ಅಲಂಕಾರಪ್ರಿಯತೆ ಅವಳ ಒಂದು ವಿಶೇಷಗುಣವಾದರೆ ಇನ್ನೊಂದು ಇದೆ, ಕೇಳಿದರೆ ನಿಮಗೆ ನಗು ಬರುತ್ತದೆ. ಅದು ಅವಳ ಕುತ್ತಿಗೆ ನೋವು. ಸ್ಥೂಲಕಾಯ, ಸೋಮಾರಿತನ, ಅನೀಮಿಯಾ ಇವೆಲ್ಲ ಕುತ್ತಿಗೆ ನೋವಿಗೆ ಕಾರಣವೆಂದು ನಮಗನಿಸಬಹುದು. ಆದರೆ ಅವಳಿಗೆ ಯಾವಾಗಲೂ ಕುತ್ತಿಗೆ ನೋವು ಇರುವುದಿಲ್ಲ. ತಮಾಷೆ ಎಂದರೆ ‘ಕಂಡರಾಗದವರ’ ನೋಡಿದರೆ, ‘ಆಗುದೇ ಇಲ್ಲ’ವಾದ ಘಟನೆಯ/ಕೆಲಸದ ನಡುವಿನಲ್ಲಿದ್ದರೆ ಕುತ್ತಿಗೆ ನೋವು ಹೆಚ್ಚುತ್ತದೆ. ಅವಳಿಗೆ ತೊಳೆಯುವುದು ಎಂದರೆ ಆಗಬರದು. ಸೊಂಟಬಾಗಿದ ಅಮ್ಮನಿಗೆ ಆ ಕೆಲಸ ವಹಿಸಲಾರಳು. ಹಾಗಾಗಿ ಬಟ್ಟೆ ರಾಶಿ ನೋಡಿದರೆ ಕುತ್ತಿಗೆ ನೋವು ಬರುತ್ತದೆ. ಸತ್ಯಗಣಪತಿ ಕತೆಯಾಗುವ ಮನೆಗೆ ಹೋಗಲು ಖುಷಿ. ಆದರೆ ಎಷ್ಟೊತ್ತಾದರೂ ಮಂಗಳಾರತಿ ಆಗದೇ ಕೇಳಿದ್ದೇ ಕತೆ ಕೇಳುವಾಗ ಕುತ್ತಿಗೆ ನೋವು ಬಂದುಬಿಡುತ್ತದೆ. ಹಬ್ಬದ ಊಟವಾದ ಬಳಿಕ ಅಡುಗೆ ಮನೆಯ ರಂಪ ನೋಡಿದರೆ ಕುತ್ತಿಗೆ ನೋವು ಬರುತ್ತದೆ. ಪಟಪಟ ಮುಗಿಯದೆ ಎಳೆಯುತ್ತ ಹೋಗುವ ಕೆಲಸ ಎಂದರೆ ಕುತ್ತಿಗೆ ನೋವು ಬರುತ್ತದೆ.
*
ಅಗೋ ನೋಡಿ, ನಮ್ಮ ಡೌಟಮ್ಮ ಬಂದಳು. ವಾರಕ್ಕೊಮ್ಮೆಯಾದರೂ ತನ್ನ ಡೌಟುಗಳೆಂಬ ಬಾಣಗಳನ್ನು ಪ್ರಶ್ನೆಯ ಬತ್ತಳಿಕೆಯಿಂದ ತೆಗೆದು, ನಗೆಮೊಗವೆಂಬ ಸಿಹಿರಸವನ್ನು ಬಾಣದ ತುದಿಗೆ ಹಚ್ಚಿ ಬಿಡಲು ಬರುವಳು. ಕೊರೋನಾ ಸಮಯದಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ ವಿಸಿಟರ್ ಅಂತ ನಾವೇನಾದರೂ ಬಹುಮಾನ ಇಟ್ಟರೆ ಖಂಡಿತಾ ಅದು ಡೌಟಮ್ಮನಿಗೇ ಸಲ್ಲಬೇಕು. ಬೇಕಿದ್ದನ್ನು ಮಾತ್ರ ಓದದ, ಬೇಡದ್ದನ್ನು ನಾಲ್ಕಾರು ಸಲ ಓದಿ ನಂಬುವ ಅವಳು ಕೊರೊನಾ ಶುರುವಾದಾಗಿನಿಂದ ಹೆಚ್ಚುಕಮ್ಮಿ ವಾರದ ಅತಿಥಿಯಾಗಿದ್ದಾಳೆ. ಅಂತೆಕಂತೆ ಗಾಳಿಸುದ್ದಿಗಳು ಸಾಕ್ಷ್ಯಾಧಾರ ಸಮೇತ ಜನರ ನಡುವೆ ಹೇಗೆಲ್ಲ ಓಡಾಡುತ್ತಿವೆ ಎಂದು ತಿಳಿಯಲು ಸಹಾಯವಾಗಿದ್ದಾಳೆ. ಕೆಲವೊಮ್ಮೆ ಡೌಟುಗಳು ಅವಳಿಗೆ ಸಹಾಯ ಮಾಡಿವೆ. ಎಲ್ಲೆಲ್ಲೋ ಹಾದು ಢಿಕ್ಕಿ ಹೊಡೆಯುವುದು ತಪ್ಪಿ ಅಪಾಯದಿಂದ ಪಾರಾಗಿದ್ದಾಳೆ. ಮತ್ತೆ ಹಲವೊಮ್ಮೆ ಅವಳು ನಂಬುವ ದೇವರೇ ಬೆಟ್ಟು ತೋರಿಸಿ ನೋಡಲ್ಲಿ ಎಂದರೂ ಅತ್ತ ಹೋಗದೇ ಗೊಂದಲದ ಗೂಡಲ್ಲಿ ಉಳಿದುಬಿಟ್ಟಿದ್ದಾಳೆ. ಕೊರೊನಾ ಕಾಲವು ಅವಳ ಸ್ವಭಾವವನ್ನು ಮತ್ತಷ್ಟು ಸ್ಫುಟಗೊಳಿಸಿದೆ ಎನ್ನಬಹುದು.
ಮೊದಮೊದಲು, ‘ನಂಗೊಂದು ಡೌಟು ಮೇಡಂ, ಕೊರೊನಾ ಅಂತ ರ‍್ವಾಗ ಎಂಥದೂ ಇಲ್ಲಂತೆ. ಸರ್ಕಾರದರು ಜನ ಟ್ರೈಕ್ ಮಾಡಬಾರ್ದಂತ ಏನೋ ಹೇಳುದಂತೆ ಹೌದಾ?’ ಎಂಬ ಪ್ರಜ್ಞಾವಂತ ಡೌಟಿನಿಂದ ನನ್ನ ಗಮನ ಸೆಳೆದಳು. ಬರಬರುತ್ತ ‘ಇಲ್ಲೆಲ್ಲ ಅಲ್ಲಂತೆ, ಅಲ್ಲಿ ಬ್ಯಾರೇ ದೇಶದಲ್ಲಿ ಮಾತ್ರ ಬಂದಿರುದಂತೆ. ಚೀನದರು ಮಬೈಲಲ್ಲು ಕಳುಸ್ತರಂತೆ. ಅದ್ಕೆ ನಾನು ಗೇಮೆಲ್ಲ ಡಿಲೀಟ್ ಮಾಡ್ದೆ, ಹೌದಾ?’ ಎಂದು ಕೇಳಿದಳು. ‘ಅದುಕೆ ಇಂಗ್ಲಿಷ್ ಮದ್ದು ಏನೂ ಇಲ್ಲಂತೆ. ಮದ್ದೇ ಬ್ಯಾಡ ಅಂತಾರಂತೆ. ಕೊರೊನಾಗೆ ಆಯುರ್ವೇದಿಕ, ಹೋಮಿಪತಿ ಮದ್ದೇ ಇರುದು ಅಂತಾರೆ. ಹೌದಾ?’ ಎಂದು ಸಂಶೋಧನೆ ಮುಂದುವರೆಸಿದಳು. ‘ಆ ಜಾತ್ಯರು ಇದಾರ್ ನೋಡಿ, ಕಾಗೆ ತರ, ಅವ್ರಿಂದನೆ ಬಂದಿರದು ಅಂತಾರೆ, ಹೌದನ್ರ?’ ಎಂದು ತನ್ನ ಇಂದಿನ ಕಷ್ಟಗಳಿಗೆ ಹೊಸ ಕಾರಣಗಳಿವೆ ಎಂಬ ಅನುಮಾನ ಹೊತ್ತು ಬಂದಳು.
‘ಆಫೀಸಲ್ಲಿ ಪದೆಪದೆ ಕೊರೊನ ಟೆಸ್ಟ್ ಕೊರೊನ ಟೆಸ್ಟ್ ಅಂತಾರೆ ಮೇಡಂ. ನಾ ಇದುತಂಕ ಒಂದೇಸಲ ಮಾಡ್ಸಿರದು. ಅವತ್ ಟೆಸ್ಟ್ ಮಾಡುವಾಗ ಮೂಗಿಗೆ ಕಡ್ಡಿ ಹಾಕಿ ತಿಪ್ಪದ ನೋಡಿ, ಅವತ್ಲಿಂದ ತಂಡಿ ಗುಣನೇ ಇಲ್ಲ. ಟೆಸ್ಟ್ ಮಾಡಿದ್ರ್ಲೆ ಕೊರೊನ ಬತ್ತದೆ ಅಂತಾರಪ್ಪ, ಹೌದಾ?’
‘ನಂಗೊಂದ್ ಡೌಟು, ಇಲ್ಲಾದರಿಗೆ ಆಮೇಲೆ ಹೌದು ಅಂತಾರಂತೆ, ಹೌದು ಅಂದರ‍್ಗೆ ಇಲ್ಲ ಅಂತಾರಂತೆ, ಹಂಗ್ಯಾಕೆ?’
ಅವಳ ಆರಂಭದ ಡೌಟುಗಳು ಕೊರೊನಾ ಎನ್ನುವ ಕಾಯಿಲೆಯೇ ಇಲ್ಲ ಎನ್ನಲು ಬಂದವು. ಆಮೇಲೆ ಇದೆ, ಆದರೆ ಇಲ್ಲಿ ಇಲ್ಲ, ಎಲ್ಲೋ ಇದೆ ಎಂದವು. ಬಳಿಕ ಇಲ್ಲಿ ಬಂದರೂ ಪರೀಕ್ಷೆ ಸರಿ ಇಲ್ಲ ಎನ್ನುವ ಡೌಟು. ‘ಬರಿ ಕ್ರೋಸಿನ್ ಅಷ್ಟೆ ಕೊಡುದಂತೆ. ಅಷ್ಟುಕ್ ಇಷ್ಟೆಲ್ಲ ಯಂತಕ್ಕೆ ಮೇಡಂ?’ ಎಂದು ಚಿಕಿತ್ಸೆ ಬಗ್ಗೆ ಡೌಟು ತಳೆವಳು. ಕೊರೊನಾ ಎಂದರೆ ತಂಡಿ. ಹಾಗಾಗಿ ಸೆಕೆ ಆದಷ್ಟೂ ಒಳ್ಳೆಯದು. ತಂಡಿ ಆಗಬಾರದೆಂದರೆ ಬಿಸಿಬಿಸಿ ನೀರು ಕುಡಿಯಬೇಕು, ದಿನಾ ಬಿಸಿಬಿಸಿ ನೀರಿನ ಹಬೆ ಸೇದಬೇಕು. ಎಸಿಗಿಸಿ ಕೇಳಬಾರದು. ಫ್ರಿಜ್ಜಿನಲ್ಲಿರುವುದನ್ನು ಬಳಸಬಾರದು. ರಾಗಿ, ಸೌತೆ, ಕಲ್ಲಂಗ್ಡಿ, ಮಜ್ಜಿಗೆ, ಬಸಳೆಯಂತಹ ತಂಪು ವಸ್ತುಗಳನ್ನು ಬಳಸಬಾರದು. ಅವಳ ಪ್ರಕಾರ ಐಸ್ಕ್ರೀಮು ಗರಮಿಯಂತೆ! ಅದು ಅಡ್ಡಿಯಿಲ್ಲವಂತೆ! ದಿನಚರಿ, ಆಹಾರ ಬದಲಾವಣೆ ಮಾಡಿಕೊಂಡ ಬಳಿಕ ಅವಳ ತುದಿಮೊದಲಿರದ ಡೌಟುಗಳು ಈಗ ಲಸಿಕೆಗೆ ಬಂದು ನಿಂತಿವೆ.
‘ಲಸಿಕೆ ಅಂದ್ರೆ ಟಿಟಿ ಅಲ್ವ ಮೇಡಂ? ನೀವ್ ಬೈದ್ರು ನಾನು ಆರ‍್ತಿಂಗ್ಳಿಗೊಂದ್ ಟಿಟಿ ತಕಂತೆ. ಅದ್ ಸಾಕಾಗುದಿಲ್ವ?’
‘ಎರ‍್ಡು ತಿಂಗಳಾಯ್ತು, ನಮ್ಮಕ್ಕಂಗೆ ಕೊರೊನಾ ಲಸಿಕೆ ತಗಂಡ್ಮೇಲೆ ಕೈಯೇ ಎತ್ತುಕಾಗುದಿಲ್ಲ ಅಂತೆ. ತಗಂಡದ್ದು ಎಡಗೈಗೆ, ಆದ್ರೆ ಇವ್ಳಿಗೆ ಬಲಗೈ ನೋವಾಗದೆಯಂತೆ. ಹಂಗಾಗ್ತದೆಯ?’
‘ಅರವತ್ ವರ್ಷದ್ ಇಂಜೆಷನ್ ಅಂತ ಹೇಳಿ ಕೊಟ್ಟಿದ್ರು ಮದ್ಲೆಲ್ಲ. ಈಗ ನಲವತ್ತೈದು ವರ್ಷದ್ದು ಅಂತಿದಾರೆ. ನಂಗೆ ಬರು ತಿಂಗ್ಳಿಗೆ ನಲವತ್ತೈದಾಗ್ತದೆ. ಲಸಿಕೆ ತಗಂಡು ಬೆಗ್ನೆ ಪ್ರಾಯ ಹೋಗುದಾ ಹೆಂಗೆ?’
‘ಮುಟ್ಟಾದಾಗ ತಕಬಾರ್ದು ಅಂತ್ರಲೆ? ನಂ ಆಪೀಸಲ್ಲಿ ಒಬ್ರಿಗೆ ಅದು ತಕಂಡ್ ಮೇಲೆ ಮುಟ್ಟೇ ನಿಂತೋಯ್ತು. ಅವ್ರಿಗೆ ಐವತ್ ವರ್ಸಾದ್ರೂ ಎಲ್ಲಾರ ಅವಾಗಿವಾಗ ಆಯ್ತಿತ್ತಂತೆ. ಈಗ ಇದ್ ತಗಂಡ್ ಮೇಲೆ ಬಂದ್ ಬಿದ್ದದೆ.’
‘ನಿನ್ನೆ ನಂ ಬಾವ್ನ ಹೆಂಡ್ತಿ ನಾಯಿಮರಿ ಹತ್ರ ಚ್ಯಾಷ್ಟಿ ಮಾಡ್ತ ಕಾಲುಗುರು ಬಗ್ಗೇಲಿ ತರಚದೆ. ಕೊರೊನ ಇಂಜೆಷನ್ ತಕಂಬುಕೆ ಅಡ್ಡಿಲ್ವ? ಪಥ್ಯ ಏನಾರಾ ಮಾಡ್ಬೇಕಾ ಕೇಳ್ಕಬಾ ಅಂದದೆ.’
‘ಮೇಡಂ, ಲಸಿಕೆ ತಕಂಡ್ರೇನ ಆರು ತಿಂಗ್ಳು ಬಸರಿ ಆಗಂಗಿಲ್ಲಂತೆ? ನಂ ಹುಡುಗಿ ಮದುವೆ ಮಾಡುವಾ ಅಂದಿ. ಮತ್ ಹುಡ್ರಾದ್ರೆ ತ್ರಾಸಾಯ್ತದ ಏನ? ಅನಪಮ್ನರ ಕೇಳ್ಕಬಾ ಅಂತ ದಿನ್ನಾ ಕೂಗ್ತದೆ.’
‘ಮೊದಲ್ನೆ ಡೋಸ್ ತಕಂಡಿ ೮೫ ದಿನ ಆದ್ಮೇಲೆ ಎರಡ್ನೇದು ಅಂದ್ರು. ನಡುಮಧ್ಯ ನಮ್ಮಣ್ಣಗೆ ಕೊರೊನ ಬಂತು. ಇನ್ ಮೂರ‍್ತಿಂಗ್ಳು ಇಂಜೆಷನ್ ಬ್ಯಾಡ ಅಂದಾರೆ. ೮೫ ದಿನ ತಪ್ಪೋಗಿ ಅದ್ರ ಪವರ್ರು ಹೋಗುದಿಲ್ವ?’
‘ಎಡಗೈ ಮ್ಯಾಲೆ ಲಸಿಕೆ ಹಾಕುದಂತೆ. ಬಲಗೈಗೆ ತಕಂಡ್ರೆ ಏನಾಗ್ತದೆ?’
‘ಲಸಿಕೆ ಕಲೆ ಉಳೀತದ? ಕಲೆ ಕಾಣುದಾರೆ ಹೇಸ್ಗೆ, ನಾ ತಕಳುದಿಲ್ಲ’
‘ಮೇಡಂ, ಎರ‍್ಡು ಲಸಿಕೆ ಬಂದದಂತಲ್ಲ, ಯಾವ್ದು ಲಾಯ್ಕು? ಕೋವಿಶೀಲ್ಡ ಕೋವ್ಯಾಖ್ಸಿನ್ನ?’
ಇದೇ ಮುಂತಾಗಿ ಡೌಟುಗಳ ಕಾಡಿನಲ್ಲಿ ಅಲೆಯುತ್ತ ಕಳೆದು ಹೋಗಿದ್ದಳು ನಮ್ಮ ಗೆಳತಿ. ಇಂಥ ಪ್ರಶ್ನೆಗಳಲ್ಲಿ ಎಷ್ಟು ಅವಳಿಗೆ ನೇರ ಸಂಬಂಧಿಸಿದ್ದು ನೀವೇ ನೋಡಿ. ಸುಮ್ಮನೆ ಅವರಿವರು ಹೇಳುವ ಅಂತೆಕಂತೆ, ವಾಟ್ಸಪ್ ವಿಶ್ವವಿದ್ಯಾಲಯದ ತಲೆಬುಡವಿಲ್ಲದ ಸಂಶೋಧನೆಗಳ ಬೆಂಬತ್ತಿ ಬರುವಳು. ಅವಳಿಗೆ ನನ್ನ ಮಾತಿನ ಮೇಲಿಗಿಂತ ಆ ಗಾಳಿ ಸುದ್ದಿಗಳ ಸಲಹೆಗಳ ಮೇಲೇ ಹೆಚ್ಚು ನಂಬಿಕೆ ಅನಿಸುತ್ತಿತ್ತು. ಅದೇನೇ ಆದರೂ ವ್ರತದಂತೆ ಡಬಲ್ ಮಾಸ್ಕ್ ತೊಡುವಳಲ್ಲ, ಹೋಗಲಿ ಎಂದವಳಿಗೆ ಎರಡು ನಿಮಿಷದಲ್ಲಿ ಉತ್ತರಿಸಿ ಮುಗಿಸುತ್ತಿದ್ದೆ. ಅವಳಿಗೆ ಎರಡು ನಿಮಿಷ ಹೇಳಿದರೂ ಒಂದೇ, ಇಪ್ಪತ್ತು ನಿಮಿಷ ಹೇಳಿದರೂ ಒಂದೇ. ಎಲ್ಲವನ್ನೂ ಕೇಳಿಮುಗಿದ ಮೇಲೆ ಮತ್ತೆ ಬುಡದ ಪ್ರಮೇಯಕ್ಕೇ ಬಂದು, ‘ಎಲ್ರೂ ಹೇಳ್ತಾರಪ್ಪ..’ ಅಂತ ಪ್ಲೇಟು ಮರು ತಿರುವಿ ಹಾಕುವಾಗ ನಾನು ವಿದಾಯದ ನುಡಿ ಹೇಳಿ ಮುಗಿಸುತ್ತೇನೆ. ಅವಳು ಪಾಪದವಳು, ಆದರೆ ಸಾಮಾನ್ಯಜ್ಞಾನ ಬಳಸದೇ ಮೂರ್ಖಳಂತೆ ಕಾಣುವಳು. ಬೈದರೆ ಬೈಸಿಕೊಳ್ಳುತ್ತಾಳೆ. ಕುಟುಕಿದರೂ ತಿಳಿಯುವುದಿಲ್ಲ. ಕೇಡು ಮಾಡಲು ಬರುವುದಿಲ್ಲ. ಅದಕ್ಕೇ ನೀವು ಅವಳ ಮೇಲೆ ಕೋಪಿಸಿಕೊಳ್ಳಲಾರಿರಿ. ಹಾಗಂತ ನಿಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಅವಳನ್ನು ಬದಲಿಸಲಾರಿರಿ. ಅವಳು ತನಗನಿಸಿದಂತೆಯೇ ಮಾಡುವವಳು. ಅವಳಿಗೆ ಹೇಳಿದರೆ ಅರ್ಧ ತಾಲೂಕಿಗೇ ಹೇಳಿದಂತೆ ಆಗುವುದರಿಂದ ಡೌಟುಗಳಿಗೆ ನನಗೆ ತಿಳಿದ ಉತ್ತರ ಹೇಳುತ್ತೇನೆ.
ಡೌಟಮ್ಮನ ಡೌಟುಗಳ ಬಗ್ಗೆಯಷ್ಟೇ ಹೇಳಿದರೆ ತಪ್ಪಾಗುತ್ತದೆ.
ಕೋವಿಡ್ ನಿಯಮಾವಳಿಗಳು ಬಂದು ಮಾಸ್ಕ್ ಹಾಕಲೇಬೇಕು ಎಂದದ್ದಕ್ಕೆ ಹಲವರಿಗೆ ಕಿರಿಕಿರಿಯಾಗಿದೆ. ಆದರೆ ಯಾರಿಗಾದರೂ ತುಂಬ ಖುಷಿಯಾಗಿದ್ದರೆ ಅದು ನಮ್ಮ ಇವಳಿಗೆ ಎನ್ನಬಹುದು. ಯಾಕೆಂದರೆ ಮೂವತ್ತು ವರ್ಷವಾಗುವುದರಲ್ಲಿ ಫೇಶಿಯಲ್ ಪಾಲ್ಸಿ ಎನ್ನುವ ಮುಖ ವಾರೆ ತಿರುಗಿಸುವ ನರದ ಸಮಸ್ಯೆ ಬಂದು ತೀರದ ಮುಜುಗರ ಅನುಭವಿಸುತ್ತಿದ್ದಳು. ಮಾತನಾಡುವಾಗ ಎಳೆದೆಳೆದುಕೊಂಡು ಒಂದು ಬದಿಗೆ ಹೋಗುವ ಮುಖವು ಕನ್ನಡಿಯಲ್ಲಿ ಹೇಗೆ ಕಾಣುವುದೆಂದು ನೋಡಿದಮೇಲೆ ಅವಳಿಗೆ ತನ್ನ ಮುಖ ನೋಡಿಕೊಳ್ಳಲು ತನಗೇ ಅಸಹ್ಯವೆನಿಸಿತ್ತಂತೆ. ಬರಬರುತ್ತ ಹೆಚ್ಚುತ್ತ ಹೋಗಿರುವ ಮುಖದ ವಾರೆಯನ್ನು ಹೇಗೆ ಮುಚ್ಚಿಡುವುದು ಎನ್ನುವುದೇ ಅವಳಿಗೆ ದೊಡ್ಡ ಸಮಸ್ಯೆಯಾಗಿ ಹೋಗಿತ್ತು.
ಮೊದಲಿನಿಂದ ತನ್ನ ಅಂದ, ಚಂದದ ಬಗೆಗೆ ಅವಳಿಗೆ ತೀರ ಗಮನ. ಹದಿವಯಸ್ಸಿನ ಮಗಳಿಗಿಂತ ಇವಳಿಗೇ ತನ್ನ ಚಂದದ ಚಿಂತೆ ಹೆಚ್ಚು. ಮುಖದ ಮೇಲೊಂದು ಮೊಡವೆ ಕೆಂಪಾದರೆ, ಕಲೆಯಾದರೆ, ಕೂದಲು ಉದುರಿದರೆ, ಕೂದಲು ಬಿಳಿಯಾಗತೊಡಗಿದರೆ, ಉಗುರಿನ ಮೇಲೊಂದು ಚುಕ್ಕಿಯಾದರೆ, ಹಿಮ್ಮಡಿ ಒಡೆದರೆ ಅದೆಲ್ಲಕ್ಕೂ ಔಷಧಿ ಮಾಡಬೇಕೆಂದು ತಿಳಿದು ಧಾವಿಸಿ ಬರುವಳು. ಅವಳ ಜೊತೆಯಲ್ಲೇ ಇರುವ ತಾಯಿ ಮನೆಗೆಲಸವನ್ನು ನೋಡಿಕೊಳ್ಳುವುದರಿಂದ, ಇಬ್ಬರು ಮಕ್ಕಳು ಬೆಳೆದು ದೊಡ್ಡವರಾಗಿರುವುದರಿಂದ ಆಫೀಸು ಮುಗಿಸಿದ ಮೇಲೆ ಮನೆಗೆ ಹೋಗುವ ಅವಸರವೇನೂ ಇರುವುದಿಲ್ಲ. ಹಾಗಾಗಿ ನಮಗೆ ಪದೇಪದೇ ಅವಳ ದರ್ಶನವಾಗುತ್ತದೆ.
ಅವಳು ಓದಿದ್ದು ಏಳನೆ ಇಯತ್ತೆವರೆಗೆ ಮಾತ್ರ. ಕೆಲಸ ಮಾಡುವುದು ಅರಣ್ಯ ಇಲಾಖೆಯ ಕಚೇರಿಯಲ್ಲಿ, ಸಹಾಯಕಳಾಗಿ. ಗಾರ್ಡನಾಗಿದ್ದ ಗಂಡ ಕಾಡುಗಳ್ಳರ ಗುಂಡಿಗೆ ಬಲಿಯಾಗಿ ಸತ್ತ ಮೇಲೆ ಅನುಕಂಪದ ಆಧಾರದಲ್ಲಿ ನೌಕರಿ ಪಡೆದಿದ್ದಳು. ಆಫೀಸಿಗೆ ಹೋಗುವಂತಾದ ಮೇಲೆ ಅವಳ ಅಲಂಕಾರದಲ್ಲಿ ಆಸಕ್ತಿ ಹೆಚ್ಚಾಯಿತು. ಹೆಚ್ಚುತ್ತಲೇ ಇರುವ ತನ್ನ ತೂಕವೊಂದನ್ನು ಬಿಟ್ಟು ದೇಹದ ಪ್ರತಿ ಬದಲಾವಣೆಯನ್ನೂ ಗಮನಿಸುವಳು. ಹದಿನೈದು ದಿನಕ್ಕೊಮ್ಮೆ ಪಾರ್ಲರಿಗೆ ಹೋಗಿ ಹುಬ್ಬು ತೀಡಿಸಿಕೊಳ್ಳದಿದ್ದರೆ ಅವಳಿಗೆ ಕನ್ನಡಿಯಲ್ಲಿ ತನ್ನ ಮುಖ ನೋಡಲಾಗುವುದಿಲ್ಲ. ಫೇರ‍್ನೆಸ್ ಕ್ರೀಂ, ಐ ಲೈನರ್, ಮುಖದ ಕಲೆ ಗೊತ್ತಾಗದಂತೆ ಲಾಕ್ಮೆಯ ಯಾವ್ಯಾವುದೋ ಲೋಷನ್ನುಗಳು, ಬಣ್ಣಬಣ್ಣದ ಹೊಳೆವ ಟಿಕ್ಲಿಗಳು, ಲಿಪ್‌ಸ್ಟಿಕ್, ಸೆಂಟು ಮುಂತಾಗಿ ಅವಳ ಪ್ರಸಾಧನ ಆಸಕ್ತಿಗೆ ಎಷ್ಟು ಖರ್ಚು ಮಾಡುವಳೋ ಗೊತ್ತಿಲ್ಲ. ಗಂಡನಿಲ್ಲದವಳ ಅಲಂಕಾರ ಕಂಡು ಮನೆಗೆಲಸದಲ್ಲಿ ಮುಳುಗಿ ಬೇಸತ್ತ ಅವಳ ಕೇರಿಯ ಗೃಹಿಣಿಯರು ಅಸೂಯೆ ಪಟ್ಟು ಮೂದಲಿಸುವರು. ‘ಸಂಬ್ಳ, ಗಿಂಬ್ಳ, ಗಂಡನ ಪೇನ್ಶನ್ನು, ಇಪ್ಪತ್ತು ಗುಂಟೆ ತ್ವಾಟ’ದ ಆದಾಯನೆಲ್ಲ ಚಂದ ಮಾಡ್ಕಳುಕೆ ಕಳೀತದೆ’ ಎಂದು ಬೆನ್ನುಡಿಯಾಡುವರು. ಆದರೆ ಅದಕ್ಕೆಲ್ಲ ಮೈಟ್ ಮಾಡುವಳಲ್ಲ ಇವಳು. ಹೊಸಹೊಸ ವಿನ್ಯಾಸದ ಸೀರೆ, ಅದಕ್ಕೆ ಹೊಂದುವ ಬ್ಲೌಸು, ಅದಕ್ಕೆ ಲೇಸು-ಮಣಿ-ಡಿಸೈನು, ಕುತ್ತಿಗೆಯ ಮಣಿಸರ, ಓಲೆಯಲ್ಲದೆ ಕಿವಿಯಲ್ಲಿರುವ ನಾಲ್ಕು ತೂತುಗಳಿಗೆ ಬುಗುಡಿ, ಪಿಲ್ಲಿ, ಕೈಗೆ ಚಿನ್ನದ ಬಳೆ, ಎರಡೂ ಕೈಯ ಮೂರುಮೂರು ಬೆರಳುಗಳಿಗೆ ಉಂಗುರ ಮುಂತಾಗಿ ತೃಪ್ತಿಯಾಗುವಷ್ಟು ಅಲಂಕಾರ ಮಾಡಿಕೊಳ್ಳುವಳು.
ಬದುಕಲು ತನ್ನ ಸಂಬಳವನ್ನೇ ಅವಳೇನು ನೆಚ್ಚಿಲ್ಲ ಎನ್ನುವುದು ನಿಜ. ಗಂಡನ ಪಿಂಚಣಿ, ಇಪ್ಪತ್ತು ಗುಂಟೆ ತೋಟದ ಆದಾಯವಿದೆ. ಸಾಹೇಬರ ಕೋಣೆಯ ಒಳಗೆ ಜನರನ್ನು ಬಿಡುವವಳು, ಫೈಲು ತಂದು ಸಹಿ ಮಾಡಿಸಿ ಕೊಂಡೊಯ್ಯುವವಳು, ಸಾಹೇಬರೊಡನೆ ವ್ಯವಹರಿಸಬೇಕಾದ ಸೂಕ್ಷ್ಮಗಳನ್ನು ತಿಳಿಸುವವಳು ಇವಳೇ ಆದ್ದರಿಂದ ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ಮೆಚ್ಚಿಗೆಯಿಂದ ಕಾಣಿಕೆ ಕೊಟ್ಟು ಹೋಗುತ್ತಾರೆ. ಅದಲ್ಲದೆ ಅವಳ ಸಾಹೇಬರು ತಮಗೆ ಇಟ್ಟದ್ದು, ಕೊಟ್ಟದ್ದರಲ್ಲಿ ಕಾರಿನ ಡ್ರೈವರು ಮಹೇಶನಿಗೆ, ಇವಳಿಗೆ ಮತ್ತು ಆಫೀಸಿನ ಪೀವನ್ನಿಗೆ ಅಷ್ಟಿಷ್ಟು ಹಂಚುತ್ತಾರೆ. ಇದೆಲ್ಲ ವರಮಾನವು ಅವಳ ಸಂಬಳದ ಮೂರ‍್ನಾಲ್ಕು ಪಟ್ಟು ಹೆಚ್ಚೇ ಆಗುವುದು.
ಇಂತಹ ಕಾಯಮೋಹಿಗೆ ಒಂದು ಚಳಿಗಾಲದ ನಸುಕು ಮಂಗಳೂರಿಗೆ ಹೋಗಿಬಂದ ಬಳಿಕ ಮುಖ ಒಂದುಕಡೆ ವಾರೆಯಾಗಿ ಹೋಯಿತು. ಅವಳಿಗೆ ತನ್ನ ದೇಹ ಸೌಂದರ್ಯದ ಬಗೆಗೆ ತುಂಬ ಅಭಿಮಾನ. ಎಷ್ಟೋ ಹೀರೋಯಿನ್ನುಗಳು ತನ್ನಷ್ಟು ಚೆನ್ನಾಗಿಲ್ಲ, ಅವಕಾಶ ಸಿಕ್ಕಿದ್ದರೆ ನಾನು ನಂಬರ್ ವನ್ ಆಗುತ್ತಿದ್ದದ್ದರಲ್ಲಿ ಸಂಶಯವಿಲ್ಲ ಎಂದು ಅವಳ ಅಲಂಕಾರದ ಬಗೆಗೆ ನಾನು ಛೇಡಿಸಿದಾಗೊಮ್ಮೆ ಹೇಳಿದ್ದಳು. ಅಷ್ಟು ಚಂದ ಇದ್ದದ್ದಕ್ಕೇ ಬರಿಯ ಏಳನೆಯ ಕ್ಲಾಸು ಓದಿದ್ದ ಬಡವರ ಮನೆಯ ತನಗೆ ಫಾರೆಸ್ಟ್ ಗಾರ್ಡು ಗಂಡು ಸಿಕ್ಕಿದ್ದೆಂದು ನಂಬಿದ್ದಳು. ಅಂತಹ ಸೌಂದರ್ಯಕ್ಕೆ ಕುಂದುತಂದ ಮುಖದ ವಾರೆತನ ಅವಳ ನಿದ್ರೆಗೆಡಿಸಿತ್ತು.
ಆದರೆ ಈಗ ಮಾಸ್ಕು ಬಂದಮೇಲೆ ಅವಳ ಸಮಸ್ಯೆ ಅರ್ಧ ಕಡಿಮೆಯಾಗಿದೆ. ಒಳ್ಳೆಯ ಮಾಸ್ಕು ಹಾಕಿದರೆ ಮುಖದ ವಾರೆ ಸ್ವಲ್ಪವೂ ಗೊತ್ತಾಗುವುದಿಲ್ಲ! ಕಣ್ಣು ಕಿರಿದಾಗುವುದು ಕಂಡರೂ ಅದನ್ನು ದೃಷ್ಟಿ ತಿರುಗಿಸಿ ನಿಭಾಯಿಸಬಹುದು. ಹೀಗಾಗಿ ಮಾಸ್ಕಿನ ಮೇಲೆ ಅತಿ ಪ್ರೀತಿ ಬೆಳೆದು ಹೋಯಿತು. ಗುರು ಸಾಯಿಬಾಬಾ ತನಗಾಗಿ ಕೊರೊನಾ ಕಳಿಸಿ ಮಾಸ್ಕ್ ತೊಡುವುದನ್ನು ಹೇಳಿಕೊಟ್ಟಂತೆ ಭಾಸವಾಯಿತು. ಚಂದಚಂದದ, ಬಣ್ಣಬಣ್ಣದ ಮಾಸ್ಕುಗಳನ್ನು ಕೊಂಡಳು. ಸೀರೆಗೆ ತಕ್ಕ ಬಣ್ಣದ ಮಾಸ್ಕು ಹಾಕುವಳು. ಮನೆಗೆ ಬಂದರೂ ಮಾಸ್ಕು ತೆಗೆಯಲು ಖುಷಿಯೇ ಇಲ್ಲ. ಉಳಿದವರಿಗೆ ಮಾಸ್ಕಿನ ಬಗೆಗೆ ನಾವು ನೆನಪಿಸಬೇಕಾದರೆ ಇವಳು ಹಾಗಲ್ಲ. ಇವತ್ತು ಜಾಂಬಳೆ ಬಣ್ಣದ ಬಾರ್ಡರ್ ಇರುವ ಹಳದಿ ಸೀರೆ ಉಟ್ಟಿದ್ದಾಳೆ. ಅದಕ್ಕೆ ಹೊಂದುವ ಜಾಂಬಳೆ ಬಣ್ಣದ ಮಾಸ್ಕು ತೊಟ್ಟು ಬಂದಿದ್ದಾಳೆ.
ಅಲಂಕಾರಪ್ರಿಯತೆ ಅವಳ ಒಂದು ವಿಶೇಷಗುಣವಾದರೆ ಇನ್ನೊಂದು ಇದೆ, ಕೇಳಿದರೆ ನಿಮಗೆ ನಗು ಬರುತ್ತದೆ. ಅದು ಅವಳ ಕುತ್ತಿಗೆ ನೋವು. ಸ್ಥೂಲಕಾಯ, ಸೋಮಾರಿತನ, ಅನೀಮಿಯಾ ಇವೆಲ್ಲ ಕುತ್ತಿಗೆ ನೋವಿಗೆ ಕಾರಣವೆಂದು ನಮಗನಿಸಬಹುದು. ಆದರೆ ಅವಳಿಗೆ ಯಾವಾಗಲೂ ಕುತ್ತಿಗೆ ನೋವು ಇರುವುದಿಲ್ಲ. ತಮಾಷೆ ಎಂದರೆ ‘ಕಂಡರಾಗದವರ’ ನೋಡಿದರೆ, ‘ಆಗುದೇ ಇಲ್ಲ’ವಾದ ಘಟನೆಯ/ಕೆಲಸದ ನಡುವಿನಲ್ಲಿದ್ದರೆ ಕುತ್ತಿಗೆ ನೋವು ಹೆಚ್ಚುತ್ತದೆ. ಅವಳಿಗೆ ತೊಳೆಯುವುದು ಎಂದರೆ ಆಗಬರದು. ಸೊಂಟಬಾಗಿದ ಅಮ್ಮನಿಗೆ ಆ ಕೆಲಸ ವಹಿಸಲಾರಳು. ಹಾಗಾಗಿ ಬಟ್ಟೆ ರಾಶಿ ನೋಡಿದರೆ ಕುತ್ತಿಗೆ ನೋವು ಬರುತ್ತದೆ. ಸತ್ಯಗಣಪತಿ ಕತೆಯಾಗುವ ಮನೆಗೆ ಹೋಗಲು ಖುಷಿ. ಆದರೆ ಎಷ್ಟೊತ್ತಾದರೂ ಮಂಗಳಾರತಿ ಆಗದೇ ಕೇಳಿದ್ದೇ ಕತೆ ಕೇಳುವಾಗ ಕುತ್ತಿಗೆ ನೋವು ಬಂದುಬಿಡುತ್ತದೆ. ಹಬ್ಬದ ಊಟವಾದ ಬಳಿಕ ಅಡುಗೆ ಮನೆಯ ರಂಪ ನೋಡಿದರೆ ಕುತ್ತಿಗೆ ನೋವು ಬರುತ್ತದೆ. ಪಟಪಟ ಮುಗಿಯದೆ ಎಳೆಯುತ್ತ ಹೋಗುವ ಕೆಲಸ ಎಂದರೆ ಕುತ್ತಿಗೆ ನೋವು ಬರುತ್ತದೆ.
ಅವಳೊಂದು ವಿಚಿತ್ರ ಹೇಳಿದಳು, ಅವಳಿಗೆ ಆಗದವರನ್ನು ನೋಡಿದರೂ ಕುತ್ತಿಗೆ ನೋವು ಬರುವುದಂತೆ. ಅದರಲ್ಲೂ ಮುದುಕರನ್ನು ನೋಡಿದರೆ ಹೆಚ್ಚು. ಅವಳಿಗೆ ಬಸ್ಸು, ಬಂಕು, ಆಫೀಸು ಎಲ್ಲೆಲ್ಲು ಕಾಣುವ ನಮ್ಮ ಮುದುಕ ಜನನಾಯಕರ ಫೋಟ ನೋಡಿದರೆ ಕುತ್ತಿಗೆ ನೋವು ಬರುವುದಂತೆ!
‘ಏ ಮಾರಾಯ್ತಿ, ಅವ್ರೆಲ್ಲ ಮುದುಕರಲ್ಲ, ಹೆಂಗ್ ರಾಜಕೀಯ ಮಾಡ್ತಿದಾರೆ ನೋಡು. ಇದೆಂಥ ಕುತ್ಗೆ ನೋವು ನಿನ್ದು? ಹೀಗಂತ ಎಲ್ಲಾದ್ರೂ ಹೇಳೀಯಾ, ವಿರೋಧಿಗಳ ಪಟ್ಟಿಗೆ ಸೇರಿಸ್ತಾರೆ ನೋಡು’ ಎಂದು ಹೆದರಿಸಿದೆ. ‘ಇಲ್ಲ ಇಲ್ಲ ಹಾಂಗಲ್ಲ. ವಯಸ್ಸಾದರ‍್ನ ನೋಡಿದ್ರೆ ನಂಗೆ ಹೆದ್ರಿಕೆ ಆಗ್ತದೆ. ನಂಗೂ ವಯಸ್ಸಾಗಿ ಹಂಗೇ ಆಗ್ತಿನೆನೋ ಅನಿಸ್ತದೆ’ ಎಂದಳು. ಅದಕ್ಕೇ ಅವಳು ವಯಸ್ಸಾದವರ ಪಿಚ್ಚರ್ ನೋಡುವುದಿಲ್ಲ, ಧಾರಾವಾಹಿ ನೋಡುವುದಿಲ್ಲ. ವಾಟ್ಸಪ್ಪಿನಲ್ಲೂ ತಾನು ಯಾರ ಭಾಷಣ ನೋಡುವುದು ಎಂದು ಹೇಳಿದಳು: ಇಪ್ಪತ್ತು ಮೂವತ್ತರ, ಢಣಢಣ ಮಾತನಾಡುವ ಢೋಂಗಿ ತರುಣ ನಾಯಕರ ಅಭಿಮಾನಿ ಅವಳು!
ಇಂಥಾ ಇವಳು ಒಂದಲ್ಲ ಒಂದು ಕಾರಣ ಒಡ್ಡಿ ಇದುವರೆಗೆ ಲಸಿಕೆ ಪಡೆದಿರಲಿಲ್ಲ. ಅವಳ ಡೌಟುಗಳಿಗೆ ನಾನೆಷ್ಟೇ ಉತ್ತರ ನೀಡಿದರೂ ಖಚಿತವಾಗಿರಲಿಲ್ಲವೋ ಏನೋ ಅಂತೂ ಕಚೇರಿಯಲ್ಲಿ ಎಲ್ಲರೂ ಲಸಿಕೆ ಪಡೆದರೂ ಅವಳು ತೆಗೆದುಕೊಂಡಿರಲಿಲ್ಲ. ಅಂಥವಳು, ಇವತ್ತು ಲಸಿಕೆ ತಗೊಳ್ಳದೇ ಇರಲು ಹೊಸ ಕಾರಣ ಹೇಳಿದಳು:
‘ಲಸಿಕೆ ಹಾಕ್ಕಂಡರಿಗೆ ಆ ಮುದುಕ್ರ ಫೋಟ ಇರು ಕಾರ್ಡು ಕೊಟ್ಟಾರೆ. ಅದ್ನ ನೋಡ್ರೆ ಲಸಿಕೆ ತಕಣುದೇ ಬ್ಯಾಡನಿಸಿದೆ, ಶೀ’!
ಇದಕ್ಕೇನಾದರೂ ಮದ್ದಿದೆಯೆ ನಿಮ್ಮಲ್ಲಿ?
***
ಅರೇ, ಇದ್ಯಾರು ಮರುಳುದೇವಿ ಇವಳೆಂದು ಓದುವ ನಿಮಗೆ ಅನಿಸುತ್ತಿರಬಹುದು. ಇದು ಡೌಟಮ್ಮ ಇರಬಹುದು, ಡೌಟಪ್ಪ ಇರಬಹುದು. ಸುಧಾ, ಸುರೇಶ, ಸುಮಯ್ಯಾ, ಸುಕ್ರು, ಸಿಸಿಲಿಯಾ, ಸುಕೂರ್ ಹೀಗೆ ಯಾರೂ ಇರಬಹುದು. ನೀವೂ ಇರಬಹುದು, ನಾನೂ ಇರಬಹುದು!
ತಲೆಯೊಳಗೆ ಒಂದು ಅಸತ್ಯದ ಹುಳ ಬಿಟ್ಟುಕೊಂಡು ಅದಕ್ಕೆ ಪೂರಕವಾಗಿ ಸಾಕ್ಷಿ, ಪುರಾವೆಗಳನ್ನು ಹುಡುಕುತ್ತ ಹೋಗುವವರು ಇವರು. ಈಗಂತೂ ಅಸಂಖ್ಯ ಜಾಲತಾಣಗಳು, ವೀಡಿಯೋಗಳು, ಆನ್‌ಲೈನ್ ತಜ್ಞರು ಹುಟ್ಟಿದ್ದಾರೆ. ಸತ್ಯವೋ ಅಸತ್ಯವೋ, ನೀವೇನೋ ಒಂದು ನಿರ್ಧಾರ ಮಾಡಿಕೊಂಡರೆ ಅದಕ್ಕೆ ಪೂರಕವಾದ ಹೇಳಿಕೆ, ಘಟನೆ, ಚಿತ್ರ, ಯಾರೋ ಗಣ್ಯರ ಬೆಂಬಲ ಅದಕ್ಕಿದೆಯೆಂಬ ಸಂಗತಿ ಗೊತ್ತಾಗುತ್ತದೆ. ನಿಮ್ಮ ಅಭಿಪ್ರಾಯ ‘ಸು’ ಎಂದು ತಿಳಿದರೆ ಅದು ಸುಕ್ಕಿನುಂಡೆ ಎಂದು ಊಹಿಸಿ ಅಂತಹುದೇ ಮಾಹಿತಿ, ವೀಡಿಯೋಗಳ ಮಹಾಪೂರ ನಿಮ್ಮ ತಾಣದ ಬಾಗಿಲಿಗೆ ಪ್ರವಾಹದಂತೆ ಬಂದು ಬೀಳುತ್ತದೆ.
ಇದರಿಂದ ಪಾರಾಗುವ ದಾರಿ ಏನು? ಕಣ್ಣು ಕೋರೈಸುವಷ್ಟು ಬೆಳಕಿನಲ್ಲಿದ್ದರೂ, ಕಗ್ಗತ್ತಲಿನೊಳಗಿದ್ದರೂ ‘ಬೇಕಿರುವಾಗ ಬೇಕಿರುವಷ್ಟೇ’ ವಿವೇಕದ ಬೆಳಕನ್ನು ಹುಡುಕಿಕೊಳ್ಳುವುದು. ಬುದ್ಧ ಹೇಳಿದಂತೆ, ನಮ್ಮ ಬೆಳಕು ನಾವೇ ಆಗುವುದು.
*
ಪದಗಳ ಅರ್ಥ
ತಿಪ್ಪು = ತಿರುಪು
ಬೆಗ್ನೆ = ಬೇಗನೆ
ಪಾಪದವಳು = ಅಮಾಯಕಳು
*
ಫೋಟೋ : ಎಸ್. ವಿಷ್ಣುಕುಮಾರ್
*
ನಾಳೆ ನಿರೀಕ್ಷಿಸಿ ಕವಲಕ್ಕಿ ಕೊನೆಯ ಮೇಲ್ : ಗುರುಮಲೆಯ ಗುರೂಜಿಯ ‘ಮಶಕ ಮಾರಣ ಮಂತ್ರ’
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಪಿರಿಯಡ್ಸ್ ಮುಂದೋಯ್ತು ಅಂತ ನೋಡ್ಕೊಂಡೆ, ಪಾಸಿಟಿವ್ ಇದೆ’
Published On - 12:47 pm, Tue, 29 June 21