AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yakshagana: ಮಾಧವಿಯ ಕಥೆ ಮತ್ತು ಅವಳ ತಂಗಿಯರ ಸಬಲೀಕರಣ

YakshaRanga: ಮಹಿಳಾ ಸಾಮಾಜಿಕ ಸಬಲೀಕರಣ ಬಹಳ ಪ್ರಯಾಸದ ಮತ್ತು ದೀರ್ಘ ಕಾಲದ ಪ್ರಕ್ರಿಯೆ. ಅದನ್ನರಿತು ಒಗ್ಗೂಡಿ ತಲೆಯೆತ್ತಿ ಕ್ರಮಿಸುತ್ತಾ ಗೆದ್ದು ಸಾಧಿಸಬೇಕು.

Yakshagana: ಮಾಧವಿಯ ಕಥೆ ಮತ್ತು ಅವಳ ತಂಗಿಯರ ಸಬಲೀಕರಣ
ಪುರಾಣ ಪಾತ್ರಗಳ ವರ್ತಮಾನ (ಚಿತ್ರ: ಮುರಳಿಮೋಹನ ಅಬ್ಬೆಮನೆ)
ganapathi bhat
|

Updated on:Sep 05, 2021 | 5:45 PM

Share

‘‘ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ರಮಿಸುತ್ತಾರೆ’’, ಅಂತೆ ಕಂತೆ ಎಂದು ಈ ಸಮಾಜದ ಸಂತೆಯಲ್ಲಿ ಹೆಣ್ಣನ್ನು ಶಬ್ಧಾಡಂಬರದಲ್ಲಿ ವರ್ಣನಾತೀತವಾಗಿ ಆರಾಧಿಸಿ, ದೈವತ್ವಕ್ಕೆ ಏರಿಸಿ ಸ್ತುತಿಸಿದ ಪ್ರಾಚೀನ ಸಂಸ್ಕೃತಿ ನಮ್ಮದು. ಅಂದಿನಿಂದ ಇಂದಿನವರೆಗೆ ಮಾಡಿದ್ದಾದರೂ ಏನನ್ನು? ಹೆಣ್ಣಿನ ಸ್ವಾತಂತ್ರ್ಯವನ್ನು ನಿರಾಕರಿಸಿ, ದಾಸ್ಯದ ಶೃಂಖಲೆಯಲ್ಲಿ ರಕ್ತ ಹೆಪ್ಪುಗಟ್ಟುವಂತೆ ಬಿಗಿದು ಬಂಧಿಸಿ, ಗಂಟಲನ್ನು ಮುರಿದು ದನಿ ಎತ್ತದಂತೆ ಮಾಡಿದೆ. ಪ್ರತಿನಿತ್ಯ ಹೆಣ್ಣು ಮನೆಯ ಒಳಗೆ- ಹೊರಗೆ ಕೆಲಸ ಮಾಡುವ ಸ್ಥಳಗಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ, ಲೈಂಗಿಕ ಕಿರುಕುಳಗಳನ್ನು ಅನುಭವಿಸುತ್ತಿರುವ ಒಂದೊಂದು ದೃಷ್ಟಾಂತಗಳನ್ನು ಕೇಳಿದಾಗ ಮನಸ್ಸು ಮರುಗುತ್ತಾ ತೆರೆದಿಡುವುದು ಪುರಾಣಾಧೃತವಾದ ಮಾಧವಿ ಎಂಬ ಒಬ್ಬಾಕೆ ದುರಂತ ನಾಯಕಿಯ ಬದುಕಿನ ವ್ಯಥೆಯ ಕಥೆ.

ಮಾಧವಿಯ ಕಥೆ ಗಾಲವ ಎಂಬಾತ ವಿಶ್ವಾಮಿತ್ರ ಮಹರ್ಷಿಯ ಶಿಷ್ಯನಾಗಿರುತ್ತಾನೆ. ಕಲಿಕೆಯನ್ನು ಮುಗಿಸಿ ಗುರುಮಠವನ್ನು ಬಿಟ್ಟುಹೋಗುವ ಮುನ್ನ ಗುರುಗಳು ತನ್ನಿಂದ ಏನಾದರೂ ಗುರುದಕ್ಷಿಣೆ ಪಡೆದುಕೊಳ್ಳಲೇಬೇಕೆಂದು ಹಠ ಮಾಡುತ್ತಾನೆ. ಆಗ ಕುಪಿತರಾದ ವಿಶ್ವಾಮಿತ್ರರು ಗಾಲವನಿಗೆ ಎಂಟುನೂರು ಶ್ವೇತಾಶ್ವಗಳನ್ನು ನೀಡಬೇಕೆಂದು. ಅಷ್ಟೂ ಕುದುರೆಗಳ ಒಂದು ಕಿವಿ ಮಾತ್ರ ಕಪ್ಪಾಗಿರಬೇಕೆಂದು ಹೇಳಿ, ಅದರ ಹೊರತು ಆ ಕುದುರೆಗಳ ಮೈಮೇಲೆ ಹುಡುಕಿದರೂ ಬೇರೆ ಬಣ್ಣದ ಒಂದು ಚುಕ್ಕೆಯೂ ಕಾಣಸಿಗಕೂಡದು ಎಂದು ಕಟುವಾಗಿ ನುಡಿದುಬಿಡುತ್ತಾರೆ. ಇದು ಸರ್ವಥಾ ಅಸಾಧ್ಯವಾದ ಕೆಲಸ. ಗುರುವನ್ನು ಒತ್ತಾಯಿಸಿ ಋಣವನ್ನು ತೀರಿಸಿ ಕೈ ತೊಳೆದುಕೊಳ್ಳಲು ಹೊರಟಾತನ ಪರಿಸ್ಥಿತಿ ಎಡವಿ ಕೆಸರಿಗೆ ಬಿದ್ದಂತಾಯಿತು. ಅಲ್ಲಿಂದ ಮೇಲೇಳುತ್ತಲೇ ಮನಸ್ಸಿನಲ್ಲಿ ಸ್ವಾರ್ಥದ ದುರ್ಗಂಧವನ್ನು ತುಂಬಿಕೊಂಡು ಜೊತೆಗೆ ಗುರುದಕ್ಷಿಣೆಯ ಹೊಣೆಯನ್ನು ಹೊತ್ತು ದುರ್ನೀತನಾದ ಗಾಲವ ಬಹಳ ಪ್ರಯಾಸದ ದುರ್ಗಮ ಯಾತ್ರೆಯನ್ನು ಆರಂಭಿಸುತ್ತಾನೆ.

ಚಂದ್ರವಂಶದ ರಾಜ ಯಯಾತಿಯನ್ನು ಮೊದಲು ಭೇಟಿಯಾಗುತ್ತಾನೆ. ಗುರುದಕ್ಷಿಣೆಗೆ ಕೊಡಬಹುದಾದ ವಿಶೇಷಣಗಳುಳ್ಳ ಕುದುರೆಗಳು ಅವನಲ್ಲಿಲ್ಲದ್ದರಿಂದ ಸೊಂಪಾಗಿ ಬೆಳೆದು ಬಟ್ಟಲು ಕಣ್ಣುಗಳನ್ನು ಮಿಟುಕಿಸುತ್ತಾ ನೋಡುತ್ತಿದ್ದ ಮಗಳಾದ ಸುಂದರಿ ಮಾಧವಿಯನ್ನು ಒಂದು ಸರಕಿನಂತೆ ಗಾಲವನಿಗೆ ಉಚಿತವಾಗಿ ಕೊಟ್ಟುಬಿಡುತ್ತಾನೆ. ಮುಗ್ಧೆ ಮಾಧವಿಗೆ ಮಹಾನ್ ರಾಜರೊಂದಿಗೆ ವಿವಾಹವಾಗಿ ಮಕ್ಕಳನ್ನು ಪಡೆದ ನಂತರ ಪ್ರತೀ ಬಾರಿ ಕನ್ಯತ್ವ ಮತ್ತು ಯೌವ್ವನ ಮರಳಿ ಲಭಿಸುವುದು ಎಂಬ ವರವಿತ್ತು. ಇದನ್ನು ಮಾರಾಟಗಾರನೊಬ್ಬ (ತಂದೆ) ಸರಕಿನ (ಮಾಧವಿ) ವೈಶಿಷ್ಟ್ಯತೆಯನ್ನು ಗ್ರಾಹಕನಿಗೆ (ಗಾಲವ) ತಿಳಿಸಿಕೊಟ್ಟಂತೆ ತಿಳಿಸುತ್ತಾನೆ. ಹಾಗೆಯೇ ಸರಕನ್ನು ಬಳಸುವ ಬಗ್ಗೆ ಒಂದಷ್ಟು ಸಲಹೆಗಳನ್ನು ಮಾರಾಟಗಾರನಾದವನು ಕೊಡಲೇಬೇಕಲ್ವೇ? ತನ್ನ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಸಲಹೆಯನ್ನು ಕೊಡುತ್ತಾನೆ. ಹೇಗೆಂದರೆ, ಸರಕನ್ನು ಗುರುದಕ್ಷಿಣೆಗೆ ಬೇಕಾದ ವಿಶೇಷಣಗಳುಳ್ಳ ಕುದುರೆಗಳನ್ನು ಹೊಂದಿರುವ ರಾಜನಿಗೆ ಮಾರಾಟ ಮಾಡಿ ವಿನಿಮಯವಾಗಿ ಕುದುರೆಗಳನ್ನು ಪಡೆದಕೊಳ್ಳಬಹುದು ಎಂದು.

ದುರಂತವೆಂದರೆ ಅಂತಹ ಒಬ್ಬ ರಾಜನೂ ಸಿಗುವುದೇ ಇಲ್ಲ. ಗಾಲವನು, ಮೂರು ವರ್ಷಗಳಲ್ಲಿ ಪುತ್ರರಿಲ್ಲದ ಮೂರು ರಾಜರಿಗೆ ಮದುವೆಯ ನೆಪ ಹೂಡಿ, ಮಾಧವಿಯನ್ನು ಮಾರಾಟ ಮಾಡಿ ಒಬ್ಬೊಬ್ಬ ರಾಜನಿಗೂ ತಲಾ ಒಂದರಂತೆ ಮೂರು ಗಂಡು ಮಕ್ಕಳನ್ನು ಹೆತ್ತು ಕೊಡುವ ಯಂತ್ರದಂತೆ ಮಾಧವಿಯನ್ನು ಬಳಸಿಕೊಳ್ಳುತ್ತಾನೆ. ಮೂರು ರಾಜರಿಂದಲೂ ತಲಾ ಇನ್ನೂರರಂತೆ ಒಟ್ಟು ಆರುನೂರು ಕುದುರೆಗಳನ್ನು ಪಡೆದುಕೊಳ್ಳುತ್ತಾನೆ. ಇನ್ನು ಯಾವ ರಾಜನ ಬಳಿಯೂ ಅಂತಹ ವಿಶೇಷಣಗಳುಳ್ಳ ಕುದುರೆಗಳಿಲ್ಲ ಎಂದರಿತು ಗುರುಗಳಾದ ವಿಶ್ವಾಮಿತ್ರರಿಗೆ ಆರುನೂರು ಕುದುರೆಗಳನ್ನು ಗುರುದಕ್ಷಿಣೆಯಾಗಿ ಅರ್ಪಿಸಿ, ಜೊತೆಗೆ ಮಾಧವಿಯಿಂದ ಮಗು ಪಡೆದು ಲೆಕ್ಕ ಚುಕ್ತಾ ಮಾಡಿಕೊಳ್ಳುವಂತೆ ವಿಶ್ವಾಮಿತ್ರರಲ್ಲಿ ಕೇಳಿಕೊಳ್ಳುತ್ತಾನೆ.

ಗಾಲವನ ಕೊನೆಯ ಗುತ್ತಿಗೆ ಒಪ್ಪಂದದ ಪ್ರಕಾರ ಮಾಧವಿಯು ಯಂತ್ರವಾಗಿ ವಿಶ್ವಾಮಿತ್ರನಿಗೆ ಮಗು ಹೆತ್ತು ಕೊಟ್ಟು ತಂದೆಯ ರಾಜ್ಯಕ್ಕೆ ಮರಳುತ್ತಾಳೆ. ಅಂದು ತನ್ನ ಮಗಳ ಕನಸನ್ನು ಕಟುಕನಂತೆ ಹರಿದು ಖಂಡರಿಸಿದ ತಂದೆ ಯಯಾತಿ, ಸ್ವಯಂವರ ಒಂದನ್ನು ಏರ್ಪಡಿಸುತ್ತಾನೆ. ಅದಾಗಲೇ ಮಾಧವಿಯ ಮೈ ಮನಸ್ಸು ಕಲ್ಲಾಗಿ ಹೋಗಿದ್ದರಿಂದ ಮುಂದಿನ ಜೀವನವನ್ನು ಕಳೆಯಲು ಕಾಡನ್ನು ಇಚ್ಛಿಸಿ ಹೊರಟು ಹೋಗುತ್ತಾಳೆ.

ವರ್ತಮಾನದ ಘಟನೆಗಳು ಮಾಧವಿಯ ಜೀವಂತ ದಹನದ ಈ ಕಥೆ ಒಂದು ಬಿಡಿ ನಿದರ್ಶನವಷ್ಟೆ. ಪ್ರತಿಷ್ಠೆ, ಸ್ವಾರ್ಥ, ಘನತೆಗಾಗಿ ತನ್ನ ಕರುಳ ಕುಡಿಯನ್ನೇ ನಿರ್ದಾಕ್ಷಿಣ್ಯವಾಗಿ ಕಿವುಚಿ ಹಾಕುವ ಯಯಾತಿಯಂತಹ ಪೋಷಕರು, ಸ್ವಾರ್ಥಕ್ಕಾಗಿ ನಾಲ್ಕಾರು ರೂಪಾಯಿಗಳಿಗೆ ತಮ್ಮ ಹೆಂಡತಿ, ಮಕ್ಕಳು, ಸೋದರಿಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಗಾಲವನಂತಹ ಗಾವಿಲರು ಆಧುನಿಕ ಭಾರತದಲ್ಲಿ ಹೇರಳವಾಗಿ ಸಿಗುತ್ತಾರೆ.

ಪ್ರಾಚೀನ ಧಾರ್ಮಿಕ ಆಚರಣೆಗಳಲ್ಲಿ ಒಂದು ಪದ್ಧತಿ ಇದೆ. ಬ್ರಾಹ್ಮಣರಿಗೆ, ಅತಿಥಿಗಳಿಗೆ, ಪುರೋಹಿತ ಮತ್ತು ಅಳಿಯಂದಿರಿಗೆ ಕಾಣಿಕೆಯಾಗಿ ಹೆಣ್ಣುಗಳನ್ನು ದಾನವಾಗಿ ಕೊಡುತ್ತಿದ್ದುದು. ಈ ದರಿದ್ರ ಪದ್ಧತಿಗಳನ್ನೆಲ್ಲಾ ಸೂಕ್ಷ್ಮವಾಗಿ ಆಲೋಕಿಸಿದಾಗ ಜನರಿಗೋಸ್ಕರ ಪದ್ಧತಿಗಳಿರುವುದೋ? ಪದ್ಧತಿಗಳಿಗೋಸ್ಕರ ಜನರಿರುವುದೋ? ಎಂಬ ಸಂಶಯ ಮೂಡುತ್ತದೆ.

ಮಹಿಳಾ ಸಬಲೀಕರಣ/ ಸಶಕ್ತೀಕರಣ ಇಂದು ಹೆಣ್ಣುಗಳು ಅನೇಕ ಕ್ರೌರ್ಯ, ದೌರ್ಜನ್ಯಕ್ಕೆ ತುತ್ತಾಗಿ ಕುಬ್ಜರಾಗುತ್ತಿದ್ದಾರೆ. ಈ ಸಮಾಜದ ದ್ವಿಮುಖ ನೀತಿ, ಗಂಡಿನ ದಬ್ಬಾಳಿಕೆ, ದೈಹಿಕ ದೌರ್ಬಲ್ಯ ಮತ್ತು ಸ್ವಯಂ ನಿರ್ಮಿತ ಕಟ್ಟಲೆಗಳ ನಡುವೆ ಸಿಲುಕಿ ಹೆಣ್ಣುಗಳು ನಾನಾ ತರದ ಕ್ಷೋಭೆಗೊಳಗಾಗುತ್ತಿದ್ದಾರೆ. ಇಷ್ಟಾದರೂ ತನ್ನ ಸ್ವಾತಂತ್ರ್ಯದ ಹರಣದ ಪರಿವೆಯೇ ಇಲ್ಲದೆ, ಬಂಧನದಲ್ಲಿಯೇ ಕರ್ತವ್ಯ, ಸೌಂದರ್ಯ, ಜೀವನ ಮೀಮಾಂಸೆಯನ್ನು ಕಾಣಬಯಸುವ ಅಜ್ಜಿ ಪುಳ್ಳಿಗಳೂ ಈಗ ಇದ್ದಾರೆ. ಅಂತಹವರಿಗೆ ಸ್ವಾತಂತ್ರ್ಯದ ಕಹಳೆಯು ಕೋಣನ ಮುಂದೆ ಕಿನ್ನರಿ ನುಡಿಸಿದಂತೆ. ಇಂತಹ ಸಂದರ್ಭಗಳಲ್ಲಿ ಹೆಣ್ಣು ತನ್ನ ಸ್ವಾತಂತ್ರ್ಯವನ್ನು ಪಡೆಯಬೇಕಾದರೆ ಅದಕ್ಕೆ ಅವಶ್ಯವಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸಲೇಬೇಕು.

ಡೋಲಾರೆಸ್ ಇಬರೂರಿ ಫ್ಯಾಸಿಸ್ಟ್ ವಿರುದ್ಧದ ಚಳುವಳಿಯ ಸಂದರ್ಭದಲ್ಲಿ ಹೇಳಿದ ಮಾತು. ‘ಮಡಿದರೂ ಸರಿ ತಲೆಯೆತ್ತಿ ನಿಲ್ಲುವುದೇ ಲೇಸು. ಬದುಕಲೆಂದು ಮಂಡಿಯೂರುವುದು ಬೇಡ’ ಹೆಣ್ಣು ಸಮಾಜದಲ್ಲಿ ತಲೆಯೆತ್ತಿ ನಿಲ್ಲಬೇಕು ಅಂತಾದರೆ, ಮೊದಲು ತನ್ನ ದೇಹ ಮತ್ತು ಮನಸ್ಸಿನ ಮೇಲೆ ಸಾರ್ವಭೌಮತ್ವವನ್ನು ಸಾಧಿಸಿಕೊಳ್ಳಬಲ್ಲೆನೆಂದು ದೃಢ ನಿಲುವನ್ನು ತಾಳಬೇಕು. ಮತ್ತು ಹೊಸದೊಂದು ಆರೋಗ್ಯಕರ ವಾತಾವರಣವನ್ನು ಹೊಂದಿರುವ ಸಮಾಜ ರಚನೆಯ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಮಹಿಳಾ ಸಾಮಾಜಿಕ ಸಬಲೀಕರಣ ಬಹಳ ಪ್ರಯಾಸದ ಮತ್ತು ದೀರ್ಘ ಕಾಲದ ಪ್ರಕ್ರಿಯೆ. ಅದನ್ನರಿತು ಒಗ್ಗೂಡಿ ತಲೆಯೆತ್ತಿ ಕ್ರಮಿಸುತ್ತಾ ಗೆದ್ದು ಸಾಧಿಸಬೇಕು.

ಬರಹ: ಕೀರ್ತನಾ ಉದ್ಯಾವರ

***

ಟಿವಿ9 ಕನ್ನಡ ಡಿಜಿಟಲ್‌ ಹೊಸ ಪ್ರಯತ್ನ ಪುರಾಣ ಪಾತ್ರಗಳು, ಪುರಾಣದ ಘಟನೆಗಳು, ಅನುಭವ, ಆಸ್ವಾದನೆ ಬದುಕಿಗೆ ದಾರಿದೀಪ ಆಗಬಲ್ಲವು. ಒಂದಷ್ಟು ಹೊಸನೋಟ, ತಿಳುವಳಿಕೆಯನ್ನೂ ನೀಡಬಲ್ಲವು. ಮನಸಿಗೆ ಸಂತೋಷ, ನೆಮ್ಮದಿಯನ್ನೂ ತುಂಬಬಲ್ಲವು.

ಪುರಾಣ ಪಾತ್ರಗಳನ್ನು ತಿಕ್ಕಿ, ತೀಡಿ, ವಿರೋಧಿಸಿ, ಪ್ರಶ್ನಿಸಿ, ಎದುರಿಸಿ, ಒಪ್ಪಿ, ಅಪ್ಪುವ ಅವಕಾಶ ಯಕ್ಷಗಾನ ಕಲಾ ವಲಯದ ಜನತೆಗೆ ಹೆಚ್ಚು. ಪುರಾಣ ಪಾತ್ರಗಳನ್ನೂ ದಿನವೂ ಮಾತನಾಡಿಸುವಂತೆ.. ಏಕೆಂದರೆ ಇಲ್ಲಿ ದಿನನಿತ್ಯವೂ ನೂರಾರು ಆಟ.

ಈ ನೆಲೆಯಲ್ಲಿ ʼಪುರಾಣ ಪಾತ್ರಗಳ ವರ್ತಮಾನʼ ಎಂಬ ಸರಣಿಯನ್ನು ಪುರಾಣ ಮತ್ತು ಯಕ್ಷಗಾನದ ಸಮೀಕರಣದೊಂದಿಗೆ ಆರಂಭಿಸಿದ್ದೇವೆ. ಸದ್ಯ ಆಯ್ದ ಸಹೃದಯರು ಪುರಾಣ ಪಾತ್ರಧಾರಿಗಳಾಗಿ ತಮ್ಮ ಅನುಭವ, ಅದರ ತಯಾರಿಯಲ್ಲಿನ ಅನುಭವ, ಅಥವಾ ರಂಗಸ್ಥಳದಲ್ಲಿ ಪುರಾಣ ಪಾತ್ರಗಳನ್ನು ಕಂಡ ಬಗೆ, ರಂಗದ ಹಿಂದಿನ ಚೌಕಿಯ ನೆನಪು, ಮತ್ತು ಅದರಿಂದ ಬದುಕಿಗೇನು? ಬದುಕಲ್ಲಿ ಏನು? ಎಂದು ಚರ್ಚಿಸುತ್ತಾರೆ.

ಮುಂದೆ ಇದನ್ನು ವಿಸ್ತರಿಸುವ ಇರಾದೆ ಇದೆ. ಈ ನೆಲೆಯಲ್ಲಿ ತಾವೂ ಕೂಡ ಮೇಲಿನ ಉದ್ದೇಶಕ್ಕೆ ಸರಿಯಾಗಿ ತಮ್ಮ ಬರಹವನ್ನು ನಮಗೆ ಕಳುಹಿಸಿಕೊಡಬಹುದು. ಮೇಲ್ ಮಾಡುವಾಗ ‘ಯಕ್ಷಗಾನ’, ‘ಯಕ್ಷರಂಗ’ ಅಥವಾ ‘ಪುರಾಣ ಪಾತ್ರಗಳ ವರ್ತಮಾನ’ ಸರಣಿಗೆ ಲೇಖನ ಎಂದು ನಮೂದಿಸಲು ಮರೆಯಬೇಡಿ.

ನಮ್ಮ ಇಮೇಲ್‌ ವಿಳಾಸ:  tv9kannadadigital@gmail.com 

ಇದನ್ನೂ ಓದಿ: Yakshagana: ಬರೆದದ್ದರಲ್ಲಿ ಏನೂ ಇಲ್ಲ ಅನಿಸಿದರೆ ಒಂದು ವಿಡಿಯೋ ಹಾಕಿದ್ದೇನೆ; ಅದನ್ನು ನೋಡಿ ನಕ್ಕುಬಿಡಿ

ಇದನ್ನೂ ಓದಿ: Yakshagana: ಭೂಜಾತೆ ಸೀತೆಗೆ ಭೂಮಿಯಷ್ಟೇ ಸಹನೆ; ಅದು ನಮಗೆ ದಾರಿದೀಪ

Published On - 4:59 pm, Sun, 5 September 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ