Festivals In November 2024: ನವೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು?
ವಿಶೇಷವಾಗಿ ಭಾರತದಲ್ಲಿ ವರ್ಷವಿಡೀ ಧಾರ್ಮಿಕ ಹಬ್ಬಗಳು, ಆಚರಣೆಗಳು ನಡೆಯುತ್ತವೇ ಇರುತ್ತವೆ. ಪ್ರತೀ ತಿಂಗಳಲ್ಲೂ ಒಂದಲ್ಲಾ ಒಂದು ವಿಶೇಷ ಹಬ್ಬಗಳು ಇದ್ದೇ ಇರುತ್ತದೆ. ಅದರಂತೆ ವರ್ಷದ 11 ನೇ ತಿಂಗಳಾದ ನವೆಂಬರ್ ತಿಂಗಳಲ್ಲೂ ಹಲವಾರು ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಸನಾತನ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಅದರಲ್ಲೂ ಅಕ್ಟೋಬರ್‌ನಿಂದ ನವೆಂಬರ್ ವರೆಗೆ ಅನೇಕ ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಎರಡು ತಿಂಗಳುಗಳು ಹಬ್ಬ ಹರಿದಿನಗಳ ಪ್ರಮುಖ ತಿಂಗಳುಗಳು ಅಂತಾನೇ ಹೇಳಬಹುದು. ಅಕ್ಟೋಬರ್ ತಿಂಗಳ ಮೊದಲ ಎರಡು ವಾರಗಳಲ್ಲಿ ನವರಾತ್ರಿ ಹಬ್ಬಗಳನ್ನು ಆಚರಿಸಲಾಗಿದೆ. ಹಾಗೇ ನವೆಂಬರ್ ತಿಂಗಳಿನಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ಯಾವೆಲ್ಲಾ ಹಬ್ಬ-ಹರಿದಿನಗಳನ್ನು ಆಚರಿಸಲಾಗುತ್ತದೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ನವೆಂಬರ್ ತಿಂಗಳ ಹಬ್ಬಗಳ ಪಟ್ಟಿ:
ನವೆಂಬರ್ 1- ಕಾರ್ತಿಕ ಅಮವಾಸ್ಯೆ: ಕಾರ್ತಿಕ ಅಮವಾಸ್ಯೆಯು ನವೆಂಬರ್ 1 ರ ಶುಕ್ರವಾರದಂದು ಬರುತ್ತದೆ. ಇದು ದೀಪಾವಳಿಯ ದಿನವೂ ಆಗಿದೆ. ಈ ವಿಶೇಷ ದಿನದಂದು ಕೆಲವರು ಲಕ್ಷ್ಮೀ ದೇವಿಯನ್ನು ಕೂಡಾ ಪೂಜಿಸುತ್ತಾರೆ. ಸ್ಕಂದ ಮತ್ತು ಭವಿಷ್ಯ ಪುರಾಣದ ಪ್ರಕಾರ ಕಾರ್ತಿಕ ಅಮವಾಸ್ಯೆಯಂದು ಪವಿತ್ರ ತೀರ್ಥ ಸ್ನಾನ ಮತ್ತು ಲಕ್ಷ್ಮೀ ಪೂಜೆಯನ್ನು ಮಾಡುವುದರಿಂದ ಸಕಲ ಪಾಪಗಳು ನಿವಾರಣೆಯಾಗುತ್ತದೆ.
ನವೆಂಬರ್ 2 – ಗೋ ಪೂಜೆ: ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಷ ಪಕ್ಷದ ಪ್ರತಿಪಾದ ದಿನದಂದು ಗೋವರ್ಧನ ಪೂಜೆ ಅಥವಾ ಗೋಪೂಜೆಯನ್ನು ಆಚರಿಸಲಾಗುತ್ತದೆ. ಈ ಬಾರೀ ಗೋ ಪೂಜೆಯನ್ನು ನವೆಂಬರ್ 2 ರ ಶನಿವಾರದಂದು ಆಚರಿಸಲಾಗುತ್ತದೆ. ಗೋ ಪೂಜೆಯ ದಿನದಂದು ಶ್ರೀ ಕೃಷ್ಣ, ಪ್ರಕೃತಿ ಮಾತೆ ಮತ್ತು ಗೋಮಾತೆಯನ್ನು ಪೂಜಿಸುವ ಸಂಪ್ರದಾಯವಿದೆ.
ನವೆಂಬರ್ 3 – ಭಾಯ್ ದೂಜ್: ಕಾರ್ತಿಕ ಮಾಸದ ಶುಕ್ಷ ಪಕ್ಷದ ಎರಡನೇ ದಿನ ಉತ್ತರ ಭಾರತದಾದ್ಯಂತ ಸಹೋದರ-ಸಹೋದರಿಯರಿಗೆ ಮೀಸಲಾದ ಪವಿತ್ರ ಹಬ್ಬವಾದ ಭಾಯ್ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 3 ಆದಿತ್ಯವಾರ ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಸಹೋದರಿಯರು ಪೂಜೆ, ವ್ರತ, ಉಪವಾಸ ಮಾಡುವ ಮೂಲಕ ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ.
ನವೆಂಬರ್ 13- ತುಳಸಿ ಪೂಜೆ: ದೀಪಾವಳಿ ಹಬ್ಬ ಮುಗಿದ ಬಳಿಕ ಕಾರ್ತಿಕ ಮಾಸದ ಶುಕ್ಷ ಪಕ್ಷದ ದ್ವಾದಶಿಯಂದು ತುಳಸಿ ಹಬ್ಬ ಬರುತ್ತದೆ. ಈ ದಿನದಂದು ವಿಷ್ಣು ದೇವರು ಮತ್ತು ತುಳಸಿ ವಿವಾಹವಾಯಿತು ಎಂಬ ನಂಬಿಕೆಯೂ ಇದೆ. ಈ ವರ್ಷ ನವೆಂಬರ್ 13, ಬುಧವಾರದಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ.
ನವೆಂಬರ್ 15 – ಗುರುನಾನಕ್ ಜಯಂತಿ: ಸಿಖ್ ಗುರು ಗುರು ನಾನಕ್ ದೇವ್ ಜೀ ಅವರ ಜನ್ಮ ದಿನವನ್ನು ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಪ್ರಕಾಶ್ ಪರ್ವ ಅಥವಾ ಗುರು ಪರ್ಬ ಎಂದು ಕರೆಯಲಾಗುವ ಗುರು ನಾನಕ್ ಜಯಂತಿಯನ್ನು ಈ ಬಾರಿ ನವೆಂಬರ್ 15 ರಂದು ಆಚರಿಸಲಾಗುವುದು.
ನವೆಂಬರ್ 16 – ವೃಶ್ಚಿಕ ಸಂಕ್ರಮಣ: ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾತಿ ಎಂದು ಕರೆಯಲಾಗುತ್ತದೆ. ನವೆಂಬರ್ 16 ರಂದು ಸೂರ್ಯನು ತುಲಾ ರಾಶಿಯಿಂದ ಹೊರ ಬಂದು ವೃಶ್ಚಿಕ ರಾಶಿಗೆ ಸಾಗುತ್ತಾನೆ. ಈ ದಿನ ಸೂರ್ಯನನ್ನು ಪೂಜಿಸುವುದು ಅತ್ಯಂತ ಮಂಗಳಕರವಾಗಿದೆ.
ನವೆಂಬರ್ 18 – ಕನಕದಾಸ ಜಯಂತಿ: ಜಾತಿ, ಮತ ಮತ್ತು ಸಮಾಜದ ಪಿಡುಗಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಾ, ಸಮಾಜ ಹಾಗೂ ದಾಸ ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಈ ಬಾರಿ ನವೆಂಬರ್ 18 ರಂದು ಆಚರಿಸಲಾಗುವುದು.
ನವೆಂಬರ್ 28 – ಪ್ರದೋಷ ವ್ರತ: ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಈ ವಿಶೇಷ ದಿನ ಶಿವ ದೇವರ ಆರಾಧನೆಗೆ ಸಮರ್ಪಿತವಾಗಿದೆ. ಈ ಪ್ರದೋಷ ಉಪವಾಸವನ್ನು ಆಚರಿಸುವ ಮೂಲಕ ಅಪೇಕ್ಷಿತ ವರಗಳು ಸಿಗುತ್ತವೆ ಎಂಬ ಧಾರ್ಮಿಕ ನಂಬಿಕೆಯೂ ಇದೆ. ನವೆಂಬರ್ ತಿಂಗಳಲ್ಲಿ 28 ನೇ ತಾರೀಕಿನಂದು ಪ್ರದೋಷ ವೃತವನ್ನು ಆಚರಿಸಲಾಗುವುದು.
ನವೆಂಬರ್ 29 – ಮಾಸ ಶಿವರಾತ್ರಿ: ಹಿಂದೂ ಧರ್ಮದಲ್ಲಿ ಮಾಸಿಕ ಶಿವರಾತ್ರಿ ಹಬ್ಬವನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ತಿಂಗಳ 29 ನೇ ತಾರೀಕಿನಂದು ಮಾಸ ಶಿವರಾತ್ರಿಯನ್ನು ಆಚರಿಸಲಾಗುವುದು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Tue, 29 October 24




