Yakshagana: ಭಾಗವತ ಶಿರೋಮಣಿ ಭೀಷ್ಮ; ಮೊಮ್ಮಕ್ಕಳನ್ನು ನಿಯಂತ್ರಿಸದೆ ಒಂದು ಘೋರಯುದ್ದ ನಡೆದೇ ಹೋಯಿತು!

YakshaRanga: ಶ್ರೀಕೃಷ್ಣ, ಸಂಧಾನಕ್ಕೆ ಬಂದಾಗ ಭೀಷ್ಮನ ಮನೆಗೂ ಹೋಗಲಿಲ್ಲ. ದುರ್ಯೋಧನನಲ್ಲೇ ಊಟಕ್ಕೆ ಬರಲಿಲ್ಲ ಏಕೆಂದರೆ ದ್ವಿಷದನ್ನಂ ನ ಭೋಕ್ತವ್ಯಂ. ಶತ್ರುವಿನ ಮನೆಯ ಅನ್ನ ಉಣ್ಣಬಾರದು! ಭೀಷ್ಮ ಭಕ್ತನಾಗಿಯೂ..ಮೊಮ್ಮಕ್ಕಳನ್ನು ನಿಯಂತ್ರಿಸದೆ ಒಂದು ಘೋರಯುದ್ದ ನಡೆದೇ ಹೋಯಿತು.

Yakshagana: ಭಾಗವತ ಶಿರೋಮಣಿ ಭೀಷ್ಮ; ಮೊಮ್ಮಕ್ಕಳನ್ನು ನಿಯಂತ್ರಿಸದೆ ಒಂದು ಘೋರಯುದ್ದ ನಡೆದೇ ಹೋಯಿತು!
ಪುರಾಣ ಪಾತ್ರಗಳ ವರ್ತಮಾನ (ಚಿತ್ರ: ಮುರಳಿಮೋಹನ ಅಬ್ಬೆಮನೆ)
Follow us
|

Updated on:Sep 26, 2021 | 4:12 PM

ಮಹಾಭಾರತದ ಮಹಾಪಾತ್ರ ಭೀಷ್ಮ. ಸರ್ವಶ್ರೇಷ್ಠ ಭಾಗವತನೆನಿಸಿಕೊಂಡ ಈತನ ಕುರಿತು ಚಿಂತನೆ, ಚರ್ಚೆ, ಸಾಹಿತ್ಯ ರಚನೆ, ಮುಂತಾದವು ತುಂಬಾ ಬಂದಿವೆ. ಕಿರು ಲೇಖನಕ್ಕೆ ಎಟುಕದ ಪಾತ್ರವಿದು. ನಮ್ಮ ಕನ್ನಡದ ಕವಿ ಪಂಪ ಅತ್ಯುನ್ನತಿಯೊಳ್ ಅಮರ ಸಿಂಧೂದ್ಭವಂ ಎಂದು ಕೈವಾರಿಸಿದ್ದು ಸೂಕ್ತ ಸೂತ್ರ! ಮಹಾಭಾರತಲ್ಲಿ ಶ್ರೀಕೃಷ್ಣನ ಹಿರಿಮೆಯನ್ನು ಅರಿತ ಹಿರಿಯನೀತ. ಇದು ಎರಡು ಸಂದರ್ಭದಲ್ಲಿ ವಿಶೇಷವಾಗಿ ಕಾಣಿಸುತ್ತದೆ. ಮೊದಲನೆಯದು ಧರ್ಮರಾಜನ ರಾಜಸೂಯ ಯಾಗದ ಸಂದರ್ಭದಲ್ಲಿ ಅಗ್ರಪೂಜೆ ನಡೆದಾಗ ಭೀಷ್ಮ ಪ್ರತಿಪಾದಿಸಿದ ಶ್ರೀಕೃಷ್ಣನ ಹಿರಿಮೆ. ಎರಡನೆಯದು ಮಹಾಭಾರತ ಯುದ್ಧ ಮುಗಿದು ಧರ್ಮರಾಜನಿಗೆ ಕೃಷ್ಣ ಮಹಿಮೆಯನ್ನು ಹೇಳುತ್ತಾ ಪ್ರತಿಪಾದಿಸಿದ ವಿಷ್ಣು ಸಹಸ್ರ ನಾಮ ಎಂಬ ದಿವ್ಯೋಪದೇಶ.

ಅಧ್ಯಾತ್ಮಿಕ ಚಿಂತನೆಯಿಂದ ತುಂಬಿ ತುಳುಕುವ ದೇವಗಂಗಾ ಪುತ್ರನೀತ. ಈತನ ಜನ್ಮ ಜನ್ಮಾಂತರದ ಕಥೆಯೂ ದೈವ ಮಾನುಷ ಸಂಯೋಗ. ತಾಯಿ ಗಂಗೆ ದೇವತೆ, ತಂದೆ ಶಾಂತನು ಮನುಷ್ಯ. ಹೀಗೆ ಮರ್ತ್ಯಾಮರ್ತ್ಯ ಸಂಯೋಗದಿಂದ ಜನಿಸಿದನಾಗಿ ಸುದೀರ್ಘವಾದ ಆಯುಷ್ಯ ಪಡೆದ. ಅಲೌಕಿಕ ಪ್ರತಿಜ್ಞೆಯಿಂದ ಭೀಷ್ಮನಾದ ದೇವವ್ರತ. ಪದತಲದಲ್ಲಿ ಚಕ್ರವರ್ತಿತ್ವವಿದ್ದರೂ ತ್ಯಜಿಸಿ ತಂದೆಯನ್ನು ಸಂತುಷ್ಟಿಪಡಿಸಿದ ದ್ವಾಪರದ ಮತ್ತೊಬ್ಬ ರಾಮ! ಜನ್ಮಾಂತರದಾಚೆಯ ಅಷ್ಟವಸುಗಳಲ್ಲಿ ಒಬ್ಬನಾದರೂ ಹೆಂಡತಿಯಿಂದಾಗಿ ಪಡೆದ ಶಾಪದಿಂದ ಈ ಜನ್ಮದಲ್ಲಿ ಮದುವೆಯೇ ಇಲ್ಲದೆ ಬದುಕಿದ.

ಲೋಕದ ಯಾವ ಪುರುಷ ಪುಂಗವನಿಗೂ ಸಿಗದ ನಾಲ್ಕು ಮಹಾ ಮಹಿಮರ ಕರಕಮಲ ಸಂಜಾತ. ಪರಶುರಾಮ, ಬೃಹಸ್ಪತಿ, ವಸಿಷ್ಠ, ಶುಕ್ರಾಚಾರ್ಯ ಇವರಲ್ಲಿ ಮೂವತ್ತಾರು ವರ್ಷಗಳ ಅಧ್ಯಯನ ನಡೆಸಿದ ಪಂಡಿತೋತ್ತಮ. ತುಂಬಿ ಹರಿಯುವ ಗಂಗೆಗೆ ಬಾಣದ ಒಡ್ಡು ಕಟ್ಟಿ ತಂದೆ ಶಂತನುವಿಗೆ ಕಾಣಿಸಿಕೊಂಡವ. ಎಂಟುನೂರರ ವೃದ್ಧಾಪ್ಯದಲ್ಲೂ ದಿನಕ್ಕೆ ಹತ್ತು ಸಾವಿರ ಕಿರೀಟಪತಿಗಳನ್ನು ಮಲಗಿಸಿದವ. ಈ ಎಲ್ಲ ಸಾಹಸಗಳಿಂದಲೂ ಈತ ಭೀಷ್ಮ.

ಆದರೂ ಅನೇಕ ಗೊಂದಲಗಳು ಆವರಿಸಿಕೊಂಡು ಪೂರ್ಣ ವ್ಯಕ್ತಿಯಾಗದೆ ಉಳಿಯಲು ಕಾರಣ ಆಯಕಟ್ಟಿನ ಸಂದರ್ಭದಲ್ಲಿ ಇವನ ಯೋಗ್ಯತೆಯನ್ನು ಪ್ರದರ್ಶಿಸದೆ ಭಗವಂತನಿಗೂ ಬೇಸರವಾಗುವಂತೆ ವರ್ತಿಸಿದ್ದು ಕಳಂಕ. ಅಂಬಾ ಪ್ರಕರಣ ಬಹಳ ಚರ್ಚೆಗೊಳಪಟ್ಟ ವಿಚಾರ. ದ್ರೌಪದೀ ವಸ್ತ್ರಾಪಹಾರದ ಸಂದರ್ಭದಲ್ಲಿ ಇವನ ನಡೆ ದೇವರಿಗೂ ಸರಿಬರಲಿಲ್ಲ. ಯುದ್ಧದಲ್ಲಿ ಹತ್ತುಸಾವಿರ ಜನರನ್ನು ದಿನವೊಂದಕ್ಕೆ ಕೊಲ್ಲಬಲ್ಲ ಈತ ಒಬ್ಬ ದುರ್ಯೋಧನನ ರಟ್ಟೆ ಹಿಡಿದು ನಿಲ್ಲಿಸಿದ್ದರೆ ಮಹಾಭಾರತ ಯುದ್ಧವನ್ನೇ ನಿಲ್ಲಿಸಬಹುದಿತ್ತು. ಅದಕ್ಕೇ ನಮ್ಮ ಯಕ್ಷಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ಕೃಷ್ಣನ ಮೂಲಕ- ದುಷ್ಟ ಸುಯೋಧನನೊಡಗೊಂಡಿಹೆ ನೀನೆಷ್ಟಾಡಿದರೇನು ಎಂದುದು.

ಇದರ ಪರಿಣಾಮ ಸರಳಮಂಚದ ಶಿಕ್ಷೆಯನ್ನು ತಾನೇ ವಿಧಿಸಿಕೊಳ್ಳಬೇಕಾಯಿತು. ದೈವದ ಹಿರಿಮೆಯೊಂದಿಗೆ ಮೋಕ್ಷಧರ್ಮ, ರಾಜಧರ್ಮ, ಆಪದ್ಧರ್ಮ, ದಾನ ಧರ್ಮ ಇವುಗಳನ್ನು ಮೊಮ್ಮಗನಿಗೆ ಹೇಳಿ ಋಣ ಸಂದಾಯ ಮಾಡಿದ. ಬದುಕಿನ ಕೊನೆಯಲ್ಲಿ ಆತ ಕಂಡ ಸತ್ಯ- ಯದಾ ಧರ್ಮೋ ಗ್ಲಾತಿ ವಂಶೇ ಸುರಾಣಾಂ ತದಾ ಕೃಷ್ಣೋ ಜಾಯತೇ ಮಾನವೇಷು ಧರ್ಮೇ ಸ್ಥಿತ್ವಾ ಸ ತು ವೈ ಭಾವಿತಾತ್ಮಾ ಪರಾಂಶ್ಚ ಲೋಕಾನಪರಾಂಶ್ಚ ಪಾತಿ (ಧರ್ಮಕ್ಕೆ ಗ್ಲಾನಿಯಾದಾಗ ನರನಾಗಿಯೋ ಸುರನಾಗಿಯೋ ಕೃಷ್ಣ ಅವತರಿಸುತ್ತಾನೆ. ಧರ್ಮದಲ್ಲಿ ನಿಂತು ಪರಾಪರ ಲೋಕಗಳನ್ನು ಪೊರೆಯುತ್ತಾನೆ- ಮಹಾಭಾರತ ಅನುಶಾಸನ ಪರ್ವ) ಈ ಮಾತು ಗೀತೆಯ ಸಂಭವಾಮಿ ಯುಗೇ ಯುಗೇ ಎಂಬುದನ್ನು ನೆನಪಿಸುತ್ತದೆಯಲ್ಲವೆ?

ಪರವಶತೆ ಅವನಿಗೂ ಕಾಡಿತ್ತು. ಈಗಲೂ ಹಿರಿಯರಲ್ಲಿ ನಮ್ಮ ಮಗ, ಮೊಮ್ಮಗ ಎಂಬ ಭಾವ ಬಂದುಬಿಟ್ಟರೆ ಅಪರಾಧವೆಂದು ತಿಳಿದೂ ಮಾತಾಡಲಾರದ ಸ್ಥಿತಿ ನಿರ್ಮಾಣವಾಗುತ್ತದೆ. ಅಧರ್ಮಿ ದುರ್ಯೋಧನನನ್ನು ನಿಯಂತ್ರಿಸುವ ಶಕ್ತಿ ಮಹಾ ಪರಾಕ್ರಮಿ ಭೀಷ್ಮನಿಗೆ ಇದ್ದೇ ಇತ್ತು. ಉಳಿದೆಲ್ಲ ವಿಚಾರ ಹಾಗಿರಲಿ, ಆ ವಂಶದ ಸೊಸೆ ದ್ರೌಪದಿಯ ಮಾನಭಂಗ ರಾಜಸಭೆಯಲ್ಲೇ ಆಗ ತೊಡಗಿದಾಗ ಸುಮ್ಮನೆ ಉಳಿಯುವುದು ಯಾವ ಪುರುಷನಿಗೂ ಉಚಿತವೆನ್ನಿಸುವುದಿಲ್ಲ. ಅದಕ್ಕಾಗಿಯೇ ಶ್ರೀಕೃಷ್ಣ, ಸಂಧಾನಕ್ಕೆ ಬಂದಾಗ ಭೀಷ್ಮನ ಮನೆಗೂ ಹೋಗಲಿಲ್ಲ. ದುರ್ಯೋಧನನಲ್ಲೇ ಊಟಕ್ಕೆ ಬರಲಿಲ್ಲ ಏಕೆಂದರೆ ದ್ವಿಷದನ್ನಂ ನ ಭೋಕ್ತವ್ಯಂ. ಶತ್ರುವಿನ ಮನೆಯ ಅನ್ನ ಉಣ್ಣಬಾರದು! ಭೀಷ್ಮ ಭಕ್ತನಾಗಿಯೂ..ಮೊಮ್ಮಕ್ಕಳನ್ನು ನಿಯಂತ್ರಿಸದೆ ಒಂದು ಘೋರಯುದ್ದ ನಡೆದೇ ಹೋಯಿತು.

ಬರಹ: ಶ್ರೀಧರ ಡಿ.ಎಸ್, ಕಿನ್ನಿಗೋಳಿ

***

ಟಿವಿ9 ಕನ್ನಡ ಡಿಜಿಟಲ್‌ ಹೊಸ ಪ್ರಯತ್ನ ಪುರಾಣ ಪಾತ್ರಗಳು, ಪುರಾಣದ ಘಟನೆಗಳು, ಅನುಭವ, ಆಸ್ವಾದನೆ ಬದುಕಿಗೆ ದಾರಿದೀಪ ಆಗಬಲ್ಲವು. ಒಂದಷ್ಟು ಹೊಸನೋಟ, ತಿಳುವಳಿಕೆಯನ್ನೂ ನೀಡಬಲ್ಲವು. ಮನಸಿಗೆ ಸಂತೋಷ, ನೆಮ್ಮದಿಯನ್ನೂ ತುಂಬಬಲ್ಲವು.

ಪುರಾಣ ಪಾತ್ರಗಳನ್ನು ತಿಕ್ಕಿ, ತೀಡಿ, ವಿರೋಧಿಸಿ, ಪ್ರಶ್ನಿಸಿ, ಎದುರಿಸಿ, ಒಪ್ಪಿ, ಅಪ್ಪುವ ಅವಕಾಶ ಯಕ್ಷಗಾನ ಕಲಾ ವಲಯದ ಜನತೆಗೆ ಹೆಚ್ಚು. ಪುರಾಣ ಪಾತ್ರಗಳನ್ನೂ ದಿನವೂ ಮಾತನಾಡಿಸುವಂತೆ.. ಏಕೆಂದರೆ ಇಲ್ಲಿ ದಿನನಿತ್ಯವೂ ನೂರಾರು ಆಟ.

ಈ ನೆಲೆಯಲ್ಲಿ ʼಪುರಾಣ ಪಾತ್ರಗಳ ವರ್ತಮಾನʼ ಎಂಬ ಸರಣಿಯನ್ನು ಪುರಾಣ ಮತ್ತು ಯಕ್ಷಗಾನದ ಸಮೀಕರಣದೊಂದಿಗೆ ಆರಂಭಿಸಿದ್ದೇವೆ. ಸದ್ಯ ಆಯ್ದ ಸಹೃದಯರು ಪುರಾಣ ಪಾತ್ರಧಾರಿಗಳಾಗಿ ತಮ್ಮ ಅನುಭವ, ಅದರ ತಯಾರಿಯಲ್ಲಿನ ಅನುಭವ, ಅಥವಾ ರಂಗಸ್ಥಳದಲ್ಲಿ ಪುರಾಣ ಪಾತ್ರಗಳನ್ನು ಕಂಡ ಬಗೆ, ರಂಗದ ಹಿಂದಿನ ಚೌಕಿಯ ನೆನಪು, ಮತ್ತು ಅದರಿಂದ ಬದುಕಿಗೇನು? ಬದುಕಲ್ಲಿ ಏನು? ಎಂದು ಚರ್ಚಿಸುತ್ತಾರೆ.

ಮುಂದೆ ಇದನ್ನು ವಿಸ್ತರಿಸುವ ಇರಾದೆ ಇದೆ. ಈ ನೆಲೆಯಲ್ಲಿ ತಾವೂ ಕೂಡ ಮೇಲಿನ ಉದ್ದೇಶಕ್ಕೆ ಸರಿಯಾಗಿ ತಮ್ಮ ಬರಹವನ್ನು ನಮಗೆ ಕಳುಹಿಸಿಕೊಡಬಹುದು. ಮೇಲ್ ಮಾಡುವಾಗ ‘ಯಕ್ಷಗಾನ’, ‘ಯಕ್ಷರಂಗ’ ಅಥವಾ ‘ಪುರಾಣ ಪಾತ್ರಗಳ ವರ್ತಮಾನ’ ಸರಣಿಗೆ ಲೇಖನ ಎಂದು ನಮೂದಿಸಲು ಮರೆಯಬೇಡಿ.

ನಮ್ಮ ಇಮೇಲ್‌ ವಿಳಾಸ:  tv9kannadadigital@gmail.com 

ಇದನ್ನೂ ಓದಿ: Yakshagana: ಮಾಧವಿಯ ಕಥೆ ಮತ್ತು ಅವಳ ತಂಗಿಯರ ಸಬಲೀಕರಣ

ಇದನ್ನೂ ಓದಿ: Yakshagana: ಬರೆದದ್ದರಲ್ಲಿ ಏನೂ ಇಲ್ಲ ಅನಿಸಿದರೆ ಒಂದು ವಿಡಿಯೋ ಹಾಕಿದ್ದೇನೆ; ಅದನ್ನು ನೋಡಿ ನಕ್ಕುಬಿಡಿ

Published On - 4:05 pm, Sun, 26 September 21

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ