ನಾನೆಂಬ ಪರಿಮಳದ ಹಾದಿಯಲಿ: ಪರತ್ ಪಾವತಿಯಾಗುವ ತನಕ ಹರಿದ ಹೊಳೆ ನೀರೆಷ್ಟೋ…

‘ಮಕ್ಕಳು ಗಂಡ ಮನೆ ನೋಡ್ಕೊಂಡು ನೆಮ್ಮದಿಯಿಂದ ಇರು. ಕೆಲಸಕ್ಕೆ ಬಾರದ ವಿಷಯಗಳಿಗೆ ಸಮಯ ಹಾಳು ಮಾಡೋದೇನು ಬೇಡ ಎನ್ನುವ ಉಪದೇಶಗಳು ಎಲ್ಲೆಡೆಯಿಂದ ಹರಿದು ಬರತೊಡಗಿದವು. ಅವುಗಳ ವಿರುದ್ಧವೇ ಸೆಣಸಿದೆ. ಮುಂಬಯಿನ ಸಾಂಸ್ಕೃತಿಕ ಲೋಕ ನನ್ನ ಅಸ್ಮಿತೆಗೆ ಇಂಬು ಕೊಡುತ್ತ ಹೋಯಿತು. ನನಗೂ ಒಂದು ವ್ಯಕ್ತಿತ್ವವಿದೆ, ನನಗೂ ಬೇಕು ಬೇಡಗಳಿವೆ ಎಂಬ ನಿಚ್ಚಳ ಅರಿವು ಮೂಡುತ್ತ ಹೋಯಿತು. ನಿಧಾನಕ್ಕೆ ಗಂಡ ಅರ್ಥಮಾಡಿಕೊಂಡರು.‘ ಜಯಲಕ್ಷ್ಮೀ ಪಾಟೀಲ್

ನಾನೆಂಬ ಪರಿಮಳದ ಹಾದಿಯಲಿ: ಪರತ್ ಪಾವತಿಯಾಗುವ ತನಕ ಹರಿದ ಹೊಳೆ ನೀರೆಷ್ಟೋ...
ಲೇಖಕಿ, ರಂಗಕಲಾವಿದೆ, ಜಯಲಕ್ಷ್ಮೀ ಪಾಟೀಲ
Follow us
ಶ್ರೀದೇವಿ ಕಳಸದ
|

Updated on:Jan 21, 2021 | 10:03 AM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ರಂಗಭೂಮಿ-ಸಿನೆಮಾ ಕಲಾವಿದೆ, ಲೇಖಕಿ, ಸಂಘಟಕಿ ಜಯಲಕ್ಷ್ಮೀ ಪಾಟೀಲ ಅವರ ಅನುಭವ ಬರಹ ನಿಮ್ಮ ಓದಿಗೆ.

ಈ ಹೊತ್ತಿಗೆದು ಹೊನಲು ಕಾರ್ಯಕ್ರಮ ಐತಿ ಅದಿತಿ. ಅವತ್ತ ಫೋಟೋಗ್ರಾಫಿ ನಿಂದ ಏನವಾ, ಫ್ರೀ ಮಾಡ್ಕೊ. – ಹೂಂ ಮಾ ಆಯ್ತು. ಅಮೋಲ್, ಜನದನಿ ಸೆಶನ್ ಐತಿ, ಪ್ರಾಜೆಕ್ಟರ್ ಸೆಟ್ ಮಾಡ್ಬೇಕಲ್ಲಿ. ಅಲ್ಲಿರೋರಿಗೆ ಗೊತ್ತಿಲ್ಲಂತ. ನಿಂದು ಶೋಟಿಂಗ್ ಇಲ್ಲಪಾ ಅಂದ್ರ ಬಂದಬಿಡು ನೀನು. – ಸ್ಸರಿ ಆಯ್ತು ಬರ್ತೀನಿ. ರೀ, ಇಂತಿಂಥಾ ಊರಿನ ಫಂಕ್ಷನ್ನಿಗೆ ಚೀಫ್ ಗೆಸ್ಟ್ ಅಂತ ಕರದಾರ. ನನಗೊಂದು ಕಾರು ಬೇಕಲ್ರೀ. – ಆಯ್ತು ಅರೇಂಜ್ ಮಾಡ್ತೀನಿ ಬಿಡು. ಜಯಲಕ್ಷ್ಮಿ, ನಿನ್ನಿ ಧಾರಾವಾಯಾಗ ಭಾಳ ಚಂದ ಕಾಣಾಕತ್ತಿದ್ದಿ. – ಥ್ಯಾಂಕ್ಸ್​ ರೀ ಅತ್ತಿ. ಭಾಳ ಛಂದ ಬರ್ದಿ ಪಪ್ಪಿ ಈ ಆರ್ಟಿಕಲ್ – ಖರೇನಾ ಬೇ!? – ಖರೇ ಖರೆ. ಪಪ್ಪಾ, ನೀ ಬರ್ದಿರೊ ಹಾಡಗೊಳ್ದು ಸಿಡಿ ಮಾಡಸ್ತೀನಿ – ಅಪ್ಪಾ, ಒನ್ನಾಕಾರಷ್ಟ ಅಷ್ಟ ಹಾಡಾಗ್ಯಾವ. ಅಷ್ಟಕ್ಕ ಯಾರರ ಸಿಡಿ ಮಾಡಸ್ತಾರಾ!? – ನಾಕಾದ್ರ ಏನಾತು? ನಾ ಎಲ್ಲಾ ಮಾಡಸ್ತೀನಿ ಸುಮ್ನಿರು. ಪಪ್ಪಿ, ಇವತ್ತಿನ ಪೇಪರ್ ನೋಡೀದೆ. ಚೊಲೊ ಬಂದತಿ ಆರ್ಟಿಕಲ್ – ಥ್ಯಾಂಕ್ಸ್​ ಅಶೋಕ್ ಮಾಮಾ ವೈನಿ, ನಿಮ್ಮ ಬಗ್ಗೆ ಪೇಪರ್ನ್ಯಾಗ ಬರ್ದಿದ್ದು ಓದಿದೇರಿ ಮಸ್ತ್ ಬರ್ದಾರ್ರೀ. – ಥ್ಯಾಂಕ್ಸ್​ ರಾಮನಗೌಡ ಅಕ್ಕಾ, ಈ ಹುಡುಗ್ಯಾರಿಗೆಲ್ಲ ನಿನ್ನ ಜೋಡಿ ಫೋಟೊ ತಗಸ್ಕೋಬೇಕಂತ. ಆವಾಗಿಂದ ಕಾಯಾಕತ್ತಾರ – ಬಂದೆ ತಡಿ ಪುಷ್ಪಾ ಜುಳುಜುಳು ಜುಳುಜುಳು ಜುಳುಜುಳು ಮನದಿ ಮಂಜುಳ ನಾದ ಇವು ಮತ್ತು ಇಂಥಾ ಇನ್ನೂ ಅನೇಕ ಆಪ್ತರ ಮಾತುಗಳು, ಮಾಡಿದ ಕೆಲಸಕ್ಕೆ ಸಿಗುವ ಪರತ್ ಪಾವತಿಗಳು ಇವೆಲ್ಲ.

ಆದರೆ… ಈ ಎಲ್ಲಾ ಪರತ್ ಪಾವತಿಗಳು ಸಿಗುವ ಮೊದಲು ನದಿಯಲ್ಲಿ ಬಹಳಷ್ಟು ನೀರು ಹರಿದಿದೆ. ಒಂದೊಮ್ಮೆ ನನಗೇ ಖುದ್ದು ಏನು ಬೇಕೆಂದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಏನೋ ಬೇಕು ಅನ್ನುವುದರ ಚಡಪಡಿಕೆಗೆ ಯಾವ ಅರ್ಥ ಕೊಟ್ಟು ಅದನ್ನು ಪಡೆಯುವುದು ಎಂದೂ ಯೋಚಿಸಿರಲಿಲ್ಲ. ಬೇಕಾದ್ದು ಸಣ್ಣಪುಟ್ಟವು ಸಿಗ್ಲಿಲ್ಲ ಅನ್ನುವ ಕೊರಗೇ ದೊಡ್ಡದು ಮಾಡಿಕೊಂಡ ಕಾಲವೊಂದಿತ್ತು. ಬಿ.ಎಸ್ಸಿ ಎರಡನೇ ವರ್ಷದಲ್ಲಿದ್ದಾಗಲೇ ಮದುವೆಯಾಯಿತು. ಮಕ್ಕಳಾದವು. ಇದ್ದಕ್ಕಿದ್ದಂತೆ ಒಬ್ಬ ಜವಾಬ್ದಾರಿಯುತ ತಾಯಿಯೂ ಹುಟ್ಟಿಕೊಂಡುಬಿಟ್ಟಳು ಎನ್ನಲೆ? ತಾಯಾಗಿದ್ದು ತೊಡಕಾಯಿತೆನ್ನಲೇ? ಊಂಹೂಂ. ಇದಾವುದೂ ಆಗಲಿಲ್ಲ. ಮಕ್ಕಳು ಒಡಲಲ್ಲಿ ಕುಡಿಯೊಡೆದಾಗಲೇ ಎದೆಯೊಳಗೊಂದು ಪುಳಕ. ಎಲ್ಲರೂ ಒಂದೊಂದು ಹೆತ್ತರೆ ನಾನು ಅವಳಿ ಮಕ್ಕಳ ತಾಯಾಗುವೆನೆಂಬ ಸಂಭ್ರಮ. ಅವಳಿ ಮಕ್ಕಳು ಬಸಿರಲ್ಲಿ ಎಂದು ಕೇಳಿದವರೆಲ್ಲ, ‘ಯವ್ವಾ, ಅದ್ಹೆಂಗ ಮಾಡ್ತೀಯ ಪಪ್ಪಿ ಮುಂದ? ನಾವು ಒಂದೊಂದನ್ನ ಸಂಭಾಳ್ಸೂದ್ರಾಗ ಕುರಿಕ್ವಾಣ ಬಿದ್ದು ಹೋಕ್ಕತಿ ನಮ್ದು. ಇನ್ನ ಎರಡೆರ್ಡು ಮಕ್ಕಳ ಜ್ವಾಕಿ ಮಾಡೂದಂದ್ರ ಹುಡುಗಾಟದ ಮಾತಲ್ಲ.

ಅವ್ವನೆದುರು ಯಾರಾದ್ರೂ ಈ ಮಾತು ಅಂದ್ರೆ ಅದಕ್ಕುತ್ತರವಾಗಿ ಅವ್ವ, ‘ಅಯ್ಯ ಇಕಿ ದಾರ್ಯಾಗ ಹೋಗೋ ಹುಡೂಗೂರ್ನ ಕರ್ಕೊಂಡು ಬಂದ್ಬಂದು ಅವುತ್ರ ಮಾರಿ ತೊಳದು ಪೌಡರ ಕಾಡಿಗಿ ಹಚ್ಚಿ ತಲಿಹಿಕ್ಕಿ ಕಳಸ್ತಾಳರೀ. ಇನ್ನ ತನ್ನ ಮಕ್ಕಳು ಅಂದ್ರ ಸುಮ್ನಿರ್ತಾಳ್ರ್ಯಾ? ಬೆಕ್ಕಿನಗತೆ ಅವ್ತುರ್ನ ಬಾಯಾಗ ಕಚಗೊಂಡು ಅಡ್ಡ್ಯಾಡ್ತಾಳ ನೋಡ್ರಿ ಬೇಕಿದ್ದ್ರ. ಹೈರಾಣ ಅಕಿಗಲ್ಲ ನಾಳೆ ಬಾಣೇತನ ಮಾಡು ನಮಗ. ನಮ್ದು ಹೇಳ್ರಿ ನೀವು!’ ಎಂದು ಸುಳ್ಳುಸುಳ್ಳೇ ಆಕ್ಷೇಪದ ದನಿಯಲ್ಲಿ ಛೇಡಿಸುತ್ತ ನಗುತ್ತಿದ್ದಳು. ಅವ್ವ ಅಂದಂತೆ ನಿಜಕ್ಕೂ ನನಗೆ ಒಂದೇ ದಿನದ ಮಟ್ಟಿಗೆ ಹೋಗಲಿ ಒಂದು ಕ್ಷಣವೂ ಯಾಕಾದ್ರೂ ಅವಳಿಮಕ್ಕಳನ್ನು ಹೆತ್ತೆನೋ ಅನಿಸಲಿಲ್ಲ. ಬದಲಿಗೆ ಒಂದೇ ಹೆತ್ತವರ ಮಗುವಿನ ಜೊತೆಗೆ ಆಡಲು ಇನ್ನೊಂದು ಮಗುವಿಲ್ಲದೆ ಆ ಮಗು ಅದೆಷ್ಟು ಒಂಟಿತನ ಅನುಭವಿಸ್ತಿರ್ಬೇಕು ಎಂದೆಲ್ಲ ಯೋಚಿಸುತ್ತಿದ್ದೆ. ಆದರೆ ಅವ್ವ ಅಂದಂತೆ ಅವ್ವ ಮಾತ್ರವಲ್ಲ ಮನೆಮಂದಿಯೆಲ್ಲ ನನ್ನ ಮತ್ತು ಮಕ್ಕಳ ಸೇವೆಗೆ ಟೊಂಕ ಕಟ್ಟಿ ನಿಂತಿದ್ದರು. ಹಗಲು ನನಗೆ ಬಾಣಂತನದ ಶೋಢಷೋಪಚಾರ, ರಾತ್ರಿ ಹನ್ನೆರಡಕ್ಕೆ ಸರಿಯಾಗಿ ಕಣ್ಬಿಟ್ಟು ನಿಚ್ಚಳಾಗುವ ನನ್ನ ಮಗಳನ್ನು ಎತ್ತಿಕೊಂಡು ಕೂರುವ ಪಾಳಿ! ನಮ್ಮೂವರನ್ನು ಸುಖವಾಗಿಟ್ಟು ತಾನು ಹೈರಾಣಾಗಿಬಿಟ್ಟಳು ಅವ್ವ. ನೋಡಲಾಗದೆ ಮೂರು ತುಂಬುವ ಮೊದಲೇ ಮಕ್ಕಳಿಬ್ಬರ ಜೊತೆಗೆ ಗಂಡ ಅತ್ತೆ ನಾದಿನಿಯರೊಡನೆ ಆಗ ನನ್ನ ಪತಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಲೋಣಿಗೆ ಬಂದುಬಿಟ್ಟೆ.

‘ತಾವರೆಕೇರೇಲಿ ತಾಳಿಕಟ್ಟೋಕ್​ ಕೂಲೀನೇ?‘ ನಾಟಕದಲ್ಲಿ ಜಯಲಕ್ಷ್ಮೀ ಪಾಟೀಲ್

ಜವಾಬ್ದಾರಿಗಳ ಹಂಗೇ ಇಲ್ಲದೆ ಬೆಳೆದ ಮಕ್ಕಳಲ್ಲಿ ನಾನೂ ಒಬ್ಬಳು. ಓದನ್ನಾದರೂ ಜವಾಬ್ದಾರಿಯಿಂದ ನಿಭಾಯಿಸಿದೆನೆಂದೀರಾ? ಅದೂ ಇಲ್ಲ. ಓದಬೇಕೆನಿಸಿದಾಗ ಓದುತ್ತಿದ್ದೆ, ತಿಳಿದಷ್ಟು ಬರೆದು ಪಾಸಾಗುತ್ತಿದ್ದೆ. ಪರೀಕ್ಷೆಯಲ್ಲಿ ಡುಮ್ಕಿಯ ರುಚಿ ಮೊದಲ ಸಲ ನೋಡಿದ್ದು ಇಂಜಿನೀಯರಿಂಗ್ ಕಲಿಯಲು ಹೋದ ಮೊದಲ ವರ್ಷ. ಈಗ ಮಕ್ಕಳ ಜವಾಬ್ದಾರಿಯ ಜೊತೆಗೆ ಅತ್ತೆ ಮನೆಯ ಸೊಸೆಯಾಗಿ ನಡೆಯಬೇಕಾದ ಜವಾಬ್ದಾರಿ. ಮಕ್ಕಳನ್ನು ಸಂಭಾಳಿಸುವುದು ಕಷ್ಟವೆನಿಸಲಿಲ್ಲ ನನಗೆ ಆಗ. ಕಷ್ಟವಾಗಿದ್ದು ಸಂಪ್ರದಾಯಸ್ಥ ಕುಟುಂಬದ ‘ಅಂಗೈಯಾನ ಲಿಂಗದ ಮ್ಯಾಲೆ ನೀರು ಬೀಳುತನ ಬಾಯಾಗ ಹನಿ ನೀರು ಹಾಕಂಗಿಲ್ಲ’ ಎನ್ನುವ ನಿಯಮ! ಅಮ್ಮನ ಮನೆಯಲ್ಲಿ ಚಿಕ್ಕವಳಿದ್ದಾಗ ಲಿಂಗ ದೀಕ್ಷೆಯಾದ ಸ್ವಲ್ಪ ದಿನಗಳ ಕಾಲವಷ್ಟೇ ಲಿಂಗಪೂಜೆ, ನೇಮ ಇತ್ಯಾದಿ. ನಂತರ ಹವೂರಾಗಿ ದೊಡ್ಡವರಿಗೆ ತಿಳಿಯದಂತೆ ಗುಂಡಗಡಿಗಿಯನ್ನು ದೇವರ ಜಗುಲಿಯ ಮೇಲಿಟ್ಟು ವಿಭೂತಿ ಧರಿಸಿ ಪೂಜೆ ಆಯಿತೆಂದು ಅವರನ್ನು ಯಾಮಾರಿಸಲು ನೋಡಿದ್ದನ್ನು ಕಂಡು, ಇನ್ನಿವಳಿಗೆ ಹೇಳಿದರೇನೂ ಪ್ರಯೋಜನವಿಲ್ಲವೆಂದು ಅವ್ವ ಬೇಸತ್ತು ಗುಂಡಗಡಿಗಿಯನ್ನು ಟ್ರಜರಿ ಒಳಗಿಟ್ಟು ಸುಮ್ಮನಾಗಿದ್ದಳು. ತೀರ ಹಸಿವು ಎಂದಾಗ ಸ್ನಾನ ಮಾಡದೆ ತಿಂಡಿ ತಿನ್ನಲೂ (ಆಫ್ಕೋರ್ಸ್ ಬೈಸ್ಕೊಂಡು) ಅವಕಾಶವಿದ್ದ ಸ್ವತಂತ್ರ ಬದುಕಿನ ರುಚಿ ಈಗ ಸಾಧ್ಯವಿಲ್ಲವಾಗಿತ್ತು.

ಸ್ನಾನ ಮಾಡದೆಯೇ ತಿಂಡಿ ತಿನ್ನಲು ಅನುಮತಿ ಸಿಕ್ಕಿತು ಆಗಷ್ಟೇ ನಮ್ಮ ಮಾವನವರು ಹೋಗಿ ಏಳು ತಿಂಗಳಾಗಿತ್ತಷ್ಟೇ ಆದ್ದರಿಂದ ಅತ್ತೆ, ನಾದಿನಿ ಎಲ್ಲ ನಮ್ಮೊಂದಿಗಿದ್ದರು. ನನ್ನ ಪತಿಯೇ ಮನೆಯ ಹಿರಿಮಗನಾಗಿದ್ದರಿಂದ ಎಲ್ಲ ಜವಾಬ್ದಾರಿಗಳು ನಮ್ಮ ಮೇಲೆ. ಅದನ್ನು ಯಾವುದೇ ತಕರಾರಿಲ್ಲದೆ ನಿಭಾಯಿಸತೊಡಗಿದ್ದೆವು ನಾವಿಬ್ಬರು. ಇಬ್ಬರು ನಾದಿನಿಯರು ಮತ್ತು ಮೈದುನನ ಓದು, ಕೆಲಸ, ಮದುವೆ ಎಲ್ಲವನ್ನೂ ನಿಭಾಯಿಸಬೇಕಿತ್ತು. ನಮ್ಮತ್ತೆಯವರದು ತುಂಬಾ ನೇಮನಿಷ್ಠೆ. ಹೀಗಾಗಿ ಮನೆಯ ಸೊಸೆ ಅವನ್ನೆಲ್ಲ ಪಾಲಿಸಬೇಕು ಎಂದು ಅವರಂದುಕೊಂಡಿದ್ದು ಸಹಜವೇ ಆಗಿತ್ತು. ಮೊಲೆಕುಡಿವ ಎರಡು ಎಳೆ ಕಂದಮ್ಮಗಳಾದ್ದರಿಂದ ನನಗೋ ಜೋರು ಹಸಿವು ಆಗ. ಮೊದಲೇ ಬಡತನ ಅದರ ಮೇಲೆ ಏಕಾದಸಿ ಎನ್ನುವಂತೆ ನಿತ್ಯನಿಯಮಗಳ ಜೊತೆಗೆ ‘ಇರೊ ನಾಲ್ಕು ಜನಕ್ಕೆ ಮನೆ ಕೆಲಸದವಳ್ಯಾಕೆ’ ಅಂತ ಅವಳನ್ನೂ ಬಂದ ಹದಿನೈದು ಇಪ್ಪತ್ತು ದಿನಕ್ಕೆಲ್ಲ ಬಿಡಿಸಿಬಿಟ್ಟರು ನಮ್ಮತ್ತೆ. ಅವರ ತಪ್ಪಲ್ಲ. ಅವರು ಬಾಳಿಬದುಕಿದ್ದೇ ಹಾಗೆ. ಆದರೆ ನನಗಾಗಬೇಕಲ್ಲ? ಮಕ್ಕಳು, ಮನೆಗೆಲಸ, ಅಡುಗೆ, ಉಪಚಾರ ಎಲ್ಲ ಮುಗಿಸಿ ಸ್ನಾನ ಮಾಡಿ ಉಣ್ಣುವಾಗ ಸಂಜೆ ನಾಲ್ಕರ ಹೊತ್ತಾಗಿಬಿಡುವುದು ಮಾಮೂಲಿಯಾಗಿ ಹೋಯಿತು. ರಾತ್ರಿಗಳು ಮಕ್ಕಳ ಹಸಿವು, ಅವುಗಳ ಉಚ್ಚೆ ಬಟ್ಟೆ ಬದಲಿಸುವುದರಲ್ಲಿ ಹಗಲಾಗಿ ಬಿಡುತ್ತಿದ್ದವು. ಹಗಲು ಹೊತ್ತು ಮೇಲೆ ಹೇಳಿದ ಕಥೆ. ತುಂಬಾ ನಿತ್ರಾಣಗೊಂಡೆ. ಎಷ್ಟರ ಮಟ್ಟಿಗೆಂದರೆ ಕುಳಿತು ತರಕಾರಿ ಹೆಚ್ಚಿದ ಮೇಲೆ ಎದ್ದು ನಿಂತು ನಡೆಯಲಾಗದಷ್ಟು. ಬಾಗಿಯೇ ಒಂದೆಂಟಹತ್ತು ಹೆಜ್ಜೆ ನಡೆದರೆ ಮಾತ್ರ ನೆಟ್ಟಗೆ ನಿಲ್ಲಲು ಸಾಧ್ಯವಾಗುತ್ತಿತ್ತು. ಈ ಹೊತ್ತಲ್ಲಿ ಆಗ ನನ್ನ ನೆರವಿಗೆ ಬಂದ ನಾದಿನಿ ಮಲ್ಲಮ್ಮನನ್ನು ನೆನೆಯದೆ ಹೋದರೆ ಕೃತಘ್ನಳಾಗುವೆ. ಆಕೆಯಿಂದಾಗಿ ಸ್ನಾನ ಮಾಡದೆಯೇ ತಿಂಡಿ ತಿನ್ನಲು ಪರ್ಮಿಶನ್ ಸಿಕ್ಕು ಮತ್ತೆ ಒಂಚೂರು ತಾಕತ್ತು ಒಗ್ಗೂಡಲು ಸಾಧ್ಯವಾಗಿದ್ದು. ಒಂದರ್ಧ ಗಂಟೆಯ ವಿಶ್ರಾಂತಿಯೇ ಅಮ್ಮನಾದವಳ ಮುಖ್ಯ ಬೇಡಿಕೆಯಾದ ಸಮಯವದು. ಇನ್ನು ವ್ಯಕ್ತಿತ್ವ, ಅಸ್ಮಿತೆಯನ್ನು ಕಾಯ್ದುಕೊಳ್ಳುವ  ಪ್ರಶ್ನೆ ಬಲು ದೂರದ ಮಾತು.

ಮಕ್ಕಳು ಬೆಳದಿಂಗಳಿನಂತೆ ಬೆಳೆಯತೊಡಗಿದ್ದರು. ಕಾಡುವ ಮಕ್ಕಳಲ್ಲ ಬೇಡುವ ಮಕ್ಕಳಲ್ಲ. ಅವರ ಆಟ ತುಂಟಾಟಗಳನ್ನು ನೋಡಿ ಸಂಭ್ರಮಿಸುವುದೇ ಜೀವನದ ಪರಮಸುಖ ಎನ್ನುವಂತಾಗಿತ್ತು. ಇದಕ್ಕೆ ಸಮನಾಗಿ ಮನೆಯ ಜವಾಬ್ದಾರಿಗಳ ನಿಭಾಯಿಸುವಿಕೆ ನಡೆದೇ ಇತ್ತು. ಮುಂದೆ ಮಕ್ಕಳು ೩ ವರ್ಷದವರಿದ್ದಾಗಿರಬೇಕು, ಒಂದಿನ ಸುಧಾ ವಾರಪತ್ರಿಕೆಯೋ, ತರಂಗವೋ ಈಗ ನೆನಪಾಗ್ತಿಲ್ಲ, ಅದರಲ್ಲಿ ಹೆಣ್ಣು ಹೊರಗೆ ದುಡಿಯುವುದು ಎಷ್ಟು ಅಗತ್ಯ ಎನ್ನುವ ಚರ್ಚೆಗೆ ಆಹ್ವಾನಿಸಿದ್ದರು ಆ ಪತ್ರಿಕೆಯವರು. ನಾನು ಇನ್ಲ್ಯಾಂಡ್ ಲೆಟರ್ ನಲ್ಲಿ ಬರೆದು ಕಳಿಸಿದೆ. ಪ್ರಕಟವಾಗುತ್ತದೆಂಬ ಯಾವ ಭರವಸೆಗಳನ್ನೂ ಇಟ್ಟುಕೊಳ್ಳದೆ. ಆದರೆ ನಿರೀಕ್ಷೆ ಇಲ್ಲದಿರುತ್ತದೆಯೇ? ಅದರ ಮುಂದಿನ ಸಂಚಿಕೆಯಲ್ಲಿ ನನ್ನ ಅಭಿಪ್ರಾಯ ಪ್ರಕಟವಾಗಿಬಿಟ್ಟಿತ್ತು ಅದೂ ಕಲರ್ ಬಾಕ್ಸಲ್ಲಿ! ಒಳಗಿನ ಬರಹಗಾರ್ತಿ ಸಣ್ಣಗೆ ಮಿಸುಗತೊಡಗಿದ್ದು ಆಗಿನಿಂದಲೇ ಇರಬೇಕು. ಆದರೆ ಮತ್ತೆ ಬರೆವ ಪ್ರಯತ್ನಕ್ಕೂ ಅವಕಾಶವಿಲ್ಲದಂತೆ ಬದುಕು ನನ್ನನ್ನಾವರಿಸಿಕೊಂಡು ಬಿಟ್ಟಿತು. ಇತರರ ಕಷ್ಟಸುಖ ನೋಡಿಕೊಳ್ಳುವುದರಲ್ಲಿ, ಹೊತ್ತುಕೊಂಡ ಆ ಎಲ್ಲ ಜವಾಬ್ದಾರಿಗಳು ಬದುಕಲ್ಲಿ ಎಷ್ಟೆಲ್ಲ ಹೊಸ ಪಾಠಗಳನ್ನು ಕಲಿಸಿದವು. ಅವುಗಳನ್ನರಗಿಸಿಕೊಳ್ಳುವುದರಲ್ಲಿಯೇ ಜೀವನ ಮುಗಿದುಹೋಗುತ್ತೆ ಅನಿಸಿತ್ತು. ಆದರೆ ಅದೇ ಬದುಕಿನ ಪಾಠಗಳಿಂದಾಗಿ ನನ್ನ ಕಡೆಯೂ ನಾನು ಗಮನಕೊಟ್ಟುಕೊಳ್ಳಬೇಕು ಅನ್ನುವುದು ಅರಿವಾಯಿತು.

ಹಾಗೆ ನನ್ನ ಬೇಕುಗಳ ಕಡೆಗೆ ಕೈಚಾಚಲು ಆರಂಭಿಸಿದ್ದೆನಷ್ಟೇ ‘ಮಕ್ಕಳನ್ನ ನೋಡ್ಕೊಂಡು ಗಂಡ, ಮನೆ ನೋಡ್ಕೊಂಡು ನೆಮ್ಮದಿಯಿಂದಿರು ಸಾಕು. ಇಲ್ಲದ ಕೆಲಸಕ್ಕೆ ಬಾರದ ವಿಷಯಗಳಿಗೆ ಸಮಯ ಹಾಳು ಮಾಡೋದೇನು ಬೇಡ’, ‘ಅದೆಲ್ಲ ಏನ್ ಮಾಡಾಕ? ಸುಮ್ನ ಮನ್ಯಾಗಿದ್ದು ಮಕ್ಕಳ ಹೋಮ್​ವರ್ಕ್​ ಮಾಡಿಸು ಸಾಕು’ ಎನ್ನುವ ಉಪದೇಶಗಳು ಎಲ್ಲೆಡೆಯಿಂದ ಹರಿದು ಬರತೊಡಗಿದವು. ಸೆಣಸಿದೆ ಅವುಗಳ ವಿರುದ್ಧ. ನನ್ನ ಅಸ್ಮಿತೆಗೆ ಇಂಬುಕೊಟ್ಟಿತ್ತು ಮುಂಬಯಿನ ಸಾಂಸ್ಕೃತಿಕ ಲೋಕ. ನನಗೂ ಒಂದು ವ್ಯಕ್ತಿತ್ವವಿದೆ, ನನಗೂ ಬೇಕಾದಷ್ಟು ಬೇಕುಗಳಿವೆ ಎನ್ನುವುದರ ನಿಚ್ಚಳ ಅರಿವು ಮೂಡಿತು. ನಿಧಾನಕ್ಕೆ ಗಂಡ ಅರ್ಥಮಾಡಿಕೊಂಡರು. ಗಂಡ, ಮಕ್ಕಳಿಗೆ ಕೊಡುವ ಸಮಯದಿಂದ ತುಸುವೇ ಸಮಯ ಕದ್ದುಕೊಂಡೆ ನನಗಾಗಿ, ಮಕ್ಕಳಿಗೆ ಅಮ್ಮನ ಅಭಾವ ಕಾಡದಂತೆ. ಸಾಮಾಜಿಕ ಬದುಕು ಅನೇಕ ಹೊಸ ದಾರಿಗಳ ಕೈಮರಗಳೊಂದಿಗೆ ಸ್ವಾಗತಿಸಿತು. ನಡೆಯತೊಡಗಿದೆ. ಈಗ ಪರತ್ ಪಾವತಿಗಳು ಬರತೊಡಗಿವೆ.

***

ಪರಿಚಯ : ಜಯಲಕ್ಷ್ಮೀ ಪಾಟೀಲ್ ಇವರು ಕಿರುತೆರೆ, ರಂಗಭೂಮಿ, ಚಲನಚಿತ್ರ ಕಲಾವಿದೆ, ಸಾಹಿತಿ, ಸಂಘಟಕಿ ಮತ್ತು ಸಾಮಾಜಿಕ ಹೋರಾಟಗಾರ್ತಿ. ‘ಮುಕ್ತ ಮುಕ್ತ’, ‘ಮಹಾಪರ್ವ’, ‘ಮೌನರಾಗ’, ‘ಬದುಕು’, ‘ಮನೆಯೊಂದು ಮೂರು ಬಾಗಿಲು’, ‘ಕದನ’ ಮುಂತಾದ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಅಗ್ನಿ ಮತ್ತು ಮಳೆ,’ ‘ಮದುವೆ ಹೆಣ್ಣು’, ‘ಆಧೆಅಧೂರೆ’, ‘ಜೋಕುಮಾರಸ್ವಾಮಿ’, ‘ನಾ ಕೊಂದ ಹುಡುಗ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಸ್ವರ್ಣಕಮಲ ವಿಜೇತ’ ಚಲನಚಿತ್ರ ‘ಪುಟಾಣಿ ಪಾರ್ಟಿ’, ರಾಜ್ಯಪ್ರಶಸ್ತಿ ವಿಜೇತ ಚಿತ್ರ ‘ಬನದ ನೆರಳು ಹಾಗೂ ಇನ್ನೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪುಟಾಣಪಾರ್ಟಿ ಚಿತ್ರದ ಸಂಭಾಷಣೆ, ಇತ್ತೀಚಿನ ‘ಕಥಾ ಸಂಗಮ’ ಚಿತ್ರಕ್ಕಾಗಿ ಒಂದು ಗೀತೆ ರಚಿಸಿದ್ದಾರೆ. ಓದುಗರ ವೇದಿಕೆ ‘ಈ ಹೊತ್ತಿಗೆ’ ಮತ್ತು ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ‘ಜನದನಿ’ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ‘ನೀಲಕಡಲ ಬಾನು’(ಕವನ ಸಂಕಲನ), ‘ಹೇಳತೇವ ಕೇಳು’ (ಸಂಪಾದಿತ ಕೃತಿ – ಲೈಂಗಿಕ ದೌರ್ಜನ್ಯದ ವಿರುದ್ದ ಮಹಿಳಾ ದನಿ), ‘ಮುಕ್ಕುಚಿಕ್ಕಿಯ ಕಾಳು’ (ಕಾದಂಬರಿ) ಮತ್ತು ‘ಬೇಬಿ’ (ಅನುವಾದಿತ ನಾಟಕ) ಇವು ಪ್ರಕಟಿತ ಕೃತಿಗಳು. ಅಭಿನಯಕ್ಕಾಗಿ ಅಭಿನಯ ಶಾರದೆ, ಭಾರತಿ ಕೊಡ್ಲೆಕರ್ ಪ್ರಶಸ್ತಿ, ಬಿಡಿ ಕವನಗಳಿಗೆ, ಸಂಕ್ರಮಣ ಸಾಹಿತ್ಯ ಬಹುಮಾನ, ದ. ರಾ ಬೇಂದ್ರೆ ಪ್ರಶಸ್ತಿ, ದು. ನಿಂ ಬೆಳಗಲಿ ಪ್ರಶಸ್ತಿ, ಉತ್ತಮ ಕಥಾ ಬಹುಮಾನ, ಪುರಸ್ಕಾರಗಳು ದೊರೆತಿವೆ.

ನಾನೆಂಬ ಪರಿಮಳದ ಹಾದಿಯಲಿ: ಕಂಬಳಿ ಹುಳವೊಂದು ಚಿಟ್ಟೆಯಾಗುವ ಘಳಿಗೆ ಸಹಿಸಿಕೊಂಡಿದ್ದಕ್ಕೇ…

Published On - 5:29 pm, Wed, 20 January 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?