Chinese Food Prasad: ಈ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುತ್ತೆ ನೂಡಲ್ಸ್, ಫ್ರೈಡ್ ರೈಸ್, ಮೊಮೊಸ್
ಕೋಲ್ಕತ್ತಾದ ಟೆಂಗ್ರಾ ಪ್ರದೇಶದ ಕಾಳಿ ದೇವಸ್ಥಾನವು ತನ್ನ ವಿಶಿಷ್ಟ ಆಚರಣೆಗಳಿಂದಲೇ ಎಲ್ಲೆಡೆ ಸುದ್ದಿಯಲ್ಲಿದೆ. ಇಲ್ಲಿ ಭಕ್ತರಿಗೆ ಚೈನೀಸ್ ಆಹಾರವನ್ನು ಪ್ರಸಾದವಾಗಿ ನೀಡಲಾಗುತ್ತದೆ. 60 ವರ್ಷಗಳಷ್ಟು ಹಳೆಯದಾದ ಈ ದೇವಾಲಯದ ಇತಿಹಾಸವು ಒಂದು ಅದ್ಭುತವಾದ ಪವಾಡದೊಂದಿಗೆ ಸಂಬಂಧಿಸಿದೆ. ಇಲ್ಲಿ ನೂಡಲ್ಸ್, ಫ್ರೈಡ್ ರೈಸ್ ಮತ್ತು ಮೊಮೊಸ್‌ಗಳನ್ನು ದೇವರಿಗೆ ನೈದೇದ್ಯವಾಗಿ ಇಡಲಾಗುತ್ತದೆ.

ಭಾರತದಲ್ಲಿ ಸಾಕಷ್ಟು ದೇವಾಲಯಗಳಿವೆ. ಅವುಗಳಲ್ಲಿ ಅನೇಕ ದೇವಾಲಯಗಳು ತಮ್ಮ ವಿಶಿಷ್ಟ ಸಂಪ್ರದಾಯ ಹಾಗೂ ಪವಾಡಗಳಿಂದ ವಿಶ್ವ ಪ್ರಸಿದ್ಧವಾಗಿದೆ. ಇದೀಗ ಕೋಲ್ಕತ್ತಾದ ದೇವಾಲಯವೊಂದು ಎಲ್ಲೆಡೆ ಭಾರೀ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಇಲ್ಲಿ ಭಕ್ತರಿಗೆ ನೀಡುವ ಪ್ರಸಾದ. ಈ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ಚೈನೀಸ್ ಫುಡ್ಗಳನ್ನು ನೀಡಲಾಗುತ್ತದೆ.
ಚೈನೀಸ್ ಫುಡ್ಗಳನ್ನು ಪ್ರಸಾದವಾಗಿ ನೀಡುವ ದೇವಾಲಯವಿದು:
ಕೋಲ್ಕತ್ತಾದ ಟೆಂಗ್ರಾ ಪ್ರದೇಶದಲ್ಲಿರುವ ಕಾಳಿ ದೇವಾಲಯದಲ್ಲಿ ನೂಡಲ್ಸ್, ಫ್ರೈಡ್ ರೈಸ್ ಮತ್ತು ಮೊಮೊಸ್‌ಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಈ ಪ್ರದೇಶವು ಚೈನಾ ಟೌನ್ ಎಂಬ ಹೆಸರಿನಿಂದಲೂ ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಚೀನೀ ಕಾಳಿ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯವು 60 ವರ್ಷ ಹಳೆಯದಾಗಿದ್ದು, ದೇವಿಯನ್ನು ಹಿಂದೂಗಳು ಮಾತ್ರವಲ್ಲದೆ ಚೀನೀ ಜನರು ಸಹ ಪೂಜಿಸುತ್ತಾರೆ.
ಮಾಧ್ಯಮ ವರದಿಗಳ ಪ್ರಕಾರ, ಹಲವು ವರ್ಷಗಳ ಹಿಂದೆ ಚೀನಾದ ಕುಟುಂಬವೊಂದು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ 10 ವರ್ಷದ ಮಗುವನ್ನು ಬದುಕಿಸಲು ಇಲ್ಲಿಗೆ ಕರೆತಂದಿದ್ದರು. ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನಿಸಿ, ಮಗು ಬದುಕುವಿದೇ ಕಷ್ಟ ಎಂದು ಹೇಳಿದ್ದರು. ಆ ಸಮಯದಲ್ಲಿ ಈ ಚೀನಿ ಕುಟುಂಬ ತಮ್ಮ ಮಗುವನ್ನು ಈ ಕಾಳಿ ದೇವಿಯ ದೇವಸ್ಥಾನದ ಬಳಿಯ ಮರದ ಕೆಳಗೆ ಬಂಡೆಗಳ ಬಳಿ ಮಲಗಿಸಿ ದೇವಿಯನ್ನು ಪ್ರಾರ್ಥಿಸಿದರು. ಕಾಳಿ ದೇವಿಯು ಅವರ ಪ್ರಾರ್ಥನೆಗಳನ್ನು ಕೇಳಿ ಮಗುವನ್ನು ಮತ್ತೆ ಬದುಕಿಸಿದಳು ಎಂದು ಹೇಳಲಾಗುತ್ತದೆ. ಇಂದು ಆ ಸ್ಥಳದಲ್ಲಿ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದೆ. ಒಂದು ಪ್ರತಿಮೆಯನ್ನೂ ಸ್ಥಾಪಿಸಲಾಯಿತು. ಆದರೆ ಆ ಎರಡು ಕಪ್ಪು ಕಲ್ಲುಗಳು ಇನ್ನೂ ಅದೇ ಸ್ಥಳದಲ್ಲಿವೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಚೀನಿಯರು ವಾಸಿಸುತ್ತಾರೆ. ಈ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯ ಚೀನಿಯರು ಬರುತ್ತಾರೆ.
ಇದನ್ನೂ ಓದಿ: ವರ್ಷದಲ್ಲಿ ಎರಡು ಬಾರಿ ಹನುಮ ಜಯಂತಿಯನ್ನು ಆಚರಿಸಲು ಕಾರಣವೇನು?
ಪ್ರಸಾದವಾಗಿ ಚೀನೀ ಆಹಾರ ಮಾತ್ರ ಲಭ್ಯ:
ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಪ್ರಸಾದವಾಗಿ ಚೀನೀ ಆಹಾರ ಮಾತ್ರ ಲಭ್ಯವಿದೆ. TOI ವರದಿಗಳ ಪ್ರಕಾರ, ದೇವಾಲಯದಲ್ಲಿ ನೂಡಲ್ಸ್, ಚೌ ಮೇನ್ ಮತ್ತು ಫ್ರೈಡ್ ರೈಸ್ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅವರು ಮಂಚೂರಿಯನ್ ನಂತಹ ತಿನಿಸುಗಳನ್ನು ಬಡಿಸುತ್ತಾರೆ. ಹಿಂದೂ ಸಂಪ್ರದಾಯಗಳ ಪ್ರಕಾರ, ದೇವಾಲಯದಲ್ಲಿ ಪೂಜೆ ಮತ್ತು ಆರತಿಯನ್ನು ಮಾಡಲಾಗುತ್ತದೆ, ಆದರೆ ಕಾಳಿ ದೇವಿಯ ಪೂಜೆಯ ಸಮಯದಲ್ಲಿ ಮೇಣದಬತ್ತಿಗಳನ್ನು ಸಹ ಬೆಳಗಿಸಲಾಗುತ್ತದೆ. ಇದರೊಂದಿಗೆ, ಕೈಯಿಂದ ಮಾಡಿದ ಕಾಗದದ ದೀಪವನ್ನು ಬೆಳಗಿಸುವ ವಿಶೇಷ ಸಂಪ್ರದಾಯವೂ ಇದೆ. ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳು ಹತ್ತಿರ ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Fri, 11 April 25