ಮಂಗಳೂರ ಸಮಾಚಾರ: ಕನ್ನಡದ ಮೊದಲ ಪತ್ರಿಕೆ ಹುಟ್ಟಿದ್ದು ಹೇಗೆ, ಕೇವಲ ಎರಡೇ ವರ್ಷಕ್ಕೆ ಕೊನೆಗೊಂಡಿದ್ದು ಯಾಕೆ?
Mangalura Samachara: ಮಂಗಳೂರಿನಲ್ಲಿ ನೆಲೆಸಿದ ಜರ್ಮನಿಯ ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಅವರು ಹೊರಗಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಜನರಿಗೆ ಕನ್ನಡದಲ್ಲಿ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಆಗ ಹುಟ್ಟಿದ್ದೇ ಮಂಗಳೂರ ಸಮಾಚಾರ. ಇದು ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿತು.
ಕನ್ನಡ ಪತ್ರಿಕೋದ್ಯಮಕ್ಕೆ ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಒಂದೂವರೆ ಶತಮಾನಕ್ಕೂ ಪ್ರಾಚೀನವಾದ ಕನ್ನಡ ಪತ್ರಿಕೋದ್ಯಮದ ಇತಿಹಾಸ ಆರಂಭವಾದದ್ದು 18ನೇ ಶತಮಾನದ ಮಧ್ಯಭಾಗದಲ್ಲಿ. ಎಲ್ಲರಿಗೂ ತಿಳಿದಿರುವಂತೆ ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ. ಹೊಸಗನ್ನಡದ ಕಾಲಘಟ್ಟದಲ್ಲಿ ಕಾದಂಬರಿ, ಸಣ್ಣ ಕಥೆ, ಪ್ರವಾಸ ಕಥನ, ಜೀವನ ಚರಿತ್ರೆ, ಪ್ರಬಂಧ ರಚನೆ, ನವೋದಯ ಕಾವ್ಯ ಮುಂತಾದ ಸಾಹಿತ್ಯ ಪ್ರಾಕಾರಗಳ ಜೊತೆಗೆ ಕನ್ನಡಕ್ಕೆ ಪತ್ರಿಕೋದ್ಯಮವೂ ಬಂದು ಸೇರಿತು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೆಲವು ಹೊಸ ಮಾರ್ಪಾಡುಗಳನ್ನು ತಂದುಕೊಟ್ಟು ಹೊಸ ಗನ್ನಡದ ಕಾಲಘಟ್ಟಕ್ಕೆ ಪೀಠಿಕೆ ಹಾಕಿಕೊಟ್ಟವರಲ್ಲಿ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಕೂಡ ಒಬ್ಬರು. ಇವರು ಕನ್ನಡದ ಅಧ್ಯಯನಕ್ಕೆ ಹೊಸ ದಾರಿಗಳನ್ನು ಹಾಕಿಕೊಟ್ಟು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿದ್ದಾರೆ.
ಮಂಗಳೂರಿನಲ್ಲಿ ನೆಲೆಸಿದ ಜರ್ಮನಿಯ ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಅವರು ಹೊರಗಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಜನರಿಗೆ ಕನ್ನಡದಲ್ಲಿ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಇವರು ಜರ್ಮನ್ ಇವಾಂಜೆಲಿಕಲ್ ಮಿಷನ್ ಪ್ರೆಸ್ ಅನ್ನು 1841 ರಲ್ಲಿ ಮಂಗಳೂರಿನಲ್ಲಿ ಸ್ಥಾಪಿಸಿದರು. ಕನ್ನಡ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಮೊಗ್ಲಿಂಗ್, ಸ್ಥಳೀಯರು ಕೇವಲ ವದಂತಿಗಳ ಮಾತನ್ನು ಹೆಚ್ಚು ನಂಬುತ್ತಾರೆ, ನಿಜವಾದ ಸುದ್ದಿ ಇವರಿಗೆ ತಲುಪುತ್ತಿಲ್ಲ ಎಂಬುದನ್ನು ಅರಿತರು. ಹೀಗಾಗಿ ಅವರು ಅಧಿಕೃತ ಸುದ್ದಿ ನೀಡುವ ಪತ್ರಿಕೆಯನ್ನು ಪ್ರಕಟಿಸಲು ನಿರ್ಧರಿಸಿದರು. ಆಗ ಹುಟ್ಟಿದ್ದೇ ಮಂಗಳೂರ ಸಮಾಚಾರ.
ಎರಡೇ ವರ್ಷದಲ್ಲಿ ಅಂತ್ಯ:
ಜುಲೈ 1, 1843 ರಂದು, ಲಿಥೋ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಕಟವಾದ ಮಂಗಳೂರ ಸಮಾಚಾರ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿತು. ಆದರೆ, ಈ ಪತ್ರಿಕೆ ಕೇವಲ ಎರಡು ವರ್ಷಗಳ ಕಾಲ ಮಾತ್ರ ಉಳಿದುಕೊಂಡಿತು. ಹೀಗಿದ್ದರೂ ಪತ್ರಿಕೋದ್ಯಮಕ್ಕೆ ಇದರ ಕೊಡುಗೆ ಗಮನಾರ್ಹವಾಗಿದೆ. ಈ ಐತಿಹಾಸಿಕ ದಿನವನ್ನು ಗುರುತಿಸಲು ಕರ್ನಾಟಕ ಮಾಧ್ಯಮ ಅಕಾಡೆಮಿಯು ಜುಲೈ 1 ಅನ್ನು ‘ಪತ್ರಿಕಾ ದಿನ’ ಎಂದು ಆಚರಿಸುತ್ತದೆ. ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ವಹಿಸುವ ಮಹತ್ವದ ಪಾತ್ರವನ್ನು ಓದುಗರಿಗೆ ತಿಳಿಸುವುದು. ಇದಲ್ಲದೆ, ಸಾಮಾನ್ಯ ಜನರ ಕೂಗಿಗೆ ಧ್ವನಿಯಾದ ಪತ್ರಕರ್ತರ ಪಾತ್ರವನ್ನು ಈ ಸಂದರ್ಭವು ನೆನಪಿಸುವುದಾಗಿದೆ.
ಮೊಗ್ಲಿಂಗ್ ಅವರು ಯುರೋಪಿಯನ್ ಪತ್ರಿಕೆಯ ಕುರಿತು ಅಪಾರ ಜ್ಞಾನ ಹೊಂದಿದ್ದರಿಂದ ಕನ್ನಡದ ಮೊದಲ ಪತ್ರಿಕೆಯು ವೃತ್ತಿಪರ ಸ್ಪರ್ಶವನ್ನು ಹೊಂದಿತ್ತು. ಅವರು ಹಲವಾರು ಯುರೋಪಿಯನ್ ಭಾಷೆಗಳ ಮೇಲೆ ಪಾಂಡಿತ್ಯವನ್ನು ಹೊಂದಿದ್ದರು. 1840ರಲ್ಲಿ ಮಂಗಳೂರಿಗೆ ಬಂದಿಳಿದ ಕೂಡಲೇ ತುಳು, ಕೊಂಕಣಿ, ಕನ್ನಡ ಕಲಿತರು. ಅವರು ಮಿಷನರಿಯಾಗಿದ್ದರೂ, ಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದರು.
ಮಂಗಳೂರ ಸಮಾಚಾರ ಓದುಗರಲ್ಲಿ ಗಮನಾರ್ಹ ಪ್ರಭಾವ ಬೀರಿತು. ಹೆಚ್ಚಿನ ಸುದ್ದಿಗಳನ್ನು ವಿದೇಶಿ ಮತ್ತು ಭಾರತೀಯ ಪತ್ರಿಕೆಗಳಿಂದ ಸಂಗ್ರಹಿಸಲಾಗುತ್ತಿತ್ತು. ಇದು ಕಲ್ಲಚ್ಚಿನಲ್ಲಿ ಹದಿನೈದು ದಿನಗಳಿಗೊಮ್ಮೆ ಮಂಗಳೂರಿನಿಂದ ಪ್ರಕಟವಾಗುತ್ತಿತ್ತು. ನಾಲ್ಕು ಪುಟಗಳನ್ನೊಳಗೊಂಡ ಪತ್ರಿಕೆಯ ಬೆಲೆ ಒಂದು ಪೈಸೆ ನಿಗದಿ ಮಾಡಲಾಗಿತ್ತು. ಸಂಪಾದಕರಾಗಿ, ಮೊಗ್ಲಿಂಗ್ ಅವರೇ ಸುದ್ದಿಗಳನ್ನು ಆಯ್ಕೆ ಮಾಡುತ್ತಿದ್ದರು. ಇದರಲ್ಲಿ ಸ್ಥಳೀಯ ಸುದ್ದಿಗಳು, ಸರ್ಕಾರಿ ಅಧಿಸೂಚನೆಗಳು, ಕಾನೂನು ವಿಷಯಗಳು, ಹಾಡುಗಳು, ಕಥೆಗಳು ಮತ್ತು ಇತರ ರಾಜ್ಯಗಳ ಸುದ್ದಿಗಳು ಪ್ರಕಟವಾಗುತ್ತಿತ್ತು. ಭಾರತದ ವಿವಿಧ ಭಾಗಗಳನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮಾಡುತ್ತಿದ್ದ ಪ್ರಯತ್ನಗಳ ಕುರಿತು ಅವರು ವ್ಯಾಪಕವಾಗಿ ಪ್ರಕಟಿಸಿದರು. ಜೊತೆಗೆ ಅಪರಾಧಗಳನ್ನು ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂಬ ತಿಳಿವಳಿಕೆ ಜನರಲ್ಲಿ ಉಂಟಾಗಬೇಕೆಂಬ ಉದ್ದೇಶದಿಂದ ಕೋರ್ಟಿನ ಪ್ರಕರಣಗಳಿಗೆ ಸಂಬಂಧಿಸಿದ ಸಮಾಚಾರಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು.
ಮೊಗ್ಲಿಂಗ್ ಕನ್ನಡ ಮಾತನಾಡುವ ಪ್ರದೇಶಗಳ ವಿವಿಧ ಭಾಗಗಳಿಂದ ಪತ್ರಗಳ ಮೂಲಕ ಪತ್ರಿಕೆಯ ಕುರಿತು ಅಭಿಪ್ರಾಯವನ್ನು ಪಡೆಯುತ್ತಿದ್ದರು. ಮೈಸೂರು, ಶಿವಮೊಗ್ಗ, ಹೊನ್ನಾವರ, ಬಳ್ಳಾರಿ, ಮಂಗಳೂರು ಮತ್ತು ತುಮಕೂರಿನಾದ್ಯಂತ ಹಲವಾರು ಓದುಗರಿದ್ದಾರೆ ಎಂಬುದನ್ನು ತಿಳಿದು ಸಂತೋಷಪಟ್ಟರು. ಬಾಸೆಲ್ ಮಿಷನ್ ವರದಿಯ ಪ್ರಕಾರ, ಜುಲೈ 1, 1843 ರಿಂದ ಫೆಬ್ರವರಿ 15, 1844 ರವರೆಗೆ ಒಟ್ಟು 7,850 ಪ್ರತಿಗಳನ್ನು ಲಿಥೋಗ್ರಾಫ್ ಮಾಡಲಾಗಿದೆ. ನಂತರ ಪ್ರಕಟಣೆಯನ್ನು ಬಳ್ಳಾರಿಯ ಲಂಡನ್ ಮಿಷನರಿ ಸೊಸೈಟಿ ವಹಿಸಿಕೊಂಡಿತು, ಅದು ಲೆಟರ್‌ಪ್ರೆಸ್ ಮೂಲಕ ಪತ್ರಿಕೆಯನ್ನು ಮುದ್ರಿಸುವ ಪ್ರಯೋಜನವನ್ನು ಹೊಂದಿತ್ತು. ಕನ್ನಡದ ಮೊದಲ ಪತ್ರಿಕೆಯು ಮಂಗಳೂರಿನಲ್ಲಿದ್ದ ಸಮಯದಲ್ಲಿ ಸರಾಸರಿ 530 ಪ್ರತಿಗಳನ್ನು ಪ್ರಕಟಿಸಿತ್ತು.
ಈ ಪತ್ರಿಕೆಯನ್ನು ಮಂಗಳೂರಿಗೆ ಮಾತ್ರ ಸೀಮಿತಗೊಳಿಸದೆ ಅದನ್ನು ಇಡೀ ಮೈಸೂರು ರಾಜ್ಯಕ್ಕೆ ಪರಿಚಯಿಸಲು ಅದರ ಹೆಸರನ್ನು “ಕಂನ್ನಡ ಸಮಾಚಾರ” ಎಂದು ಬದಲಾಯಿಸಿ, ಅಚ್ಚು ಮೊಳೆ ಮುದ್ರಣಾಲಯದ ಸೌಲಭ್ಯವಿರುವ ಬಳ್ಳಾರಿಗೆ ಮಾರ್ಚ್ 01, 1844 ರಂದು ಸ್ಥಳಾಂತರಿಸಲಾಯಿತು. ಮತ್ತೊಬ್ಬ ಮಿಷನರಿ ವಿಲಿಯಂ ರೀವ್, ಈ ಪತ್ರಿಕೆಯನ್ನು ಪ್ರಕಟಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಮೊಗ್ಲಿಂಗ್ ಮಂಗಳೂರಿನ ಸಂಪಾದಕರಾಗಿ ಮುಂದುವರೆದರು. ಮೊಗ್ಲಿಂಗ್‌ಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಿದ್ದರಿಂದ, ಈ ಪ್ರಕಟಣೆಗೆ ಅಗತ್ಯವಾದ ಸಮಯವನ್ನು ನೀಡಲು ಸಾಧ್ಯವಾಗಲಿಲ್ಲ. ಅತ್ತ ಬಳ್ಳಾರಿಯಲ್ಲಿ, ವಿಲಿಯಂ ರೀವ್ ಅವರ ಆರೋಗ್ಯವು ಹದಗೆಟ್ಟಿತು ಮತ್ತು ಅವರು 1844 ರಲ್ಲಿ ನಿಧನರಾದರು. ಹೀಗಾಗಿ ಕನ್ನಡ ಸಮಾಚಾರವು ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ ಮತ್ತು ಡಿಸೆಂಬರ್ 1844 ರಲ್ಲಿ ಕೊನೆಗೊಂಡಿತು.
ಎಲ್ಲಿ ಮಾರಾಟ ಆಗುತ್ತಿತ್ತು?:
ಮಂಗಳೂರಿನಲ್ಲಿ ಕೊತ್ವಾಲ ಕಟ್ಟೆಯೆದುರು ಮತ್ತು ತಾಲೂಕು ಕಚೇರಿಯ ಹತ್ತಿರವಿದ್ದ ಅವರ ಇಂಗ್ಲಿಷ್ ಶಾಲೆಯಲ್ಲಿ ಪತ್ರಿಕೆ ಮಾರಾಟಕ್ಕೆ ದೊರೆಯುತ್ತಿತ್ತು. ಇವ್ಯಾಂಜೆಲಿಕಲ್ (ಬಾಸೆಲ್) ಮಿಷನ್ ದವರು ತರಿಸಿದ್ದ ಮುದ್ರಣ ಯಂತ್ರಕ್ಕೆ ಕಲ್ಲಚ್ಚನ್ನು ಜೋಡಿಸಿ ಪ್ರಕಟಿಸುತ್ತಿದ್ದರು. ಕಲ್ಲಚ್ಚಿನ ಮುದ್ರಣ ಸ್ವರೂಪ ಸುಂದರವಾಗಿತ್ತು. ಪತ್ರಿಕೆಯ ಒಡೆತನ ಬಾಸೆಲ್‌ಮಿಷನವರಿಗೆ ಸೇರಿದ್ದರೂ ಎಲ್ಲಿಯೂ ಅದರ ಪ್ರಸ್ತಾಪವಿಲ್ಲ. ಆದರೆ ಪ್ರತಿ ಸಂಚಿಕೆಯ ಕೊನೆಯಲ್ಲಿ ಪತ್ರಿಕಾ ಸಂಪಾದಕರಾದ ಹೆರ್ಮನ್ ಮೊಗ್ಲಿಂಗ್ ಅವರ ಹೆಸರು ಪ್ರಕಟಗೊಂಡಿದೆ.
ತಮ್ಮ ಕಾಲದಲ್ಲಿ ನಡೆದಿರುವಂತಹ ದೇಶೀಯ ಅರಸರ ಯುದ್ಧಗಳನ್ನು ಮೊಗ್ಲಿಂಗ್ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ. ಹಿಂದೂಸ್ತಾನದ ಗ್ವಾಲಿಯರ್, ಲಾಹೋರ್, ಸಿಂಧ್ ಮುಂತಾದ ಪ್ರಾಂತಗಳ ಅರಸರು ಬ್ರಿಟಿಷರೊಡನೆ ಹೋರಾಡಿ, ಒಂದೊಂದಾಗಿ ಅಸ್ತಂಗತವಾಗುತ್ತಿದ್ದುದರ ಚಿತ್ರಣ ಇದರಲ್ಲಿದೆ. ಅಲ್ಲದೆ ಕಾಬೂಲ್, ಚೀನಾ ದೇಶಗಳಲ್ಲಿ ನಡೆದ ಯುದ್ಧಗಳಿಗೆ ಸಂಬಂಧಿಸಿದ ಘಟನೆಗಳು ಪ್ರಕಟವಾಗಿವೆ. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಮಂಗಳೂರ ಸಮಾಚಾರ’ ಪತ್ರಿಕೆಯು ಮಂಗಳೂರು ಸುತ್ತಮುತ್ತಲಿನ ವರ್ತಮಾನಗಳನ್ನಲ್ಲದೆ ರಾಜ್ಯಗಳ, ವಿವಿಧ ದೇಶಗಳಲ್ಲಿನ ಆಗುಹೋಗುಗಳ ಬಗ್ಗೆಯೂ ಜನರಿಗೆ ಮಾಹಿತಿಯನ್ನು ಒದಗಿಸಿಕೊಡುತ್ತಿತ್ತು. ಈ ರೀತಿಯಾಗಿ ಪತ್ರಿಕೆ ತನಗೆ ಲಭ್ಯವಾದ ಘಟನೆಗಳನ್ನು ದಾಖಲಿಸುವುದರ ಮೂಲಕ 19ನೆಯ ಶತಮಾನದ ಇತಿಹಾಸ ರಚನೆಗೆ ಸಹಕಾರಿಯಾಗಿದೆ.
ಕನ್ನಡ ಸುವಾರ್ತಿಕ:
ದೇಶದ ರಾಜಕೀಯ ರಂಗದಲ್ಲಿ ಹೆಚ್ಚು ಕುತೂಹಲವನ್ನು ಸೃಷ್ಟಿಸಿದ ಸಿಪಾಯಿ ದಂಗೆಯ ನಂತರ, ರಾಜಕೀಯ ಬೆಳವಣಿಗೆಗಳ ಬಗ್ಗೆ ಓದುಗರಿಗೆ ತಿಳಿಸಲು ಮೊಗ್ಲಿಂಗ್ ಮತ್ತೊಂದು ಹೊಸ ಪತ್ರಿಕೆಯನ್ನು ಶುರು ಮಾಡಿದರು. 1857 ರಲ್ಲಿ ‘ಕನ್ನಡ ಸುವಾರ್ತಿಕ’ ಎಂಬ ಪತ್ರಿಕೆ ತೆರೆದರು, ಆದರೆ ಇದು ಕೂಡ ಎರಡು ವರ್ಷಗಳ ಕಾಲ ನಡೆಯಿತಷ್ಟೆ.
ಮೊಗ್ಲಿಂಗ್ ಅವರನ್ನು ಮಿಷನರಿಯಾಗಿ ಕಳುಹಿಸಲಾಗಿದ್ದರೂ, ಇವರು ಶಿಕ್ಷಣ, ಸಾಹಿತ್ಯಿಕ ಚಟುವಟಿಕೆಗಳು ಮತ್ತು ಪತ್ರಿಕೆ ಪ್ರಕಟಣೆಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಟ್ಟರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕಾಗಿ ಅವರು ಮಾಡಿದ ಶ್ಲಾಘನೀಯ ಕೆಲಸಕ್ಕಾಗಿ, ಟ್ಯೂಬಿಂಗೆನ್‌ನ ಎಬರ್‌ಹಾರ್ಡ್ ಕಾರ್ಲ್ಸ್ ವಿಶ್ವವಿದ್ಯಾನಿಲಯವು 1858 ರಲ್ಲಿ ಮೊಗ್ಲಿಂಗ್‌ಗೆ ಗೌರವ ಡಾಕ್ಟರೇಟ್ ಅನ್ನು ನೀಡಿತು. ಅವರು ಕನ್ನಡಕ್ಕಾಗಿ ಮಾಡಿದ ಕಾರ್ಯಕ್ಕಾಗಿ ಅಂತಹ ಗೌರವವನ್ನು ಪಡೆದ ಮೊದಲಿಗರು.
ಕನ್ನಡದ ಮೊದಲ ಪತ್ರಿಕೆ ಸ್ವಲ್ಪಕಾಲ ಮಾತ್ರ ಪ್ರಕಟಗೊಂಡರೂ ಸಹ ಪತ್ರಿಕೋದ್ಯಮದ ಆರಂಭಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದು ಗಮನೀಯ ಅಂಶ. ವಿದೇಶಿಯರು ಮೈಸೂರು ಪ್ರಾಂತ್ಯದಲ್ಲಿ ನೆಲೆಸಿ ಕಬ್ಬಿಣದ ಕಡಲೆಯಂತಿದ್ದ ಕನ್ನಡ ಗದ್ಯ ಭಾಷೆಯನ್ನು ಕಲಿತು ಒಂದು ಪತ್ರಿಕೆಯನ್ನು ಪ್ರಕಟಿಸುವಷ್ಟು ಪರಿಣಿತಿಯನ್ನು ಹೊಂದಿದ್ದು ಪ್ರಶಂಸನೀಯ. ಕನ್ನಡ ಭಾಷಾ ಜ್ಞಾನವನ್ನು ಒಂದು ಜಿಲ್ಲೆಗೆ ಮಾತ್ರ ಮೀಸಲಿಡದೇ ಇಡೀ ರಾಜ್ಯಾದ್ಯಂತ ಕನ್ನಡದಲ್ಲಿ ವಾರ್ತೆ ಮತ್ತು ಮಾಹಿತಿಯನ್ನು ಜ್ಞಾನಾರ್ಜನೆಗೆ ನೀಡಬೇಕೆಂದ ಮಿಷನರಿಗಳ ಪ್ರಯತ್ನ ಶ್ಲಾಘನೀಯ.