Mysuru Dasara 2022: ಚಾಮುಂಡೇಶ್ವರಿಗೆ ಸಿಎಂ ಬೊಮ್ಮಾಯಿ ಪೂಜೆ, ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ
ಚಾಮುಂಡಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ. ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ(Mysuru Dasara 2022) ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಚಾಮುಂಡಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಭೇಟಿ ನೀಡಿದ್ದು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ. ಸದ್ಯ ಈಗ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.
ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಮಹಿಷಾಸುರನನ್ನ ವಧೆ ಮಾಡಿರುವಂತಹ ದಿನ. ಜನರಿಗೆ ಮಂಗಳ ಉಂಟಾಗಲಿ, ಎಲ್ಲರಿಗೂ ಒಳ್ಳೇದು ಮಾಡಲಿ. ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿವೆ. ಜನರು ಶಾಂತಿಯಿಂದ ಪಾಲ್ಗೊಂಡಿದ್ದಕ್ಕಾಗಿ ಅಭಿನಂದಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತಕ್ಕೆ ಅಭಿನಂದಿಸುತ್ತೇನೆ ಎಂದರು.
ಸಿಎಂ ಬೊಮ್ಮಾಯಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ್ದು ತೆರೆದ ವಾಹನದಲ್ಲಿ ಮೆರೆವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ಅರಮನೆಗೆ ಕರೆತರಲಾಗುತ್ತಿದೆ. ಕೆಲವೇ ಕ್ಷಣದಲ್ಲಿ ತಾವರೆಕಟ್ಟೆಗೆ ಉತ್ಸವ ಮೂರ್ತಿ ಆಗಮಿಸಲಿದ್ದು ಚಾಮುಂಡಿ ದೇವಿ ಉತ್ಸವ ಮೂರ್ತಿ ಕಣ್ತುಂಬಿಕೊಳ್ಳಲು ರಸ್ತೆ ಉದ್ದಕ್ಕೂ ನೂರಾರು ಭಕ್ತರು ಕಾದು ನಿಂತಿದ್ದಾರೆ. ಉತ್ಸವ ಮೂರ್ತಿ ಸ್ವಾಗತಕ್ಕೆ ಕಲಾತಂಡಗಳು ಸಜ್ಜಾಗಿವೆ. ಉತ್ಸವ ಮೂರ್ತಿ ಮುಂದೆ ಈಡುಗಾಯಿ ಹೊಡೆಯಲು ತೆಂಗಿನ ಕಾಯಿ ಹಿಡಿದು ಭಕ್ತರು ಕಾಯುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯ ಬಳಿ ಹೆದ್ದಾರಿ ಅಡ್ಡಗಟ್ಟಿ ರೈತರ ಪ್ರತಿಭಟನೆ, ದಸರಾ ವೀಕ್ಷಿಸಲು ಮೈಸೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಸಂಕಷ್ಟ!
ಅರ್ಜುನನಿಗೆ ಪೂಜೆ
ಇನ್ನು ಚಾಮುಂಡೇಶ್ವರಿಯನ್ನ ಬರಮಾಡಿಕೊಳ್ಳಲು ಅರ್ಜುನ ಆನೆ ಅಲಂಕಾರಗೊಂಡು ಸಿದ್ಧವಾಗಿದ್ದು ಡಿಸಿಎಫ್ ಕರಿಕಾಲನ್ ಅವ್ರಿಂದ ಅರ್ಜುನನಿಗೆ ಪೂಜೆ ನೆರವೇರಿದೆ.
ಸುತ್ತೂರು ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ
ಮತ್ತೊಂದೆಡೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಬೊಮ್ಮಾಯಿ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಹಾಗೂ ಸುತ್ತೂರು ಶಾಖಾ ಮಠದಲ್ಲೇ ತಿಂಡಿ ಸೇವಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಸುನಿಲ್ ಕುಮಾರ್, JDS ಶಾಸಕ ಜಿ.ಟಿ.ದೇವೇಗೌಡ ಸಾಥ್ ನೀಡಿದ್ರು. ಸುತ್ತೂರು ಮಠಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ ನೋಡಲು ಜನ ಮುಗಿಬಿದ್ದಿದ್ದು ಜನರನ್ನ ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಇದನ್ನೂ ಓದಿ: Mohan Bhagwat: ಅಸ್ಪೃಶ್ಯತೆ, ಜಾತಿ ತಾರತಮ್ಯ ಅಧರ್ಮ; ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:03 am, Wed, 5 October 22