Hanuman Temples: ಸ್ತ್ರೀ ರೂಪದ ಹನುಮ, ತಲೆಕೆಳಗಾದ ಆಂಜನೇಯ; ಅಚ್ಚರಿ ಮೂಡಿಸುವ 5 ಅಪರೂಪದ ದೇವಾಲಯಗಳಿವು

ಭಾರತದಲ್ಲಿ ಸಾವಿರಾರು ಹನುಮ ದೇವಾಲಯಗಳಿದ್ದರೂ, ಕೆಲವು ವಿಶಿಷ್ಟ ವಿಗ್ರಹ ಶೈಲಿ, ಪೌರಾಣಿಕ ಹಿನ್ನೆಲೆಗಳಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿವೆ. ಸ್ತ್ರೀ ರೂಪ, ಮಲಗಿದ ಭಂಗಿ, ತಲೆಕೆಳಗಾದ ಆಂಜನೇಯನಂತಹ ಅಪರೂಪದ ರೂಪಗಳನ್ನು ಹೊಂದಿರುವ 5 ಪ್ರಮುಖ ದೇವಾಲಯಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಈ ಕ್ಷೇತ್ರಗಳು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುವ ಜೊತೆಗೆ, ಅವುಗಳ ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತವೆ.

Hanuman Temples: ಸ್ತ್ರೀ ರೂಪದ ಹನುಮ, ತಲೆಕೆಳಗಾದ ಆಂಜನೇಯ; ಅಚ್ಚರಿ ಮೂಡಿಸುವ 5 ಅಪರೂಪದ ದೇವಾಲಯಗಳಿವು
ವಿಶಿಷ್ಟ ಹನುಮಂತನ ದೇವಾಲಯ
Image Credit source: gemini ai

Updated on: Apr 22, 2026 | 12:24 PM

ಭಾರತದಾದ್ಯಂತ ಹನುಮಂತನ ಸಾವಿರಾರು ದೇವಾಲಯಗಳಿವೆ. ಆದರೆ ಕೆಲವು ಕ್ಷೇತ್ರಗಳು ತಮ್ಮ ವಿಶಿಷ್ಟ ವಿಗ್ರಹ ಶೈಲಿ, ಪೌರಾಣಿಕ ಹಿನ್ನೆಲೆ ಮತ್ತು ನಂಬಿಕೆಗಳಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಸ್ತ್ರೀ ರೂಪದ ಹನುಮನಿಂದ ಹಿಡಿದು ತಲೆಕೆಳಗಾಗಿ ನಿಂತಿರುವ ಆಂಜನೇಯನವರೆಗೆ, ಅಚ್ಚರಿ ಮೂಡಿಸುವ ಐದು ಅಪರೂಪದ ದೇವಾಲಯಗಳ ಮಾಹಿತಿ ಇಲ್ಲಿದೆ.

ಗಿರಿಜಾಬಂಧ್ ಹನುಮಾನ್, ರತನ್‌ಪುರ (ಛತ್ತೀಸ್‌ಗಢ):

ಸಾಮಾನ್ಯವಾಗಿ ಹನುಮಂತನನ್ನು ಬ್ರಹ್ಮಚಾರಿ ಮತ್ತು ವೀರ ರೂಪದಲ್ಲಿ ನೋಡುತ್ತೇವೆ. ಆದರೆ ರತನ್‌ಪುರದಲ್ಲಿ ಹನುಮಂತನು ಮಾತೃತ್ವದ ರೂಪದಲ್ಲಿ (ಸ್ತ್ರೀ ರೂಪ) ಕಾಣಿಸಿಕೊಳ್ಳುತ್ತಾನೆ. ಇಡೀ ವಿಶ್ವದಲ್ಲೇ ಹನುಮನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ಏಕೈಕ ದೇವಾಲಯ ಇದಾಗಿದೆ. ಈ ವಿಗ್ರಹವು ದಕ್ಷಿಣಾಭಿಮುಖವಾಗಿದ್ದು, ಶ್ರೀರಾಮ ಮತ್ತು ಲಕ್ಷ್ಮಣರನ್ನು ಹೆಗಲ ಮೇಲೆ ಹೊತ್ತಿರುವಂತೆ ಕೆತ್ತಲಾಗಿದೆ. ಅಹಿರಾವಣ ಮತ್ತು ಮಹಿರಾವಣನನ್ನು ಪಾದಗಳ ಕೆಳಗೆ ನಿಗ್ರಹಿಸಿರುವ ಈ ಹನುಮಂತನು ಭಕ್ತರ ಸಕಲ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ವಿಶೇಷವಾಗಿ ಮಕ್ಕಳಿಲ್ಲದವರು ಮತ್ತು ದೀರ್ಘಕಾಲದ ಕಾಯಿಲೆ ಇರುವವರು ಇಲ್ಲಿಗೆ ಭೇಟಿ ನೀಡಿದರೆ ಶೀಘ್ರ ಫಲ ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ಲೇಟೆ ಹನುಮಾನ್, ಪ್ರಯಾಗ್ರಾಜ್ (ಉತ್ತರ ಪ್ರದೇಶ):

ಪ್ರಯಾಗ್ರಾಜ್‌ನ ಪವಿತ್ರ ತ್ರಿವೇಣಿ ಸಂಗಮದ ದಡದಲ್ಲಿರುವ ಈ ದೇವಾಲಯದಲ್ಲಿ ಹನುಮಂತನು ಮಲಗಿರುವ ಭಂಗಿಯಲ್ಲಿ ದರ್ಶನ ನೀಡುತ್ತಾನೆ. ಲಂಕೆಯ ವಿಜಯದ ನಂತರ ದಣಿದ ಹನುಮನು ಇಲ್ಲಿ ವಿಶ್ರಾಂತಿ ಪಡೆದನೆಂದು ಪುರಾಣಗಳು ಹೇಳುತ್ತವೆ. ಸುಮಾರು 20 ಅಡಿ ಎತ್ತರದ ಈ ಬೃಹತ್ ವಿಗ್ರಹವು ನೆಲಮಟ್ಟಕ್ಕಿಂತ ಕೆಳಗಿದೆ.

ಮಳೆಗಾಲದಲ್ಲಿ ಗಂಗಾ ನದಿಯ ನೀರು ಉಕ್ಕಿ ಹನುಮನ ವಿಗ್ರಹವನ್ನು ಸ್ಪರ್ಶಿಸುತ್ತದೆ. ಇದನ್ನು ‘ಗಂಗಾ ಮಾತೆಯು ಹನುಮನ ಪಾದಗಳಿಗೆ ಮಾಡುವ ಅಭಿಷೇಕ’ ಎಂದು ಭಾವಿಸಲಾಗುತ್ತದೆ. ಸಂಗಮ ಸ್ನಾನದ ನಂತರ ಈ ಹನುಮನ ದರ್ಶನ ಪಡೆದರೆ ಮಾತ್ರ ತೀರ್ಥಯಾತ್ರೆ ಪೂರ್ಣಗೊಳ್ಳುತ್ತದೆ ಎನ್ನಲಾಗುತ್ತದೆ.

ಉಲ್ಟಾ ಹನುಮಾನ್, ಸವರ್ (ಮಧ್ಯಪ್ರದೇಶ):

ಇಂದೋರ್ ಬಳಿಯ ಸವರ್‌ನಲ್ಲಿರುವ ಈ ದೇವಾಲಯದಲ್ಲಿ ಹನುಮಂತನು ತಲೆ ಕೆಳಗೆ ಮತ್ತು ಕಾಲುಗಳನ್ನು ಮೇಲಕ್ಕೆತ್ತಿ (ಶೀರ್ಷಾಸನ) ನಿಂತಿದ್ದಾನೆ. ಅಹಿರಾವಣನು ರಾಮ-ಲಕ್ಷ್ಮಣರನ್ನು ಅಪಹರಿಸಿ ಪಾತಾಳ ಲೋಕಕ್ಕೆ ಕರೆದೊಯ್ದಾಗ, ಅವರನ್ನು ರಕ್ಷಿಸಲು ಹನುಮನು ಭೂಮಿಯನ್ನು ಸೀಳಿ ಪಾತಾಳಕ್ಕೆ ಹೋದ ಸ್ಥಳವಿದು ಎನ್ನಲಾಗುತ್ತದೆ. ಪಾತಾಳ ಪ್ರವೇಶಿಸುವಾಗ ಹನುಮನು ತಲೆಕೆಳಗಾದ ಸ್ಥಿತಿಯಲ್ಲಿದ್ದ ಕಾರಣ ಇಲ್ಲಿ ವಿಗ್ರಹವೂ ಅದೇ ರೂಪದಲ್ಲಿದೆ. ವಿಗ್ರಹದ ಮೇಲೆ ಸಿಂಧೂರದ ಅಲಂಕಾರವಿದ್ದು, ಪಕ್ಕದಲ್ಲಿ ಪರಸ್ಪರ ಹೆಣೆದುಕೊಂಡಿರುವ ಹಳೆಯ ಬೇವೂ ಮತ್ತು ರವಿ ಮರಗಳು ಇಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮಹಾವೀರ ಮಂದಿರ, ಪಾಟ್ನಾ (ಬಿಹಾರ):

ಉತ್ತರ ಭಾರತದ ಅತಿ ದೊಡ್ಡ ಹನುಮಾನ್ ದೇವಾಲಯಗಳಲ್ಲಿ ಒಂದಾದ ಇದು ಪಾಟ್ನಾ ಜಂಕ್ಷನ್ ಬಳಿಯಿದೆ. ಇಲ್ಲಿ ಗರ್ಭಗುಡಿಯಲ್ಲಿ ಎರಡು ಹನುಮಂತನ ವಿಗ್ರಹಗಳು ಅಕ್ಕಪಕ್ಕದಲ್ಲಿವೆ. ಒಂದು ದುಷ್ಟ ಶಿಕ್ಷೆಯ ಸಂಕೇತವಾದರೆ, ಇನ್ನೊಂದು ಭಕ್ತ ರಕ್ಷಣೆಯ ಸಂಕೇತವಾಗಿದೆ. ಇದು ಕೇವಲ ಪ್ರಾರ್ಥನಾ ಕೇಂದ್ರವಲ್ಲ, ಕ್ಯಾನ್ಸರ್ ರೋಗಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತಿದೆ. ಇಲ್ಲಿನ ‘ನೈವೇದ್ಯಂ’ ಲಡ್ಡು ಪ್ರಸಾದವು ವಿಶ್ವಪ್ರಸಿದ್ಧವಾಗಿದೆ.

ಹನುಮತ್ ಧಾಮ, ಶಹಜಹಾನ್‌ಪುರ (ಉತ್ತರ ಪ್ರದೇಶ):

ಗಾರ ನದಿಯ ದಡದಲ್ಲಿರುವ ಒಂದು ಪುಟ್ಟ ದ್ವೀಪದಲ್ಲಿ ಈ ಬೃಹತ್ ದೇವಾಲಯವಿದೆ. ಇಲ್ಲಿನ ಹನುಮ ವಿಗ್ರಹವು 104 ಅಡಿ ಎತ್ತರವಿದ್ದು, ಉತ್ತರ ಭಾರತದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ನದಿಯ ಮಧ್ಯದಲ್ಲಿರುವ ಕಾರಣ ಭಕ್ತರು ಸೇತುವೆಯ ಮೂಲಕ ದೇವಾಲಯವನ್ನು ತಲುಪಬೇಕು. ರಾತ್ರಿಯ ಸಮಯದಲ್ಲಿ ವಿದ್ಯುತ್ ದೀಪಗಳಿಂದ ಈ ವಿಗ್ರಹವು ಕಂಗೊಳಿಸುತ್ತದೆ. ಹನುಮಂತನು ತನ್ನ ಹೃದಯವನ್ನು ಹರಿದು ರಾಮ-ಸೀತೆಯರನ್ನು ತೋರಿಸುವ ವಿಗ್ರಹವು ಭಕ್ತರ ಮನಸ್ಸಿನಲ್ಲಿ ಭಕ್ತಿಭಾವವನ್ನು ಉಕ್ಕಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:23 pm, Wed, 22 April 26

Follow Us