Kargil Vijay Diwas: ಕಾರ್ಗಿಲ್ ಯುದ್ಧದ ಸಮಯದಲ್ಲಿ ದಿಟ್ಟತನ ಮೆರೆದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ
23ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಆಚರಣೆ ಸಂದರ್ಭದಲ್ಲಿ ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳಲೇಬೇಕು. ನಾವು ಅವರನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಹಾಕುತ್ತೇವೆ ಎಂದು ಶತ್ರು ರಾಷ್ಟ್ರಕ್ಕೆ ಎಚ್ಚರಿಕೆ ಕೊಟ್ಟಿದ್ದ ವಾಜಪೇಯಿ.
ಒಂದಲ್ಲಾ ಒಂದು ಪಿತೂರಿ ನಡೆಸುತ್ತಾ ನರಿ ಬುದ್ದಿಯನ್ನು ತೋರಿಸುತ್ತಾ ಬರುತ್ತಿರುವ ಪಾಕಿಸ್ತಾನದ ವಿರುದ್ಧ 1999ರ ಜುಲೈ ತಿಂಗಳಲ್ಲಿ ನಡೆದ ಕಾರ್ಗಿಲ್ ಯುದ್ಧ (Kargil War)ದಲ್ಲಿ ಭಾರತ ಜಯಸಾಧಿಸಿತ್ತು. ಈ ಯುದ್ಧದ ನೆನಪಿಗಾಗಿ ಪ್ರತಿ ವರ್ಷ ಜು.26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂದು ಭಾರತದ ಸೇನೆಯ ಹಿಂದೆ ನಿಂತಿದ್ದ ಮಾಜಿ ಪ್ರಧಾನಿ ದಿವಂತ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರನ್ನು ನೆನಪಿಸಲೇಬೇಕು. ಪಾಕ್ ಸೈನ್ಯದೊಂದಿಗೆ ಮಾತುಕತೆ ನಡೆಸದೆ “ನಾವು ಅವರನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಹಾಕುತ್ತೇವೆ” ಎಂದು ಸ್ಪಷ್ಟವಾದ ಎಚ್ಚರಿಕೆಯನ್ನು ವಾಜಪೇಯಿ ಅವರು ನೀಡಿರುವುದು ನೆನಪಿಗೆ ಬರೆದೇ ಇರದು.
ಅದು 1999ರ ಮೇ ತಿಂಗಳು. ಭಾರತದ ವಿರುದ್ಧ ಒಳಸಂಚು ರೂಪಿಸಿದ ಪಾಕಿಸ್ತಾನ ತನ್ನ ಸೈನ್ಯವನ್ನು ಗಡಿ ನಿಯಂತ್ರಣ ರೇಖೆಗೆ ಕಳುಹಿಸಿತು. ಅದರಂತೆ ಒಳನುಸುಳಿದ ಪಾಕ್ ಸೈನ್ಯ ಕಾರ್ಗಿಲ್ ಪ್ರದೇಶದಲ್ಲಿ ಬೀಡುಬಿಟ್ಟತು. ಇದನ್ನು ಗಮನಿಸಿದ ಸ್ಥಳೀಯರು ಭಾರತದ ಸೈನ್ಯಕ್ಕೆ ಮಾಹಿತಿ ನೀಡಿದರು. ಅಷ್ಟರಲ್ಲಾಗಲೇ ಪಾಕ್ ಸೈನ್ಯ ಯುದ್ಧಕ್ಕೆ ತಯಾರಾಗಿತ್ತು. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ವಾಜಪೇಯಿ ನೇತೃತ್ವದ ಸರ್ಕಾರ, ನುಸುಳುಕೋರರಿಗೆ ಹಿಂದೆ ಸರಿಯುವಂತೆ ಎಚ್ಚರಿಸಿತು. “ನಾವು ಅವರನ್ನು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಹೊರಹಾಕುತ್ತೇವೆ” ಎಂದು ವಾಜಪೇಯಿ ಅವರು ಖಡಕ್ ಆಗಿಯೇ ಹೇಳಿದ್ದರು. ಅದರಂತೆ ಭಾರತದ ಸರ್ಕಾರವು ಶತ್ರುಗಳು ಅಡಗಿರುವ ಪ್ರದೇಶಕ್ಕೆ ಸೈನ್ಯವನ್ನ ಕಳಿಸಿಯೇ ಬಿಟ್ಟಿತು.
ಫಿರಂಗಿಗಳ ಭಾರೀ ಬಳಕೆಯೊಂದಿಗೆ ಎರಡು ದೇಶಗಳು ಆರು ವಾರಗಳ ಕಾಲ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗಿದವು. ಈ ಯುದ್ಧದ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡು ವಾಜಪೇಯಿ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರೆದಿದ್ದರು ಎಂದು ಉಲ್ಲೇಖಿಸುವುದು ಸೂಕ್ತ. ಸರ್ಕಾರ ಪತನದಂಚಿನಲ್ಲಿದ್ದಾಗಲೂ ದೃತಿಗೆಡದ ವಾಜಪೇಟಿ ಸೈನ್ಯದ ಬೆನ್ನು ತಟ್ಟಿದರು. ಎರಡು ದೇಶಗಳ ನಡುವೆ ಭೀಕರ ಯುದ್ಧ ನಡೆಯುತ್ತದೆ.
ಯುದ್ಧದ ನಡುವೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಷ್, ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರನ್ನು ಸಂಪರ್ಕಿಸಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಅದರಂತೆ ದೂರವಾಣಿ ಮೂಲಕ ಬಿಲ್ ಕ್ಲಿಂಟನ್ ಮಾತುಕತೆ ನಡೆಸಿದಾಗ, ಈ ಸಂದರ್ಭದಲ್ಲಿ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ವಾಜಪೇಯಿ ದೃಢವಾಗಿ ಹೇಳಿದರು. ಪರಿಣಾಮವಾಗಿ ಅಮೆರಿಕ ಮಾತುಕೆಯಿಂದ ಹಿಂದೆಸರಿಯಿತು.
ಯುದ್ಧ ಕೊನೆಗೊಳ್ಳುವ ಮುನ್ನವೇ ಭಾರತದ ಯಶಸ್ಸನ್ನು ಘೋಷಿಸಿದ ಪ್ರಧಾನಿ
ಯುದ್ಧದ ನಡುವೆ ಒಂದು ವಿಚಿತ್ರವಾದ ಸಂಗತಿಯೆಂದರೆ ಜುಲೈ 14 ರಂದು ವಾಜಪೇಯಿ ಅವರು ಕಾರ್ಯಾಚರಣೆಯ ಯಶಸ್ಸನ್ನು ಔಪಚಾರಿಕವಾಗಿ ಕೊನೆಗೊಳ್ಳುವ ದಿನಗಳ ಮೊದಲೇ ಘೋಷಿಸಿದ್ದರು. ಆ ದಿನ ಹರಿಯಾಣದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಮೇಲಿನ ಭಾರತದ ಯಶಸ್ಸನ್ನು ಮುಂಚಿತವಾಗಿ ಘೋಷಿಸಿದರು. ತರುವಾಯ ಜುಲೈ 26 ರಂದು ಪಾಕಿಸ್ತಾನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಮೂಲಕ ಭಾರತ ಕಾರ್ಗಿಲ್ ಯುದ್ಧವನ್ನು ಗೆದ್ದುಕೊಂಡಿತು.
Published On - 12:39 pm, Tue, 26 July 22