Translated Story: ನೆರೆನಾಡ ನುಡಿಯೊಳಗಾಡಿ; ನಾನು ರಾಮಸಾರಥ ಪ್ರಸಾದ …ಎಕ್ಸ್ ಸ್ಕೂಲ ಮಾಸ್ತರ…
‘Tirich’ Short Story of Uday Prakash : ‘ಬರ‍್ರೋ ನಿಮ್ಮಪ್ಪನ ಒಬ್ಬೊಬ್ಬರನ್ನೂ ಕೊಂದುಹಾಕ್ತೇನೆ... ಬರ‍್ರೋ ಭೋಸುಡಿ ಮಕ್ಕಳಾ ನಿಮ್ಮವ್ವನ...’. ಆದರೆ ನನ್ನ ಸಂದೇಹವೆಂದರೆ ಅಪ್ಪ ಈ ರೀತಿ ಬಯ್ಯುವುದು ಸಾಧ್ಯವೇ ಇಲ್ಲವೆಂದು. ಬಯ್ಯುತ್ತಿರುವ ಅವರನ್ನು ನಾವು ಎಂದೂ ನೋಡಿಯೇ ಇರಲಿಲ್ಲ.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಪೋಲೀಸ ಠಾಣೆಯ ಎಸ್.ಎಚ್.ಓ ರಾಘವೇಂದ್ರ ಪ್ರತಾಪಸಿಂಹ ಹೇಳಿದ್ದರು. ಆಗ ಮಧ್ಯಾಹ್ನದ ಒಂದು ಹೊಡೆದು ಹದಿನೈದು ಮಿನಿಟುಗಳಾಗಿದ್ದುವು. ಆವರು ಮನೆಯಿಂದ ತಂದ ಟಿಫಿನ್ ಬಾಕ್ಸ್ ತೆಗೆದು ಊಟ ಮಾಡುವ ತಯಾರಿಯಲ್ಲಿದ್ದರು. ಇಂದು ಊಟದಲ್ಲಿ ಪರಾಟಾಗಳ ಜೊತೆಗೆ ಹಾಗಲಕಾಯಿಯ ಪಲ್ಯ. ಹಾಗಲಕಾಯಿಯನ್ನು ಅವರು ಮುಟ್ಟುತ್ತಿರಲೂ ಇಲ್ಲ. ಅದಕ್ಕಾಗೇ ಇನ್ನೇನು ಮಾಡಬೇಕು ಅನ್ನುವ ಪ್ರಶ್ನೆ ಅವರೆದುರು. ಅದೇ ಹೊತ್ತಿಗೆ ಅಪ್ಪ ಅಲ್ಲಿಗೆ ಒಳಗೆ ಬಂದದ್ದು. ಅವರ ಮೈಮೇಲೆ ಅಂಗಿ ಇರಲಿಲ್ಲ. ಪ್ಯಾಂಟು ಹರಿದಿತ್ತು. ಎಲ್ಲಿಯಾದರೂ ಬಿದ್ದಿರಬೇಕು, ಇಲ್ಲ ಯಾವುದೋ ವಾಹನ ಢಿಕ್ಕಿ ಹೊಡೆದಿರಬೇಕು ಎಂದನಿಸುತ್ತಿತ್ತು. ಠಾಣೆಯಲ್ಲಿ ಆಗ ಕೇವಲ ಒಬ್ಬನೇ ಸಿಪಾಯಿ ಗಜಾಧರ ಶರ್ಮ ಹಾಜರಿದ್ದ. ಅವನ ಹೇಳಿಕೆಯ ಪ್ರಕಾರ ಆತ ಯೋಚಿಸಿದ್ದು ಏನೆಂದರೆ ಯಾರೋ ಭಿಕಾರಿ ಒಳ ಹೊಕ್ಕಿದ್ದಾನೆಂದು. ಅವನು ಕೂಗಿದ ಕೂಡ. ಆದರೆ ಅಷ್ಟರಲ್ಲಿ ಅಪ್ಪ ಎಸ್. ಎಚ್. ಓ ರಾಘವೇಂದ್ರ ಪ್ರತಾಪಸಿಂಹರ ಟೇಬಲ್ ತನಕ ಬಂದೇ ಬಿಟ್ಟಿದ್ದರು. ಎಸ್. ಎಚ್.ಓ ಹೇಳಿದ್ದೆಂದರೆ ಹಾಗಲಕಾಯಿಯ ಕಾರಣ ಮೊದಲೇ ಅವರ ಮೂಡು ಹಾಳಾಗಿತ್ತು. ಹದಿಮೂರು ವರ್ಷಗಳ ವೈವಾಹಿಕ ಜೀವನದಲ್ಲಿ ನನಗೆ ಏನು ಸೇರುತ್ತದೆ, ಏನು ಸೇರುವುದಿಲ್ಲ ಅನ್ನುವದೂ ಹೆಂಡತಿಗೆ ಗೊತ್ತಾಗದಿದ್ದರೆ ಈ ಸಹಬಾಳ್ವೆಗೆ ಏನಾದರೂ ಅರ್ಥವಿದೆಯೋ? ಕೆಲವು ಸಂಗತಿಗಳು ಕೇವಲ ಹಿಡಿಸುತ್ತಿರಲಿಲ್ಲವಷ್ಟೇ ಅಲ್ಲ, ಅವುಗಳನ್ನವರು ಮನಸಾರೆ ತಿರಸ್ಕರಿಸುತ್ತಿದ್ದರು.
ಕಥೆ : ತಿರೀಛ | ಹಿಂದಿ ಮೂಲ : ಉದಯ ಪ್ರಕಾಶ | ಕನ್ನಡಕ್ಕೆ : ಮುಕುಂದ ಜೋಷಿ | ಸೌಜನ್ಯ : ದೇಶಕಾಲ ಸಾಹಿತ್ಯ ಪತ್ರಿಕೆ
(ಭಾಗ 4)
ಇಂಥ ಹೊತ್ತಿಗೇನೇ ಅಪ್ಪ ಅವರ ಎದುರು ಬಂದು ನಿಂತಿದ್ದರು. ಮುಖ ಮತ್ತು ಹೆಗಲು ಕೆಳಗೆ ಅಂಟಿದ ವಾಂತಿಯ ಕಾರಣ ಒಂದು ಸಹಿಸಲಾಗದ ತೀವ್ರ ವಾಸನೆ ಹುಟ್ಟಿಸುತ್ತಿತ್ತು. “ಏನು?” ಎಸ್. ಎಚ್. ಓ ಕೇಳಿದ್ದರು. ಅದಕ್ಕೆ ಅಪ್ಪ ಕೊಟ್ಟ ಉತ್ತರ ತಿಳಿಯುವುದು ಬಹಳ ಕಠಿಣವಾಗಿತ್ತು. ನಂತರ ಅವರು ಬಹಳ ಪಶ್ಚಾತ್ತಾಪ ಪಡುತ್ತಿದ್ದರು. ಒಂದು ವೇಳೆ ಅವರಿಗೆ ಈ ಮನುಷ್ಯ ಬಕೇಲಿಯ ಗ್ರಾಮ ಪ್ರಧಾನ ಮತ್ತು ಭೂತ ಪೂರ್ವ ಅಧ್ಯಾಪಕ ಎಂದು ಗೊತ್ತಾಗಿದ್ದರೆ ಅವರನ್ನು ನಾಲ್ಕೈದು ಗಂಟೆಗಳ ಕಾಲ ಕೂಡಿಸಿಕೊಳ್ಳಬಹುದಿತ್ತು. ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಆದರೆ ಆಗ ಅವರಿಗೆ ಅನಿಸಿದ್ದೆಂದರೆ ಯಾರೋ ಹುಚ್ಚನಿರಬೇಕು ಮತ್ತು ತಾವು ಊಟ ಮಾಡುತ್ತಿರುವುದನ್ನು ನೋಡಿ ಒಳಗೆ ಹೊಕ್ಕಿರಬೇಕು. ಅದಕ್ಕಾಗೇ ಅವರು ಸಿಪಾಯಿ ಗಜಾದರ ಶರ್ಮಾನನ್ನು ಸಿಟ್ಟಿನಿಂದ ಕರೆದಿದ್ದರು. ಆತ ಅಪ್ಪನನ್ನು ಎಳೆಯುತ್ತ ಹೊರಗೆ ತಂದಿದ್ದ. ಅವನೇ ಹೇಳಿದ ಪ್ರಕಾರ ಆತ ಅಪ್ಪನನ್ನು ಹೊಡೆದಿರಲಿಲ್ಲ. ಬಡೆದಿರಲಿಲ್ಲ. ಆದರೆ ನೋಡಿದ್ದೇನೆಂದರೆ ಠಾಣೆಯ ಒಳಗಡೆ ಅಪ್ಪ ಬಂದಾಗ ಅವರ ಕೆಳಗಿನ ತುಟಿ ಕತ್ತರಿಸಿ ಹೋಗಿತ್ತು. ಗದ್ದದ ಮೇಲೆ ಎಲ್ಲೋ ಬಿದ್ದದ್ದರ ಗುರುತು. ಮೊಳಕೈ ತರಚಿತ್ತು.
ಪೋಲೀಸ ಠಾಣೆಯಿಂದ ಹೊರಬಿದ್ದ ಮೇಲೆ ಸುಮಾರು ಒಂದೂವರೆ ಗಂಟೆ ಅಪ್ಪ ಎಲ್ಲೆಲ್ಲಿ ಅಲೆದಾಡಿದರು ಅನ್ನುವದರ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಬೆಳಗ್ಗೆ ಹತ್ತು ಹೊಡೆದು ಏಳು ಮಿನಿಟಿಗೆ ಅವರು ಪಟ್ಟಣ ತಲುಪಿದ್ದರು. ನಂತರ ಮಿನರ್ವಾ ಟಾಕೀಜಿನ ಬಳಿ ಟ್ರ್ಯಾಕ್ಟರಿನಿಂದ ಇಳಿದಿದ್ದರು. ಅಲ್ಲಿಂದ ಹಿಡಿದು ಇಲ್ಲಿಯವರೆಗೆ ಅವರು ನೀರನ್ನಾದರೂ ಕುಡಿದಿದ್ದರೋ ಹೇಗೆ ಅನ್ನುವದನ್ನು ತಿಳಿಯುವುದು ಕೂಡ ಕಠಿಣ ಕೆಲಸವಾಗಿತ್ತು. ಹೀಗೂ ಆಗಿರಬಹುದು. ಅಲ್ಲಿಯವರೆಗೆ ನೀರಡಿಕೆಯನ್ನು ನೆನಪಿಸುವಷ್ಟು ಅವರ ತಲೆ ಠಿಕಾಣಿಯಲ್ಲಿರಲಿಕ್ಕಿಲ್ಲ. ಆದರೆ ಕಷಾಯದ ಅಮಲಿನಲ್ಲಿ ಒಂದು ವೇಳೆ ಅವರು ಪೋಲೀಸ್ ಠಾಣೆಗೆ ಬಂದಿದ್ದರೆ ಅವರ ತಲೆಯೊಳಗೆ, ಕತ್ತಲೆಯಲ್ಲಿ ಮುಳುಗಿಸಿದಂತಹ ಈ ವಿಚಾರವೂ ದುರ್ಬಲವಾಗಿ ಇದ್ದಿರಬಹುದು. ಅದೆಂದರೆ ಏನಾದರೂ ಮಾಡಿ, ಯಾವುದೇ ರೀತಿಯಿಂದ ನಮ್ಮ ಊರಿಗೆ – ಬಕೇಲಿಗೆ – ಮರಳುವ ದಾರಿಯ ಬಗ್ಗೆ ಕೇಳಬೇಕು. ಇಲ್ಲಾ, ಬಂದಿದ್ದ ಟ್ರ್ಯಾಕ್ಟರಿನ ಪತ್ತೆ ಮಾಡಬೇಕು. ಅದೂ ಆಗದಿದ್ದರೆ ತಮ್ಮ ಹಣ ಮತ್ತು ಕೋರ್ಟಿನ ಕಾಗದ ಪತ್ರಗಳನ್ನು ಕಸಿದುಕೊಂಡಿದ್ದುದರ ಬಗ್ಗೆ ರಿಪೋರ್ಟನ್ನು ಅಲ್ಲಿ ನೋಂದಾಯಿಸಬೇಕು. ಈ ಯೋಚನೆಯ ಸಮಸಮೀಪ ಮುಟ್ಟುವುದೇ ಭಯಜನಕ, ಅಸ್ವಸ್ಥ, ಬೇಚೈನು ಮಾಡುವಂಥದ್ದು. ಯಾಕೆಂದರೆ ಆಗ ಅಪ್ಪ ತಿರೀಛದ ವಿಷ ಮತ್ತು ಧತ್ತೂರಿ ಬೀಜಗಳ ಕಷಾಯದ ಅಮಲಿನ ಜೊತೆಗೆ ಮಾತ್ರ ಹೋರಾಡುತ್ತಿರಲಿಲ್ಲ. ನಮ್ಮ ಮನೆಯನ್ನು ಉಳಿಸಿಕೊಳ್ಳುವ ಚಿಂತೆಯೂ ಅಮಲಿನ ನಿದ್ದೆಯಲ್ಲಿ ಮತ್ತೆ ಮತ್ತೆ ತಲೆ ಎತ್ತುತ್ತಿತ್ತು.
ಇದನ್ನೂ ಓದಿ : Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
ಬಹುಶಃ ಅವರಿಗೆ ಈಗ ಹೀಗೂ ಅನ್ನಿಸುತ್ತಿರಬಹುದು. ಇದೇನೇನು ನಡೆಯುತ್ತಿದೆಯಲ್ಲ, ಇದು ಕೇವಲ ಒಂದು ಕನಸು. ಮತ್ತು ಅದರಿಂದ ಹೊರಗೆ ಬರುವ ಪ್ರಯತ್ನ ಮಾಡುತ್ತಿರಬಹುದು. ಎರಡು ಹೊಡೆದು ಹದಿನೈದು ಮಿನಿಟುಗಳ ಆಸಪಾಸ ಅಪ್ಪ ಪಟ್ಟಣದ ಉತ್ತರ ತುದಿಯಲ್ಲಿದ್ದ ಅತ್ಯಂತ ಶ್ರೀಮಂತ, ಸಂಪನ್ನ ಕಾಲೊನಿಯಾದ ಇತವಾರಿಯಲ್ಲಿ ತಮ್ಮನ್ನು ತಾವೇ ಜಗ್ಗಿ ಎಳೆದುಕೊಂಡು ಬಂದಂತೆ ಬರುವುದನ್ನು ನೋಡಲಾಗಿತ್ತು. ಈ ಕಾಲೊನಿ ಸರಾಫಕಟ್ಟೆಯ ವ್ಯಾಪಾರಿಗಳದು. ಪಿ.ಡಬ್ಲ್ಯು.ಡಿ ಕಂಟ್ರಾಕ್ಟ್ದಾರರದು ಮತ್ತು ರಿಟಾಯರ್ಡ್ ಆಫೀಸರಗಳದ್ದು. ಕೆಲವು ಸಮೃದ್ಧ ಪತ್ರಕರ್ತರೂ ಕವಿಗಳೂ ಅಲ್ಲಿದ್ದರು.
ಅಪ್ಪನನ್ನು ಅಲ್ಲಿ ಆಗ ಯಾರು ನೋಡಿದ್ದರೋ ಅವರ ಹೇಳಿಕೆಯ ಪ್ರಕಾರ ಅಪ್ಪನ ಮೈ ಮೇಲೆ ಆಗ ಪಟಪಟ್ಟಿಯ ಒಂದು ಚಡ್ಡಿ ಮಾತ್ರ ಉಳಿದಿತ್ತು. ಅದರ ಲಾಡಿ ಬಹುಶಃ ತುಂಡಾಗಿರಬೇಕು. ಅದಕ್ಕಾಗೇ ತಮ್ಮ ಎಡಗೈಯಿಂದ ಅಪ್ಪ ಅದನ್ನು ಮತ್ತೆ ಮತ್ತೆ ಸಂಭಾಳಿಸುತ್ತಿರಬೇಕು. ಅವರನ್ನು ಯಾರು ಅಲ್ಲಿ ನೋಡಿದ್ದರೋ ಅವರೆಲ್ಲ ಅಪ್ಪನನ್ನು ಹುಚ್ಚ ಎಂದೇ ತಿಳಿದಿದ್ದರು. ಕೆಲವರು ಹೇಳಿದರು – ಅಪ್ಪ, ನಡುನಡುವೆ ಎದ್ದು ನಿಂತು ಜೋರುಜೋರಾಗಿ ಬೈಗುಳ ಬೊಗಳುತ್ತಿದ್ದರು. ನಂತರ ಅದೇ ಕಾಲೊನಿಯಲ್ಲಿರುವ ರಿಟಾಯರ್ಡ್ ತಹಶೀಲದಾರ ಸೋನಿ ಸಾಹೇಬರು ಹಾಗೂ ಪಟ್ಟಣದ ಬಹುದೊಡ್ಡ ಪತ್ರಿಕೆಯ ವಿಶೇಷ ಪ್ರತಿನಿಧಿಯೂ ಕವಿಯೂ ಆದ ಸತ್ಯೇಂದ್ರ ಥಪಲಿಯಾಲ ಹೇಳಿದ್ದೆಂದರೆ ಅವರು ಅಪ್ಪ ಅನ್ನುವುದನ್ನು ಸರಿಯಾಗಿ ಕೇಳಿದ್ದಾರೆ. ಅಪ್ಪ ನಿಜಕ್ಕೂ ಯಾರನ್ನೂ ಬೈಯುತ್ತಿರಲಿಲ್ಲ. ಅವರು ಮತ್ತೆ ಮತ್ತೆ ಹೇಳುತ್ತಿದ್ದುದು ಇಷ್ಟೇ…’ನಾನು, ರಾಮ ಸಾರಥ ಪ್ರಸಾದ. ಎಕ್ಸ್ ಸ್ಕೂಲ ಹೆಡ್ ಮಾಸ್ತರ… ವಿಲೇಜ್ ಹೆಡ್ ಆಫ್ ಗ್ರಾಮ ಬಕೇಲಿ…’ ಕವಿ – ಪತ್ರಕಾರ ಥಪರಿಯಾಲ ಸಾಹೇಬರು ದುಃಖ ಪ್ರಕಟಿಸಿದರು. ಸರಿಯಾಗಿ ಅದೇ ಹೊತ್ತಿಗೆ ಅವರಿಗೆ ಅಮೆರಿಕೆಯ ದೂತಾವಾಸಕ್ಕೆ ಹೋಗಬೇಕಿತ್ತು. ಅಲ್ಲಿ ದಿಲ್ಲಿಯಲ್ಲಿ ಒಂದು ಪಾರ್ಟಿ. ಪಾರ್ಟಿಯಲ್ಲಿ ಸಂಗೀತ ಸಮಾರೋಹ. ಅದಕ್ಕಾಗೇ ಬಹಳ ಗಡಿಬಿಡಿಯಲ್ಲಿ ಅವರು ಹೊರಟುಹೋದರು. ಆದರೆ, ಹಾಂ, ತಹಶೀಲದಾರ ಸೋನಿ ಸಾಹೇಬರು ಹೇಳಿದ್ದೆಂದರೆ …ನನಗಾಗ ಆ ಮನುಷ್ಯನ ಮೇಲೆ ಬಹಳೇ ದಯೆ ಹುಟ್ಟಿತು. ನಾನು ಹುಡುಗರನ್ನು ಬೈದು ಬೆದರಿಸಿದೆ ಕೂಡ. ಆದರೆ ಒಂದಿಬ್ಬರು ಹುಡುಗರ ಪ್ರಕಾರ ಈ ಮನುಷ್ಯ ರಾಮರತನ ಸರಾಫರ ಹೆಂಡತಿ ಮತ್ತು ಅವರ ಸೋದರಿಯ ಮೇಲೆ ದಾಳಿ ಮಾಡುವ ಸನ್ನಾಹದಲ್ಲಿದ್ದ. ಇದನ್ನು ಕೇಳಿ ತಹಶೀಲದಾರ ಸೋನಿ ಸಾಹೇಬರಿಗನ್ನಿಸಿತು… ಈ ಮನುಷ್ಯ ಬಹುಶಃ ಲಫಂಗನೇ ಇರಬೇಕು. ಮತ್ತಿಲ್ಲಿ ಏನೇನೋ ನಾಟಕ ಮಾಡುತ್ತಿದ್ದಾನೆ. ಹುಡುಗರು ಅವರಿಗೆ ತೊಂದರೆ ಕೊಡುತ್ತಲೇ ಇದ್ದರು.
ಅಪ್ಪ ಮಧ್ಯೆ ಮಧ್ಯೆ ಜೋರುಜೋರಾಗಿ ಹೇಳುವದು `ನಾನು ರಾಮಸಾರಥ ಪ್ರಸಾದ …ಎಕ್ಸ್ ಸ್ಕೂಲ ಮಾಸ್ತರ…’
ಒಂದು ವೇಳೆ, ಲೆಕ್ಕ ಹಾಕಿ ನೋಡಿದರೆ ಮಿನರ್ವಾ ಟಾಕೀಜಿನ ಹತ್ತಿರದ ಕೂಟದಲ್ಲಿ ಅಪ್ಪ ಬೆಳಗ್ಗೆ ಇಳಿದಾಗ ಹತ್ತು ಹೊಡೆದು ಏಳು ಮಿನಿಟುಗಳಾಗಿದ್ದುವು. ಅಲ್ಲಿಂದ ಹಿಡಿದು, ದೇಶಬಂಧು ಮಾರ್ಗದ ಸ್ಟೇಟ್ ಬ್ಯಾಂಕ್, ವಿಜಯಸ್ಥಂಭದ ಹತ್ತಿರದ ಪೋಲೀಸ್ ಠಾಣೆ, ಮತ್ತೆ ಪಟ್ಟಣದ ಹೊರಗಿನ ಉತ್ತರ ತುದಿಯಲ್ಲಿದ್ದ ಇತವಾರಿ ಕಾಲೊನಿ, ಇವುಗಳನ್ನೆಲ್ಲ ಹಿಡಿದು ಕೂಡಿಸಿದರೆ ಸುಮಾರು ಮೂವತ್ತು ಮೂವತ್ತೆರಡು ಕಿಲೋಮೀಟರ್‌ಗಳ ಅಂತರ. ಅಪ್ಪ ಹೀಗೆಲ್ಲ ಇಷ್ಟು ಅಲೆದಾಡಿದ್ದರು. ಮತ್ತು ಈ ಸ್ಥಳಗಳೂ ಒಂದೇ ದಿಕ್ಕಿನಲ್ಲಿ ಇಲ್ಲ. ಇದರರ್ಥ ಇಷ್ಟೆ: ಅಪ್ಪನ ಮಾನಸಿಕ ಸ್ಥಿತಿ ಹೇಗಿತ್ತೆಂದರೆ ಅವರಿಗೆ ಸರಿಯಾಗಿ ಏನೂ ಹೊಳೆಯುತ್ತಲೇ ಇರಲಿಲ್ಲ. ಮತ್ತು ಅಪ್ಪ ಕಾರಣವಿಲ್ಲದೇನೆ ಅಚಾನಕ ಯಾವುದೇ ಕಡೆಗೆ ಹೊರಡುತ್ತಿದ್ದರು. ಇನ್ನು ಥಪರಿಯಾಲರು ಯಾವುದನ್ನು ನಿಜವೆಂದು ನಂಬಿದ್ದರೋ ಆ ರಾಮರತನ ಸರಾಫರ ಹೆಂಡತಿ ಮತ್ತು ಅವರ ಸೋದರಿಯ ಮೇಲಿನ ದಾಳಿಯ, ಹಲ್ಲೆಯ ಬಗ್ಗಿನ ಮಾತು. ನನ್ನ ಸ್ವಂತದ ಅಂದಾಜೆಂದರೆ ಅಪ್ಪ ಅವರ ಕಡೆಗೆ ಹೋದದ್ದು ಒಂದೋ ನೀರು ಕೇಳಲು, ಇಲ್ಲ ಊರಿನ ಬಗ್ಗೆ ವಿಚಾರಿಸಲು. ಆ ಒಂದು ಕ್ಷಣ ಅಪ್ಪ ಎಚ್ಚರಾಗಿಯೇ ಇರಬೇಕು. ಆದರೆ ಈ ತರಹದ ಅವತಾರದ ಮನುಷ್ಯನನ್ನು ಇಷ್ಟು ಹತ್ತಿರದಿಂದ ನೋಡಿ ಆ ಹೆಂಗಸರು ಕಿಟಾರನೆ ಕಿರಿಚಿರಬೇಕು. ಹಾಗೆ ನೋಡಿದರೆ ಅಪ್ಪನ ಬಲಗಣ್ಣಿನ ಮೇಲಿನ ಹುಬ್ಬಿಗೆ ಹತ್ತಿದ ಪೆಟ್ಟಿನಿಂದ ರಕ್ತ ಇಳಿಯುತ್ತ ಅವರ ಕಣ್ಣಿನ ಮೇಲೆ ಬರತೊಡಗಿತ್ತು. ಆ ಪೆಟ್ಟು ಬಿದ್ದದ್ದೂ ಇತವಾರಿ ಕಾಲೊನಿಯಲ್ಲೆ. ಕಾರಣ ಆಮೇಲೆ ಹೇಳಿದ ಜನರ ಪ್ರಕಾರ ಕೆಲವು ಹುಡುಗರು ಕಲ್ಲು, ಹೆಂಟೆಗಳಿಂದ ಅಪ್ಪನನ್ನು ಹೊಡೆಯುತ್ತಿದ್ದರೆಂದು.
ಯಾವ ಸ್ಥಳದಿಂದ ಅಪ್ಪನಿಗೆ ಹೆಚ್ಚು ಪೆಟ್ಟುಗಳು ಬಿದ್ದಿದ್ದವೋ ಆ ಸ್ಥಳ ಇತವಾರಿ ಕಾಲೊನಿಯಿಂದ ಬಹಳ ದೂರ ಇರಲಿಲ್ಲ. ನ್ಯಾಶನಲ್ ರೆಸ್ಟಾರೆಂಟ್ ಎಂಬ ಹೆಸರಿನ ಒಂದು ಅಗ್ಗದ ಢಾಬಾದ ಎದುರು ಅಪ್ಪನನ್ನು ಹುಡುಗರೆಲ್ಲ ಮುತ್ತಿಗೆ ಹಾಕಿದಂತೆ ಸುತ್ತುಗಟ್ಟಿದ್ದರು. ಅದರಲ್ಲಿ ಹೆಚ್ಚು ವಯಸ್ಸಾದ ಹುಡುಗರೂ ಶಾಮೀಲಾಗಿದ್ದರು. ನ್ಯಾಶನಲ್ ರೆಸ್ಟಾರೆಂಟಿನಲ್ಲಿ ಕೆಲಸ ಮಾಡುವ ಸತ್ರೆ ಹೇಳುವ ಪ್ರಕಾರ ಅಪ್ಪನಿಂದ ಒಂದು ತಪ್ಪು ಏನಾಗಿತ್ತೆಂದರೆ ಒಮ್ಮೆ ಅವರು ಸಿಟ್ಟಿನಲ್ಲಿ ಗುಂಪಿನ ಮೇಲೆ ಕಲ್ಲು ಒಗೆಯಲು ಪ್ರಾರಂಭ ಮಾಡಿದ್ದರು. ಬಹುಶಃ ಅದರಲ್ಲಿಯ ಒಂದು ಕಲ್ಲು ಏಳೆಂಟು ವರ್ಷದ ವಿಕಿ ಅಗರವಾಲ ಎಂಬ ಹುಡುಗನಿಗೆ ತಾಗಿತ್ತು. ಆ ವಿಕಿಗೆ ಎಷ್ಟೋ ಟಾಕಿಗಳನ್ನು ಹಾಕಬೇಕಾಗಿತ್ತು. ಇದರ ನಂತರವೇ ಗುಂಪು ಬಹಳ ಹಿಂಸಾತ್ಮಕ ಮತ್ತು ಅಪಾಯಕಾರಿಯಾಯಿತೆಂದು ಆ ಸತ್ರೆನೇ ಹೇಳಿದ್ದ. ಗುಂಪು ಗೊಂದಲ ಹಾಕುತ್ತ, ನಾಲ್ಕೂ ದಿಕ್ಕಿನಿಂದ ಅವರ ಮೇಲೆ ಕಲ್ಲು ಒಗೆಯಲು ಪ್ರಾರಂಭ ಮಾಡಿತ್ತೆಂದು. ಡಾಭಾದ ಮಾಲೀಕ ಸತನಾಮಸಿಂಹ ಹೇಳಿದ್ದೆಂದರೆ ಆಗವರ ಮೈಮೇಲೆ ಪಟಪಟ್ಟಿಯ ಒಂದು ಚಡ್ಡಿ ಮಾತ್ರ ಇತ್ತು. ಬಡಕಲು ಶರೀರದ ಎಲುಬುಗಳು ಮತ್ತು ಎದೆಯ ಮೇಲಿನ ಬಿಳಿಬಿಳಿ ಕೂದಲುಗಳು ಮಾತ್ರ ಕಾಣುತ್ತಿದ್ದುವು. ಬಲಗಣ್ಣಿನ ಮೇಲಿನಿಂದ ಮತ್ತು ಕತ್ತರಿಸಿದ ಕೆಳಗಿನ ತುಟಿಯಿಂದ ರಕ್ತ ಹರಿಯುತ್ತಿತ್ತು. ಸತನಾಮಸಿಂಹ ಬಹಳ ದುಃಖದಿಂದ ಮತ್ತು ಪಶ್ಚಾತ್ತಾಪದ ಸ್ವರದಲ್ಲಿ ಹೇಳಿದ್ದ. ‘ನನಗೇನು ಗೊತ್ತು, ಅವರು ಇಷ್ಟೊಂದು ಸೀದಾ ಸಾದಾ, ಮರ್ಯಾದೆವಂತ, ಹೆಸರು ಗಳಿಸಿದ ಮನುಷ್ಯರೆಂದು. ಭಾಗ್ಯದ ಚಕ್ರದಲ್ಲಿ ಸಿಲುಕಿದ್ದಕ್ಕೇ ಅವರ ಗತಿ ಹೀಗಾಗಿದೆ ಎಂದು.’ ಢಾಭಾದಲ್ಲಿ ಕಪ್ಪು ಬಶಿ ತೊಳೆಯುವ ಹರಿ ಇನ್ನೂ ಒಂದು ಮಾತು ಜೋಡಿಸಿದ್ದ. ಅಪ್ಪ ಗುಂಪನ್ನು ಉದ್ದೇಶಿಸಿ ಬೈಯುತ್ತಿದ್ದರು. ‘ಬರ‍್ರೋ… ನಿಮ್ಮಪ್ಪನ… ಒಬ್ಬೊಬ್ಬರನ್ನೂ ಕೊಂದುಹಾಕ್ತೇನೆ… ಬರ‍್ರಿ… ಬರ‍್ರೋ ಭೋಸುಡಿ ಮಕ್ಕಳಾ… ನಿಮ್ಮವ್ವನ…’. ಆದರೆ ನನ್ನ ಸಂದೇಹವೆಂದರೆ ಅಪ್ಪ ಈ ರೀತಿ ಬಯ್ಯುವುದು ಸಾಧ್ಯವೇ ಇಲ್ಲವೆಂದು. ಬಯ್ಯುತ್ತಿರುವ ಅವರನ್ನು ನಾವು ಎಂದೂ ನೋಡಿಯೇ ಇರಲಿಲ್ಲ. ಇಷ್ಟೊಂದು ವಿಶ್ವಾಸದಿಂದ ನಾನು ಈ ಮಾತನ್ನು ಹೇಳುತ್ತಿರುವ ಕಾರಣವೆಂದರೆ ಅಪ್ಪ ನನಗೆ ಚೆನ್ನಾಗಿ ಗೊತ್ತು.
ಇದನ್ನೂ ಓದಿ : ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್‘ ಬಿಡಿಸಿಕೊಂಡು ಬಂದ ‘ಎವರ್ಗ್ರೀನ್‘ನ ಒಂದು ಎಸಳು
ಅಪ್ಪನಿಗೆ ಅನ್ನಿಸಿರಬೇಕು. ಇಲ್ಲಿಯ ತನಕ ಏನೆಲ್ಲ ನಡೆಯುತ್ತಿದೆಯೋ ಅದು ವಾಸ್ತವ ಅಲ್ಲವೇ ಅಲ್ಲ. ಅದೊಂದು ಕನಸು ಮಾತ್ರ. ಒಂದಕ್ಕೊಂದು ಸಂಬಂಧವಿಲ್ಲದ ಈ ಎಲ್ಲ ಘಟನೆಗಳು ಅರ್ಥಹೀನ. ಇಲ್ಲಿಯವರೆಗೆ ನಡೆದದ್ದರ ಬಗ್ಗೆ ಅವರಿಗೆ ವಿಶ್ವಾಸವೇ ಉಳಿದಿರಲಿಕ್ಕಿಲ್ಲ. ಇವೆಲ್ಲ ನಿರರ್ಥಕ ಗೊಡ್ಡು ಹರಟೆ ಅನ್ನಿಸಿರಬೇಕು. ಅವರು ಊರಿನಿಂದ ಪಟ್ಟಣಕ್ಕೆ ಬಂದೇ ಇಲ್ಲ. ಅವರಿಗೆ ಯಾವ ತಿರೀಛವೂ ಕಚ್ಚಿಯೇ ಇಲ್ಲ. ಇನ್ನೂ ಮುಂದೆ ಹೋಗಿ ತಿರೀಛವೆನ್ನುವುದೇ ಇಲ್ಲ. ಅದೊಂದು ಕಪೋಲ ಕಲ್ಪಿತ ಮತ್ತು ಅಂಧ ವಿಶ್ವಾಸದ ಹೆಸರು. ಮತ್ತು ಧತ್ತೂರಿಯ ಬೀಜಗಳ ಕಷಾಯ ಕುಡಿಯುವುದಂತೂ ಹಾಸ್ಯಾಸ್ಪದ. ಅದೂ ಕೂಡ ಒಬ್ಬ ಗಾಣಿಗನ ಹೊಲದಲ್ಲಿ. ಅದರ ಗಿಡ ಹುಡುಕಿ ತೆಗೆದು… ಅವರು ಯೋಚಿಸಿ ಯೋಚಿಸಿ ತಮ್ಮಷ್ಟಕ್ಕೆ ತಾವೇ ಅಂದುಕೊಂಡಿರಬಹುದು. ನನ್ನ ಮೇಲೆ ಯಾರಾದರೂ ಮೊಕದ್ದಮೆ ಹೂಡುವುದು ಸಾಧ್ಯವೇ? ಕೋರ್ಟು ಕಚೇರಿಗೆ ಹೋಗುವ ಅಗತ್ಯ ನನಗೆ ಯಾಕೆ?
*
(ಮುಕುಂದ ಜೋಷಿ ಫೋಟೋ ಸೌಜನ್ಯ : ಜಯಂತ ಕಾಯ್ಕಿಣಿ)
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಈ ಕಥೆಯ ಎಲ್ಲಾ ಭಾಗಗಳು ಮತ್ತು ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ
Published On - 1:39 pm, Fri, 17 June 22