ಮಾಘ ಪ್ರದೋಷ ವ್ರತವು ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಉಪವಾಸವಾಗಿದ್ದು, ಇದನ್ನು ಮಾಘ ಮಾಸದ ಕೃಷ್ಣ ಪಕ್ಷದ ಪ್ರದೋಷ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಭಕ್ತರು ಶಿವನನ್ನು ವಿಶೇಷವಾಗಿ ಪೂಜಿಸುತ್ತಾರೆ ತಮ್ಮ ಬಯಕೆಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ. ಈ ಉಪವಾಸವು ಶಿವನಿಗೆ ನಿಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ಇರುವ ಉತ್ತಮ ಅವಕಾಶವಾಗಿದೆ. ಮಾಘ ಪ್ರದೋಷ ಉಪವಾಸವು ತಿಂಗಳಲ್ಲಿ ಎರಡು ಬಾರಿ ಬರುತ್ತದೆ. ಪ್ರದೋಷ ಎಂದರೆ ಕತ್ತಲೆಯನ್ನು ಹೋಗಲಾಡಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಶುಭ ದಿನದಂದು ಸಾಧಕರು ಉಪವಾಸ ಮಾಡುತ್ತಾರೆ ಮತ್ತು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ. ಶಿವನಿಗೆ ಪೂಜೆ- ಅರ್ಚನೆ ಮಾಡುವ ಮೂಲಕ, ವ್ರತಾಚರಣೆ ಮಾಡಿದ ವ್ಯಕ್ತಿಯು ಸಂತೋಷ, ಆರೋಗ್ಯ, ಯಶಸ್ಸನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.
ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಕೊನೆಯ ಪ್ರದೋಷವನ್ನು ಫೆ. 21ರಂದು ಬುಧವಾರ ಆಚರಿಸಲಾಗುವುದು.ಈ ದಿನದ ಪೂಜೆಗೆ ಶುಭ ಸಮಯ ಸಂಜೆ 6:15 ರಿಂದ ರಾತ್ರಿ 8:47 ರ ವರೆಗೆ. ಬ್ರಹ್ಮ ಮುಹೂರ್ತ ಬೆಳಿಗ್ಗೆ 5:13 ರಿಂದ 6:04 ರ ವರೆಗೆ ಇರುತ್ತದೆ. ಈ ವ್ರತವು ಬುಧವಾರ ಬಂದಿರುವುದರಿಂದ ಈ ದಿನವನ್ನು ಬುದ್ಧ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಈ ದಿನದಲ್ಲಿ ಪೂಜೆ ಮಾಡುವ ಮೂಲಕ ಜನರು ತಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ.
ಭಗವಾನ್ ಶಿವ ಮತ್ತು ತಾಯಿ ಪಾರ್ವತಿ ದೇವಿಯ ಆಶೀರ್ವಾದ ಪಡೆಯಲು ಬುದ್ಧ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ, ಉಪವಾಸ ಮಾಡುವ ಮಹಿಳೆಯರು ಮುಂಜಾನೆ ಬೇಗ ಎದ್ದು ದಿನನಿತ್ಯದ ಕೈಂಕರ್ಯಗಳನ್ನು ಮುಗಿಸಿ, ದೇವಸ್ಥಾನಗಳಿಗೆ ತೆರಳಿ ಭಗವಾನ್ ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿಸುತ್ತಾರೆ. ಶಿವನಿಗೆ ಶ್ರೀಗಂಧ ಮತ್ತು ಪಾರ್ವತಿ ತಾಯಿಗೆ ಕುಂಕುಮ ತಿಲಕವನ್ನಿಟ್ಟು, ಹಣ್ಣು ಮತ್ತು ಸಿಹಿ ತಿಂಡಿಗಳನ್ನು ದೇವರಿಗೆ ಅರ್ಪಿಸಿ, ಶಿವ ಚಾಲೀಸಾವನ್ನು ಪಠಿಸುತ್ತಾರೆ. ದೇವರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಿ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಠಿಣ ಉಪವಾಸವನ್ನು ಆಚರಿಸಲಾಗುತ್ತದೆ.
-ಮಾಘ ಪ್ರದೋಷ ವ್ರತದ ದಿನದಂದು ಜನರು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಮಾಂಸಾಹಾರ ಸೇವನೆ ಮಾಡಬೇಡಿ.
-ಈ ದಿನ ಜನರು ಮನೆ ಸ್ವಚ್ಛಗೊಳಿಸುವುದು ಮುಂತಾದ ಅಶುಚಿ ಕೆಲಸಗಳನ್ನು ಮಾಡಬಾರದು.
-ಪ್ರದೋಷ ವ್ರತದ ದಿನದಂದು ಯಾವುದೇ ನಕಾರಾತ್ಮಕ ಆಲೋಚನೆಗಳಿಗೆ ಅವಕಾಶ ನೀಡಬಾರದು.
-ಈ ದಿನ ಶಿವನನ್ನು ವಿಶೇಷವಾಗಿ ಪೂಜಿಸಬೇಕು, ಪ್ರಾರ್ಥಿಸಬೇಕು.
ಇದನ್ನೂ ಓದಿ: ಉಪವಾಸವನ್ನು ಮುರಿಯುವಾಗ ನೀವು ಅನುಸರಿಸಲೇಬೇಕಾದ ನಿಯಮಗಳಿವು
ಮಾಘ ಪ್ರದೋಷ ವ್ರತದಂದು ಈ ನಿಯಮಗಳನ್ನು ಅನುಸರಿಸುವ ಭಕ್ತರು ವ್ರತವನ್ನು ಆಚರಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ವ್ರತಾಚರಣೆ ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಯೋಚನೆಗಳಿಗೆ ಸಹಾಯ ಮಾಡುವುದಲ್ಲದೆ, ಆಗದೆಯೇ ಉಳಿದಂತಹ ಕೆಲಸಗಳನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಅಲ್ಲದೆ ಶಿವ ಮತ್ತು ತಾಯಿ ಪಾರ್ವತಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:16 pm, Tue, 20 February 24