Chaturmasya 2024: ಚಾತುರ್ಮಾಸ್ಯ ವ್ರತ ಅಂದರೇನು? ಯಾವಾಗ ಪ್ರಾರಂಭ? ಏನಿದರ ವಿಶೇಷ?

ಚಾತುರ್ಮಾಸ್ಯ ವ್ರತ ಎಂದು ಕರೆಯುವಂಥ ಈ ಅವಧಿ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಶುರು. ಕಾರ್ತೀಕ ಮಾಸದ ಶುಕ್ಲ ಪಕ್ಷದ ದಶಮಿ ತನಕ ಇರುತ್ತದೆ. ಈ ಅವಧಿಯಲ್ಲಿ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ದಾನ- ಧರ್ಮ, ಪೂಜೆ- ಪುನಸ್ಕಾರ, ಅಧ್ಯಯನ- ಅಧ್ಯಾಪನಕ್ಕೆ ಪ್ರಾಶಸ್ತ್ಯ. ಈ ಸಮಯದಲ್ಲಿ ವಿಷ್ಣು ಕ್ಷೀರಸಾಗರದಲ್ಲಿ ಶಯನ ಮಾಡುತ್ತಾನೆ. ಆದ್ದರಿಂದ ಶುಭ ಕಾರ್ಯಗಳನ್ನು ಮಾಡುವವರು ಸಹ ಕಡಿಮೆ. ಏನಿದು ಚಾತುರ್ಮಾಸ್ಯ, ಏನಿದರ ವಿಶೇಷ ಎಂಬುದನ್ನು ಓದಿಕೊಳ್ಳಿ.

Chaturmasya 2024: ಚಾತುರ್ಮಾಸ್ಯ ವ್ರತ ಅಂದರೇನು? ಯಾವಾಗ ಪ್ರಾರಂಭ? ಏನಿದರ ವಿಶೇಷ?
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 19, 2024 | 1:50 PM

ಈ ಲೇಖನವು ಚಾತುರ್ಮಾಸ್ಯದ ಬಗ್ಗೆ ಇರಲಿದೆ. ಮೊದಲ ವಿಚಾರವನ್ನು ಮೊದಲು ತಿಳಿದುಕೊಂಡು ಬಿಡಿ. ಆಹಾರ ಪದ್ಧತಿಯಲ್ಲಿ ಈ ಅವಧಿಯಲ್ಲಿ ಬದಲಾವಣೆ ಅನುಸರಿಸಬೇಕು. ಚಾತುರ್ಮಾಸ್ಯ ಎಂಬುದು ಹೆಸರೇ ತಿಳಿಸುವಂತೆ ನಾಲ್ಕು ಮಾಸಗಳು. ಆಷಾಢ ಶುದ್ಧ (ಶುಕ್ಲ ಪಕ್ಷ) ಏಕಾದಶಿಯಿಂದ ಶುರುವಾಗುತ್ತದೆ. ಶ್ರಾವಣ, ಭಾದ್ರಪದ, ಆಶ್ವೀನದಿಂದ ಕಾರ್ತೀಕ ಶುದ್ಧ ಏಕಾದಶಿ ತನಕ ವ್ರತ ಇರುತ್ತದೆ. ಇದರಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇವನೆ ಮಾಡುವಂತಿಲ್ಲ.

– ಶಾಕ ವ್ರತ

– ದಧಿ ವ್ರತ

– ಕ್ಷೀರ ವ್ರತ

– ದ್ವಿದಲ ವ್ರತ

ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಶ್ರಾವಣ ಮಾಸದ ಶುಕ್ಲ ಪಕ್ಷದ ದಶಮಿ ತನಕ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಂತಿಲ್ಲ, ಸೇವಿಸುವಂತಿಲ್ಲ.

ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಭಾದ್ರಪದ ಮಾಸ ಶುಕ್ಲ ಪಕ್ಷದ ದಶಮಿ ತನಕ ಮೊಸರು ಬಳಕೆ ಮಾಡುವಂತಿಲ್ಲ. ಮೊಸರಿನ ಬದಲಿಗೆ ಮಜ್ಜಿಗೆ ಬಳಸಬೇಕು.

ಭಾದ್ರಪದ ಮಾಸದ ಏಕಾದಶಿಯಿಂದ ಆಶ್ವೀನ ಮಾಸದ ಶುಕ್ಲ ಪಕ್ಷ ದಶಮಿ ತನಕ ಹಾಲು ಬಳಕೆ ಮಾಡುವಂತಿಲ್ಲ. ಹಾಲಿನಿಂದ ಸಿದ್ಧಪಡಿಸುವ ಪಾಯಸ ಮೊದಲಾದವು ಮಾಡಬಾರದು, ಸೇವಿಸಬಾರದು. ಆದರೆ ಮೊಸರು ಮೊದಲಾದವು ಬಳಸಬಹುದು.

ಆಶ್ವೀನ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತೀಕ ಮಾಸದ ಶುಕ್ಲ ಪಕ್ಷದ ದಶಮಿ ತನಕ ದ್ವಿದ ಧಾನ್ಯಗಳನ್ನು ಬಳಸುವಂತಿಲ್ಲ.

ಈ ಆಹಾರ ಪದ್ಧತಿಯನ್ನು ಅನುಸರಿಸುವುದಕ್ಕೆ ಯಾವುದೇ ಜಾತಿ- ಧರ್ಮದ ಚೌಕಟ್ಟಿಲ್ಲ. ಈ ಮಾಸಗಳಲ್ಲಿ ಇವುಗಳನ್ನು ಮಾಡಬೇಕು.

ಏನಿದು ಚಾತುರ್ಮಾಸ್ಯ ವಿಶೇಷ?

ಎಲ್ಲ ಪಾಪಗಳ ವಿನಾಶಕನಾದ ಮಹಾ ವಿಷ್ಣುವು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಕ್ಷೀರಸಾಗರದಲ್ಲಿ ಶಯನ ಮಾಡುತ್ತಾನೆ. ಅವನು ಮತ್ತೆ ಏಳುವುದು ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು. ಈ ಅವಧಿಯನ್ನು ಚಾತುರ್ಮಾಸ್ಯ ಎನ್ನಲಾಗುತ್ತದೆ. ಕೆಲವರು ಈ ಸಮಯದಲ್ಲಿ ಶುಭ- ವೃದ್ಧಿ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಪೂಜೆ, ಅಧ್ಯಯನ, ಅಧ್ಯಾಪನ (ಪಾಠ ಮಾಡುವುದು), ದಾನ- ಧರ್ಮಗಳಿಗೆ ಪ್ರಾಮುಖ್ಯ ಹೇಳಲಾಗಿದೆ.

ಇದನ್ನೂ ಓದಿ: ಇಂತಹ ವ್ಯಕ್ತಿತ್ವದ ಜನರಿಂದ ಸದಾ ದೂರವಿರಿ, ಇಲ್ಲದಿದ್ದರೆ ನಿಮ್ಮ ಜೀವನ ಕಷ್ಟಕರವಾಗುತ್ತದೆ

ಈ ಚಾತುರ್ಮಾಸ್ಯದಲ್ಲಿ ಕೆಲವು ಶ್ರವಣ, ಪಠಣ, ದಾನ- ಧರ್ಮಗಳನ್ನು ಹೇಳಲಾಗಿದೆ. ಅವುಗಳು ಈ ಕೆಳಗಿನಂತಿವೆ:

– ನಿತ್ಯವೂ ಅಷ್ಟ ಮಹಾಮಂತ್ರಗಳನ್ನು ಜಪಿಸಬೇಕು.

– ನಾಲ್ಕು ವೇದಗಳು, ಸ್ಮೃತಿಗಳು, ಬ್ರಹ್ಮಸೂತ್ರಗಳು, ಅಷ್ಟಾದಶ ಪುರಾಣಗಳು, ಅದರಲ್ಲೂ ಭಾಗವತ, ಉಪಪುರಾಣಗಳು, ರಾಮಾಯಣ, ಮಹಾಭಾರತ ಮೊದಲಾದವು ಪಠಣ- ಶ್ರವಣ ಮಾಡಬೇಕು.

– ಸ್ತ್ರೀಯರು ಸಹ ಸ್ತೋತ್ರ, ಕೀರ್ತನೆಗಳನ್ನು ಪಠಣ- ಶ್ರವಣ ಮಾಡಬೇಕು.

– ಸಾಲಿಗ್ರಾಮ, ಗ್ರಂಥ, ಪ್ರತಿಮೆಗಳು, ಭೂದಾನ, ಸುವರ್ಣದಾನ, ದ್ರವ್ಯದಾನ, ಧನದಾನ, ಧಾನ್ಯದಾನ, ತಿಲದಾನ, ಉದಕುಂಭ ದಾನ, ಛತ್ರಿ, ಪಾದರಕ್ಷೆ, ಉಪ್ಪು, ನೆಲ್ಲಿ, ತುಪ್ಪ, ಹಸು, ದೀಪದಾನ, ತರಕಾರಿಗಳು, ಮೊಸರು, ಹಾಲು, ದ್ವಿದಳ ಧಾನ್ಯ, ಶಯ್ಯಾದಾನ ಮುಂತಾದವುಗಳನ್ನು ಮಾಡಬೇಕು. ಈ ದಾನದ ವಿಚಾರವು ಆಯಾ ವ್ಯಕ್ತಿಗೆ ಸಾಧ್ಯವಾಗುವಷ್ಟು ಮಾಡಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ