Rashmika: ತಪ್ಪು ಹೆಸರೇಳಿ ಸಿನಿಮಾ ಪ್ರೇಮಿಗಳಿಂದ ಟ್ರೋಲ್ ಆದ ರಶ್ಮಿಕಾ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಮುಂಚೆ ಎಲ್ಲ ಬಹಳ ಟ್ರೋಲ್ ಆಗುತ್ತಿದ್ದರು. ಈ ವಿಷಯವಾಗಿ ಸ್ವತಃ ಅವರೇ ಕೆಲವು ಬರೆದುಕೊಂಡಿದ್ದರು. ಆದರೆ ಇತ್ತೀಚೆಗೆ ಅವರ ಟ್ರೋಲಿಂಗ್ ಬಹಳ ಕಡಿಮೆ ಆಗಿತ್ತು. ಆದರೆ ಇದೀಗ ಮತ್ತೊಮ್ಮೆ ಅವರು ಸಂದರ್ಶನವೊಂದರಲ್ಲಿ ಬ್ಲಂಡರ್ ಮಾಡಿದ್ದು, ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.
ರಶ್ಮಿಕಾ ಮಂದಣ್ಣ ಆಗಾಗ್ಗೆ ಟ್ರೋಲ್ಗೆ ಒಳಗಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಇದು ತುಸು ಕಮ್ಮಿಯಾಗಿತ್ತು ಆದರೆ ಈಗ ಮತ್ತೊಮ್ಮೆ ರಶ್ಮಿಕಾ ಟ್ರೋಲ್ಗೆ ಗುರಿಯಾಗಿದ್ದಾರೆ. ಮೊದಲೆಲ್ಲ ಅವಾರ್ಡ್ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ ಅರ್ಥವಿಲ್ಲದೆ ಮಾತನಾಡಿ, ಕನ್ನಡ ಬರಲ್ಲ ಎಂದು ಹೇಳಿ ಹೀಗೆ ಒಂದಲ್ಲ ಒಂದು ಕಾರಣಗಳಿಗೆ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಲೇ ಇದ್ದರು. ಇದೀಗ ಮತ್ತೊಮ್ಮೆ ಇದೇ ಕಾರಣಕ್ಕೆ ರಶ್ಮಿಕಾ ಟ್ರೋಲ್ಗೆ ಗುರಿಯಾಗಿದ್ದಾರೆ.
ಇತ್ತಿಚೆಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಸಂದರ್ಶನದಲ್ಲಿ ಸಿನಿಮಾ, ಖಾಸಗಿ ಜೀವನ, ಅಭಿಮಾನಿಗಳು, ‘ಪುಷ್ಪ 2’ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಇದೇ ಸಂದರ್ಶನದಲ್ಲಿ ರಶ್ಮಿಕಾಗೆ ನೀವು ಮೊದಲು ನೋಡಿದ ಸಿನಿಮಾ ಯಾವುದು? ಎಂಬ ಪ್ರಶ್ನೆ ಎದುರಾಯ್ತು. ಇದಕ್ಕೆ ಉತ್ತರಿಸಿದ ನಟಿ ರಶ್ಮಿಕಾ, ‘ನಾನು ಮೊದಲು ನೋಡಿದ ಸಿನಿಮಾ ತಮಿಳಿನ ‘ಗಿಲ್ಲಿ’ ಎಂದಿದ್ದಾರೆ. ನನಗೆ ವಿಜಯ್ ಎಂದರೆ ಏಕೆ ಅಷ್ಟು ಇಷ್ಟ ಎಂದರೆ ನಾನು ದೊಡ್ಡ ಪರದೆಯ ಮೇಲೆ ಮೊದಲು ನೋಡಿದ ನಟ ವಿಜಯ್ ಹಾಗಾಗಿ ಅವರೆಂದರೆ ನನಗೆ ಬಹಳ ಇಷ್ಟ’ ಎಂದಿದ್ದಾರೆ.
ಮುಂದುವರೆದು, ‘ನನಗೆ ಇತ್ತೀಚೆಗೆ ಗೊತ್ತಾಯ್ತು, ‘ಗಿಲ್ಲಿ’ ಸಿನಿಮಾ ತೆಲುಗಿನ ‘ಪೋಕಿರಿ’ ಸಿನಿಮಾದ ರೀಮೇಕ್ ಎಂದು. ಆದರೆ ಆಗ ಅದು ನನಗೆ ಗೊತ್ತಿರಿಲ್ಲ. ಸಿನಿಮಾ ಅನ್ನು ಬಹಳ ಎಂಜಾಯ್ ಮಾಡಿದ್ದೆ. ‘ಅಪಡಿ ಪೋಡು’ ಹಾಡಂತೂ ಬಹಳ ಇಷ್ಟವಾಗಿತ್ತು’ ಎಂದಿದ್ದರು ರಶ್ಮಿಕಾ ಮಂದಣ್ಣ. ಆದರೆ ಇದೇ ವಿಷಯಕ್ಕೆ ಈಗ ರಶ್ಮಿಕಾ ಟ್ರೋಲ್ ಆಗುತ್ತಿದ್ದಾರೆ. ಏಕೆಂದರೆ ‘ಗಿಲ್ಲಿ’ ಸಿನಿಮಾ ರಶ್ಮಿಕಾ ಹೇಳಿದಂತೆ ‘ಪೋಕಿರಿ’ ಸಿನಿಮಾದ ರೀಮೇಕ್ ಅಲ್ಲ ಬದಲಿಗೆ ಮಹೇಶ್ ಬಾಬು ನಟನೆಯ ‘ಒಕ್ಕಡು’ ಸಿನಿಮಾದ ರೀಮೇಕ್.
ಇದನ್ನೂ ಓದಿ:‘ಅನಿಮಲ್ ಪಾರ್ಕ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇರಲ್ಲ, ಮತ್ಯಾರು?
ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದು, ಒಂದರ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾಗೆ ತೆಲುಗು ಸಿನಿಮಾಗಳ ಬಗ್ಗೆ ಕನಿಷ್ಟ ಜ್ಞಾನವೂ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ. ಇನ್ನು ವಿಜಯ್ ಅಭಿಮಾನಿಗಳು ಸಹ ಇದೇ ವಿಷಯಕ್ಕೆ ರಶ್ಮಿಕಾರನ್ನು ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲಿಂಗ್ ಹೆಚ್ಚಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಶ್ಮಿಕಾ, ‘ಹೌದು, ಗೊತ್ತಾಯ್ತು, ಸಾರಿ ಒಂದು ತಪ್ಪು ಆಗೋಗಿದೆ. ಸಂದರ್ಶನ ಮುಗಿದ ಮೇಲೆ ಅಂದುಕೊಂಡೆ, ಅಯ್ಯೋ ‘ಗಿಲ್ಲಿ’, ‘ಒಕ್ಕಡು’ ರೀಮೇಕ್, ‘ಪೋಕಿರಿ’, ‘ಪೋಕಿರಿ’ ರೀಮೇಕ್ ಎಂದು. ಸಾಮಾಜಿಕ ಜಾಲತಾಣದಲ್ಲಿ ಇದೆಲ್ಲ ಆಗಬಹುದು ಎಂದೂ ಸಹ ಊಹಿಸಿದ್ದೆ. ಸಾರಿ, ಸಾರಿ ಇದು ನನ್ನದೇ ತಪ್ಪು, ಆದರೆ ನನಗೆ ಅವರ ಎಲ್ಲ ಸಿನಿಮಾಗಳು ಇಷ್ಟ ಆಗಿರುವ ಕಾರಣ ಪರವಾಗಿಲ್ಲ’ ಎಂದಿದ್ದಾರೆ.
ಅಸಲಿಗೆ ರಶ್ಮಿಕಾ ಮಂದಣ್ಣ ವಿಜಯ್ ಮತ್ತು ಮಹೇಶ್ ಬಾಬು ಇಬ್ಬರೊಟ್ಟಿಗೂ ನಟಿಸಿದ್ದಾರೆ. ಮಹೇಶ್ ಬಾಬು ಜೊತೆಗೆ ‘ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯ್ ಜೊತೆಗೆ ‘ವಾರಿಸು’ ಸಿನಿಮಾನಲ್ಲಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ಸಹ ಸೂಪರ್ ಹಿಟ್ ಸಿನಿಮಾಗಳಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:08 am, Sun, 22 December 24