Kashi: ಕಾಶಿಗೆ ಆ ಹೆಸರು ಬರಲು ಕಾರಣವೇನು? ಆದಿಗುರು ಶಂಕರಾಚಾರ್ಯ ವಿರಚಿತ ಕಾಲಭೈರವಾಷ್ಟಕದ ವರ್ಣನೆ ಏನು?

Kashi: ಕಾಶಿಗೆ ಆ ಹೆಸರು ಬರಲು ಕಾರಣವೇನು? ಆದಿಗುರು ಶಂಕರಾಚಾರ್ಯ ವಿರಚಿತ ಕಾಲಭೈರವಾಷ್ಟಕದ ವರ್ಣನೆ ಏನು?
Kashi: ಕಾಶಿಗೆ ಆ ಹೆಸರು ಬರಲು ಕಾರಣವೇನು? ಆದಿಗುರು ಶಂಕರಾಚಾರ್ಯ ವಿರಚಿತ ಕಾಲಭೈರವಾಷ್ಟಕದಲ್ಲಿ ಬರುವ ವರ್ಣನೆ ಏನು?

ಕಾಶ ಎಂದರೆ ಪ್ರಕಾಶ, ಸೂರ್ಯ. 'ಕಾಶೃ ದೀಪ್ತೌ' ಎಂಬುದು ಇದಕ್ಕೆ ಮೂಲ. ಕಾಶೀ ಎಂದರೆ ಪ್ರಕಾಶಿಸುತ್ತಿರುವಂತಹುದು ಎಂದರ್ಥ. ಕಾಶೀಪುರ (Kashi) ಎಂದರೆ ಪಾಪಗಳಿಂದ ವಿಮುಕ್ತರಾಗಿ ಜೀವಗಳು ಪ್ರಕಾಶಿಸುವಂತಹಾ ಒಂದು ಕ್ಷೇತ್ರ. ಆ ಮುಕ್ತಿಯನ್ನು ಪ್ರಸಾದಿಸುವವನೇ ಕಾಶೀ ಕ್ಷೇತ್ರದ ಅಧಿಪತಿಯಾದ ಕಾಲಭೈರವ. ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ (Kalabhairava Ashtakam).

TV9kannada Web Team

| Edited By: sadhu srinath

Dec 30, 2021 | 6:06 AM

ಕಾಲ ಎಂದರೆ ವಿಧಿ, ಶಕ್ತಿ. ಬ್ರಹ್ಮಾಂಡದಲ್ಲಿ ಘಟಿಸುವ ಪ್ರತಿ ಸಂಘಟನೆಗೂ ಸಮಯವನ್ನು ವಿಧಿಸುವವನು. ಹುಟ್ಟಿಗೂ, ಸಾವಿಗೂ ನಡುವಣ ಅವಧಿಯ ಪ್ರತಿ ಆಗುಹೋಗುಗಳಿಗೂ ಸಮಯವನ್ನು ನಿಗದಿ ಪಡಿಸುವ ಜಗನ್ನಿಯಾಮಕನು. ಹೊಗಳಿಕೆಗೆ ಹಿಗ್ಗದ – ನಿಂದೆಗೆ ಕ್ರುದ್ಧನಾಗದ, ಸರ್ವ ಸೃಷ್ಟಿಯಲ್ಲಿ ಯಾವುದೇ ತಾರತಮ್ಯವಿಲ್ಲದೇ ಸಮಾನತೆಯಿಂದ ಕರಾರುವಾಕ್ಕಾಗಿ ಸಮಯ ನಿರ್ವಹಣೆ ವಿಧಿಸುವ ಪರಬ್ರಹ್ಮಸ್ವರೂಪ. ಸಮಸ್ತವಿಶ್ವವೂ ಕಾಲನ ಆಜ್ಞಾಪಾಲಕವೇ. ನಿಶ್ಚಲ, ನಿರಂಜನ, ನಿರ್ವಿಕಲ್ಪ, ನಿರಾಕಾರ, ಸರ್ವಾಕಾರ ಮತ್ತು ಶುದ್ಧವಾದ ದೇವದೇವ ಮಹಾದೇವನೇ ಕಾಲ. ಎಂಟೆಂಟು ಸಂಖ್ಯೆಯ ಎಂಟು ಬಗೆಯ ಭೈರವ ಗುಂಪುಗಳಿವೆ ಎಂದು ಹೇಳಲ್ಪಟ್ಟಿದೆ. ಈ ಎಲ್ಲಾ 64 ಭೈರವರನ್ನು ನಿಯಂತ್ರಿಸುವವನು ಕಾಲಭೈರವ. ಪ್ರಳಯಕಾಲದಲ್ಲಿ ಪಂಚ ಭೂತಗಳ ಮೂಲಕ ಭೀಕರವಾದ ಶಬ್ದವನ್ನು ಮಾಡುತ್ತಾ ಎಲ್ಲಾ 64 ಭೈರವ ರೂಪಗಳಿಂದ, ಇಡೀ ಜಗತ್ತನ್ನು ತನ್ನಲ್ಲಿ ಲಯ ಮಾಡಿಕೊಳ್ಳುತ್ತಾನೆ ಕಾಲಭೈರವ (Lord Shiva).

ಕಾಶ ಎಂದರೆ ಪ್ರಕಾಶ, ಸೂರ್ಯ. ‘ಕಾಶೃ ದೀಪ್ತೌ’ ಎಂಬುದು ಇದಕ್ಕೆ ಮೂಲ. ಕಾಶೀ ಎಂದರೆ ಪ್ರಕಾಶಿಸುತ್ತಿರುವಂತಹುದು ಎಂದರ್ಥ. ಕಾಶೀಪುರ (Kashi) ಎಂದರೆ ಪಾಪಗಳಿಂದ ವಿಮುಕ್ತರಾಗಿ ಜೀವಗಳು ಪ್ರಕಾಶಿಸುವಂತಹಾ ಒಂದು ಕ್ಷೇತ್ರ. ಆ ಮುಕ್ತಿಯನ್ನು ಪ್ರಸಾದಿಸುವವನೇ ಕಾಶೀ ಕ್ಷೇತ್ರದ ಅಧಿಪತಿಯಾದ ಕಾಲಭೈರವ (Kalabhairava). ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ. ಆದಿಗುರು ಭಗವಾನ್ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಕಾಲಭೈರವಾಷ್ಟಕಂ: ಶ್ರೀಮತ್ಪರಮಹಂಸ ಪರಿವ್ರಾಜಕರೂಪೀ ಭಗವಾನ್ ಶಂಕರಾಚಾರ್ಯ ( Adi Shankaracharya) ವಿರಚಿತಂ ಶ್ರೀ ಕಾಲಭೈರವಾಷ್ಟಕ (Kalabhairava Ashtakam) ಹೀಗಿದೆ:

1. ದೇವರಾಜ ಸೇವ್ಯಮಾನ ಪಾವನಾಂಘ್ರಿಪಂಕಜಂ। ವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಂ। ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂ। ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

ಇಂದ್ರ ಪದವಿಯಲ್ಲಿ ಇರುವವನಿಂದ ಸೇವೆಯನ್ನು ಸ್ವೀಕರಿಸುವಂತಹಾ ಪವಿತ್ರವಾದ ಪಾದಕಮಲಗಳುಳ್ಳವನೂ, ಸರ್ಪವನ್ನೇ ಯಜ್ಞೋಪವೀತವಾಗಿ ಧರಿಸಿರುವವನೂ, ಜಟೆಯಲ್ಲಿ ಚಂದ್ರನಿಗೆ ಆಶ್ರಯ ನೀಡಿರುವವನೂ, ಕೃಪಾಸಾಗರನೂ, ನಾರದರೇ ಮೊದಲಾದ ಋಷಿ ಮುನಿಗಳಿಂದ ವಂದಿಸಲ್ಪಡುವವನೂ, ದಿಕ್ಕುಗಳನ್ನೇ ವಸ್ತ್ರವನ್ನಾಗಿ ಧರಿಸಿರುವವನೂ ಆದ ಕಾಶೀಪುರದ ಅಧಿಪತಿ ಕಾಲಭೈರವನನ್ನು ಭಜಿಸುತ್ತೇನೆ.

2. ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂ ಪರಂ। ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಂ। ಕಾಲಕಾಲ ಮಂಬುಜಾಕ್ಷಮಕ್ಷಶೂಲಮಕ್ಷರಂ। ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

ಕೋಟಿ ಸೂರ್ಯರು ಒಟ್ಟಾದಷ್ಟು ಪ್ರಖರವಾಗಿ ಪ್ರಕಾಶಿಸುವವನೂ, ಸಂಸಾರ ಸಾಗರವನ್ನು ದಾಟಿಸುವವನೂ, ಶ್ರೇಷ್ಠತಮನೂ, ಜಗತ್ತನ್ನು (ಸೃಷ್ಟಿಯನ್ನು) ವಿನಾಶದಿಂದ ತಪ್ಪಿಸಲೆಂದು, ಇಡೀ ಜಗತ್ತನ್ನು ಸುಟ್ಟು ಭಸ್ಮ ಮಾಡಬಲ್ಲಷ್ಟು ಪ್ರಖರವಾದ ವಿಷವನ್ನು ಪಾನಮಾಡಿ, ಪರಾಶಕ್ತಿ ಪಾರ್ವತೀ ದೇವಿಯ ಮಧ್ಯಪ್ರವೇಶದಿಂದಾಗಿ, ಆ ವಿಷವು ಕಂಠ ಪ್ರದೇಶದಲ್ಲಿಯೇ ಸೀಮಿತವಾದುದರಿಂದ ನೀಲಕಂಠನಾಗಿರುವವನೂ, ಇಡೀ ಸೃಷ್ಟಿಯ ಸರ್ವ ಜೀವ ಸಂಕುಲಕ್ಕೂ ಅಗತ್ಯ ವಸ್ತುಗಳನ್ನು ದಯಪಾಲಿಸುವವನೂ, ವಿಶಿಷ್ಟವಾದ (ಸೂರ್ಯ, ಚಂದ್ರ ಹಾಗೂ ಅಗ್ನಿ) ಮೂರು ಕಣ್ಣುಳ್ಳವನೂ, ಜೀವ ಸಂಕುಲದ ಕಾಲನೆನಿಸಿರುವ ಯಮನನ್ನೂ ನಿಯಂತ್ರಿಸುವವನೂ, ಕಮಲದಂತಹಾ ಸುಂದರ ಕಣ್ಗಳುಳ್ಳವನೂ, ಅಕ್ಷಶೂಲನು ಅರ್ಥಾತ್ ಎಂತಹುದೇ ಗುರಿಯನ್ನಾದರೂ ತಲುಪಬಲ್ಲ ಚೂಪಾದ ತ್ರಿಶೂಲವನ್ನು ಹಿಡಿದಿರುವವನೂ, ಅವಿನಾಶಿಯೂ ಆದ ಕಾಲ ಭೈರವನನ್ನು ಭಜಿಸುತ್ತೇನೆ.

3. ಶೂಲಟಂಕ ಪಾಶದಂಡ ಪಾಣಿಮಾದಿಕಾರಣಂ। ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಂ। ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ। ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

ಮೊನಚಾದ ತ್ರಿಶೂಲ- ಕೊಡಲಿ- ಬಂಧಿಸಬಲ್ಲ ಕುಣಿಕೆಯುಳ್ಳ ಹಗ್ಗ- ರಕ್ಷಕನಿಗೆ ಅತ್ಯವಶ್ಯವಾದ ದಂಡ (ಕೋಲು), ಇವುಗಳನ್ನು ಕೈಯಲ್ಲಿ ಹಿಡಿದಿರುವವನೂ, ಜಗತ್ಕಾರಣನೂ, ಶ್ಯಾಮಲ ದೇಹದವನೂ, ಆದಿದೇವನೂ (ಅನಾದಿಯಾದ ತನ್ನಿಂದ ಅಂಶಗಳನ್ನು ಹೊರಹೊಮ್ಮಿಸಿ ಜಗತ್ತಾಗಿ ಸೃಷ್ಟಿ ಮಾಡುವಾಗ ತಾನೇ ಒಂದು ಅಂಶದಿಂದ ಮೊದಲು ಉದ್ಭವವಾದ ಆದಿದೇವನು), ಅವಿನಾಶಿಯೂ, ಯಾವುದೇ ಲೋಪವಿಲ್ಲದ ಪೂರ್ಣನೂ, ದೋಷರಹಿತನೂ, ಭಯಂಕರ ಪರಾಕ್ರಮಿಯೂ, ಜಗದೊಡೆಯನೂ, ವಿಲಕ್ಷಣವಾದ ತಾಂಡವ ನೃತ್ಯ ಮಾಡುವುದಕ್ಕೆ ಇಷ್ಟ ಪಡುವಂತಹವನೂ ಆದ ಕಾಶೀಪುರದ ಅಧಿದೇವತೆ ಕಾಲಭೈರವನನ್ನು ಶ್ರದ್ಧೆಯಿಂದ ಸೇವಿಸುತ್ತೇನೆ.

4. ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ। ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕವಿಗ್ರಹಂ। ನಿಕ್ವಣನ್ಮನೋಜ್ಞ ಹೇಮ ಕಿಂಕಿಣೀ ಲಸತ್ಕಟಿಂ। ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

ಭುಕ್ತಿ ಅರ್ಥಾತ್ ಐಹಿಕವಾದ ಭೋಗಲಾಲಸೆಗಳಿಂದ ತನ್ನ ನಿಷ್ಠ ಸಾಧಕರಿಗೆ ಬಿಡುಗಡೆ ಕೊಡುವಂತಹವನೂ, ಪರಮ ಮಂಗಳಕರವಾದ – ದೃಢವಾದ – ಮನೋಹರವಾದ ಶರೀರವುಳ್ಳವನೂ, ತನ್ನಲ್ಲಿ ನಿಷ್ಠೆ ಹೊಂದಿರುವವರ ಬಗ್ಗೆ ವಾತ್ಸಲ್ಯ ತೋರುವವನೂ, ನಿಶ್ಚಲನೂ, ಸಮಸ್ತ ಲೋಕಗಳನ್ನು ಒಳಗೊಂಡ ಇಡೀ ವಿಶ್ವವೇ ತನ್ನ ದೇಹದ ಭಾಗವಾಗಿರುವವನೂ, ‘ಕಿಣಿ ಕಿಣಿ’ ಎಂದು ಮನೋಜ್ಞವಾಗಿ ಸದ್ದು ಮಾಡುವ ಗೆಜ್ಜೆಗಳುಳ್ಳ ಚಿನ್ನದ ನಡುಪಟ್ಟಿಯನ್ನು ಧರಿಸಿರುವವನೂ ಆದ ಕಾಲಭೈರವ ಸ್ವಾಮಿಯನ್ನು ಭಜಿಸುತ್ತೇನೆ.

5. ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ। ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಂ। ಸ್ವರ್ಣವರ್ಣ ಶೇಷಪಾಶ ಶೋಭಿತಾಂಗ ಮಂಡಲಂ। ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

ಸೃಷ್ಟಿಯ ಸಕಲ ಜೀವ ಸಂಕುಲವೂ ಪ್ರಾಕೃತಿಕ ಧರ್ಮದ ಅನುಸಾರವಾಗಿಯೇ ನಡೆಯುವಂತೆ ಪಾಲಿಸುವವನೂ, ಹಾಗೆ ಯಾವ ಪದಾರ್ಥವೂ ಪ್ರಕೃತಿ ಧರ್ಮದಿಂದ ವಿಮುಖವಾಗದಂತೆ ಅಧರ್ಮ ಮಾರ್ಗಗಳೇ ಇರದಂತೆ ಮಾಡುವವನೂ, ಜೀವಿಗಳು ತಮ್ಮ ಕರ್ಮಗಳಿಗೆ ತಕ್ಕ ಫಲಗಳನ್ನು ಅನುಭವಿಸುವಂತೆ ಮಾಡುವುದರ ಮೂಲಕ ಅವರವರ ಕರ್ಮದ ಬಂಧನಗಳಿಂದ ಬಿಡುಗಡೆ ಮಾಡುವವನೂ, ನಿಷ್ಠ ಸಾಧಕರಿಗೆ ಸುಶರ್ಮ ಅಂದರೆ ನಿಜವಾದ ಆನಂದವನ್ನು ದಯಪಾಲಿಸುವವನೂ, ಹೊಂಬಣ್ಣದ ಸರ್ಪವು ಸುತ್ತಿ ಅಲಂಕೃತವಾದ ಶಿರೋಭಾಗದಲ್ಲಿ ಪ್ರಭಾಮಂಡಲವನ್ನು ಹೊಂದಿರುವವನೂ ಆದ ಕಾಲಭೈರವನನ್ನು ಭಜಿಸುತ್ತೇನೆ.

6. ರತ್ನಪಾದುಕಾ ಪ್ರಭಾಭಿರಾಮ ಪಾದಯುಗ್ಮಕಂ। ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ। ಮೃತ್ಯುದರ್ಪನಾಶನಂ ಕರಾಲದಂಷ್ಟ್ರ ಮೋಕ್ಷಣಂ। ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

ರತ್ನಮಯವಾದ ಪಾದುಕೆಗಳ ಕಾಂತಿಯಲ್ಲಿ ಮನೋಹರವಾಗಿ ಕಾಣುವ ಪಾದಕಮಲಗಳುಳ್ಳವನೂ, ನಿತ್ಯನೂ (ಯಾವುದೇ ಕಾಲಘಟ್ಟಗಳಲ್ಲೂ ಬದಲಾಗದೇ ತನ್ನ ಸ್ವಸ್ವರೂಪದಲ್ಲೇ ಇರುವಂತಹವನೂ), ತನ್ನನ್ನು ಬಿಟ್ಟು ಯಾವುದೇ ಎರಡನೇ ಅಸ್ತಿತ್ವ ಇಲ್ಲದ ಏಕಮೇವನೂ, ಸರ್ವರೂಪಗಳಲ್ಲಿ ಸರ್ವ ಜೀವಸಂಕುಲಕ್ಕೂ ಇಷ್ಟದೈವವೂ, ನಿರಂಜನನೂ (ಒಂದು ಕಪ್ಪು ಚುಕ್ಕೆಯಂತಹಾ ದೋಷವೂ ಇಲ್ಲದವನು), ಮರಣಕಾಲದಲ್ಲಿ ಜೀವಿಗಳ ಮನೋಬುದ್ಧಿಗಳಲ್ಲಿ ಭೀತಿ ಹುಟ್ಟುವಂತೆ ದರ್ಪ ತೋರುವ ಮೃತ್ಯುವಿನ ಅಂತಹಾ ಭೀಕರತೆಯನ್ನು (ಜ್ಞಾನವನ್ನು ಕೊಡುವುದರ ಮೂಲಕ) ನಾಶ ಪಡಿಸಿ, ನಿಷ್ಠ ಜೀವಿಗಳಿಗೆ, ಅದರ ಭಯಂಕರ ಕೋರೆದಾಡೆಗಳಿಂದ ಬಿಡುಗಡೆ ದಯಪಾಲಿಸುವ ವನೂ ಆದ ಆ ಕಾಲಭೈರವನನ್ನು ಭಜಿಸುತ್ತೇನೆ.

7. ಅಟ್ಟಹಾಸ ಭಿನ್ನಪದ್ಮಜಾಂಡಕೋಶಸಂತತಿಂ। ದೃಷ್ಟಿಪಾತ ನಷ್ಟಪಾಪ ಜಾಲಮುಗ್ರಶಾಸನಂ। ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ। ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

(ಪ್ರಳಯಕಾಲದ ತಾಂಡವದ ನಂತರದಲ್ಲಿ ಆ ರೌದ್ರವನ್ನು ತೊರೆದು, ಆನಂದ ಸ್ವರೂಪನಾಗಿ) ಗಟ್ಟಿಯಾಗಿ ನಕ್ಕ ಕೂಡಲೇ, ಕೇವಲ ಆ ನಗುವಿನ ಧ್ವನಿಯಿಂದ, ಪದ್ಮಜ ಅಂಡ ಅಂದರೆ ಬ್ರಹ್ಮಾಂಡವು ಭಿನ್ನಗೊಂಡು ವಿವಿಧ ಲೋಕಗಳೇ ಸೃಷ್ಟಿಯಾಗುವಂತೆ ಮಾಡಿದವನೂ, ಕೇವಲ ತನ್ನ ಒಂದು (ಕ್ಷಣಕಾಲದ) ದೃಷ್ಟಿ ಬೀಳುವುದರಿಂದಲೇ ಪಾಪರಾಶಿಗಳನ್ನೇ ನಾಶ ಮಾಡವವನೂ, ಎಲ್ಲೂ ರಾಜಿ ಮಾಡಿಕೊಳ್ಳದಂತಹಾ ಉಗ್ರ ಶಾಸನನೂ, ನಿಷ್ಠ ಸಾಧಕರಿಗೆ ಅಣಿಮಾದಿ ಅಷ್ಟ ಸಿದ್ಧಿಗಳನ್ನು ಪ್ರಸಾದಿಸುವವನೂ, ಕಪಾಲಗಳ ಮಾಲೆಯನ್ನು ಧರಿಸಿರುವವನೂ (ಶೌಚಾಶೌಚಗಳಿಗೆ ಅತೀತನೂ ಅರ್ಥಾತ್ ಸರ್ವಮಯನೂ) ಆದ ಕಾಶೀಪುರಾಧೀಶ ಕಾಲಭೈರವನನ್ನು ಭಜಿಸುತ್ತೇನೆ.

8. ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ|ಕಾಶಿವಾಸಿ ಲೋಕಪುಣ್ಯ ಪಾಪಶೋಧಕಂ ವಿಭುಂ|ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ|ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ॥

ಜಗತ್ತಿನ ಸಮಸ್ತ ಸೃಷ್ಟಿಯೂ ಪಂಚಭೂತಗಳಿಂದ ಉಂಟಾಗಿರುವಂತಹುದೇ. ಪಂಚ ಭೂತಗಳೇ ಎಲ್ಲಕ್ಕೂ ಮೂಲದ್ರವ್ಯ. ಹಾಗಾಗಿ ಎಲ್ಲಾ ಜೀವ ಪ್ರಭೇದಗಳೂ ಮೂಲದಲ್ಲಿ ಭೂತಗಳೆಂದೇ ಪರಿಗಣಿಸಲ್ಪಡುತ್ತವೆ. ಸೃಷ್ಟಿಯಲ್ಲಿ ಅಸಂಖ್ಯಾತ ಭೂತಸಂಕುಲಗಳಿವೆ. ಈ ಎಲ್ಲಾ ಭೂತಸಂಘಗಳನ್ನು ಮುನ್ನಡೆಸುವಂತಹಾ ನಾಯಕನೂ, ನಿಷ್ಠ ಸಾಧಕರಿಗೆ ಅವರು ಬಯಸುವಂತಹಾ ವೈಭವ (ಕೀರ್ತಿ)ವನ್ನು ಹೇರಳವಾಗಿ ಪ್ರಸಾದಿಸುವವನೂ, ತಮ್ಮ ಪುಣ್ಯವಿಶೇಷದಿಂದ ಕಾಶೀವಾಸಿಗಳಾಗಿ ತನ್ನ ಸನ್ನಿಧಿಯನ್ನು ಹೊಂದುವಂತಹಾ ಪುಣ್ಯಜನರ ಪಾಪಶೇಷವನ್ನು ಶುದ್ಧಿಗೊಳಿಸುವಂತಹಾ ಜಗತ್ಪತಿಯೂ, ಪ್ರಕೃತಿ ಧರ್ಮಗಳೆನ್ನುವ ನೀತಿಮಾರ್ಗಗಳನ್ನು ರೂಪಿಸುವಲ್ಲಿ ನಿಪುಣನೂ ಅನಾದಿಯೂ, ಸಮಸ್ತ ಸೃಷ್ಟಿಗೆ ಪ್ರಭುವೂ ಆದ, ಸರ್ವ ಜೀವಗಳೂ ವಾಸಿಸಲು ಅಪೇಕ್ಷೆ ಪಡುವ ಕಾಶೀ ಕ್ಷೇತ್ರಾಧಿಪತಿ ಕಾಲಭೈರವನನ್ನು ಭಜಿಸುತ್ತೇನೆ.

9. ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ। ಜ್ಞಾನಮುಕ್ತಿಸಾಧನಂ ವಿಚಿತ್ರಪುಣ್ಯವರ್ಧನಂ। ಶೋಕ ಮೋಹ ಲೋಭ ದೈನ್ಯ ಕೋಪತಾಪ ನಾಶನಂ। ತೇ ಪ್ರಯಾಂತಿ ಕಾಲಭೈರವಾಂಘ್ರಿಸನ್ನಿಧಿಂ ಧ್ರುವಂ॥

ಈ ಕಾಲಭೈರವಾಷ್ಟಕವು ಕ್ಷಣಿಕ ಆನಂದವನ್ನು ನೀಡುವಂತಹಾ ಐಹಿಕ ಸುಖಗಳನ್ನೋ ಅಥವಾ ಸ್ವರ್ಗದಂತಹಾ ಅಶಾಶ್ವತವಾದ ಅಂತಹುದೇ ಇತರ ಲೋಕಗಳ ವಾಸವನ್ನೋ ಕೊಡುವಂತಹುದ್ದಲ್ಲ. ಬದಲಿಗೆ, ನಿಷ್ಠ ಸಾಧಕರನ್ನು ಇಂತಹಾ ಅಶಾಶ್ವತವಾದ ಲಾಲಸೆಗಳಿಂದ ಬಿಡುಗಡೆಗೊಳಿಸಿ, ‘ಸುಶರ್ಮ’ ಅಂದರೆ ಶ್ರೇಷ್ಠವಾದ ಆನಂದ ಅಂದರೆ ಮೋಕ್ಷವನ್ನು ಪ್ರಸಾದಿಸುವಂತಹಾ ಜ್ಞಾನಕ್ಕೆ ಸಾಧಕವಾಗಬಲ್ಲದು. ಈ ಮನೋಹರವಾದ ಕಾಲಭೈರವಾಷ್ಟಕವನ್ನು ಯಾರು ಪಠಣ ಮಾಡುತ್ತಿರುತ್ತಾರೋ ಅಂತಹವರಿಗೆ ವಿಶಿಷ್ಟವಾದ ಪುಣ್ಯವನ್ನು ವರ್ಧಿಸಬಲ್ಲದು. ಅವರ ದುಃಖ, ವ್ಯಾಮೋಹ, ಲೋಭ, ದೀನತ್ವ, ಕ್ರೋಧ ಮೊದಲಾದವುಗಳನ್ನು ನಾಶಪಡಿಸಬಲ್ಲದು. ಹಾಗೆ ಪಠಣ ಮಾಡುವವರು ನಿಶ್ಚಯವಾಗಿ ಮೋಕ್ಷವನ್ನು ಅರ್ಥಾತ್ ಮಹಾದೇವನಾದ ಕಾಲಭೈರವನ ಪಾದಗಳ ಸನ್ನಿಧಿಯನ್ನು ಹೊಂದುವರು.

Follow us on

Related Stories

Most Read Stories

Click on your DTH Provider to Add TV9 Kannada