ಲಗ್ನ ಪತ್ರಿಕೆಗೆ ಅರಿಶಿನ-ಕುಂಕುಮ ಹಚ್ಚೋದೇಕೆ?
ಹಿಂದೂ ಧರ್ಮದಲ್ಲಿ ಅರಿಶಿನ, ಕುಂಕುಮಕ್ಕೆ ಪವಿತ್ರ ಹಾಗೂ ಪೂಜನೀಯ ಸ್ಥಾನವಿದೆ. ಯಾವುದೇ ಪೂಜೆ ಅಥವಾ ಶುಭ ಸಮಾರಂಭಗಳಲ್ಲಿ ಈ ಮಂಗಳ ದ್ರವ್ಯಗಳನ್ನು ವಿಶೇಷವಾಗಿ ಬಳಸಲಾಗುತ್ತೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು, ಹಣೆಗೆ ಕುಂಕುಮದ ಸಿಂಧೂರವನ್ನು ಧರಿಸುವುದು ಮುತ್ತೈದೆತನದ ಸಂಕೇತ. ಪಾಶ್ಚಿಮಾತ್ಯ ದೇಶಗಳಲ್ಲಿ, ಯಾರಾದರೂ ಕೈಬೆರಳಿಗೆ ಉಂಗುರವನ್ನು ಧರಿಸಿದ್ದರೆ, ಅವರಿಗೆ ಮದುವೆಯಾಗಿದೆಯೆಂದು ತಿಳಿಯಲಾಗುತ್ತೆ. ಮಹಿಳೆಯು ಹಣೆಗೆ ಕುಂಕುಮ, ಕೆನ್ನೆಗೆ ಅರಿಶಿನ, ಕಾಲಿನ ಬೆರಳುಗಳಿಗೆ ಕಾಲುಂಗುರ ಧರಿಸಿದ್ದರೆ ಆಕೆಯ ಮದುವೆಯಾಗಿದೆ. ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂದರ್ಥ. ಇಂತಹ […]
ಹಿಂದೂ ಧರ್ಮದಲ್ಲಿ ಅರಿಶಿನ, ಕುಂಕುಮಕ್ಕೆ ಪವಿತ್ರ ಹಾಗೂ ಪೂಜನೀಯ ಸ್ಥಾನವಿದೆ. ಯಾವುದೇ ಪೂಜೆ ಅಥವಾ ಶುಭ ಸಮಾರಂಭಗಳಲ್ಲಿ ಈ ಮಂಗಳ ದ್ರವ್ಯಗಳನ್ನು ವಿಶೇಷವಾಗಿ ಬಳಸಲಾಗುತ್ತೆ.
ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು, ಹಣೆಗೆ ಕುಂಕುಮದ ಸಿಂಧೂರವನ್ನು ಧರಿಸುವುದು ಮುತ್ತೈದೆತನದ ಸಂಕೇತ. ಪಾಶ್ಚಿಮಾತ್ಯ ದೇಶಗಳಲ್ಲಿ, ಯಾರಾದರೂ ಕೈಬೆರಳಿಗೆ ಉಂಗುರವನ್ನು ಧರಿಸಿದ್ದರೆ, ಅವರಿಗೆ ಮದುವೆಯಾಗಿದೆಯೆಂದು ತಿಳಿಯಲಾಗುತ್ತೆ.
ಮಹಿಳೆಯು ಹಣೆಗೆ ಕುಂಕುಮ, ಕೆನ್ನೆಗೆ ಅರಿಶಿನ, ಕಾಲಿನ ಬೆರಳುಗಳಿಗೆ ಕಾಲುಂಗುರ ಧರಿಸಿದ್ದರೆ ಆಕೆಯ ಮದುವೆಯಾಗಿದೆ. ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂದರ್ಥ. ಇಂತಹ ಸಂಕೇತಗಳು ಸಾಮಾಜಿಕವಾಗಿ ಸ್ಪಷ್ಟ ಗುರುತಿಸುವಿಕೆಗೆ ಸಹಕಾರಿ.
ಅಲ್ಲದೇ ಪರಿಸ್ಥಿತಿಯನ್ನು ಸಂಘಟಿಸುವ ಒಂದು ಮಾರ್ಗವೂ ಹೌದು. ಸಮಾಜದಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಇದು ಸಾಮಾಜಿಕ ಮಾರ್ಗವಾಗಿದೆ. ಅರಿಶಿನ, ಕುಂಕುಮ ಹಚ್ಚಿಕೊಳ್ಳುವುದರಿಂದ ಕೆಲವು ಆರೋಗ್ಯಕಾರಿ ಪ್ರಯೋಜನಗಳಿವೆ. ಈ ಮಂಗಳದ್ರವ್ಯಕ್ಕೆ ವಿವಾಹದಲ್ಲಿ ಅತ್ಯಂತ ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ.
ವಿವಾಹ ಆರಂಭದಿಂದ ಅಂತ್ಯದವರೆಗೂ ಪ್ರತಿ ಶಾಸ್ತ್ರದಲ್ಲೂ ಬೇಕು ಅರಿಶಿನ, ಕುಂಕುಮ ವಿವಾಹ ಆರಂಭದಿಂದ ಅಂತ್ಯದವರೆಗೂ ಪ್ರತಿ ಶಾಸ್ತ್ರ, ಸಂಪ್ರದಾಯಗಳಿಗೂ ಅರಿಶಿನ, ಕುಂಕುಮ ಇರಲೇಬೇಕು. ಲಗ್ನ ಪತ್ರಿಕೆಯ ನಾಲ್ಕು ಮೂಲೆಗೆ ಅರಿಶಿನ ಕುಂಕುಮ ಹಚ್ಚಲಾಗುತ್ತೆ. ಈ ಆಚರಣೆ ಏಕೆ? ಅಂತಾ ನೋಡೋದಾದ್ರೆ ಅದಕ್ಕೊಂದು ರೋಚಕ ಕಥೆಯೇ ಇದೆ.
ಒಮ್ಮೆ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮೀ ಹಾಗೂ ಆಕೆಯ ಸಹೋದರಿ ನಡುವೆ ಒಂದು ವಾದ-ವಿವಾದ ಏರ್ಪಡುತ್ತೆ. ಅದೇನಂದ್ರೆ ಇಬ್ಬರ ಪೈಕಿ ಯಾರು ಎಲ್ಲೆಲ್ಲಿರಬೇಕು ಅನ್ನೋದು. ಆಗ ಲಕ್ಷ್ಮೀದೇವಿ ಸಮುದ್ರದಲ್ಲಿ ಅಡಗಿಕೊಳ್ತಾಳೆ. ಆ ಸಂದರ್ಭದಲ್ಲಿ ಜೇಷ್ಠಾದೇವಿ ಆಕೆಯನ್ನು ಹೊರಬರುವಂತೆ ಕೋರಿಕೊಳ್ತಾಳೆ.
ಜೇಷ್ಠಾದೇವಿ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಲಕ್ಷ್ಮೀ ಸಮುದ್ರದಿಂದ ಹೊರಬರೋದೇ ಇಲ್ಲ. ಕೊನೆಗೆ ತನ್ನ ಸಹೋದರಿಯ ಆರ್ತನಾದಕ್ಕೆ ಮರುಗಿ ಲಕ್ಷ್ಮೀದೇವಿಯೂ ತಾನು ಯಾವ, ಯಾವ ಪ್ರದೇಶದಲ್ಲಿ, ವಸ್ತುಗಳಲ್ಲಿ ಇರುತ್ತೇನೆ ಅನ್ನೋದನ್ನು ಹೇಳ್ತಾಳೆ.
ಲಕ್ಷ್ಮೀ ದೇವಿ ಸ್ವರೂಪ ಅರಿಶಿನ ಹಾಗೇ ಲಕ್ಷ್ಮೀ ಹೇಳಿದ ವಸ್ತುಗಳ ಪೈಕಿ ಅರಿಶಿನವೂ ಒಂದು. ಆದುದರಿಂದಲೇ ವಿವಾಹ ಪತ್ರಿಕೆಗಳಿಗೆ ಅರಿಶಿನ ಹಚ್ಚಲಾಗುತ್ತೆ. ಈ ಮೂಲಕ ಲಕ್ಷ್ಮೀಗೆ ವಿವಾಹಕ್ಕೆ ಆಹ್ವಾನ ನೀಡಲಾಗುತ್ತೆ.
ಹೀಗೆ ಲಕ್ಷ್ಮೀಯನ್ನು ಆಹ್ವಾನಿಸುವುದರಿಂದ ಅವಳು ಸದಾ ಮನೆಯವರ ಮೇಲೆ ತನ್ನ ಕೃಪೆ ತೋರುವಳೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅರಿಶಿನವು ಕೇವಲ ಅಲಂಕಾರಿಕ ವಸ್ತು, ಪೂಜನೀಯ ಸಾಮಗ್ರಿಯಾಗಿ ಹೆಸರು ಪಡೆದುಕೊಂಡಿರುವುದು ಮಾತ್ರವಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿನ ಗಣನೀಯ ಸ್ಥಾನವನ್ನು ಪಡೆದುಕೊಂಡು ಸಂಜೀವಿನಿಯಾಗಿದೆ. ಈ ಮೂಲಕ ಮನೆಮದ್ದಾಗಿ ಎಲ್ಲರ ಮನೆಯ ಸಂಗಾತಿಯಾಗಿದೆ.