Eid Milad un Nabi 2021: ಈದ್ ಮಿಲಾದ್ ಉನ್ ನಬಿ ದಿನದ ಮಹತ್ವ ಮತ್ತು ಆಚರಣೆ ಹೇಗೆ?
Eid Milad un Nabi 2021: ಈ ವರ್ಷ, 2021 ರಲ್ಲಿ, ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈದ್ ಮಿಲಾದ್-ಉನ್-ನಬಿಯನ್ನು ಅಕ್ಟೋಬರ್ 18 ರಿಂದ ಅಕ್ಟೋಬರ್ 19 ರವರೆಗೆ ಆಚರಿಸಲಾಗುತ್ತದೆ.
ಈದ್ ಮಿಲಾದ್ ಅಥವಾ ಈದ್ ಮಿಲಾದ್-ಉನ್-ನಬಿಯ ದಿನವಾದ ಇಂದು ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮೊಹಮ್ಮದ್ ಅವರ ಹುಟ್ಟು ಹಬ್ಬ ಮತ್ತು ಸಾವಿನ ದಿನವಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬಿ-ಉಲ್-ಅವ್ವಲ್ ತಿಂಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ನಿರ್ಬಂಧಿತ ಆಚರಣೆಗಳೊಂದಿಗೆ ಗುರುತಿಸಲಾಗಿದೆ ಏಕೆಂದರೆ ಈ ದಿನವನ್ನು ಪ್ರವಾದಿ ಸಾವಿನ ವಾರ್ಷಿಕೋತ್ಸವವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮೌಲಿದ್ ಎಂದೂ ಕರೆಯುತ್ತಾರೆ, ಇದು ‘ಜನ್ಮ ನೀಡುವುದು’ ಎಂಬ ಅರೇಬಿಕ್ ಪದವಾಗಿದೆ. ಮೌಲಿದ್ ಅನ್ನು ತಿಂಗಳ 12 ನೇ ದಿನವಾದ ರಬಿ-ಉಲ್ ಅವ್ವಲ್ ನಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಸೂಫಿ ಅಥವಾ ಬರೆಲ್ವಿ ಪಂಥಕ್ಕೆ ಸೇರಿದವರು ಸಂಭ್ರಮದಿಂದ ಆಚರಿಸುತ್ತಾರೆ.
ಈ ವರ್ಷ, 2021 ರಲ್ಲಿ, ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈದ್ ಮಿಲಾದ್-ಉನ್-ನಬಿಯನ್ನು ಅಕ್ಟೋಬರ್ 18 ರಿಂದ ಅಕ್ಟೋಬರ್ 19 ರವರೆಗೆ ಆಚರಿಸಲಾಗುತ್ತದೆ.
ಪ್ರವಾದಿ ಮುಹಮ್ಮದ್ ಸೌದಿ ಅರೇಬಿಯಾದ ಮಕ್ಕಾದಲ್ಲಿ 570 CE ಯಲ್ಲಿ ಜನಿಸಿದರು ಎಂದು ನಂಬಲಾಗಿದೆ. ಅವರು ಅಲ್ಲಾಹನ ಕೊನೆಯ ಸಂದೇಶವಾಹಕರಾಗಿದ್ದು, ಅವರು ಪ್ರವಾದಿಯಾಗಿ ಎಲ್ಲ ಮನುಷ್ಯರಿಗೂ ಪ್ರೀತಿ ಮತ್ತು ಏಕತೆಯ ಸಂದೇಶವನ್ನು ಸಾರಿದ್ದಾರೆ. 8 ನೇ ಶತಮಾನದಲ್ಲಿ ಪ್ರವಾದಿಯ ಮನೆಯನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಿದಾಗ ಈ ದಿನ ಜನಪ್ರಿಯತೆಯನ್ನು ಗಳಿಸಿತು. ಈಗಿನಂತಲ್ಲದೆ, ದಿನವನ್ನು ವಿಭಿನ್ನ ರೂಪದಲ್ಲಿ ಆಚರಿಸಲಾಯಿತು. ಅಲ್ಲದೆ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಆಚರಿಸಿದ ಮೊದಲ ಇಸ್ಲಾಂ ದೊರೆ ಮುಝಾಫರ್ ಅಲ್ ದಿನ್ ಗೋಕ್ಬೊರಿ ಎಂದು ನಂಬಲಾಗಿದೆ. ಒಟ್ಟೋಮನ್ಸ್ 1588ರಲ್ಲಿ ಈ ದಿನದಂದು ಅಧಿಕೃತ ರಜೆ ಎಂದು ಘೋಷಿಸಿದರು.
11 ನೇ ಶತಮಾನದಲ್ಲಿ, ಈಜಿಪ್ಟಿನ ಪ್ರಮುಖ ಕುಲದಿಂದ ಮೌಲಿದ್ ಆಚರಿಸಲಾಯಿತು. ಈ ದಿನವನ್ನು ಕುರಾನ್ ಪಠಣೆ ಮತ್ತು ಪ್ರಾರ್ಥನೆಗಳನ್ನು ಮಾಡುವ ಮೂಲಕ ಆಚರಿಸುತ್ತ ಬಂದಿದ್ದರು. ಆದ್ರೆ ಈಗ ಈ ದಿನವನ್ನು ಕುರಾನ್ ಪಠಣೆ, ಪ್ರಾರ್ಥನೆಯ ಜೊತೆಗೆ ದರ್ಗಾ ಹಾಗೂ ಮಸೀದಿಗಳಲ್ಲಿ ಸಂಜೆ ಮೆರವಣಿಗೆಗಳೊಂದಿಗೆ(ಜುಲೂಸ್) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹಾಗೂ ಪವಿತ್ರ ಕುರಾನ್ನ ಸಂದೇಶಗಳನ್ನು ಭೋದನೆ ಮಾಡುವ ಮೂಲಕ ಜನರಿಗೆ ಅರಿವು ಮೂಡಿಸುತ್ತ ಆಚರಿಸಲಾಗುತ್ತೆ. ಅದರಲ್ಲೂ 12 ನೇ ಶತಮಾನದಲ್ಲಿ ಸಿರಿಯಾ, ಟರ್ಕಿ, ಮೊರಾಕೊ ಮತ್ತು ಸ್ಪೇನ್ ನಂತಹ ದೇಶಗಳು ಈ ದಿನವನ್ನು ಆಚರಿಸಲು ಆರಂಭಿಸಿದಾಗ ದಿನದ ಆಚರಣೆಯ ಸ್ವರೂಪವೂ ಬದಲಾಗುತ್ತಾ ಹೋಗಿದೆ.
ಇಸ್ಲಾಂನ ಎರಡು ಪ್ರಮುಖ ಪಂಗಡಗಳಾದ ಸುನ್ನಿಗಳು ಮತ್ತು ಶಿಯಾಗಳು ಒಂದೇ ತಿಂಗಳಲ್ಲಿ ಬೇರೆ ಬೇರೆ ದಿನಗಳನ್ನು ಆಚರಿಸುತ್ತಾರೆ. ತಿಂಗಳ 12 ನೇ ದಿನದಂದು ಸುನ್ನಿಗಳು ದಿನವನ್ನು ಆಚರಿಸಿದರೆ, ಶಿಯಾಗಳು ತಿಂಗಳ 17 ನೇ ದಿನದಂದು ಮಾಡುತ್ತಾರೆ. ವಿವಿಧ ದೇಶಗಳಲ್ಲಿ ಮುಸ್ಲಿಮರು ಈ ದಿನವನ್ನು ಧಾರ್ಮಿಕವಾಗಿ ಅನುಸರಿಸುತ್ತಿದ್ದರೂ, ಪ್ರವಾದಿಯವರ ಜನ್ಮದಿನವು ನಿಖರವಾಗಿ ತಿಳಿದಿಲ್ಲ ಮತ್ತು ಅದು ಅಸ್ತಿತ್ವದಲ್ಲಿಲ್ಲ ಎಂದು ನಂಬುವ ಅನೇಕ ಜನರಿದ್ದಾರೆ.
ಇದನ್ನೂ ಓದಿ: Eid Al-Adha 2021: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಹಿಂದಿದೆ ಪ್ರವಾದಿ ಇಬ್ರಾಹಿಂರ ರೋಚಕ ಕಥೆ
Published On - 2:13 pm, Mon, 18 October 21