ಕಲಿಯುಗದಲ್ಲಿ ಹೆಚ್ಚು ಜನಪ್ರಿಯ ದೇವರೆಂದರೆ ದುರ್ಗಾ ಮತ್ತು ಗಣಪತಿ: ಶಾಸ್ತ್ರದ ತತ್ವಗಳ ಪ್ರಕಾರ ಗಣೇಶ ಹುಟ್ಟಿದ್ದು ಆಕಾಶದಲ್ಲಿ!
ತಂದೆಯ ಗುಣ ಗಣೇಶನದಲ್ಲಿ ಗಾಢವಾಗಿ ಕಂಡು ಬರುತ್ತದೆ. ಗಣೇಶ ಕೇಳಿದ್ದನ್ನು ನೀಡಲು ಸದಾ ಸಿದ್ಧವಿರುವ ದೇವರು. ಆದರೆ ಅದನ್ನು ಪಡೆಯಲು ನಮಗೆ ಅರ್ಹತೆ ಇದೆಯಾ? ಅದನ್ನು ನಾವು ಕೇಳಿಕೊಳ್ಳಬೇಕು. ಇದೇ ಕಾರಣಕ್ಕೆ ಗಣೇಶನಿಗೆ ಕ್ಷಿಪ್ರಪ್ರಸಾದ ಅನ್ನುವ ವಿಶೇಷ ಹೆಸರಿದೆ. ಅಂದರೆ ಪೂಜೆ ಮಾಡಿದ ಕೂಡಲೇ ಒಲಿದು, ಕೂಡಲೇ ಫಲ ನೀಡುವ ದೇವರು ಅಂತಾ ಅರ್ಥ.
ವಿಘ್ನವಿನಾಶಕ ಗಣೇಶ ಎಲ್ಲರಿಗೂ ಪ್ರಿಯವಾದ ದೇವರು. ವೈಷ್ಣವರು, ಶೈವರು, ಜಾತಿ, ಪಂಥ ಎನ್ನುವ ಬೇಧಭಾವವಿಲ್ಲದೇ ಎಲ್ಲರೂ ಗಣೇಶನನ್ನು ಪೂಜಿಸುತ್ತಾರೆ. ಯಾವುದೇ ಶುಭ ಕಾರ್ಯಗಳಿರಲಿ, ಮೊದಲಿಗೆ ಮೋದಕಪ್ರಿಯ ಗಣೇಶನಿಗೆ ಪೂಜೆ ಸಲ್ಲಬೇಕು. ಮೊದಲೊಂದಿಪೆ ನಿನಗೆ ಗಣನಾಥ ಅನ್ನುವಂತೆ, ಎಲ್ಲ ಕೆಲಸಗಳಲ್ಲಿ ಮೊದಲಿಗೆ ಗಣೇಶನಿಗೆ ಪೂಜೆ ಆಗಲೇಬೇಕು. ಶಾಸ್ತ್ರಗಳ ಪ್ರಕಾರ ಹೇಳುವುದಾದರೆ ಗಣೇಶ ಕೇವಲ ಪಾರ್ವತಿ ಮಗನಷ್ಟೇ ಅಲ್ಲ, ಆತ ಶಿವನ ಮಗನೂ ಹೌದು. ಅಂದರೆ, ಗಣೇಶ ಶಿವ-ಪಾರ್ವತಿಯರ ಮಗ. ಶಿವ ಆಕಾಶ ದೇವತೆ. ಹೀಗಾಗಿ ಆತನ ಪುತ್ರ ಗಣೇಶ ಕೂಡ ಆಕಾಶ ದೇವತೆ. ಅಷ್ಟೇ ಅಲ್ಲ ಗಣೇಶ ಅವಕಾಶ ದೇವತೆ ಕೂಡ ಹೌದು.
ಎಲ್ಲರಿಗೂ ಒಳ್ಳೆಯದನ್ನು ಮಾಡಲು ಅವಕಾಶ ನೀಡುವ ದೇವರು. ಗಣೇಶ ತಂದೆಯಂತೆಯೇ ವಿಚಿತ್ರ. ಯಾವಾಗಲೂ ಭಕ್ತರ ಪರ. ಅಪ್ಪ ಭಕ್ತರು ಕೇಳಿದ್ದನ್ನು ಹಿಂದೆ ಮುಂದೆ ನೋಡದೇ ನೀಡುವ ಉದಾರಿ. ಇದೇ ಕಾರಣಕ್ಕೆ ಆತ ಭೋಳಾ ಶಂಕರ. ಅಪ್ಪನ ಗುಣವೇ ಮಗನಿಗೂ ಬಂದಿದೆ. ಪುರಾಣಗಳಲ್ಲಿ ಗಣೇಶನ ಹುಟ್ಟಿನ ಬಗ್ಗೆ ಹಲವಾರು ಕಥೆಗಳಿವೆ. ಅದರಲ್ಲಿ ಪಾರ್ವತಿ ತನ್ನ ಮೈಯಿಂದ ಮಣ್ಣನ್ನು ತೆಗೆದು, ಬೊಂಬೆ ಮಾಡಿ ಅದಕ್ಕೆ ಜೀವ ನೀಡುತ್ತಾಳೆ. ಆ ಕಥೆ ಎಲ್ಲರಿಗೂ ಗೊತ್ತು. ಇದೇ ರೀತಿ ಅನೇಕ ಕಥೆಗಳು ಕೂಡ ಪುರಾಣಗಳಲ್ಲಿ ಇವೆ. ಆದರೆ ಶಾಸ್ತ್ರಗಳ ಪ್ರಕಾರ ಗಣೇಶ ಹುಟ್ಟಿದ್ದು ಆಕಾಶದಲ್ಲಿ.
ಇನ್ನು ಮಾನವನ ದೇಹದಲ್ಲಿ ಗಣೇಶನ ಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನ ದೇಹದ ಒಂದೊಂದು ಭಾಗದಲ್ಲಿ ಒಬ್ಬೊಬ್ಬ ದೇವರು ನೆಲೆಸಿರುತ್ತಾರೆ. ಒಂದೊಂದು ಅಂಗಕ್ಕೆ ಒಬ್ಬೊಬ್ಬ ಅಭಿಮಾನಿ ದೇವತೆ ಇದ್ದಾರೆ. ಇದೇ ರೀತಿ ದೇಹದಲ್ಲಿ ಗಣೇಶನ ವಾಸಸ್ಥಳ ಮೂಲಾಧಾರ ನಾಭಿ. ಮನುಷ್ಯನ ಜೀವನಕ್ಕೆ ಈ ಮೂಲಾಧಾರ ನಾಭಿಯೇ ಮುಖ್ಯ. ಮನುಷ್ಯ ಈ ನಾಭಿಯಿಂದ ಊರ್ಧ್ವಮುಖವಾಗಿ ಹೋಗಲು ಯತ್ನಿಸಿದರೆ ಮೋಕ್ಷ. ಕೆಳಮುಖವಾಗಿ ಹೋಗಲು ಮನಸ್ಸು ಮಾಡಿದರೆ ಕಾಮ. ಹೀಗಾಗಿ ಈ ಎರಡೂ ಆರಂಭವಾಗುವುದು ಈ ಗಣೇಶನಿಂದಲೇ ಅನ್ನುವುದು ಶಾಸ್ತ್ರಗಳಿಂದ ತಿಳಿದು ಬರುತ್ತದೆ. ಗಣೇಶ ಸಾಂಸಾರಿಕ ಬದುಕು ಹಾಗೂ ಮೋಕ್ಷ ಸಾಧನೆ – ಎರಡಕ್ಕೂ ಸಲ್ಲುತ್ತಾನೆ. ಹೀಗಾಗಿ ಎರಡರ ಬೀಗದ ಕೈ ಗಣೇಶನ ಬಳಿಯೇ ಇದೆ.
ಇನ್ನು ಪುರಾಣಗಳ ಆಧಾರದಲ್ಲಿ ನೋಡಿದಾಗ ಗಣೇಶ ಮಣ್ಣಿನಿಂದ ಮಾಡಲ್ಪಟ್ಟವನು. ಅಂದರೆ ತಮೋ ಗುಣದಿಂದ ಸೃಷ್ಟಿಯಾದವನು. ಆದರೆ ಮಣ್ಣಿನ ಬಣ್ಣ ಕೆಂಪು. ಕೆಂಪು ಅಂದರೆ ರಜೋ ಗುಣ. ಗಣೇಶನ ಬಣ್ಣವೂ ಕೆಂಪು. ಆತನ ಆಭರಣ, ಧರಿಸಿರುವ ಹೂವಿನ ಮಾಲೆಯೆಲ್ಲಾ ಕೆಂಪು. ಇಲ್ಲಿ ಕೆಂಪು ಅಂದರೆ ಪ್ರಕೃತಿಯ ಸಂಕೇತ. ಅಷ್ಟೇ ಅಲ್ಲ, ಅದು ಕಾಮಕ್ಕೆ ಪ್ರೇರಣೆಯೂ ಹೌದು. ಇದೇ ಕಾರಣಕ್ಕೆ ಹೇಳುವುದು ಗಣೇಶ ಎರಡೂ ಕಡೆಯ ಓಟಕ್ಕೆ ಮೂಲಾಧಾರ ಎಂದು. ಅಂದರೆ ನಾಭಿಯಿಂದ ಕೆಳಮುಖದಲ್ಲಿ ಸಾಗಿದರೆ ಕಾಮ ಪ್ರಚೋದನೆ, ಊರ್ಧ್ವವಾಗಿ ಸಾಗಿದರೆ ಮೋಕ್ಷ. ಒಟ್ಟಿನಲ್ಲಿ ಎರಡೂ ದಾರಿಗಳ ಆರಂಭ ವಿನಾಯಕ.
ಇನ್ನು ವಿಷ್ಣುವಿಗೆ ಇರುವಂತೆ ಗಣೇಶನಿಗೂ ನಾಲ್ಕು ಕೈಗಳು. ವಿಷ್ಣುವಿನ ಕೈಯಲ್ಲಿ ಶಂಖ, ಚಕ್ರ, ಗಧಾ, ಪದ್ಮಗಳಿವೆ. ಇವುಗಳ ಸಂಕೇತವೇನು ಅಂತಾ ನೋಡಲಾಗಿ: ಶಂಖ ಅರ್ಥವನ್ನು ಸೂಚಿಸುತ್ತದೆ. ಅಂದರೆ ಸಂಪತ್ತನ್ನು ಸೂಚಿಸುತ್ತದೆ. ಇನ್ನು ಚಕ್ರ ಧರ್ಮದ ಸಂಕೇತ. ಗಧೆ ಕಾಮ ಹಾಗೂ ಸ್ವೇಚ್ಛಾಚಾರ ಸ್ವಾತಂತ್ರದ ನಿಯಂತ್ರಣದ ಸಂಕೇತ. ಪದ್ಮ- ಅದು ಮೋಕ್ಷದ ಸಂಕೇತ.
ಇದನ್ನೇ ಗಣೇಶನ ವಿಚಾರವಾಗಿ ಹೇಳುವುದಾದರೆ, ಗಣೇಶನ ಕೈಗಳಲ್ಲಿ ಇರುವುದು ಪಾಶ, ದಂತ, ಅಂಕುಶ ಹಾಗೂ ಅಭಯ. ಇವುಗಳು ಏನನ್ನು ತೋರಿಸುತ್ತವೆ ಅನ್ನುವುದನ್ನು ತಿಳಿಯೋಣ. ಮೊದಲಿಗೆ ಪಾಶ. ಇದರರ್ಥ ನಿನ್ನನ್ನು ನೀನು ಧರ್ಮದ ಪಾಶದಿಂದ ಕಟ್ಟಿಕೋ. ಧರ್ಮದ ನೀತಿಯನ್ನು ಮೀರಬೇಡ. ಸ್ವಚ್ಛಂದವಾಗಿ, ಸ್ವೇಚ್ಛಾಚಾರದಿಂದ ಬದುಕಬೇಡ. ಸ್ವಾತಂತ್ರಕ್ಕೊಂದು ಬದ್ಧತೆ ಇದೆ. ಅದನ್ನು ಮೀರಬೇಡ ಅನ್ನುವ ಎಚ್ಚರಿಕೆಯ ಸಂಕೇತವೇ ಪಾಶ. ವಿಷ್ಣುವಿನ ಕೈಯಲ್ಲಿನ ಚಕ್ರವೂ ಕೂಡ ಇದನ್ನೇ ಸೂಚಿಸುತ್ತದೆ.
ಇನ್ನು ಮೊತ್ತೊಂದು ಕೈಯಲ್ಲಿರುವ ದಂತ. ಗಣೇಶ ತನ್ನದೇ ದಂತವನ್ನು ಮುರಿದುಕೊಂಡು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಇದು ಅಹಂಕಾರದ ನಿಗ್ರಹದ ಸಂಕೇತ. ಅಂದರೆ ಅರ್ಥದಿಂದ ಬರುವ ಅಹಂಕಾರವನ್ನು, ಮದವನ್ನು ನೀನೇ ನಿಗ್ರಹಿಸಿಕೊಳ್ಳಬೇಕು ಅನ್ನುವುದು ಇದರ ಹಿಂದಿನ ಅರ್ಥ.
ಮತ್ತೊಂದು ಕೈಯಲ್ಲಿನ ಅಂಕುಶ ನಿಗ್ರಹದ ಸಂಕೇತ. ವಿಷ್ಣುವಿನ ಕೈಯಲ್ಲಿ ಗಧೆ, ಗಣೇಶನ ಕೈಯಲ್ಲಿನ ಅಂಕುಶ. ಎರಡರ ಸಂಕೇತಗಳು ಒಂದೇ. ಸ್ವಚ್ಛಂದ ಕಾಮ ಬೇಡ. ಸ್ವೇಚ್ಛಾಚಾರದ ಸ್ವಾತಂತ್ರ ಸರಿಯಲ್ಲ. ಅದನ್ನು ನಿಗ್ರಹಿಸಿಕೋ ಅನ್ನುವುದು ಇದರ ಅರ್ಥ.
ಇನ್ನು ಕೊನೆಯದ್ದು ಅಭಯ. ಇದು ಮೋಕ್ಷದ ಸಂಕೇತ. ನೀನು ಧರ್ಮದಿಂದ ಬಾಳಿದರೆ, ಧರ್ಮದ ನೀತಿಯನ್ನು ಮೀರದೇ ಇದ್ದರೆ, ನಿನ್ನ ಅಹಂಕಾರವನ್ನು ನೀನು ನಿಗ್ರಹಿಸಿಕೊಂಡಿದ್ದರೆ, ಕಾಮದಿಂದ ನೀನು ಪಾರಾಗಿದ್ದರೆ ನಿನಗೆ ಮೋಕ್ಷ ಅನ್ನುವ ಅಭಯದ ಅರ್ಥವದು. ಮೊದಲ ಮೂರರಲ್ಲಿ ಹೇಳಿದ ರೀತಿ ಬದುಕಿದರೆ ಮೋಕ್ಷ ಖಚಿತ ಅನ್ನುವ ಅಭಯವನ್ನು ಗಣೇಶ ನಮಗೆ ನೀಡುತ್ತಾನೆ.
ಮನುಷ್ಯ ಯಾವತ್ತೂ ಆಶಾ ಜೀವಿ. ಗೀತೆಯಲ್ಲಿ ಕೃಷ್ಣನೇನೋ ನೀನು ಫಲಾಪೇಕ್ಷೆ ಇಲ್ಲದೇ ನಿನ್ನ ಕರ್ತವ್ಯವನ್ನು ನಿರ್ವಹಿಸು ಅನ್ನುತ್ತಾನೆ. ಫಲವನ್ನು ನೀಡುವ ಜವಾಬ್ದಾರಿ ತನ್ನದು ಅನ್ನುತ್ತಾನೆ. ಆದರೆ ಫಲಾಪೇಕ್ಷೆ ಇಲ್ಲದೇ ಕರ್ತವ್ಯ ನಿರ್ವಹಿಸುವುದು ಕಷ್ಟಕರ. ಮನುಷ್ಯನಿಗೆ ತಾನು ಕೇಳಿದ್ದನ್ನು ನೀಡುವ ದೇವರು ಬೇಕು. ಹೀಗಾಗಿಯೇ ಗಣೇಶನಿಗೆ ಭಾರೀ ಬೇಡಿಕೆ ಬಂದಿದೆ ಅನ್ನಿಸುತ್ತದೆ. ಫಲಾಪೇಕ್ಷೆ ಇಲ್ಲದೇ ಯಾರೂ ಪೂಜೆ ಮಾಡುವುದಿಲ್ಲ. ಹೀಗಾಗಿ ಕೇಳಿದ ಫಲವನ್ನು ನೀಡುವ ಉದಾರಿ ದೇವರೆಂದರೆ ಅದು ಗಣೇಶನೇ ಇರಬೇಕು.
ತಂದೆಯ ಗುಣ ಗಣೇಶನದಲ್ಲಿ ಗಾಢವಾಗಿ ಕಂಡು ಬರುತ್ತದೆ. ಗಣೇಶ ಕೇಳಿದ್ದನ್ನು ನೀಡಲು ಸದಾ ಸಿದ್ಧವಿರುವ ದೇವರು. ಆದರೆ ಅದನ್ನು ಪಡೆಯಲು ನಮಗೆ ಅರ್ಹತೆ ಇದೆಯಾ? ಅದನ್ನು ನಾವು ಕೇಳಿಕೊಳ್ಳಬೇಕು. ಇದೇ ಕಾರಣಕ್ಕೆ ಗಣೇಶನಿಗೆ ಕ್ಷಿಪ್ರಪ್ರಸಾದ ಅನ್ನುವ ವಿಶೇಷ ಹೆಸರಿದೆ. ಅಂದರೆ ಪೂಜೆ ಮಾಡಿದ ಕೂಡಲೇ ಒಲಿದು, ಕೂಡಲೇ ಫಲ ನೀಡುವ ದೇವರು ಅಂತಾ ಅರ್ಥ. ಆತನದ್ದು ಯಾವಾಗಲೂ ಅಭಯ ಹಸ್ತ. ಅದು ಯಾವತ್ತೂ ಭಕ್ತರಿಗಾಗಿಯೇ ಮತ್ತು ಭಕ್ತರ ಪರವೇ..!
ಕಲಿಯುಗದಲ್ಲಿ ಅತಿ ಹೆಚ್ಚು ಜನಪ್ರಿಯ ದೇವರೆಂದರೆ ಅದು ದುರ್ಗಾ ಮತ್ತು ಗಣಪತಿ. ದುರ್ಗೆ ಉಗ್ರ ಸ್ವರೂಪಿಣಿ. ಆಕೆಗೆ ಕೋಪ ಬಂದರೆ ತೊಂದರೆ ಮಾಡುತ್ತಾಳೆ ಅನ್ನುವ ನಂಬಿಕೆ ಜನರಲ್ಲಿದೆ. ಹೀಗಾಗಿ ಆಕೆಯನ್ನು ಭಕ್ತಿಯಿಂದ ಪ್ರಾರ್ಥಿಸುವ ಮೂಲಕ ಜನರು ಫಲವನ್ನು ಪಡೆಯಲು ಬಯಸುತ್ತಾರೆ. ತಮ್ಮ ವಿರೋಧಿಗಳನ್ನು ಮಣಿಸಲು ಆಕೆಯನ್ನು ಬೇಡಿಕೊಳ್ಳುತ್ತಾರೆ.
ಆದರೆ ಗಣೇಶ ಮಾತ್ರ ವಿಭಿನ್ನ. ಯಾರು ಏನೇ ಕೇಳಿದರೂ ಕೊಡುವ ಉದಾರಿ ದೇವತೆ. ಇದೇ ಕಾರಣಕ್ಕೆ ಆತನಿಗೆ ಕೋಪಿಸಿಕೊಳ್ಳದ ಹಾಗೂ ಸದಾ ಪ್ರಸನ್ನ ಮುಖದ ದೇವರು ಅನ್ನುತ್ತಾರೆ. ನಾಭಿಯಲ್ಲಿ ವಾಸವಾಗಿರುವ ಗಣೇಶ ಊರ್ಧ್ವಮುಖಿಯಾದರೆ ಮೋಕ್ಷಕ್ಕೆ ಬೇಕು. ಕೆಳಮುಖಿಯಾದರೆ ಕಾಮಕ್ಕೆ ಬೇಕು. ಇನ್ನು ದೇಹದ ಎಲ್ಲ ಅಂತರ್ಕ್ರಿಯೆಗಳಿಗೂ ಗಣೇಶ ಬೇಕೇ ಬೇಕು ಅನ್ನುತ್ತದೆ ಶಾಸ್ತ್ರ.
ಶಿವ-ಪಾರ್ವತಿಯರು ಆಕಾಶ ದೇವತೆಗಳು. ಆಕಾಶ ಪಂಚಭೂತಗಳಲ್ಲಿ ಒಂದು. ಮೂಲತಃ ಶಿವನೇ ಆಕಾಶದ ದೇವತೆ. ಶಿವನನ್ನು ಬಿಟ್ಟು ಪಾರ್ವತಿ ಇಲ್ಲ. ಅಥವಾ ಪಾರ್ವತಿಯನ್ನು ಬಿಟ್ಟು ಶಿವನಿಲ್ಲ. ಎಲ್ಲ ದೇವರುಗಳಂತೆ ಇಬ್ಬರೂ ಒಂದೇ. ವಿಷ್ಣು-ಲಕ್ಷ್ಮಿ ಹೇಗೋ ಹಾಗೆಯೇ ಶಿವ-ಪಾರ್ವತಿ. ಹೀಗಾಗಿ ಆಕಾಶಕ್ಕೆ ಇಬ್ಬರೂ ಅಧಿದೇವತೆಗಳೇ. ಶಿವ-ಪಾರ್ವತಿಯರ ಕಣ್ಣಿಗೆ ಕಾಣದ ರೂಪ ಆಕಾಶ.
ಇಷ್ಟೆಲ್ಲ ಅಂದರೂ ಆಕಾಶದಲ್ಲಿ ಶಿವನದ್ದು ವಿಶೇಷ ಸನ್ನಿಧಾನ. ಅಷ್ಟೇ ಅಲ್ಲ ಪಂಚಭೂತಗಳಾದ ಮಣ್ಣು, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಹಾಗೂ ಸೂರ್ಯ, ಚಂದ್ರ ಮತ್ತು ಯಜಮಾನ – ಈ ಎಂಟಕ್ಕೂ ಶಿವನೇ ಅಧಿದೇವತೆ. ಅಂದರೆ ಆತ ಅಷ್ಟಮೂರ್ತಿ ಶಿವ. ಇಂಥ ಶಿವ-ಪಾರ್ವತಿಯರ ಸಮಾಗಮದಿಂದ ಹುಟ್ಟಿದವನೇ ಗಣಪತಿ ಅನ್ನುತ್ತದೆ ಶಾಸ್ತ್ರ.
ಗಣೇಶನಿಗೆ ಆನೆಯ ಮೋರೆ ಇರುವುದು ಏಕೆ ಅನ್ನುವ ಬಗ್ಗೆ ಪುರಾಣದಲ್ಲಿನ ಕಥೆ ಜನಪ್ರಿಯ. ಪಾರ್ವತಿ ಮೈಯಲ್ಲಿನ ಮಣ್ಣಿನಿಂದ ಮೂರ್ತಿ ಮಾಡಿ, ಅದಕ್ಕೆ ಜೀವ ತುಂಬಿ, ತಾನು ಸ್ನಾನಕ್ಕೆ ಹೋಗುತ್ತಿದ್ದು, ಸ್ನಾನಗೃಹದ ಬಳಿ ಕಾಯುವಂತೆ ಸೂಚಿಸುತ್ತಾಳೆ. ಅಲ್ಲಿಗೆ ಶಿವ ಬಂದು, ಆತನನ್ನು ಬಾಲಕ ಒಳಗಡೆ ಬಿಡದೇ ಇದ್ದಾಗ, ಆತನ ತಲೆಯನ್ನು ತೆಗೆದಿದ್ದು, ಬಳಿಕ ಆತನಿಗೆ ಆನೆಯ ಮುಖ ಹಚ್ಚಿದ್ದು ಎಲ್ಲರಿಗೂ ಗೊತ್ತಿರುವ ಕಥೆಯೇ. ಆದರೆ ಅನೇಕ ಪುರಾಣಗಳಲ್ಲಿ ಆನೆ ಮೋರೆ ಹಚ್ಚಲು ಮತ್ತೂ ಕಥೆಗಳಿವೆ.
ಒಂದು ಪುರಾಣದ ಪ್ರಕಾರ ಪಾರ್ವತಿ ಎಲ್ಲರಂತೆ ಗಣೇಶನನ್ನು ಒಂಭತ್ತು ತಿಂಗಳು ಹೊತ್ತು, ಹೆತ್ತಳಂತೆ. ಬಾಣಂತಿಯನ್ನು ನೋಡಲು ಎಲ್ಲ ದೇವತೆಗಳು ಆಗಮಿಸಿದರು. ಈ ವೇಳೆ ಶನಿ ದೇವ ಬರಲಿಲ್ಲ. ಇಂಥ ಸುಸಂದರ್ಭದಲ್ಲಿ ತಾನೇಕೆ ಹೋಗಬೇಕು? ಅನ್ನುವ ವಿಚಾರ ಶನಿಯದ್ದು. ಆದರೆ ಇಂಥ ಸಂದರ್ಭದಲ್ಲಿ ಹೋಗದೇ ಇರುವುದು ಸರಿಯಾ? ಅನ್ನುವ ಪ್ರಶ್ನೆಯೂ ಎದ್ದಿತು. ಏನಾದರೂ ಆಗಲಿ ಅಂದುಕೊಂಡು ಅನಿವಾರ್ಯವಾಗಿ ಬಾಣಂತಿ-ಮಗುವನ್ನು ನೋಡಲು ಶನಿ ದೇವ ಬರುತ್ತಾನೆ. ಶನಿ ದೇವ ಮಗುವನ್ನು ನೋಡುತ್ತಲೇ ತಲೆ ಕತ್ತರಿಸಿ ಹೋಗುತ್ತದೆ.
ಇದರಿಂದಾಗಿ ಎಲ್ಲರೂ ಆತಂಕಗೊಳ್ಳುತ್ತಾರೆ. ಪಾರ್ವತಿ ಕಣ್ಣೀರು ಹಾಕುತ್ತಾಳೆ. ಆಗ ಶಿವ ಉತ್ತರಾಭಿಮುಖವಾಗಿ ಮಲಗಿರೋ ಪ್ರಾಣಿಯ ತಲೆಯನ್ನು ಕತ್ತರಿಸಿ ತರುವಂತೆ ಹೇಳುತ್ತಾನೆ. ಉತ್ತರಾಭಿಮುಖವಾಗಿ ಆನೆಯೊಂದು ಮಲಗಿರುತ್ತದೆ. ಅದರ ತಲೆಯನ್ನು ತಂದ ಬಳಿಕ, ಶಿವ ಮುಂಡಕ್ಕೆ ಜೋಡಿಸಿ, ಮಗನನ್ನು ಬದುಕಿಸುತ್ತಾನೆ. ಇದು ಪುರಾಣದ ಕಥೆ. ಎರಡೂ ಕಥೆಗಳಲ್ಲಿ ಉತ್ತರಾಭಿಮುಖವಾಗಿ ಮಲಗಿರುವ ಪ್ರಾಣಿಯ ತಲೆಯನ್ನು ತರುವಂತೆ ಸೂಚಿಸುವುದು ಸಾಮಾನ್ಯವಾಗಿ ಕಂಡು ಬಂದಿದೆ. ಆದರೆ ಎರಡೂ ಕಥೆಗಳು ಬೇರೆ ಬೇರೆ.
ಇಲ್ಲಿ ಉತ್ತರಾಭಿಮುಖವಾಗಿ ಮಲಗಬಾರದು ಅನ್ನುವಂತೆ ಅಂಶವನ್ನಷ್ಟೇ ಗಣನೆಗೆ ತೆಗೆದುಕೊಂಡು, ಉಳಿದದ್ದನ್ನು ಅದರಷ್ಟಕ್ಕೆ ಅದನ್ನು ಬಿಟ್ಟುಬಿಡಬೇಕು ಅನ್ನುತ್ತಾರೆ ಶಾಸ್ತ್ರ ಪಂಡಿತರು. ಏಕೆಂದರೆ ಅವರ ಪ್ರಕಾರ, ಪುರಾಣದ ಕಥೆಗಳನ್ನು ನಂಬಿಕೊಂಡು ಹೋದರೆ ಅದಕ್ಕೆ ಶಾಸ್ತ್ರದ ಸಮ್ಮತವಿಲ್ಲ. ಶಾಸ್ತ್ರದ ತತ್ವದ ಮೂಲಕ ಹೋದಾಗಲೇ ಗಣಪತಿ ಕಥೆ ಶ್ರೇಷ್ಠ ಅನ್ನುವುದು ಅವರ ವಾದ.
ಇನ್ನು ಋಗ್ವೇದದಲ್ಲಿ ವಿಚಾರಕ್ಕೆ ಬಂದರೆ, ಅಲ್ಲಿ ಗಣಪತಿಗೆ ಸೊಂಡಿಲೇ ಇಲ್ಲ. ಋಗ್ವೇದದಲ್ಲಿ ಬರುವ ಎರಡು ಮಂತ್ರಗಳಲ್ಲಿ ಗಣೇಶನಿಗೆ ಸೊಂಡಿಲೇ ಇಲ್ಲ. ದೇವರು ಯಾವ ರೂಪದಲ್ಲಿಯಾದರೂ ಇರಬಹುದು. ನಾವು ಧ್ಯಾನ ಮಾಡುವಾಗ ಯಾವ ರೂಪ ಕಾಣುತ್ತದೆಯೋ ಅದೇ ರೂಪದಲ್ಲಿ ದೇವರು ಇರುತ್ತಾನೆ. ಅವರವರು ಉಪಾಸಿಸುವ ದೇವರು, ಅವರವರು ಕಾಣುವ ರೂಪದಲ್ಲಿಯೇ ಇರುತ್ತಾನೆ. ಗಣೇಶ ಆನೆಯ ರೂಪದ ಉಪಾಸನೆ ಮಾಡಿದ್ದಕ್ಕೆ, ಆತನಿಗೆ ಆನೆಯ ರೂಪ ಬಂದಿದೆ ಅನ್ನುತ್ತಾರೆ ಪಂಡಿತರು.
ಇನ್ನು ಯಜುರ್ವೇದದಲ್ಲಿ ಆನೆಯ ಪ್ರಸ್ತಾಪ ಬರುತ್ತದೆ. ಅದು ಗಣೇಶನಿಗೆ ಆನೆಯ ರೂಪವಿರುವ ಬಗ್ಗೆ ಮೊದಲನೇ ಪ್ರಸ್ತಾಪ. ತಾಂತ್ರಿಕವಾಗಿ ಹಾಗೂ ಪುರಾಣಗಳಲ್ಲಷ್ಟೇ ಈ ಬಗ್ಗೆ ಪ್ರಸ್ತಾಪವಿದೆ. ಇನ್ನು ಗಣಪತಿಗೆ ವೃದ್ಧಿ, ಸಿದ್ಧಿ ಅನ್ನುವ ಇಬ್ಬರು ಪತ್ನಿಯರಿದ್ದರು ಅಂತಾ ಹೇಳಲಾಗಿದೆ. ಇದು ಕೂಡ ಶಾಸ್ತ್ರಗಳಲ್ಲಿ ಇಲ್ಲ. ತಾಂತ್ರಿಕ ಉಪಾಸನೆ ಸಂದರ್ಭದಲ್ಲಿ ಇವೆಲ್ಲ ಬರುತ್ತವೆ. ಹೀಗಾಗಿ ಇವುಗಳನ್ನೆಲ್ಲಾ ಬದಿಗಿಟ್ಟು, ಎಲ್ಲ ಗಣಗಳಿಗೆ, ಎಲ್ಲ ಜೀವಗಣಗಳಿಗೆ ಒಡೆಯನಾಗಿರುವ ಗಣಪತಿಯನ್ನು ಆರಾಧಿಸಿ, ಆತನಿಂದ ಒಳ್ಳೆಯದನ್ನು ಪಡೆಯುವದನ್ನು ಮಾಡುವುದು ಒಳಿತು.
ವಿಶೇಷ ಬರಹ – ನರಸಿಂಹಮೂರ್ತಿ ಪ್ಯಾಟಿ
(Ganesha Chaturthi 2021 Trivia Ganesh born in the sky know how)