Lockdown: ವರ್ಕ್ ಫ್ರಮ್ ಹೋಮ್ ಹೇಗೆ ನಡೀತಿದೆ ನಿಮ್ಮ ಮಕ್ಕಳೊಂದಿಗೆ?
‘ದಂಪತಿಗಳಿಬ್ಬರೂ ದುಡಿಯುವ ಇಂದಿನ ದಿನಗಳಲ್ಲಿ ಇದು ಕುಟುಂಬದ ಮೇಲೆ ಬೀರಬಹುದಾದ ಪರಿಣಾಮ ಕುರಿತು ಉದ್ಯೋಗದಾತರು ಯೋಚಿಸುವ ಗೋಜಿಗೆ ಹೋಗಲಿಲ್ಲ. ಉದ್ಯೋಗಿಯ ಮನೆಯ ಮೂಲೆಮೂಲೆಗೂ ಕಚೇರಿಯ ಕೆಲಸ ಹರಡಿಕೊಂಡು ಬಿಟ್ಟಿತು. ಮನೆಯಲ್ಲಿಯೇ ಉಳಿಯುವ ಮಕ್ಕಳಿಗೆ ಸಮಯ ಕಳೆಯುವುದು ಹೇಗೆ ಎಂದು ತಿಳಿಯಲಿಲ್ಲ. ಪೋಷಕರು ಕೆಲಸಕ್ಕೆ ಹೋಗದೆ ತಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದು ನಿರೀಕ್ಷಿಸಿದ ಮಕ್ಕಳಿಗೆ ಭ್ರಮನಿರಸನವಾಯಿತು.‘
ಮಕ್ಕಳು ಮನೆಯಲ್ಲಿ ಸಿಗದ ಪ್ರೀತಿ, ಸಹಾಯ, ಸಾಂತ್ವನಗಳನ್ನು ಹೊರಗೆ ಹುಡುಕಲು ಬಯಸುವರು. ಅವರ ಮನಸ್ಸಿನ ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಹೊರಗೆ ದುಷ್ಟ ಶಕ್ತಿಗಳು ಕಾಯುತ್ತಿರುತ್ತಾರೆ. ಮಕ್ಕಳನ್ನು ಸಾಕುವುದು ಒಂದು ಕಲೆ. ಅವರನ್ನು ನಮ್ಮ ಆಸ್ತಿ ಎಂದು ಭಾವಿಸಿಕೊಂಡು ಸಾಕುವ ಬದಲಿಗೆ ಅವರು ಮುಂದೊಂದು ದಿನ ಸಮಾಜದ ಆಸ್ತಿ ಆಗುವರು ಎಂಬ ಪರಮಸತ್ಯದ ಹಿನ್ನೆಲೆಯಲ್ಲಿ ಸಾಕುವುದು ಉತ್ತಮ. ಅದಕ್ಕೆ ಅಡಿಪಾಯ ಹಾಕಲು ಪೋಷಕರಿಗೆ ಇರುವುದು ಸುಮಾರು ಆರೇಳು ವರ್ಷಗಳು ಮಾತ್ರ. ಈ ಅವಧಿಯಲ್ಲಿ ಮಕ್ಕಳನ್ನು ಹೇಗೆ ಸಾಕುವರು ಎನ್ನುವುದು ಹದಿವಯಸ್ಸಿನಲ್ಲಿ ಆ ಮಕ್ಕಳು ಹೇಗೆ ನಡೆದುಕೊಳ್ಳುವರು ಎನ್ನುವುದರ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುವುದು. ಅದಕ್ಕಾಗಿ ಈ ಕೆಲವು ತಂತ್ರಗಳು ನೆರವಾಗುತ್ತವೆ. ಆರ್. ಶ್ರೀನಾಗೇಶ್, ಆಪ್ತಸಲಹೆಗಾರರು
ಕೋವಿಡ್ ಹಲವು ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿದೆ, ಇದು ವಾಸ್ತವ. ಆ ಸಮಸ್ಯೆಗಳ ಜೊತೆಗೆ ನಾವು ನಮ್ಮದೇ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ, ಇವುಗಳಲ್ಲಿ ಬಹುತೇಕವು ಅನಿವಾರ್ಯಲ್ಲ, ಇದೂ ವಾಸ್ತವ. ಒಂದು ನಕಾರಾತ್ಮಕ ಆಲೋಚನೆಗೆ ಅವಕಾಶ ಕೊಟ್ಟರೆ ಅದರ ಹಿಂದೆ ಹಿಂಡುಹಿಂಡಾಗಿ ನಕಾರಾತ್ಮಕ ಆಲೋಚನೆಗಳು ಸರದಿಗಟ್ಟಿ ನಿಲ್ಲುತ್ತವೆ. ಎಂದೋ ಎಲ್ಲಿಯೋ ಆಗಿದ್ದು, ಮರೆತು ಹೋಗಿದ್ದುದು, ಈಗ ಪ್ರಸ್ತುತವಲ್ಲದ್ದು, ಹೀಗೆ ಯೋಚನೆಗಳ ಬಿರುಗಾಳಿಯೇ ನಿಮ್ಮನ್ನು ಆವರಿಸಿಕೊಂಡು ಬಿಡುತ್ತದೆ.
ಈ ಬಿರುಗಾಳಿಯ ಎದುರು ನಿಲ್ಲುವ ಶಕ್ತಿ ಸಕಾರಾತ್ಮಕ ಯೋಚನೆಗಳಿಗೆ ಸಾಲದೇ ಹೋಗಬಹುದು. ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಎದುರಿಸುವ ಸಲುವಾಗಿ ನೀವು ಅವನ್ನು ಹತ್ತಿಕ್ಕಿ ಸಕಾರಾತ್ಮಕ ಆಲೋಚನೆ ಮಾಡಲು ಪ್ರಯತ್ನಿಸಿದರೆ, ಅದು ಅಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಈಗ ಕೋವಿಡ್ ಅಂತಹ ಬಿರುಗಾಳಿಯನ್ನು ಸೃಷ್ಟಿಸಿ, ನಮ್ಮ ಗಮನ ಸಕಾರಾತ್ಮಕ ವಿಷಯಗಳ ಕಡೆ ತಿರುಗುವುದನ್ನು ತಪ್ಪಿಸುತ್ತಿದೆ.
• ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಒದಗಿಸಿವೆ. • ಮಕ್ಕಳಿಗೂ ತರಗತಿಗಳು ಇದೇ ರೀತಿ ನಡೆದವು.
ಒಂದು ರೀತಿ ಒಳ್ಳೆಯದೇ, ಹೋಗಿ ಬರುವ ಸಮಯ ಉಳಿತಾಯವಾಯಿತು, ಕುಟುಂಬದ ಸದಸ್ಯರು ಹೆಚ್ಚು ಸಮಯ ಜೊತೆಯಲ್ಲಿರಲು ಅನುಕೂಲವಾಯಿತು ಎಂದುಕೊಳ್ಳಬಹುದೇ?
• ಉದ್ಯೋಗದಾತರು ಅದಕ್ಕೆ ಅವಕಾಶ ಕೊಡಲಿಲ್ಲ. ಹೇಗೂ ಸಮಯ ಉಳಿದಿದೆಯಲ್ಲ, ಅದನ್ನು ನಮಗೇ ಕೊಡಿ ಎಂದು ಹೇಳಿ, ಹೆಚ್ಚು ಕೆಲಸವನ್ನು ನಿರೀಕ್ಷಿಸಿದರು. ಒತ್ತಡ ಮತ್ತಷ್ಟು ಹೆಚ್ಚಿತು. ಕಚೇರಿಗೆ ಹೋಗಿ ಬರುತ್ತಿದ್ದಾಗ ಒಂದು ಸಮಯದ ಮಿತಿಯಾದರೂ ಇರುತ್ತಿತ್ತು, ಈಗ ಆ ಮಿತಿ ಹೋಯಿತು.
• ದಂಪತಿಗಳಿಬ್ಬರೂ ದುಡಿಯುವ ಇಂದಿನ ದಿನಗಳಲ್ಲಿ ಇದು ಕುಟುಂಬದ ಮೇಲೆ ಬೀರಬಹುದಾದ ಪರಿಣಾಮ ಕುರಿತು ಉದ್ಯೋಗದಾತರು ಯೋಚಿಸುವ ಗೋಜಿಗೆ ಹೋಗಲಿಲ್ಲ. ಉದ್ಯೋಗಿಯ ಮನೆಯ ಮೂಲೆಮೂಲೆಗೂ ಕಚೇರಿಯ ಕೆಲಸ ಹರಡಿಕೊಂಡು ಬಿಟ್ಟಿತು.
• ಮನೆಯಲ್ಲಿಯೇ ಉಳಿಯುವ ಮಕ್ಕಳಿಗೆ ಸಮಯ ಕಳೆಯುವುದು ಹೇಗೆ ಎಂದು ತಿಳಿಯಲಿಲ್ಲ. ಪೋಷಕರು ಕೆಲಸಕ್ಕೆ ಹೋಗದೆ ತಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದು ನಿರೀಕ್ಷಿಸಿದ ಮಕ್ಕಳಿಗೆ ಭ್ರಮನಿರಸನವಾಯಿತು. ಕಾರಣ, ಮನೆಯಲ್ಲಿದ್ದರೂ, “ಕಾಲ್” ನಲ್ಲಿ ನಿರತರಾಗಿದ್ದ ತಂದೆ-ತಾಯಿಯರಿಗೆ ಇವರೊಡನೆ ಮಾತನಾಡಲು ಪುರಸೊತ್ತೆಲ್ಲಿಯದು?
ರಜೆ ಬಂತು ಎಂದರೆ, ಮಕ್ಕಳಿಗೆ ಕುಣಿದು ಕುಪ್ಪಳಿಸಬೇಕು. ಆದರೆ, ಅಪ್ಪನೋ, ಅಮ್ಮನೋ, ಅಥವಾ ಇಬ್ಬರೂ ಕಾಲ್‌ನಲ್ಲಿದ್ದರೆ, ಮಕ್ಕಳು ಗಲಾಟೆ ಮಾಡುವ ಹಾಗಿಲ್ಲ! ಆ ಮಕ್ಕಳೊಳಗೆ ತುಂಬಿ ತುಳುಕುವ ಚೇತನಕ್ಕೆ ಹೊರಬರಲು ಅವಕಾಶವಿಲ್ಲ. ಹೊರಗೆ ಹೋಗಿ ಆಟ ಆಡಲು ನಿರ್ಬಂಧಗಳು. ರಜೆಯಲ್ಲಿ ತಿರುಗಾಡಲು ಅವಕಾಶವಿಲ್ಲ. ಇದಕ್ಕೆ ಸುಲಭಪರಿಹಾರವಾಗಿ ಮಕ್ಕಳಿಗೂ ಏನೋ ಆನ್ ಲೈನ್ತರಗತಿಗಳು, ಮೊಬೈಲ್ ಆಟಗಳು, ಟಿವಿ ಮುಂತಾದವು ಹೆಚ್ಚು ಲಭ್ಯವಾದವು.
ಆದರೆ, ಬೆಳೆಯುವ ಮಕ್ಕಳಿಗೆ ಬೇಕಾಗಿರುವುದು ಸ್ಪರ್ಶ, ಆಟವಾಡಲು ಸಂಗಾತಿ, ಕೇಳಲು ಕಥೆಗಳು ಹಾಗೂ ಅವರ ಕೊನೆಯಿಲ್ಲದ ಪ್ರಶ್ನೆಗಳಿಗೆ ಉತ್ತರ ಹೇಳುವ ತಾಳ್ಮೆ ಇರುವ ಹಿರಿಯರು.
• ದಂಪತಿಗಳಿಬ್ಬರಿಗೂ ಮನೆಯಿಂದ ಕೆಲಸ ಮಾಡಬೇಕಾಗಿ ಬಂದಾಗ ಮನೆಯ ಕೆಲಸ ಮಾಡುವವರು ಯಾರು? ಇಬ್ಬರೂ ಹಂಚಿಕೊಂಡು ಯಾರು ಬಿಡುವಾಗಿ ಇರುವರೋ ಅವರು ಮಾಡಿದರೆ, ಪರವಾಗಿಲ್ಲ. ಆದರೆ, ಅದು ಹೆಂಡತಿಯದೇ ಕೆಲಸ ಎಂದು ಗಂಡ ನಿರೀಕ್ಷಿಸಿ, ಆಕೆಯ ಮೇಲೆಯೇ ಎಲ್ಲ ಹೊರೆ ಬಿದ್ದರೆ, ಸಂಘರ್ಷಗಳು ಪ್ರಾರಂಭ. ಇವೆಲ್ಲದರ ಜೊತೆಗೆ ಕಚೇರಿ, ಮನೆಗಳು ಒಂದಾಗಿ ಅವೆರಡರಲ್ಲಿಯೂ ನಡೆಯುವ ಘಟನೆಗಳಿಂದಾಗಿ ಉಂಟಾಗುವ ಮಾನಸಿಕ ತೊಳಲಾಟಗಳು ಒಂದರಲ್ಲಿ ಮತ್ತೊಂದು ಬೆರೆತು ಮನೆ, ಮನಗಳೆರಡೂ ಕುರುಕ್ಷೇತ್ರಗಳಾಗಿರುವುದೂ ಇದೆ.
ಬಹುತೇಕ ಕುಟುಂಬಗಳಲ್ಲಿ ಇದು ನಿಯಂತ್ರಣ ಮೀರಿ, ವಿಚ್ಚೇದನಕ್ಕೆ ಅರ್ಜಿಗಳು ಹೆಚ್ಚಾಗಿವೆ, ದಂಪತಿಗಳು ದೂರವಾಗುತ್ತಿದ್ದಾರೆ. ಮಕ್ಕಳು ಅತಂತ್ರರಾಗುತ್ತಿದ್ದಾರೆ. ಭವ್ಯ ಬಾಲ್ಯವನ್ನು ಸುಖಿಸುವ ಬದಲಿಗೆ ಹಿರಿಯರ ನಡುವಣ ಕಾಳಗದಲ್ಲಿ ದಾಳವಾಗಿ ಬಳಸಲ್ಪಡುತ್ತಿದ್ದಾರೆ. ಅದು ಅವರ ವ್ಯಕ್ತಿತ್ವದ ಮೇಲೆ ಬೀರುವ ದುಷ್ಪರಿಣಾಮವನ್ನು ಕುರಿತು ಅವರ ಜನನಕ್ಕೆ ಕಾರಣರಾದ ಜನಕರಿಗೆ ವ್ಯವಧಾನವಿಲ್ಲ. ತಮ್ಮ ಹಠವೇ ಮುಖ್ಯ ಅವರಿಗೆ. ಬಾಳಸಂಗಾತಿಯಿಂದ ನೊಂದವರು ತಮ್ಮ ಅಳಲನ್ನು ಹೇಳಿಕೊಳ್ಳುವುದಾದರೂ ಯಾರಿಗೆ? ಬಹುತೇಕ ಹೆಣ್ಣುಮಕ್ಕಳು ತಮ್ಮ ಪೋಷಕರ ಬಳಿ ನಿವೇದಿಸಿಕೊಂಡರೆ, ಗಂಡಸರು ತಮ್ಮ ತೀರಾ ಆತ್ಮೀಯ ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳುವುದರಲ್ಲಿಯೋ ಅಥವ ವ್ಯಸನಗಳಿಗೆ ದಾಸರಾಗುವುದೋ ಮಾಡುವರು. ದಂಪತಿಗಳ ನಡುವೆ ಕಲಹವಾದಾಗ ಎರಡು ದೊಡ್ಡ ಸಮಸ್ಯೆಗಳು ಅವರಿಬ್ಬರ ನಡುವೆ ಗೋಡೆಯನ್ನು ನಿರ್ಮಿಸುತ್ತವೆ. ಮೊದಲನೆಯದು, ಅಹಮಿಕೆ (ಇಗೋ), ಎರಡನೆಯದು ಪರಸ್ಪರ ಸಂವಹನ ನಿಂತು ಹೋಗುವುದು. ಯಾಂತ್ರಿಕ ಬದುಕು, ಮಾತಿಲ್ಲದ ಜೀವನ. ಇದರ ಪರಿಣಾಮ ತಮ್ಮ ಮಕ್ಕಳ ಮೇಲೆ ಆಗುತ್ತಿದೆ ಎನ್ನುವುದನ್ನೂ ಅವರು ಗಮನಿಸಿರುವುದಿಲ್ಲ.
ಪೋಷಕರಲ್ಲಿ, ಅದರಲ್ಲಿಯೂ ಅಮ್ಮನ ಮನಸ್ಸಿನಲ್ಲಿ ನೆಮ್ಮದಿಯಿಲ್ಲ ಎಂದು ಮೊದಲು ಗಮನಿಸುವುದು ಮಕ್ಕಳು. ಅದಕ್ಕೆ ಅವರು ಸ್ಪಂದಿಸುವ ರೀತಿಯೂ ಅವರನ್ನು ಬೆಳೆಸಿರುವ ಶೈಲಿಯನ್ನು ಅವಲಂಬಿಸಿರುತ್ತದೆ. ಇತ್ತೀಚೆಗೆ ಇಂತಹ ಕಲಹವೊಂದರಲ್ಲಿ ಅಪ್ಪನ ಪರ ವಹಿಸಿಕೊಂಡು ಅಮ್ಮನನ್ನು ಹುಚ್ಚಿ ಎಂದು ಕರೆದ ಮೂರು ವರ್ಷದ ಹಸುಳೆಯನ್ನು ಅವರಮ್ಮ ರೊಚ್ಚಿಗೆದ್ದು ಸಾಯಿಸಿಬಿಟ್ಟ ವರದಿಯಾಗಿತ್ತು. ಅಲ್ಲಿ “ಅಮ್ಮ ಹುಚಿ” ಎನ್ನುವ ಸಂದೇಶವನ್ನು ಆ ಪುಟ್ಟ ಕಂದನ ಮನಸ್ಸಿಗೆ ತುಂಬಿದವರು ಯಾರು?
ದಂಪತಿಗಳು ತಮ್ಮ ಕಲಹದಲ್ಲಿ ಮಕ್ಕಳ ಮನಸ್ಸಿನಲ್ಲಿ ತಮ್ಮ ಬಾಳಸಂಗಾತಿಯನ್ನು ಕುರಿತು ಯಾವ ಕಲ್ಪನೆ ಮೂಡುತ್ತಿದೆ ಎಂದು ಯೋಚಿಸುವ ಗೋಜಿಗೆ ಹೋಗದೆ, ತಮ್ಮ ಅಹಮಿಕೆಯನ್ನೇ ಪ್ರಧಾನವಾಗಿ ಇಟ್ಟುಕೊಂಡು ಬಿಡುವುದು ದುರ್ದೈವ. ಮಕ್ಕಳಿಗೆ ಅಪ್ಪ, ಅಮ್ಮ ಇಬ್ಬರೂ ಬೇಕು. ಇಬ್ಬರೂ ಜೊತೆಯಲ್ಲಿ ಮಗುವನ್ನು ಕೈಹಿಡಿದು ಮುನ್ನಡೆಸಿದರೆ, ಅವರು ಸಾಧಕರಾಗಿ ಹೊರಹೊಮ್ಮುವರು. ಪರಸ್ಪರ ದ್ವೇಷ ತುಂಬಿಸಲು ಪ್ರಯತ್ನಿಸಿದರೆ, ಯಾಕಾದರೂ ಇಂತಹ ಪೋಷಕರ ಮಗುವಾದೆನೋ ಎಂದು ಕೊರಗುವರು. ಕೆಲವರು ಇಬ್ಬರ ನಡುವಣ ವಿರಸವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ತಮಗಿಷ್ಟ ಬಂದ ಹಾಗೆ ಜೀವನ ನಡೆಸುವರು. ಈ ಅಪಾಯಕಾರೀ ಬೆಳವಣಿಗೆಯ ಸಾಧ್ಯತೆಯನ್ನು ಅಹಮಿಕೆ ಮುಚ್ಚಿಟ್ಟು ಬಿಡುತ್ತದೆ.
ಮಕ್ಕಳು ಹದಿವಯಸ್ಸಿಗೆ ಕಾಲಿಟ್ಟಾಗ ಪರಿಸ್ಥಿತಿ ಭಿನ್ನವಾಗುವುದು. ಈಗ ತಮ್ಮತನವನ್ನು ಪ್ರತಿಪಾದಿಸಿಕೊಳ್ಳುವ ಮಕ್ಕಳು ಪೋಷಕರಿಗೆ ಅವಿಧೇಯರಾಗಿ ಕಾಣುವರು. ಈ ಮುಂಚೆ ಅವರಿಗೆ ಶಿಸ್ತನ್ನು ಕಲಿಸುವಲ್ಲಿ ಪರಸ್ಪರ ಅಡ್ಡ ಬರುತ್ತಿದ್ದ ಪೋಷಕರೇ ಈಗ ಮಗುವಿನ ಅವಿಧೇಯತೆಗೆ ತಮ್ಮ ಬಾಳಸಂಗಾತಿಯನ್ನೇ ದೂಷಿಸಿ ತಮ್ಮ ಹೊಣೆಗಾರಿಕೆಯಿಂದ ಕೈ ತೊಳೆದುಕೊಂಡು ಬಿಡುವರು. ಬಹುತೇಕ ಪೋಷಕರಿಗೆ ತಮ್ಮ ಹದಿವಯಸ್ಸಿನ ಮಕ್ಕಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಯದೆ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತವೆ. ಅವರಿಗೂ ಹೊರಗೆ ಹೋಗಲು ಅವಕಾಶವಿಲ್ಲವಾದಾಗ ಹೆಚ್ಚು ಸಮಯವನ್ನು ತಮ್ಮ ಕೋಣೆಯಲ್ಲಿ ಕಳೆಯುವರು. ಈ ಸಮಯದಲ್ಲಿ ಅವರ ಚಟುವಟಿಕೆಗಳೇನು ಎನ್ನುವುದು ಪೋಷಕರ ಗಮನಕ್ಕೆ ಬರದೇ ಹೋಗುವುದು.
ಹದಿವಯಸ್ಸಿನಲ್ಲಿ ಮಕ್ಕಳ ಹೃದಯಗಳು ಗೊಂದಲದ ಗೂಡಾಗಿರುತ್ತವೆ. ತಮ್ಮತನವನ್ನು ಪ್ರತಿಪಾದಿಸಿಕೊಳ್ಳುವ ತುಡಿತ ಕಾಡುತ್ತಿರುತ್ತದೆ. ತಾವು ಎಳೆಯ ಮಕ್ಕಳಲ್ಲ ಎಂಬ ಭಾವನೆ ಬಲವಾಗಿ ಬೇರೂರುತ್ತಿರುತ್ತದೆ. ಪೋಷಕರಿಗೆ ಅವರ ದೇಹದ ಬೆಳವಣಿಗೆ ಕಾಣುವುದು. ಆದರೆ ತತ್ಸಮನಾಗಿ ಬುದ್ಧಿಯೂ ಬೆಳೆದಿರುವುದು ಎನ್ನುವುದರ ಕಡೆ ಗಮನ ಹೋಗುವುದಿಲ್ಲ. ಪರಿಣಾಮ ಹದಿವಯಸ್ಸಿನ ಮಕ್ಕಳ ಜೊತೆಗೂ ಮುಂಚಿನಂತೆಯೇ ವ್ಯವಹರಿಸಲು ಪ್ರಯತ್ನಿಸುವರು. ಇದು ಹದಿವಯಸ್ಕರಿಗೆ ಇಷ್ಟವಾಗುವುದಿಲ್ಲ. ಸಂವಹನದ ಕೊರತೆ ಇಲ್ಲಿಂದ ಪ್ರಾರಂಭ.
ಯಜಮಾನಿಕೆ ಸಲ್ಲದು
ನನ್ನ ಮನೆ, ನನ್ನ ಮಾತು ಎಂಬ ಯಜಮಾನಿಕೆಯನ್ನು ಅನೇಕ ಗಂಡಸರು ಈಗಲೂ ತೋರಿಸಿಕೊಳ್ಳುವುದುಂಟು. ಮುಂಚಿನ ಕಾಲದ ಹೆಣ್ಣುಮಕ್ಕಳಿಗೆ ಅನ್ಯ ಮಾರ್ಗವಿರಲಿಲ್ಲ. ಈಗಿನವರಿಗೆ ತಮ್ಮ ಅಸ್ತಿತ್ವದ ಬಗ್ಗೆ ಹೆಚ್ಚು ತಿಳಿವಳಿಕೆ ಉಂಟಾಗಿದ್ದು ಹೊರ ಮಾರ್ಗವೊಂದು ಲಭ್ಯವಿರುವುದರಿಂದ ಅವರೀಗ ಯಜಮಾನಿಕೆಯನ್ನು ಒಪ್ಪುವುದಿಲ್ಲ.
• ನನ್ನ ಮಾತಿಗೆ ಬೆಲೆ ಕೊಡದಿದ್ದರೆ ನನ್ನ ಮನೆಯಲ್ಲಿ ನಿನಗೆ ಜಾಗವಿಲ್ಲ • ನಿನ್ನನ್ನು ನಿನ್ನ ತವರು ಮನೆಗೆ ಕಳುಹಿಸಿ ಬಿಡುವೆ. ಅಲ್ಲಿ ಏನು ಬೇಕಾದರೂ ಮಾಡಿಕೋ
ಈ ರೀತಿಯ ವಾಕ್ಯಗಳನ್ನಾಗಲೀ, ಕೈ ಮಾಡುವುದಾಗಲೀ ತಂದೆಯಾದವನು ತಾಯಿಯ ಮೇಲೆ ಪ್ರಯೋಗಿಸಿದಾಗ ಹದಿವಯಸ್ಸಿನ ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ತಂದೆ ಯೋಚಿಸುವುದೇ ಇಲ್ಲ. ಆಗ ಅಸಹಾಯಕಳಾದ ತಾಯಿ ತನ್ನ ತವರಿನ ಆಶ್ರಯ ಪಡೆಯುವುದು ಅನಿವಾರ್ಯವಾಗುತ್ತದೆ. ಇದು ಪುನರಾವರ್ತನೆಯಾದಾಗ ತಮ್ಮ ವ್ಯಕ್ತಿತ್ವಕ್ಕೆ ಒಂದು ಕಟ್ಟಡ ನಿರ್ಮಿಸುವ, ಬದುಕಿಗೆ ಒಂದು ಗುರಿ ತೋರಿಸುವ, ಸಾಧನೆಯತ್ತ ಗಮನ ಹರಿಸುವ ನಿರೀಕ್ಷೆ ಮತ್ತು ತುಡಿತವಿರುವ ಮಕ್ಕಳಿಗೆ ಸಹಜವಾಗಿ ಭ್ರಮನಿರಸನವಾಗುತ್ತದೆ.
ಮನೆಯಲ್ಲಿ ಸಿಗದ ಪ್ರೀತಿ, ಸಹಾಯ, ಸಾಂತ್ವನಗಳನ್ನು ಹೊರಗೆ ಹುಡುಕಲು ಬಯಸುವರು. ಅವರ ಮನಸ್ಸಿನ ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಹೊರಗೆ ದುಷ್ಟ ಶಕ್ತಿಗಳು ಕಾಯುತ್ತಿರುತ್ತಾರೆ. ಮಕ್ಕಳನ್ನು ಸಾಕುವುದು ಒಂದು ಕಲೆ. ಅವರನ್ನು ನಮ್ಮ ಆಸ್ತಿ ಎಂದು ಭಾವಿಸಿಕೊಂಡು ಸಾಕುವ ಬದಲಿಗೆ ಅವರು ಮುಂದೊಂದು ದಿನ ಸಮಾಜದ ಆಸ್ತಿ ಆಗುವರು ಎಂಬ ಪರಮಸತ್ಯದ ಹಿನ್ನೆಲೆಯಲ್ಲಿ ಸಾಕುವುದು ಉತ್ತಮ. ಅದಕ್ಕೆ ಅಡಿಪಾಯ ಹಾಕಲು ಪೋಷಕರಿಗೆ ಇರುವುದು ಸುಮಾರು ಆರೇಳು ವರ್ಷಗಳು ಮಾತ್ರ. ಈ ಅವಧಿಯಲ್ಲಿ ಮಕ್ಕಳನ್ನು ಹೇಗೆ ಸಾಕುವರು ಎನ್ನುವುದು ಹದಿವಯಸ್ಸಿನಲ್ಲಿ ಆ ಮಕ್ಕಳು ಹೇಗೆ ನಡೆದುಕೊಳ್ಳುವರು ಎನ್ನುವುದರ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುವುದು. ಅದಕ್ಕಾಗಿ ಈ ಕೆಲವು ತಂತ್ರಗಳು ನೆರವಾಗುತ್ತವೆ.
ನಿಮ್ಮೆಲ್ಲ ಜಗಳಗಳ ಮಧ್ಯೆಯೂ
ಶಾಲೆಗೆ ಹೋಗುವ ಮುನ್ನ ಮಕ್ಕಳಿಗೆ ಪ್ರೀತಿ ಕೊಡಬೇಕು. ಹೇಗೆ ಎನ್ನುವುದನ್ನು ಪೋಷಕರು ಕಲಿಯಬೇಕಾದ ಅವಶ್ಯಕತೆ ಇದೆ. ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಲು ಅವರಿಗೆ ಆಡಲು ಮುಕ್ತ ಅವಕಾಶಕೊಡಬೇಕು. ಅಪಾಯಗಳನ್ನು ಕುರಿತು ತಿಳಿಹೇಳಿದರೆ, ಅವರು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬಲ್ಲರು. ಅವರನ್ನು ಹೆದರಿಸಿ (ಗುಮ್ಮ, ಭೂತ, ಪೋಲೀಸು, ಡಾಕ್ಟರು ಇತ್ಯಾದಿ) ಶಿಸ್ತಿಗೊಳಪಡಿಸಲು ಪ್ರಯತ್ನಿಸುವುದು ಅಪಾಯಕಾರೀ ತಂತ್ರಗಳು.
ಕಥೆಗಳನ್ನು ಓದುವುದರ ಮೂಲಕ, ಹೇಳುವುದರ ಮೂಲಕ, ನಿರೂಪಿಸುವುದರ ಮೂಲಕ ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವುದು ಸಾಧ್ಯವಿದೆ. ಅಪ್ಪ, ಅಮ್ಮ ಇಬ್ಬರೂ ಸರದಿಯ ಮೇಲೆ ಅಥವಾ ಒಟ್ಟಾಗಿ ಅವರೊಡನೆ, ಅವರ ವಯಸ್ಸಿಗೆ ಇಳಿದು ಆಡಿಕೊಳ್ಳಬಹುದು. ತರಕಾರಿ, ಹಣ್ಣುಗಳು, ಅಡುಗೆ ಮಾಡುವ ರೀತಿ, ಶುಚಿಯಾಗಿ ಇಟ್ಟುಕೊಳ್ಳುವುದು, ತೆಗೆದುಕೊಂಡ ವಸ್ತುಗಳನ್ನು ಉಪಯೋಗಿಸಿದ ನಂತರ ಸ್ವಸ್ಥಾನದಲ್ಲಿ ಸೇರಿಸುವುದು, ಆಟಿಗೆಗಳನ್ನು ಮುರಿಯದೆ ಜೋಪಾನವಾಗಿ ಇಟ್ಟುಕೊಳ್ಳುವುದು, ಹಂಚಿಕೊಳ್ಳುವುದು ಇಂತಹ ಪಾಠಗಳನ್ನು ಕಲಿಸಿರುವುದು ಮಕ್ಕಳ ಬೆಳವಣಿಗೆಗೆ ಒಳ್ಳೆಯದು.
ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ
ಶಾಲೆಗೆ ಸೇರಿಸಿಬಿಟ್ಟರೆ ತಮ್ಮ ಹೊಣೆಗಾರಿಕೆ ಮುಗಿಯಿತು ಎನ್ನುವ ಕಲ್ಪನೆ ಅನೇಕರಿಗಿದೆ. ಶಿಕ್ಷಕರ ಜೊತೆ ಆಗಾಗ ಮಾತುಕತೆ ನಡೆಸುವುದು, ಶಾಲೆಯಲ್ಲಿ ಏನೆಲ್ಲ ಆಯಿತು ಎಂದು ಮಗುವಿನ ಜೊತೆ ಕುಳಿತು ಆರೇಳು ನಿಮಿಷಗಳು ಮಾತನಾಡುವುದು ಮುಖ್ಯ. ಶಾಲೆಗೆ ಹೋಗಲು ಮಗು ಉತ್ಸುಕವಾಗಿರುವುದೋ, ಇಲ್ಲ ಪ್ರತಿಭಟಿಸುವುದೋ ಎಂದು ಗಮನಿಸಿ, ಅದರ ಪ್ರತಿಭಟನೆಗೆ ಕಾರಣವೇನಿರಬಹುದು ಎಂದು ಕಂಡುಕೊಳ್ಳಬೇಕು. ಕ್ಲಾಸಿಗೆ ಫಸ್ಟ್ ಬರಬೇಕು ಎಂದು ಹೇಳುವ ಬದಲಿಗೆ, ಕಲಿಕೆಗೆ ಒತ್ತು ಕೊಡಬೇಕು. ಯಾವುದನ್ನು ಕಲಿಯಲು ಮಗು ಕಷ್ಟಪಡುವುದು ಎಂಬುದನ್ನು ಗಮನಿಸಿದರೆ ಅದರ ನೆರವಿಗೆ ಬರಬಹುದು. ಕಷ್ಟಪಡುವ ಮಕ್ಕಳನ್ನು ಸೋಂಬೇರಿ ಎಂದಲೋ ದಡ್ಡ ಎಂದೋ ಹಣೆಪಟ್ಟಿ ಹಚ್ಚಿ ಕೂರಿಸಬಾರದು. ಹಾಗೆಯೇ ಬಡತನವನ್ನು ಗೌರವಿಸುವುದನ್ನು ಹೇಳಿಕೊಡಬೇಕು. ನ್ಯೂನತೆಗಳ ಆಧಾರದ ಮೇಲೂ ಹಣೆಪಟ್ಟಿ ಹಚ್ಚಬಾರದು.
ಮುಖ್ಯವಾಗಿ ಮಗುವಿನ ಆತ್ಮವಿಶ್ವಾಸ ಬೆಳೆಯುವಂತಹ ಪ್ರತಿಕ್ರಿಯೆಗಳಿರಬೇಕು. ತಮ್ಮ ಪೋಷಕರು ಹೇಗೆ ಭ್ರಮನಿರಸನವನ್ನು ನಿಭಾಯಿಸುವರು, ಸಂಕಷ್ಟದ ಸಮಯ ಬಂದಾಗ ಹೇಗೆ ವರ್ತಿಸುವರು, ಜಗಳ ಹೇಗೆ ಆಡುವರು, ತಮಗೆ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಂಡಾಗ ಪೋಷಕರು ಹೇಗೆ ಅದನ್ನು ಸ್ವೀಕರಿಸುವರು, ಇವೆಲ್ಲವೂ ಮಕ್ಕಳಿಗೆ ಬದುಕಿನ ಪಾಠಗಳನ್ನು, ಬದುಕುವ ರೀತಿಯನ್ನು ಕಲಿಸುತ್ತಿರುತ್ತವೆ. ಹೊಣೆಗಾರಿಕೆಯ ಪೋಷಕತ್ವ ಹೊಣೆಗಾರಿಕೆಯ ಮಕ್ಕಳನ್ನು ಬೆಳೆಸುತ್ತದೆ.
ಇದನ್ನೂ ಓದಿ :Parenting : ಅವನು ಸುಳ್ಳು ಹೇಳಿದಷ್ಟು ಮೂಗು ಬೆಳೆಯುತ್ತ ಹೋಗಿ ಕೊನೆಗೊಂದು ದಿನ ನೆಲಕ್ಕೆ ತಾಗಿಬಿಟ್ಟಿತು!
parenting guidelines in covid situation by writer r srinagesh
Published On - 5:23 pm, Tue, 27 April 21