ಗಣೇಶನ ಆಕಾರದಲ್ಲೇ ನಿರ್ಮಾಣವಾಗಿರುವ ವಿಶಿಷ್ಟ ದೇವಾಲಯ: ಗುಜರಾತ್‌ನ ಮೆಹಮದಾಬಾದ್ ಸಿದ್ಧಿವಿನಾಯಕನ ವಿಶೇಷತೆ ಇಲ್ಲಿದೆ!

ಗುಜರಾತ್‌ನ ಮೆಹಮದಾಬಾದ್‌ನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಾಲಯವು ವಿಶಿಷ್ಟವಾಗಿದ್ದು, ಸ್ವತಃ ಗಣೇಶನ ಆಕಾರದಲ್ಲೇ ನಿರ್ಮಿಸಲಾಗಿದೆ. ಅಹಮದಾಬಾದ್ ಸಮೀಪದ ಈ ಬೃಹತ್ ದೇವಾಲಯವು ಮುಂಬೈ ಸಿದ್ಧಿವಿನಾಯಕ ದೇವಾಲಯದೊಂದಿಗೆ ಧಾರ್ಮಿಕ ಸಂಪರ್ಕ ಹೊಂದಿದೆ. ಭಕ್ತರಿಗೆ ಆಧುನಿಕ ಸೌಲಭ್ಯಗಳೊಂದಿಗೆ ಆಧ್ಯಾತ್ಮಿಕ ಅನುಭವ ನೀಡುತ್ತದೆ, ವಿಶೇಷವಾಗಿ ಗಣೇಶೋತ್ಸವದಲ್ಲಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಇದು ಭಕ್ತಿ ಮತ್ತು ಅದ್ಭುತ ವಾಸ್ತುಶಿಲ್ಪದ ಸಂಗಮ.

ಗಣೇಶನ ಆಕಾರದಲ್ಲೇ ನಿರ್ಮಾಣವಾಗಿರುವ ವಿಶಿಷ್ಟ ದೇವಾಲಯ: ಗುಜರಾತ್‌ನ ಮೆಹಮದಾಬಾದ್ ಸಿದ್ಧಿವಿನಾಯಕನ ವಿಶೇಷತೆ ಇಲ್ಲಿದೆ!
ಮೆಹಮದಾಬಾದ್ ಸಿದ್ಧಿವಿನಾಯಕ
Image Credit source: tripadvisor.in

Updated on: Sep 24, 2026 | 9:22 AM

ಗುಜರಾತ್‌ನ ಮೆಹಮದಾಬಾದ್‌ನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಾಲಯವು ಭಾರತದ ಇತರ ಗಣೇಶ ದೇವಾಲಯಗಳಿಗಿಂತ ವಿಶಿಷ್ಟವಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಕೇವಲ ಗರ್ಭಗುಡಿಯಲ್ಲಿರುವ ವಿಗ್ರಹವಲ್ಲ, ಬದಲಿಗೆ ಇಡೀ ದೇವಾಲಯದ ವಾಸ್ತುಶಿಲ್ಪ. ಈ ದೇವಾಲಯವನ್ನು ದೂರದಿಂದ ನೋಡಿದರೆ, ಸ್ವತಃ ಗಣೇಶನೇ ಕುಳಿತಿರುವಂತೆ ಆತನ ಮುಖ ಮತ್ತು ದೇಹದ ರೂಪವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ದೇವಾಲಯದ ಆವರಣವು ಸುಮಾರು 22 ಬಿಘಾ ಬೃಹತ್ ಪ್ರದೇಶದಲ್ಲಿ ಹರಡಿಕೊಂಡಿದ್ದು, ಭಕ್ತರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ವಿಶೇಷತೆಗಳು:

ಈ ದೇವಾಲಯವು ಹೊರಭಾಗದಿಂದ ನೋಡಲು ಸಂಪೂರ್ಣವಾಗಿ ಗಣಪತಿಯ ಆಕಾರದಲ್ಲೇ ನಿರ್ಮಿಸಲಾಗಿದೆ. ಅಹಮದಾಬಾದ್‌ನಿಂದ ಸುಮಾರು 25 ಕಿ.ಮೀ ದೂರದಲ್ಲಿ ವಾತ್ರಕ್ ನದಿಯ ದಡದಲ್ಲಿದೆ. ಇದು ಸುಮಾರು 120 ಅಡಿ ಉದ್ದ, 84 ಅಡಿ ಅಗಲ ಮತ್ತು 71 ಅಡಿ ಎತ್ತರವಿದೆ. ವೃದ್ಧರಿಗೆ ಮತ್ತು ದಿವ್ಯಾಂಗರಿಗೆ ಅನುಕೂಲವಾಗಲು ಲಿಫ್ಟ್, ವ್ಹೀಲ್‌ಚೇರ್ ಹಾಗೂ ಎಲೆಕ್ಟ್ರಿಕ್ ರಿಕ್ಷಾ ವ್ಯವಸ್ಥೆ ಇದೆ. ಇದರೊಂದಿಗೆ ಫುಡ್ ಕೋರ್ಟ್, ವಸತಿ ಕೊಠಡಿಗಳು ಮತ್ತು ಮಕ್ಕಳಿಗಾಗಿ ಮನರಂಜನಾ ಉದ್ಯಾನವನವೂ (ಅಮ್ಯೂಸ್‌ಮೆಂಟ್ ಪಾರ್ಕ್) ಇದೆ.

ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಮುಂಬೈ ಸಿದ್ಧಿವಿನಾಯಕ ದೇವಾಲಯದೊಂದಿಗೆ ವಿಶೇಷ ಸಂಪರ್ಕ:

ಮೆಹಮದಾಬಾದ್‌ನ ಈ ಸಿದ್ಧಿವಿನಾಯಕ ದೇವಾಲಯಕ್ಕೂ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯಕ್ಕೂ ಒಂದು ಅದ್ಭುತ ಧಾರ್ಮಿಕ ಸಂಪರ್ಕವಿದೆ. ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮೆಹಮದಾಬಾದ್ ಟ್ರಸ್ಟ್ ಪ್ರಕಾರ, ಮುಂಬೈನ ಸಿದ್ಧಿವಿನಾಯಕ ದೇವಾಲಯದಿಂದ ಶಾಶ್ವತ ಅಖಂಡ ಜ್ಯೋತಿಯನ್ನು (ಜ್ವಾಲೆ) ತಂದು ಇಲ್ಲಿ ಸ್ಥಾಪಿಸಲಾಗಿದೆ. ಇದೇ ಕಾರಣಕ್ಕೆ ಈ ದೇವಾಲಯಕ್ಕೂ ‘ಸಿದ್ಧಿವಿನಾಯಕ’ ಎಂದೇ ಹೆಸರನ್ನಿಡಲಾಗಿದೆ. ಗಣೇಶನನ್ನು ವಿಘ್ನನಿವಾರಕ ಹಾಗೂ ಮಂಗಳಮೂರ್ತಿ ಎಂದು ಪೂಜಿಸುವುದರಿಂದ, ಯಾವುದೇ ಶುಭ ಕಾರ್ಯಕ್ಕೂ ಮುನ್ನ ಇಲ್ಲಿ ಪ್ರಾರ್ಥಿಸಿದರೆ ಸಕಲ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ದೃಢ ನಂಬಿಕೆ.

ಗಣೇಶೋತ್ಸವದಲ್ಲಿ ಹರಿದುಬರುವ ಭಕ್ತಸಾಗರ:

ಸಾಮಾನ್ಯವಾಗಿ ದೇವಾಲಯಗಳಲ್ಲಿ ಗರ್ಭಗುಡಿಯಲ್ಲಿರುವ ಮೂರ್ತಿಯೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ಆದರೆ ಮೆಹಮದಾಬಾದ್‌ನಲ್ಲಿ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಗಣೇಶನ ದೈವಿಕ ರೂಪದ ವಾಸ್ತುಶಿಲ್ಪವೇ ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುತ್ತದೆ. ಗಣೇಶೋತ್ಸವದ ಸಂದರ್ಭದಲ್ಲಿ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಈ ವಿಶಿಷ್ಟ ದೇವಾಲಯವನ್ನು ಕಣ್ಣುಂಬಿಕೊಳ್ಳಲು ಆಗಮಿಸುತ್ತಾರೆ. ಭಕ್ತಿ, ಆಧ್ಯಾತ್ಮಿಕತೆ ಮತ್ತು ಅದ್ಭುತ ಶೈಲಿಯ ವಾಸ್ತುಶಿಲ್ಪದ ಸಂಗಮವಾಗಿರುವ ಈ ಮೆಹಮದಾಬಾದ್ ಸಿದ್ಧಿವಿನಾಯಕ ದೇವಾಲಯವು ಗಣೇಶ ಭಕ್ತರು ಖಂಡಿತವಾಗಿಯೂ ಭೇಟಿ ನೀಡಬೇಕಾದ ದಿವ್ಯ ಕ್ಷೇತ್ರವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us