Mysore Dasara 2022: ಮೈಸೂರು ದಸರಾ ಪ್ರಯುಕ್ತ 3 ವಿಶೇಷ ರೈಲುಗಳ ವ್ಯವಸ್ಥೆ; ಮಾರ್ಗದ ವಿವರ ಇಲ್ಲಿದೆ
ಮೈಸೂರಿನ ಜಿಲ್ಲಾ ರೈಲ್ವೆ ವ್ಯವಸ್ಥಾಪಕರು (DRM) ಕರ್ನಾಟಕದ ವಿವಿಧ ಸಣ್ಣ ರೈಲು ನಿಲ್ದಾಣಗಳಲ್ಲಿ ಮೈಸೂರಿನಿಂದ ತೆರಳುವ ಮತ್ತು ಆಗಮಿಸುವ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಕೂಡ ಘೋಷಿಸಿದ್ದಾರೆ.
ಬೆಂಗಳೂರು: ಮೈಸೂರು ದಸರಾ (Mysuru Dasara) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕೊರೊನಾದಿಂದಾಗಿ (COVID-19) 2 ವರ್ಷಗಳಿಂದ ಕೊಂಚ ಕಳೆಗುಂದಿದ್ದ ಮೈಸೂರು ದಸರಾ ಈ ಬಾರಿ ಇನ್ನಷ್ಟು ಕಳೆಗಟ್ಟುವ ನಿರೀಕ್ಷೆಯಿದೆ. ಮೈಸೂರಿನಲ್ಲಿ ನಡೆಯುವ ದಸರಾ (Dasara) ಆಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಪ್ರವಾಸಿಗರಿಗಾಗಿ ರೈಲ್ವೆ ಇಲಾಖೆ (Railway Department) 3 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಿದೆ.
ಮೈಸೂರಿನ ಜಿಲ್ಲಾ ರೈಲ್ವೆ ವ್ಯವಸ್ಥಾಪಕರು (DRM) ಕರ್ನಾಟಕದ ವಿವಿಧ ಸಣ್ಣ ರೈಲು ನಿಲ್ದಾಣಗಳಲ್ಲಿ ಮೈಸೂರಿನಿಂದ ತೆರಳುವ ಮತ್ತು ಆಗಮಿಸುವ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಕೂಡ ಘೋಷಿಸಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲಿ ಸಂಚರಿಸಲಿರುವ ವಿಶೇಷ ರೈಲುಗಳ ವಿವರ ಇಲ್ಲಿದೆ: 1. ಮೈಸೂರಿನಿಂದ ಬೆಂಗಳೂರಿಗೆ (KSR ನಿಲ್ದಾಣ) ಹೊರಡುವ ರೈಲು ಸಂಖ್ಯೆ 06215 ಅಕ್ಟೋಬರ್ 5ರಂದು ರಾತ್ರಿ 11.30ಕ್ಕೆ ಸಂಚಾರ ಪ್ರಾರಂಭಿಸಲಿದೆ. ಮರುದಿನ 2.45ಕ್ಕೆ ಬೆಂಗಳೂರನ್ನು ತಲುಪಲಿದೆ. 062126 ಸಂಖ್ಯೆಯ ಅದೇ ರೈಲು ಅಕ್ಟೋಬರ್ 6ರಂದು ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿನಿಂದ (ಕೆಎಸ್‌ಆರ್ ನಿಲ್ದಾಣ) ಹೊರಡಲಿದ್ದು, ಅದೇ ದಿನ ಬೆಳಗ್ಗೆ 6.20ಕ್ಕೆ ಮೈಸೂರು ತಲುಪಲಿದೆ.
ಇದನ್ನೂ ಓದಿ: Mysuru Dasara 2022: ಮೈಸೂರಿನ ಶಾಲೆಗಳಿಗೆ ಸೆ.26 ರಿಂದ ದಸರಾ ರಜೆ ಶುರು
2. ಸೆಪ್ಟೆಂಬರ್ 30ರಿಂದ ಪ್ರಾರಂಭವಾಗುವ ಹೊಸ ರೈಲು ಸಂಖ್ಯೆ 07302 ಮೈಸೂರಿನಿಂದ ಬೆಳಿಗ್ಗೆ 8.20ಕ್ಕೆ ಹೊರಡಲಿದ್ದು, ಅದೇ ದಿನ ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ತಲುಪಲಿದೆ. ಇದೇ ರೈಲು ಸಂಖ್ಯೆ 07301 ಚಾಮರಾಜನಗರದಿಂದ ಬೆಳಗ್ಗೆ 10.55ಕ್ಕೆ ಹೊರಡಲಿದ್ದು, ಅದೇ ದಿನ ಮಧ್ಯಾಹ್ನ 12.25ಕ್ಕೆ ಮೈಸೂರು ತಲುಪಲಿದೆ. ಅಕ್ಟೋಬರ್ 6ರವರೆಗೆ ಈ ವಿಶೇಷ ಸೇವೆ ಲಭ್ಯವಿರುತ್ತದೆ.
Kindly note running of Special trains for Dasara Festival and Temporary Stoppage of trains #SWRupdates @SWRRLY pic.twitter.com/QQIihIHJ1e
— DRM Mysuru (@DrmMys) September 21, 2022
3. ಇದೇ ಮಾರ್ಗದಲ್ಲಿ ಮತ್ತೊಂದು ರೈಲು ಅಕ್ಟೋಬರ್ 5 ಮತ್ತು 6ರಂದು ಚಲಿಸಲಿದೆ. ರೈಲು ಸಂಖ್ಯೆ 06247 ಮೈಸೂರಿನಿಂದ ಅಕ್ಟೋಬರ್ 5ರಂದು ರಾತ್ರಿ 11.30ಕ್ಕೆ ಹೊರಡುತ್ತದೆ ಮತ್ತು ಮರುದಿನ 1.10ಕ್ಕೆ ಚಾಮರಾಜಪೇಟೆ ತಲುಪಲಿದೆ. ಇದೇ ರೈಲು ಸಂಖ್ಯೆ 06248 ಚಾಮರಾಜನಗರದಿಂದ ಅಕ್ಟೋಬರ್ 6ರಂದು ಬೆಳಗ್ಗೆ 5 ಗಂಟೆಗೆ ಹೊರಡಲಿದ್ದು, ಅದೇ ದಿನ ಬೆಳಗ್ಗೆ 6.50ಕ್ಕೆ ಮೈಸೂರು ತಲುಪಲಿದೆ.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022: ರಾಷ್ಟ್ರಪತಿ ಮುರ್ಮು ಉದ್ಘಾಟನೆ, ವೇದಿಕೆಯಲ್ಲಿ ಯಾರೆಲ್ಲಾ ಇರುತ್ತಾರೆ?
ಮೈಸೂರು ದಸರಾ ಉತ್ಸವದ ವೈಭವವನ್ನು ವೀಕ್ಷಿಸಲು ಪ್ರಪಂಚದಾದ್ಯಂತದ ಪ್ರವಾಸಿಗರು ಮೈಸೂರು ನಗರಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26ರಂದು ಮೈಸೂರಿನಲ್ಲಿ ದಸರಾ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಇಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವ 2022ರ ಉದ್ಘಾಟನೆಗೆ ಆಹ್ವಾನಿಸಲಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ ಕಾರ್ಯಕ್ರಮಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರಿಗೆ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಬುಧವಾರ ಆಹ್ವಾನ ನೀಡಿದ್ದಾರೆ. ಸೆಪ್ಟೆಂಬರ್ 26ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಆಹ್ವಾನಿಸಲಾಗಿದೆ. ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ ಅವರನ್ನೂ ದಸರಾ ಮಹೋತ್ಸವಕ್ಕೆ ಆಹ್ವಾನಿಸಲಾಗಿದೆ.
ಸೆ.26ರಂದು ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ನಾಡಹಬ್ಬ ಮೈಸೂರು ದಸರಾ ಆರಂಭವಾಗಲಿದೆ. ಅಂದು ಬೆಳಗ್ಗೆ 9.45ರಿಂದ 10.05ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ದಸರಾ ಉತ್ಸವ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Thu, 22 September 22