Kargil Vijay Diwas 2022: ಕಾರ್ಗಿಲ್ ಯುದ್ಧದ ಇತಿಹಾಸ, ಮಹತ್ವ, ಪ್ರಾಮುಖ್ಯತೆ ಮತ್ತು ನೆನಪುಗಳು
ಇಂದು ಕಾರ್ಗಿಲ್ ವಿಜಯ ದಿವಸ, ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತದ ಯೋಧರನ್ನು ಇಡೀ ದೇಶವೇ ಗೌರವಿಸುತ್ತಿದೆ. ಈ ದಿನದಂದು ಕಾರ್ಗಿಲ್ ಯುದ್ಧದ ಇತಿಹಾಸ, ಮಹತ್ವ ಮತ್ತು ಸ್ಮರಣಾರ್ಥಗಳ ಬಗ್ಗೆ ನೋಡೋಣ.
ಜುಲೈ 26ರಂದು ಇಡೀ ದೇಶವೇ ಹೆಮ್ಮೆ ಪಡುವ ದಿವಸ. ಏಕೆಂದರೆ 1999ರ ಇದೇ ದಿನದಂದು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ದಿವಸವಿದು. ಇದರ ನೆನಪಿಗಾಗಿ ಪ್ರತಿ ವರ್ಷ ಜಯ.26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ದಿನದಂದು ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಲಾಗುತ್ತದೆ. ಹಾಗಿದ್ದರೆ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas)ನ ಇತಿಹಾಸ, ಮಹತ್ವ ಹಾಗೂ ಸ್ಮರಣಾರ್ಥಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿಯೋಣ.
ಇತಿಹಾಸ ಮತ್ತು ಮಹತ್ವ
1971 ರ ಇಂಡೋ-ಪಾಕ್ ಯುದ್ಧದ ನಂತರ ಹಲವಾರು ಮಿಲಿಟರಿ ಒಪ್ಪಂದಗಳು ನಡೆದರೂ 1998 ರಲ್ಲಿ ಎರಡೂ ರಾಷ್ಟ್ರಗಳು ಪರಮಾಣು ಪರೀಕ್ಷೆಗಳನ್ನು ನಡೆಸಿದವು. 1990 ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 1999 ರಲ್ಲಿ ಲಾಹೋರ್ ಘೋಷಣೆಗೆ ಸಹಿ ಹಾಕಿದವು. ಆ ಮೂಲಕ ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ಭರವಸೆ ನೀಡಲಾಯಿತು. ಈ ಬೆಳವಣಿಗೆಗಳ ನಡುವೆ ತನ್ನ ಕುತಂತ್ರವನ್ನು ಮುಂದುವರಿಸಿದ ಪಾಕಿಸ್ತಾನ ತನ್ನ ಸೇನೆಯನ್ನು ರಹಸ್ಯವಾಗಿ ಭಾರತದ ಗಡಿ ನಿಯಂತ್ರಣ ರೇಖೆ ಕಡೆಗೆ ಕಳುಹಿಸಿತು. ಇದು 1999ರ ಮೇ ಮತ್ತು ಜುಲೈ ತಿಂಗಳಾಗಿತ್ತು.
ದುರದೃಷ್ಟವಶಾತ್, ಭಾರತೀಯ ಪಡೆಗಳಿಗೆ ಪಾಕಿಸ್ತಾನದ ಒಳನುಸುಳುವಿಕೆಯ ಪ್ರಮಾಣದ ಬಗ್ಗೆ ತಿಳಿದಿರಲಿಲ್ಲ ಮತ್ತು ಅದು ಸಣ್ಣ ಪ್ರಮಾಣದಲ್ಲಿದೆ ಎಂದು ಭಾವಿಸಲಾಗಿದೆ. ಆರಂಭದಲ್ಲಿ ಪಾಕಿಸ್ತಾನ ಸೇನೆಯು ಯುದ್ಧದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಆಕ್ರಮಣಕ್ಕೆ ಕಾಶ್ಮೀರಿ ಉಗ್ರಗಾಮಿಗಳನ್ನು ದೂಷಿಸಿತು. ಆದಾಗ್ಯೂ, ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹೇಳಿಕೆಗಳು ಯುದ್ಧದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸಿದವು. ಭಾರತವು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಪಾಕಿಸ್ತಾನದ ವಿರುದ್ಧ ಆಪರೇಷನ್ ವಿಜಯ್‌ಗಾಗಿ 20,000 ಸೈನಿಕರನ್ನು ಕಳುಹಿಸಿತು.
ನಿರ್ಣಾಯಕ ಸ್ಥಳಗಳಲ್ಲಿ ಪಾಕಿಸ್ತಾನಿ ಸೈನಿಕರು ನೆಲೆಸುವ ಮೂಲಕ ಪಾಕಿಸ್ತಾನವು ಭಾರತದ ನಿಯಂತ್ರಿತ ಪ್ರದೇಶಗಳಲ್ಲಿನ ವಿವಿಧ ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡಿತು. ಯುದ್ಧದ ಎರಡನೇ ಹಂತದಲ್ಲಿ ಯುದ್ಧತಂತ್ರದ ಸಾರಿಗೆ ಮಾರ್ಗಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತವು ದಿಟ್ಟ ಪ್ರತಿಕ್ರಿಯಿಸಿತು. ಅಲ್ಲದೆ ಭಾರತವು ವಾಯುಪಡೆಯನ್ನು ಕೂಡ ಯುದ್ಧದಲ್ಲಿ ಬಳಸುವ ಮೂಲಕ ಅಂತಿಮ ಹಂತದಲ್ಲಿ ಜು.26ರಂದು ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ಜಯ ಸಾಧಿಸಿತು.
ಈ ಯುದ್ಧದಲ್ಲಿ ಭಾರತದ ನೂರಾರು ವೀರ ಯೋಧರು ಹುತಾತ್ಮರಾದರು. ಇವರನ್ನು ಗೌರವಿಸುವ ನಿಟ್ಟಿನಲ್ಲಿ ಜು.26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. ಭಾರತದ ಪ್ರಧಾನ ಮಂತ್ರಿಗಳು ಪ್ರತಿ ವರ್ಷ ದೆಹಲಿ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.
ವಿಶೇಷ ಕಾರ್ಯಕ್ರಮಗಳು
ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದರ ಪ್ರಯುಕ್ತ ಭಾರತೀಯ ಸೇನೆಯು ದೆಹಲಿಯಿಂದ ಕಾರ್ಗಿಲ್ ವಿಜಯ್ ಯುದ್ಧ ಸ್ಮಾರಕಕ್ಕೆ ಬೈಕ್ ರ್ಯಾಲಿಯನ್ನು ಕೈಗೊಂಡಿದೆ. ಯುದ್ಧ ಸ್ಮಾರಕದಲ್ಲಿ ಧ್ವಜಾರೋಹಣ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಯೋಜಿಸಲಾಗಿದ್ದು, ಹುತಾತ್ಮರ ಕುಟುಂಬಗಳನ್ನು ಸ್ಮಾರಕ ಸೇವೆಗೆ ಆಹ್ವಾನಿಸಲಾಗಿದೆ. ಡ್ರಾಸ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೃತ್ಯ ಸಂಯೋಜನೆಯ ನೃತ್ಯ ಪ್ರದರ್ಶನಗಳು, ದೇಶಭಕ್ತಿ ಗೀತೆಗಳು ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Published On - 6:55 am, Tue, 26 July 22