Self Employment Tips: ಸರಳ ಮತ್ತು ಉತ್ತಮ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ಇಲ್ಲಿದೆ 5 ಐಡಿಯಾ
ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ನೀವು ಸ್ಪರ್ಧಿಸುವ ಅವಕಾಶವಿದೆ, ಮರೆಯಬೇಡಿ
ಅತ್ತ ಕಾಲೇಜು ಮುಗಿದಿದೆ, ಇತ್ತ ಕೆಲಸ ಸಿಕ್ಕಿಲ್ಲ. ಸಿಕ್ಕರೂ ದೊರೆಯುವ ಸಂಬಳದ ಬಗ್ಗೆ ತೃಪ್ತಿಯಿಲ್ಲ. ಮನೆಯಲ್ಲಿ ಕೂರಲು ಮನಸಿಲ್ಲ. ಮಾಡಬೇಕು, ಏನಾದರೂ ಮಾಡಬೇಕು ಎಂಬ ಅದಮ್ಯ ಇಚ್ಛೆ, ಹಂಬಲ ಸುಮ್ಮನೇ ಕೂರಲು ಕೊಡುತ್ತಲೂ ಇಲ್ಲ. ಮತ್ತು ಈಗ ಇರುವಂತೆಯೇ ಇದ್ದರೆ ಜೀವನದ ಮೆಟ್ಟಿಲು ಹತ್ತಲಾಗದು; ಇಂತಹುದೇ ಪರಿಸ್ಥಿತಿಯನ್ನು ಎಷ್ಟೆಲ್ಲ ಯುವಕರು ಅನುಭವಿಸುತ್ತಿದ್ದಾರೆಂದರೆ..ಲೆಕ್ಕವಿಲ್ಲ. ಕೊವಿಡ್ಡು, ಲಾಕ್ಡೌನು ಉತ್ಸಾಹಿಗಳನ್ನು ಕೊಂಚ ಅಲುಗಾಡಿಸಿದ್ದು ಹೌದು. ಆದರೆ ‘ಏನಾದರೂ ಮಾಡಬೇಕು’ ಎಂಬುದೊಂದೇ ಜೀವನದ ಉತ್ಕಟ ಮಂತ್ರವಾದರೆ ಪರಿಸ್ಥಿತಿ ಎಂಥದ್ದೇ ಇರಲಿ, ಎಂಥದ್ದೇ ಬರಲಿ ನೀವು ಸರ್ವೈವ್ ಆಗಬಹುದು. ಮತ್ತು ಆಗಲೇಬೇಕು. ಅಂತಹ ಕೆಲವು ಐಡಿಯಾಗಳು ಇಲ್ಲಿವೆ.
1. ಜೇನುಕೃಷಿ ನೀವು ವಾಸಿಸುವ ಊರು ಮತ್ತು ಪರಿಸರ ಯಾವುದೇ ಕೆಲಸ ಆರಂಭಿಸಲು ಅತಿ ಮುಖ್ಯ. ನೀವು ಮಲೆನಾಡಿನವರಾದಲ್ಲಿ ಕೊಂಚ ಮಟ್ಟಿಗಾದರೂ ಪರಿಸರದ ಕುರಿತು ತಿಳಿವಳಿಕೆ ಹೊಂದಿದ್ದಲ್ಲಿ ಜೇನುಕೃಷಿಯ ಬಗ್ಗೆ ಯೋಚಿಸಲೇಬೇಕು. ಏಕೆಂದರೆ ಸದ್ಯ ಪರಿಶುದ್ಧ ಜೇನಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಕಿಮ್ಮತ್ತು. ಅಂದಹಾಗೆ ನಿಮಗೆ ಗೊತ್ತೇ? ಒಂದು ಹನಿ ಜೇನು ತಯಾರಿಸಲು ಜೇನುಹುಳು ಪಡುವ ಪರಿಶ್ರಮದ ಮುಂದೆ ಜೀವನದಲ್ಲಿ ನಮಗೆ ಎದುರಾಗುವ ಕಷ್ಟ ಕೋಟಲೆಗಳೂ ಏನೂ ಅಲ್ಲ ಎಂದು ನಾವು ಅರಿಯಬೇಕು. ಜೇನುಕೃಷಿ ಮಾಡಲು ಕೆಲವು ತಯಾರಿ, ಮುಂಜಾಗರೂಕತೆ, ಮತ್ತು ಪರಿಣಿತಿಯ ಅಗತ್ಯವಿದೆ. ನೀವು ನಿಮ್ಮ ತಾಲೂಕಾ ಕೇಂದ್ರದಲ್ಲಿರುವ ಕೃಷಿ ಇಲಾಖೆಯ ಕಚೇರಿಯನ್ನು ಜೇನುಕೃಷಿಯ ಪಾಠ ಕಲಿಯಲು ಸಂಪರ್ಕಿಸಬಹುದು. ಅಲ್ಲದೇ, ಜೇನುಪೆಟ್ಟಿಗೆಗಳನ್ನು ಸಹ ಕೃಷಿ ಇಲಾಖೆಯ ಯೋಜನೆಗಳ ಮೂಲಕ ನೀವು ಪಡೆದುಕೊಳ್ಳಬಹುದು.
2. ಗ್ರಾಮೀಣ ಸೇವೆ ನಿಮಗೆ ಗ್ರಾಮ ಜೀವನ ಇಷ್ಟ. ಆದರೆ ಇಲ್ಲಿ ಕೆಲಸವೇ ಇಲ್ಲ ಎಂದುಕೊಂಡಿದ್ದೀರಾ? ಹಾಗಿದ್ದರೆ ಅದು ಖಂಡಿತ ತಪ್ಪು ಅಭಿಪ್ರಾಯ. ಖಂಡಿತ ನೀವು ಉದ್ಯೋಗ ಅರಸಿ ಬೆಂಗಳೂರಿನಂತಹ ಮೆಟ್ರೋ ನಗರಗಳಿಗೇ ಹೋಗಬೇಕಂತಿಲ್ಲ. ಕಳೆದ ಕೆಲವು ವರ್ಷಗಳಿಂದ ಭಾರತದ ಗ್ರಾಮಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿವೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಬಹುತೇಕ ಮಟ್ಟಿಗೆ ಅದು ನಿಜವೂ ಹೌದು. ಆದರೆ ಜನರು ಎಲ್ಲಿಗೆ ಮುಗಿಬಿದ್ದು ಹೋಗುತ್ತಾರೋ ಅಲ್ಲಿ ಸ್ಪರ್ಧೆ ಹೆಚ್ಚು, ಅಲ್ಲಿ ಅವಕಾಶವೂ ಕಡಿಮೆ ಎಂದು ನೀವು ಅರಿಯಬೇಕು. ಊರಿನ ಯುವಕರೆಲ್ಲ ಬೆಂಗಳೂರಿಗೆ ಹೊರಟುನಿಂತರೆ ಊರು ನೋಡಿಕೊಳ್ಳುವವರಾರು? ಏನೇ ಎಂದರೂ ಅದು ಊರೇ. ಎಷ್ಟು ಜನ ನಗರವಾಸಿಗಳಾದರೂ ಊರು ಎಂಬ ಕೊಂಡಿ ಎಲ್ಲರಿಗೂ ಬೇಕೇ ಬೇಕು. ಇಲ್ಲೇ ಸ್ವಯಂ ಉದ್ಯೋಗಾವಕಾಶವಿದೆ. ಸರ್ಕಾರದ ಇತ್ತೀಚಿನ ಹಲವು ಯೋಜನೆಗಳು ಗ್ರಾಮಿಣ ಭಾರತವನ್ನೇ ಕೇಂದ್ರೀಕರಿಸುತ್ತಿವೆ. ಗ್ರಾಮವಾಸಿಗಳು ಝೆರಾಕ್ಸ್, ದಿನಸಿ, ಆಧಾರ ಕಾರ್ಡ್ನಂತಹ ಸರ್ಕಾರಿ ಸೇವೆ, ಮೊಬೈಲ್-ಟಿವಿ ರೀಚಾರ್ಜ್ ಹೀಗೆ ಎಲ್ಲದಕ್ಕೂ ತಾಲೂಕಾ ಕೇಂದ್ರಗಳಿಗೇ ಅಲೆಯುವ ಪರಿಸ್ಥಿತಿ ಇನ್ನೂ ಇದೆ. ಇದು ಬಹುದೊಡ್ಡ ಉದ್ಯೋಗಾವಕಾಶ. ಊರಿನ ಜನರಿಗೆ ಇಂತಹ ಸೇವೆಗಳ ‘ಸರ್ವೀಸ್ ಸೆಂಟರ್’ ಆಗಿ ನೀವು ಕೆಲಸ ಮಾಡಬೇಕು. ಆಗ ನಿಮ್ಮ ಜೇಬೂ ಸಹ ತುಂಬುತ್ತದೆ. ಊರವರಿಗೂ ನೀವು ಬಹಳ ಪ್ರಯೋಜನಕ್ಕೆ ಬರುವ ಮನುಷ್ಯರಾಗುತ್ತೀರಿ. ಗ್ರಾಮೀಣ ಭಾಗಗಳಲ್ಲಿ ಇಂತಹ ಸೇವೆಗಳನ್ನು ಒದಗಿಸಲು ಸರ್ಕಾರವೂ ನಿಮಗೆ ಸಹಕಾರ ನೀಡುತ್ತದೆ. ನೀವು ಸರ್ಕಾರದ ಸಹಯೋಗದಲ್ಲಿ ನಿಮ್ಮೂರಿನಲ್ಲೇ ‘ಕಾಮನ್ ಸರ್ವೀಸ್ ಸೆಂಟರ್’ ಸ್ಥಾಪಿಸಬಹುದು. ಹೀಗೆ ಯಶ ಕಂಡವರು ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ರಾಘವೇಂದ್ರ ಕುಂದರ್ಗಿ. ಅವರು ಈಗ ತಮ್ಮ ಊರಿನಲ್ಲಿ ಬಹು ಬೇಡಿಕೆಯ ವ್ಯಕ್ತಿ. ಜತೆಗೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ನೀವು ಸ್ಪರ್ಧಿಸುವ ಅವಕಾಶವಿದೆ, ಮರೆಯಬೇಡಿ
3. ಮಸಾಲೆ ಪುಡಿ, ಹಪ್ಪಳ ಸಂಡಿಗೆ ಗೃಹೋದ್ಯಮವೆಂಬುದು ಅವಕಾಶ ಮತ್ತು ಸವಾಲು, ಎರಡೂ ಇರುವ ಒಂದು ವಿಶಾಲ ಬಯಲಿದ್ದಂತೆ. ನಮ್ಮ ಕೆಲಸ ಮಾಡುವ ಮತ್ತು ಬೆಳೆಯುವ ಹಂಬಲವೇ ಇಲ್ಲಿ ಶಕ್ತಿ. ಜತೆಗೆ ಕಾಲಕಾಲಕ್ಕೆ ಬದಲಾಗುವ ಗ್ರಾಹಕರ ಆಸೆ ಆಕಾಂಕ್ಷೆ ಮತ್ತು ಅಭಿರುಚಿಗಳನ್ನು ಹದವಾಗಿ ಅರಿಯಬೇಕು. ಮನೆಯಲ್ಲಿ ತಿಂದು ಮಿಗುವಷ್ಟು ಹಲಸಿನಕಾಯಿ ಇರುವವರು ಹಪ್ಪಳ, ಚಿಪ್ಸ್ ಮಾಡಿ ಮಾರಾಟ ಮಾಡಬಹುದು. ಇಲ್ಲ, ನಿಮ್ಮಲ್ಲಿ ಹಲಸಿನಕಾಯಿಲ್ಲವೇ, ಸಂಡಿಗೆ, ಮೆಣಸು, ವಿಧವಿಧದ ಮಸಾಲಾ ಪುಡಿ, ಸಾಂಬಾರು ಪುಡಿಗಳನ್ನೂ ತಯಾರಿಸಿ ಮಾರಬಹುದು. ಆದರೆ ತಯಾರಿಸಿದಷ್ಟು ಮಾರುವುದು ಸುಲಭವಲ್ಲ. ಮೊದಲು ನೀವು ಇಂತಹ ಗೃಹೋದ್ಯಮ ನಡೆಸುತ್ತಿರುವುದು ಸಾರ್ವಜನಿಕವಾಗಿ ಪ್ರಚಾರ ಗಳಿಸಬೇಕು. ನೀವು ಗೃಹೋದ್ಯಮ ಅಥವಾ ನಿಮ್ಮ ಊರು-ಸಮುದಾಯಕ್ಕೆ ಸಂಬಂಧಿಸಿದ ಫೇಸ್ಬುಕ್-ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಕ್ರಿಯಾಶೀಲರಾಗಿರಬೇಕು. ಸಾಮಾಜಿಕವಾಗಿ ಗುರುತಿಸಿಕೊಳ್ಳುವಿಕೆ ಸಾಧ್ಯವಾದಷ್ಟು ಹೆಚ್ಚಾಗಬೇಕು. ಆಗ ನಿಮ್ಮ ಮನೆಯ ಉತ್ಪನ್ನವೂ ಪ್ರಸಿದ್ಧಿಗೆ ಬರುತ್ತದೆ. ಆದರೆ ರುಚಿ ಮತ್ತು ಶುದ್ಧವಾದ ಉತ್ಪನ್ನ ನಿಮ್ಮದಾಗಿರಬೇಕು. ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ಸದಾ ಕಾಯ್ದುಕೊಳ್ಳಬೇಕು.
4. ಹೈನುಗಾರಿಕೆ: ಕೆಲವೇ ಕೆಲವು ವರ್ಷಗಳ ಹಿಂದೆ ವೈಟ್ ಕಾಲರ್ ಕೆಲಸಗಳಿಗೆ ಎಲ್ಲಿಲ್ಲದ ಡಿಮಾಂಡ್. ಆದರೆ ಈಗ ಚಕ್ರ ತಿರುಗಿದೆ, ಹಳ್ಳದಲ್ಲಿ ಬೇಕಾದಷ್ಟು ನೀರು ಹರಿದಿದೆ. ಈಗ ಯಾವುದೋ ಕಂಪನಿಯಲ್ಲಿ ಕೆಲಸ ಮಾಡಿದಷ್ಟೇ, ನಿಜಕ್ಕೂ ಹೇಳುವುದಿದ್ದರೆ ಅದಕ್ಕಿಂತ ಒಂದು ಸಾಸಿವೆ ಕಾಳಿನಷ್ಟು ಹೆಚ್ಚೇ ತೂಕ ಸ್ವಂತ ಉದ್ಯಮಕ್ಕೆ. ಅದರಲ್ಲಿ ಅತ್ಯಂತ ಜನಪ್ರಿಯ ಹೈನುಗಾರಿಕೆ. ನೀವು ದೈಹಿಕ ಶ್ರಮ ಪಡೆಯಲು ಹಿಂದೇಟು ಹಾಕದವರಾಗಿದ್ದಲ್ಲಿ ನಿಮಗೆ ಇದು ಹೇಳಿ ಮಾಡಿಸಿದ ವೃತ್ತಿ. ಸಗಣಿ ತೆಗೆಯುತ್ತ, ಹಾಲು ಕರೆಯುತ್ತ ದನಕರುಗಳ ಜತೆ ಬೆರೆಯಲು ಅಷ್ಟೇ ಮೃದುವಾದ ಮನಸು ಸಹ ಈ ಉದ್ಯಮಕ್ಕೆ ಅಷ್ಟೇ ಅಗತ್ಯವಿದೆ. ಹೈನುಗಾರಿಕೆ ಆರಂಭಿಸಲು ಶುರುವಿನಲ್ಲೇ ಹತ್ತಾರು ಆಕಳು-ಎಮ್ಮೆಗಳನ್ನು ಕಟ್ಟಬೇಕಂತಿಲ್ಲ. ಒಂದೇ ಅಕಳಿನಿಂದ ನೀವು ಈ ಉದ್ಯೋಗಕ್ಕೆ ಕೈಹಾಕಬಹುದು. ಮೊದಲು ನಿಮ್ಮ ಬಳಿ ಎಷ್ಟು ಸ್ಥಳಾವಕಾಶ, ನೀರು, ದನಕರುಗಳ ಆಹಾರ ಪೂರೈಸಲು ಸಾಧ್ಯ, ಹತ್ತಿರದ ಹಾಲಿನ ಡೈರಿಯ ಬಗ್ಗೆ ಲೆಕ್ಕ ಹಾಕಿ. ಅದಕ್ಕೂ ಮೊದಲು ನೀವು ಮತ್ತೊಮ್ಮೆ ಶಾಲೆಗೆ ಹೋಗಬೇಕು. ಶಾಲೆ ಎಂದರೆ ಚಿಕ್ಕವರಿದ್ದಾಗಿಂದ ಕಲಿತ ಶಾಲೆಯಲ್ಲಿ, ಹೈನುಗಾರಿಕೆಯಲ್ಲಿ ಶಾಲೆಯೆಂದರೆ ಕೊಟ್ಟಿಗೆ. ಈಗಾಗಲೆ ಹೈನುಗಾರಿಕೆ ಮಾಡುತ್ತಿರುವವರ ಬಳಿ ನಿಮ್ಮ ಕಲಿಕೆ ಶುರುವಾಗಲಿ. ಅಲ್ಲಿ ದನಕರುಗಳ ಅ ಆ ಇ ಈ ಕಲಿತು ಪಶುಪಾಲನಾ ಇಲಾಖೆಯಿಂದ ಹಾಲು ಮತ್ತು ಹಾಲುತ್ಪನ್ನಗಳ ಮಾರಾಟ, ಆಧುನಿಕ ಹೈನುಗಾರಿಕೆಯ ಎ ಬಿ ಸಿ ಡಿಯನ್ನೂ ಕಲಿಯಿರಿ. ನಂತರವಷ್ಟೇ ದನ ಕಟ್ಟಿ.
5. ರೊಟ್ಟಿ-ಚಪಾತಿ-ಹೋಳಿಗೆ ಇದೂ ಗೃಹೋದ್ಯಮವೇ. ಆದರೆ ಮೇಲೆ ಹೇಳಿದ ಮಸಾಲಾ ಪುಡಿ ಅಥವಾ ಹಪ್ಪಳಕ್ಕಿಂತ ಸ್ವಲ್ಪ ಭಿನ್ನ. ನೇರವಾಗಿ ರಸಿಕರ ನಾಲಿಗೆಗಳನ್ನು ತಲುಪುವ ಸಾಹಸಕ್ಕೆ ನೀವು ಕೈಹಾಕಬೇಕಾಗುತ್ತದೆ. ನೀವು ಬೆಂಗಳೂರಿನಂತಹ ನಗರ, ಕೊಪ್ಪಳ, ಮಂಗಳೂರು ಅಥವಾ ಕಲಬುರಗಿ, ಮಂಡ್ಯ..ಯಾವುದೇ ಭಾಗದವರಾದರೂ ಸ್ವಲ್ಪ ಜಾಣ್ಮೆ ಖರ್ಚು ಮಾಡಿ ಈ ಉದ್ಯಮಕ್ಕಿಳಿಯಬಹುದು. ಆಯಾ ಪ್ರದೇಶದ ಸೊಗಡು ಎಂತಹುದು ಎಂಬುದನ್ನು ನೀವು ಮೊದಲು ಅರಿತುಕೊಳ್ಳಬೇಕು. ಅಂದರೆ ನೀವು ಮೂಲತಃ ಹುಬ್ಬಳ್ಳಿಯವರು, ಆದರೆ ವಾಸಿಸುತ್ತಿರುವುದು ಮಂಗಳೂರಿನಲ್ಲಿ ಅಂತಾದರೆ ಕರಾವಳಿಯ ಆಹಾರ ರಸಿಕರಿಗೆ ಉತ್ತರ ಕರ್ನಾಟಕದ ರೊಟ್ಟಿ- ಖಡಕ್ ರೊಟ್ಟಿಯ ರುಚಿಯನ್ನು ಉಣಬಡಿಸಬಹುದು. ಅದೇ ಕರಾವಳಿ-ಮಲೆನಾಡಿನವರು ನೀವಾಗಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಿದ್ದಲ್ಲಿ ಪತ್ರೊಡೆ, ತೊಡೆದೇವು, ನೀರುದೋಸೆ, ಹುಳಿಯಂತಹ ಸ್ವಾದಿಷ್ಟಕರ ಪದಾರ್ಥಗಳನ್ನು ಮಾಡಿ ಮಾರಬಹುದು. ಜತೆಗೆ ಚಕ್ಕುಲಿ, ಲಾಡು, ಹೋಳಿಗೆಯಂತಹ ತಿಂಡಿಗಳು ಯಾವತ್ತೂ ಜನರ ಬಾಯಿಗೆ ಆಹಾರವಾಗಬಲ್ಲಂತವು. ಇದಕ್ಕೆ ಮೊದಲು ನೀವು ನಿಮ್ಮ ಸುತ್ತಮುತ್ತಲಿನ ಜನರ ಅಭಿರುಚಿ, ಹವ್ಯಾಸ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸ್ವಲ್ಪ ಅಧ್ಯಯನ ಮಾಡಿಕೊಳ್ಳಬೇಕು. ಅವರನ್ನು ಚೆನ್ನಾಗಿ ಪರಿಚಯಿಸಿಕೊಳ್ಳಬೇಕು. ನಿಮ್ಮಲ್ಲಿನ ಅಡಿಗೆಯ ಕೌಶಲ ಅವರಿಗೆ ಆಹಾ! ಅನಿಸಬೇಕು. ಒಟ್ಟಿನಲ್ಲಿ ಬೇರೆ ಊರಿನ ನೀವು ಅವರಿಗೆ ಅವರಲ್ಲೊಬ್ಬರಂತೆ ಅನಿಸಬೇಕು. ಆಗ ಹೊಡಿಯುತ್ತೆ ನೋಡಿ ಜಾಕ್ಪಾಟ್.
ಇದನ್ನೂ ಓದಿ:
YouTube: ಯುಟ್ಯೂಬ್ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?
How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್
(5 unique ideas which helps to create self jobs)