Akshaya Tritiya: ಅಕ್ಷಯ ತೃತೀಯಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಅಕ್ಷಯ ತೃತೀಯದ ಮುನ್ನ ಮುರಿದ ಪೊರಕೆ, ಹರಿದ ಬಟ್ಟೆಗಳು, ಮುರಿದ ವಸ್ತುಗಳು ಮತ್ತು ಬಿರುಕು ಬಿಟ್ಟ ದೇವರ ಪ್ರತಿಮೆಗಳನ್ನು ತೆಗೆದುಹಾಕುವುದು ಮುಖ್ಯ. ಇವುಗಳನ್ನು ತೆಗೆದುಹಾಕುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬಹುದು ಮತ್ತು ಸಂಪತ್ತು ಹೆಚ್ಚಾಗುತ್ತದೆ. ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಲಕ್ಷ್ಮೀ ದೇವಿಯನ್ನು ಆಕರ್ಷಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಅವು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವೆ. ಅಂತಹ ವಸ್ತುಗಳು ಮನೆಯಲ್ಲಿದ್ದರೆ, ಲಕ್ಷ್ಮಿ ದೇವಿಯು ಆ ಸ್ಥಳಕ್ಕೆ ಬರಲ್ಲ. ಅಕ್ಷಯ ತೃತೀಯ ಸಮೀಪಿಸುತ್ತಿದೆ. ಆದ್ದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು, ನೀವು ಮೊದಲು ಮನೆಯಿಂದ ಕೆಲವು ವಸ್ತುಗಳನ್ನು ಹೊರಗೆ ಹಾಕುವುದು ಅಗತ್ಯ. ಅಂತಹ ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಪೊರಕೆ:
ಪೊರಕೆಯು ಸ್ವಚ್ಛತೆಯನ್ನು ಪ್ರತಿನಿಧಿಸುವ ಒಂದು ವಸ್ತು. ಆದರೆ ಅದು ಬಿರುಕು ಬಿಟ್ಟಿದ್ದರೆ ಅಥವಾ ಮುರಿದಿದ್ದರೆ, ಅದು ಮನೆಗೆ ಬಡತನವನ್ನು ತರುತ್ತದೆ ಎಂದು ನಂಬಲಾಗಿದೆ. ಅಂತಹ ಪೊರಕೆಯನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ತೊಂದರೆ ಉಂಟಾಗುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದ, ಅಕ್ಷಯ ತೃತೀಯ ಬರುವ ಮೊದಲು ಮುರಿದ ಪೊರಕೆಯನ್ನು ತೆಗೆದು ಹೊಸ ಪೊರಕೆಯನ್ನು ಮನೆಗೆ ತರುವುದು ಒಳ್ಳೆಯದು.
ಹರಿದ ಬಟ್ಟೆಗಳು:
ಮನೆಯಲ್ಲಿ ಹರಿದ, ಕೊಳಕಾದ, ಹಾನಿಗೊಳಗಾದ ಅಥವಾ ದೀರ್ಘಕಾಲದಿಂದ ಸ್ವಚ್ಛಗೊಳಿಸದ ಬಟ್ಟೆಗಳಿದ್ದರೆ, ಅವು ಮನೆಯೊಳಗೆ ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಅವು ಬಡತನ ಹೆಚ್ಚಾಗಲು ಕಾರಣವಾಗುತ್ತವೆ. ಅಂತಹ ಬಟ್ಟೆಗಳನ್ನು ತಕ್ಷಣವೇ ತೆಗೆದುಹಾಕಬೇಕು ಅಥವಾ ತೊಳೆದು ಮರುಬಳಕೆ ಮಾಡಬೇಕು. ಇದು ಸಂಪತ್ತು ಬರುವ ಹಾದಿಯನ್ನು ಸೃಷ್ಟಿಸುತ್ತದೆ.
ಮುರಿದ ವಸ್ತುಗಳು:
ಮನೆಯಲ್ಲಿ ಒಡೆದ ಗಡಿಯಾರಗಳು, ಒಡೆದ ಪಾತ್ರೆಗಳು, ಒಡೆದ ಕನ್ನಡಿಗಳು ಮತ್ತು ಹಾನಿಗೊಳಗಾದ ಅಲಂಕಾರಿಕ ವಸ್ತುಗಳು ಇದ್ದರೆ, ಅವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ, ಮುರಿದ ವಸ್ತುಗಳು ಸಂಪತ್ತಿನ ಸ್ಥಿರತೆಗೆ ಅಡ್ಡಿಯಾಗುತ್ತವೆ. ಅಂತಹ ವಸ್ತುಗಳನ್ನು ತೆಗೆದುಹಾಕುವುದರಿಂದ ಒಳ್ಳೆಯ ಶಕ್ತಿಗಳು ಪ್ರವೇಶಿಸುತ್ತವೆ ಎಂದು ನಂಬಲಾಗಿದೆ.
ಮುರಿದ ದೇವಿಯ ಪ್ರತಿಮೆಗಳು:
ಮನೆಯ ಪೂಜಾ ಮಂಟಪದಲ್ಲಿರುವ ಯಾವುದೇ ವಿಗ್ರಹಗಳು ಬಿರುಕು ಬಿಟ್ಟಿದ್ದರೆ ಅಥವಾ ಮುರಿದಿದ್ದರೆ, ಅದನ್ನು ದೇವರಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ. ಅಂತಹ ವಿಗ್ರಹಗಳನ್ನು ಮನೆಯಲ್ಲಿ ಇಡುವುದರಿಂದ ಆ ಶಕ್ತಿ ದುರ್ಬಲಗೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಪವಿತ್ರ ನೀರಿನಲ್ಲಿ ಅಂದರೆ ನದಿ ಅಥವಾ ಕೊಳದಲ್ಲಿ ಬಿಡಿ. ಮನೆಯಲ್ಲಿ ಪರಿಪೂರ್ಣ ಮತ್ತು ಶುದ್ಧ ವಿಗ್ರಹಗಳು ಮಾತ್ರ ಇರಬೇಕು.
ಇದನ್ನೂ ಓದಿ: ಅಕ್ಷಯ ತೃತೀಯದಂದು ಅಪರೂಪದ ಯೋಗಗಳು; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ
ಲಕ್ಷ್ಮಿ ದೇವಿಯು ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಪ್ರೀತಿಸುತ್ತಾಳೆ. ಮನೆಯಲ್ಲಿರುವ ಕಸ, ಮೂಲೆಗಳಲ್ಲಿ ಸಂಗ್ರಹವಾಗಿರುವ ಧೂಳು ಮತ್ತು ಹಾನಿಗೊಳಗಾದ ವಸ್ತುಗಳನ್ನು ತೆಗೆದುಹಾಕದಿದ್ದರೆ, ಅವು ವಾಸ್ತು ದೋಷಗಳಿಗೆ ಕಾರಣವಾಗಬಹುದು. ಅಂತಹ ವಸ್ತುಗಳನ್ನು ತೆಗೆದುಹಾಕುವುದರಿಂದ ಮನೆಗೆ ಮಂಗಳ, ಶಾಂತಿ ಮತ್ತು ಸಂತೋಷ ಬರುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Thu, 24 April 25