅವರಿಗೆ ನಾನು ಗೌರವದ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
