Science and Environment : ಜೀವವೆಂಬ ಜಾಲದೊಳಗೆ: ಪಕ್ಷಿಯಾದರೂ ಪೆಂಗ್ವಿನ್ ಯಾಕೆ ಹಾರದು?

Science and Environment : ಜೀವವೆಂಬ ಜಾಲದೊಳಗೆ: ಪಕ್ಷಿಯಾದರೂ ಪೆಂಗ್ವಿನ್ ಯಾಕೆ ಹಾರದು?
ಸೌಜನ್ಯ : ಅಂತರ್ಜಾಲ

Penguin : ನೋಡಲು ಹಕ್ಕಿಗಳಂತೆ ಕಾಣಿಸದ, ಹಾರಲು ಬಾರದ ಪೆಂಗ್ವಿನ್ ಗಳನ್ನ ಹಕ್ಕಿಗಳ ಜಾತಿಗೆ ಏಕೆ ಸೇರಿಸಲಾಗಿದೆ? ಎಂಬ ಪ್ರಶ್ನೆ ಆರನೆಯ ತರಗತಿಯ ದಿನೇಶ್ ಗೌಡ ಕೇಳಿದ್ದು.

TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Jun 17, 2022 | 4:44 PM

ಜೀವವೆಂಬ ಜಾಲದೊಳಗೆ : ಯಾವುದೇ ಜೀವಿಯನ್ನು ಪಕ್ಷಿಗಳ ಜಾತಿಗೆ ಸೇರಿಸಬೇಕೆಂದರೆ ಅವುಗಳಿಗೆ ಮುಖ್ಯವಾಗಿ ಈ ಲಕ್ಷಣಗಳು ಇರಬೇಕು; ಹಗುರಾದ ಎಲುಬುಗಳ ಹಂದರ – ಪಕ್ಷಿಗಳ ದೇಹವು ದೋಣಿಯ ಆಕಾರದಲ್ಲಿದೆ. ಒಳಗೆ ಹಗುರಾದ ಎಲುಬುಗಳ ಹಂದರ ದೇಹಕ್ಕೆ ಆಧಾರವನ್ನು ಕೊಡುತ್ತದೆ. ಗಾಳಿ ತುಂಬಿದ ಎಲುಬುಗಳು ಅವನ್ನು ಹಗುರಾಗಿಸಿ ದೇಹದ ಭಾರವನ್ನು ಕಡಿಮೆ ಮಾಡಿ ಹಾರಲು ಅನುಕೂಲವಾಗುವಂತೆ ಮಾಡಿವೆ. ಕೊಕ್ಕು – ಪಕ್ಷಿಗಳಲ್ಲಿ ಹಲ್ಲುಗಳಿಲ್ಲ. ಅವುಗಳ ಆಹಾರ ಕ್ರಮಕ್ಕೆ ಅನುಗುಣವಾಗಿ ಬಾಯಿಯು ಕೊಕ್ಕಾಗಿ ಮಾರ್ಪಟ್ಟಿದೆ. ಮೀನು, ಕೀಟ, ಹುಳ ಹಪ್ಪಟೆ, ದಂಶಕಗಳು ಮೊದಲಾದವುಗಳನ್ನು ತಿನ್ನುವ ಮಾಂಸಾಹಾರಿ ಹಕ್ಕಿಗಳಿಗೆ ಬೇಟೆಯನ್ನು ಹಿಡಿದು ತಿನ್ನಲು ಕೊಕ್ಕು ಸಹಾಯಕ, ಮಕರಂದ ಹೀರುವ, ಹಣ್ಣು ಹೂವು ತಿನ್ನುವ ಸಸ್ಯಾಹಾರಿ ಪಕ್ಷಿಗಳಿಗೂ ಕೊಕ್ಕು ಅನುಕೂಲ. ಗರಿ ಅಥವಾ ಪುಕ್ಕಗಳು – ಹಕ್ಕಿಗಳ ವೈಶಿಷ್ಟ್ಯವೆಂದರೆ ಅವುಗಳಿಗೆ ವಿಶಿಷ್ಟವಾದ ಗರಿ ಅಥವಾ ಪುಕ್ಕಗಳಿವೆ. ಹಾರಲು ಸಹಕರಿಸುವುದು, ದೇಹದ ಉಷ್ಣತೆಯನ್ನು ಕಾಪಾಡುವುದು, ಸೌಂದರ್ಯ ಹೆಚ್ಚಿಸುವುದು ಈ ಗರಿಗಳ ಕೆಲಸ. ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran) 

ರೆಕ್ಕೆಗಳು – ಪಕ್ಷಿಗಳಿಗೆ ರೆಕ್ಕೆಗಳಿವೆ. ಕೀಟಗಳು ಮತ್ತು ಬಾವಲಿಗಳಿಗೂ ರೆಕ್ಕೆಗಳಿವೆ. ಆದರೆ ಹಕ್ಕಿಗಳ ಮುಂದಿನ ಕಾಲುಗಳೇ ರೆಕ್ಕೆಗಳಾಗಿ ಮಾರ್ಪಟ್ಟಿದೆ. ಬಿಸಿ ರಕ್ತದ ದೇಹ – ಪಕ್ಷಿಗಳು ನಮ್ಮ ಹಾಗೆಯೇ ಬಿಸಿ ರಕ್ತದ ಪ್ರಾಣಿಗಳು. ದೇಹದ ಉಷ್ಣತೆಯನ್ನು ಒಂದೇ ಹದವಾಗಿ ಕಾಪಾಡಿಕೊಳ್ಳುತ್ತವೆ. ಮೊಟ್ಟೆ- ಎಲ್ಲ ಪಕ್ಷಿಗಳು ಮೊಟ್ಟೆಯಿಟ್ಟು, ಕಾವು ಕೊಟ್ಟು ಮರಿ ಮಾಡಿ ಸಂತಾನ ಮುಂದುವರೆಸುತ್ತವೆ. ಹೆಚ್ಚಾಗಿ ಭೂಮಿಯ ದಕ್ಷಿಣಾರ್ಧ ಗೋಳದಲ್ಲಿ ವಾಸಿಸುವ ಪೆಂಗ್ವಿನ್ ಹಾರಲಾಗದ ಪಕ್ಷಿಗಳಲ್ಲೊಂದು. ಸುಮಾರು 17 ಪ್ರಭೇದಗಳಲ್ಲಿ ಒಂದು ಪ್ರಭೇದವನ್ನು ಬಿಟ್ಟು ಉಳಿದ ಎಲ್ಲವೂ ಚಳಿ ಅತ್ಯಂತ ಹೆಚ್ಚಾಗಿರುವ ಅಂಟಾರ್ಟಿಕಾ ಹಾಗೂ ಹಿಮ ಪ್ರದೇಶದ ಸಾಗರದ ಬಳಿಯ ದ್ವೀಪಗಳಲ್ಲಿ ಇರುತ್ತವೆ.

ಆಕಾರದಲ್ಲಿ ಪೆಂಗ್ವಿನ್ ಸಾಮಾನ್ಯ ಹಕ್ಕಿಗಳ ಹಾಗೆ ಇಲ್ಲ. ಹೆಚ್ಚಾಗಿ ಕಪ್ಪು ಬಣ್ಣದ ಮೇಲ್ಭಾಗ ಹಾಗೂ ಬಿಳಿ ಬಣ್ಣದ ಒಳಭಾಗದ ದೇಹ ಇವುಗಳದ್ದು. ಎರಡು ಕಾಲುಗಳ ಮೂಲಕ ಇವು ನಡೆಯುವಾಗ ಕುಬ್ಜ ಮಾನವರು ನಡೆದಂತೆ ತೋರುತ್ತದೆ! ನಿರ್ಜನ, ಸಾಗರ ತೀರದ ದ್ವೀಪಗಳಲ್ಲಿ ಗುಂಪು ಗುಂಪಾಗಿ ವಾಸಿಸುತ್ತವೆ. ವಿವಿಧ ಶಬ್ದಗಳ ಮೂಲಕ ಸಂವಹಿಸುತ್ತವೆ.

ಇದನ್ನೂ ಓದಿ : Science and Environment : ಜೀವವೆಂಬ ಜಾಲದೊಳಗೆ: ಏನಿದು ‘ಅಂಡರ್ ಸ್ಟೋರಿ’ ರಹಸ್ಯ

ಇವುಗಳಲ್ಲಿ ಪಕ್ಷಿ ಎನ್ನಲು ಅಗತ್ಯವಾದ ಬಹು ಮುಖ್ಯವಾದ ಗುಣ ಲಕ್ಷಣಗಳು ಇರುವುದರಿಂದಲೇ ಪಕ್ಷಿಗಳ ಜಾತಿಗೆ ಸೇರಿಸಲಾಗಿದೆ. ಅವುಗಳೆಂದರೆ ಹಗುರಾವಾದ ಎಲುಬುಗಳ ಹಂದರವು ದೇಹದ ಭಾರವನ್ನು ಕಡಿಮೆ ಮಾಡಿದೆ. ಗಾಳಿಯಲ್ಲಿ ಹಾರಲು ಆಗದಿದ್ದರೂ, ನೀರಿನಲ್ಲಿ ವೇಗವಾಗಿ ಈಜುವ ಪೆಂಗ್ವಿನ್ ಗಳಿಗೆ ಹಗುರಾದ ಮತ್ತು ದೋಣಿಯಾಕಾರದ ದೇಹ, ನೀರಿನ ಒತ್ತಡವನ್ನು ಸೀಳಿ ಈಜಲು ಸಹಾಯಕ.

ರೆಕ್ಕೆಗಳು ಮಾರ್ಪಾಡಾಗಿ ದೋಣಿ ನಡೆಸುವ ಹುಟ್ಟಿನಂತಿದ್ದು ನೀರಿನಲ್ಲಿ ಸರಾಗವಾಗಿ ಈಜಲು ಅನುಕೂಲವಾಗುವಂತೆ ಇದೆ. ಪೆಂಗ್ವಿನ್ ಗಳಿಗೆ ಉಳಿದ ಹಕ್ಕಿಗಳ ಹಾಗೆ ಎದ್ದು ತೋರುವ ಗರಿಗಳು ಇಲ್ಲವಾದರೂ ಗಟ್ಟಿಯಾದ ಪುಟ್ಟ ಗರಿಗಳು ಒಂದಕ್ಕೊಂದು ಸೇರಿದಂತೆ ಇದ್ದು ದೇಹವನ್ನು ಹಿಮ ಪ್ರದೇಶದ ಕೊರೆವ ಚಳಿಯಿಂದ ರಕ್ಷಿಸುತ್ತದೆ. ದೇಹದ ಉಷ್ಣತೆಯನ್ನು ಕಾಪಾಡುತ್ತದೆ.

ಇದನ್ನೂ ಓದಿ : Science: ಜೀವವೆಂಬ ಜಾಲದೊಳಗೆ : ಏನಿದು ಮ್ಯೂಸಿಲೇಜ್​ನ ಮ್ಯಾಜಿಕ್?

ಇದನ್ನೂ ಓದಿ

ಬಲವಾದ ಕೊಕ್ಕು ನೀರಿನಲ್ಲಿರುವ ಮೀನು, ಮೃದ್ವಂಗಿಗಳು, ಕಂಟಕಚರ್ಮಿಗಳು ಮೊದಲಾದ ಆಹಾರವನ್ನು ಹಿಡಿದು ತಿನ್ನಲು ಸಹಕಾರಿಯಾಗಿದೆ. ಹೆಣ್ಣು ಮತ್ತು ಗಂಡು ಪೆಂಗ್ವಿನ್ ಗಳು ಜೋಡಿಯಾಗಿ ದಡದಲ್ಲಿ ಗೂಡು ಕಟ್ಟಿ , ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡಿ ಸಾಕಿ ಬೆಳೆಸುತ್ತವೆ. ಈ ಎಲ್ಲ ಲಕ್ಷಣಗಳು ಪೆಂಗ್ವಿನ್ ಗಳಿಗೆ ಇರುವುದರಿಂದ ಅವುಗಳನ್ನು ಪಕ್ಷಿಗಳ ಜಾತಿಗೆ ಸೇರಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭೂಮಿಯ ತಾಪಮಾನ ಹೆಚ್ಚುತ್ತಿರುವುದರಿಂದ ಧ್ರುವ ಪ್ರದೇಶದಲ್ಲಿ ವಿಪರೀತ ಹವಾಮಾನ ಬದಲಾವಣೆ ಆಗುತ್ತಿದೆ, ಜೊತೆಗೆ ಹಿಮ ಕರಗಿ ನೀರಿನ ಮಟ್ಟವು ಹೆಚ್ಚುತ್ತಿದೆ. ಇದರಿಂದ ಅಲ್ಲಿ ವಾಸಿಸುವ ಪೆಂಗ್ವಿನ್ ಗಳ ಆವಾಸ ಸ್ಥಾನ ನಾಶವಾಗುತ್ತದೆ. ಇದು ಅವುಗಳ ಸಂತಾನೋತ್ಪತ್ತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವುಗಳ ಸಂಖ್ಯೆ ಇಳಿಮುಖವಾಗುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada