AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sahavasa Dosha: ಒಬ್ಬ ವ್ಯಕ್ತಿಯ ಜೀವನದ ಮೇಲೆ ಸಹವಾಸ ದೋಷದ ಪ್ರಭಾವ ಹೇಗಿರಲಿದೆ?

ಸಹವಾಸ ದೋಷವು ವ್ಯಕ್ತಿಯ ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಉತ್ತಮ ಸಹವಾಸವು ವ್ಯಕ್ತಿಯನ್ನು ಏಳಿಗೆಯತ್ತ ಕೊಂಡೊಯ್ದರೆ, ಕೆಟ್ಟ ಸಹವಾಸವು ಅವನತಿಗೆ ಕಾರಣವಾಗುತ್ತದೆ. ಸಜ್ಜನರ ಸಹವಾಸವು ತಾತ್ಕಾಲಿಕವಾಗಿ ಕಹಿಯೆನಿಸಿದರೂ, ಶಾಶ್ವತ ಸುಖ ನೀಡುತ್ತದೆ. ನಮ್ಮ ವ್ಯಕ್ತಿತ್ವ, ಯಶಸ್ಸು ಮತ್ತು ಮನಸ್ಸಿನ ಆರೋಗ್ಯಕ್ಕೆ ಉತ್ತಮ ಸಹವಾಸ ಅತಿ ಮುಖ್ಯವಾಗಿದೆ.

Sahavasa Dosha: ಒಬ್ಬ ವ್ಯಕ್ತಿಯ ಜೀವನದ ಮೇಲೆ ಸಹವಾಸ ದೋಷದ ಪ್ರಭಾವ ಹೇಗಿರಲಿದೆ?
ಸಹವಾಸ ದೋಷImage Credit source: Pinterest
ಅಕ್ಷತಾ ವರ್ಕಾಡಿ
|

Updated on: Apr 28, 2026 | 11:06 AM

Share

ಸಹವಾಸ ದೋಷಗಳು ಒಬ್ಬ ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತವೆಯೇ ಅಥವಾ ಶ್ರೇಯಸ್ಸು, ವೃದ್ಧಿಯನ್ನು ನೀಡುತ್ತವೆಯೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏಳಿಗೆ ಇರಬಹುದು, ಅವನತಿ ಇರಬಹುದು. ಇವೆಲ್ಲವೂ ಕೂಡ ಸಹವಾಸಗಳ ಪ್ರಭಾವದಿಂದಲೇ ಉಂಟಾಗುತ್ತವೆ. ಆ ಸಹವಾಸ ಉತ್ತಮವಾಗಿದೆಯೇ ಅಥವಾ ಕೆಟ್ಟದಾಗಿದೆಯೇ ಎಂಬುದು ಫಲಿತಾಂಶ ಬಂದಾಗ ಮಾತ್ರ ಗೊತ್ತಾಗುತ್ತದೆ.

ಗುರೂಜಿಯವರು ಹೇಳಯವಂತೆ, “ಸಹವಾಸ ದೋಷದಿಂದ ಸನ್ಯಾಸಿಯೂ ಕೆಟ್ಟ” ಎಂಬ ಗಾದೆಯೇ ಸಹವಾಸದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ. ನಾವು ಯಾರ ಜೊತೆ ಇರುತ್ತೇವೆ ಎಂಬುದು ಬಹಳ ಮುಖ್ಯ. ನಿಮ್ಮ ಸ್ನೇಹಿತರ ಹೆಸರನ್ನು ಹೇಳಿ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನಮ್ಮ ಬಾಲ್ಯಾವಸ್ಥೆ, ಯೌವನಾವಸ್ಥೆ, ಪ್ರೌಢಾವಸ್ಥೆ ಮತ್ತು ವೃದ್ಧಾವಸ್ಥೆಗಳು ಮತ್ತೆ ಮರಳಿ ಬರುವುದಿಲ್ಲ. ಈ ಜೀವನದ ಪ್ರತಿಯೊಂದು ಹಂತದಲ್ಲಿಯೂ ನಮ್ಮ ಅಭಿವೃದ್ಧಿ ಮತ್ತು ಶ್ರೇಯಸ್ಸಿಗೆ ಯಾರಾದರೂ ಒಬ್ಬರ ಬೆಂಬಲ ಬೇಕೇ ಬೇಕು. ಈ ಬೆಂಬಲ ನೀಡುವ ಸಹವಾಸಗಳು ಒಳ್ಳೆಯದಾಗಿರಬೇಕು. ಕೇವಲ ಬಾಯಿ ಮಾತಿನಲ್ಲಿ ಒಳ್ಳೆಯದಾಗುತ್ತೆ ಎಂದು ಹೇಳುವವರನ್ನು ನಂಬಲು ಸಾಧ್ಯವಿಲ್ಲ.

ಸಹವಾಸಗಳು ನಮ್ಮ ಜೀವನದ ಮೇಲೆ, ನಮ್ಮ ವ್ಯಕ್ತಿತ್ವದ ಮೇಲೆ, ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಅವರ ಆಲೋಚನಾ ಶಕ್ತಿ, ಸಾಮಾಜಿಕ ಕಳಕಳಿ, ಮತ್ತು ಮನಸ್ಸಿನ ಭಾವನೆಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದಕ್ಕೆ ಒಂದು ಪ್ರಸಿದ್ಧ ಉದಾಹರಣೆ ಎರಡು ಗಿಳಿಗಳ ಕಥೆ. ಒಬ್ಬ ಋಷಿಯ ಬಳಿ ಬೆಳೆದ ಗಿಳಿಯು ಆಶ್ರಮಕ್ಕೆ ಬಂದವರನ್ನು “ಬನ್ನಿ, ಕಾಲು ತೊಳೆದುಕೊಳ್ಳಿ, ನೀರು ಬೇಕಾ?” ಎಂದು ಸತ್ಕರಿಸಿದರೆ, ಕಳ್ಳನ ಬಳಿ ಬೆಳೆದ ಗಿಳಿಯು “ಅವರನ್ನು ಹಿಡಿದುಕೊಳ್ಳಿ, ಅವರ ಬಳಿ ಬಂಗಾರವಿದೆ” ಎಂದು ಹೇಳುತ್ತದೆ. ಇಲ್ಲಿ ಕಳ್ಳನ ಸಹವಾಸದಿಂದ ಆ ಗಿಳಿಗೆ ಕೆಟ್ಟ ಬುದ್ಧಿ ಬಂದರೆ, ಋಷಿಯ ಸಹವಾಸದಿಂದ ಈ ಗಿಳಿಗೆ ಸದ್ಬುದ್ಧಿ ಬರುತ್ತದೆ.

ಇತಿಹಾಸ ಮತ್ತು ಪುರಾಣಗಳಲ್ಲೂ ಇದಕ್ಕೆ ಅನೇಕ ಉದಾಹರಣೆಗಳಿವೆ. ಮಹಾಭಾರತದಲ್ಲಿ ಭೀಷ್ಮನು ಶರಶಯ್ಯೆಯಲ್ಲಿ ಇರುವಾಗ, ದ್ರೌಪದಿ “ನೀವು ಮಹಾನ್ ಜ್ಞಾನಿ, ಧರ್ಮನಿಷ್ಠರು. ಆದರೂ ನನ್ನ ವಸ್ತ್ರಾಪಹರಣದ ಸಮಯದಲ್ಲಿ ಯಾಕೆ ತಡೆಯಲಿಲ್ಲ?” ಎಂದು ಕೇಳಿದಾಗ, ಭೀಷ್ಮ “ನಾನು ದುರ್ಯೋಧನನ ಆಹಾರ ತಿನ್ನುತ್ತಿದ್ದೆ, ಅವನ ಸಹವಾಸದಲ್ಲಿದ್ದೆ. ಅದಕ್ಕೆ ಆ ಬುದ್ಧಿ ನನಗಿತ್ತು ತಾಯಿ” ಎಂದು ಹೇಳುತ್ತಾನೆ.

ಇದೇ ರೀತಿ, ಬಿಳಿ ಬಟ್ಟೆಯ ಮೇಲೆ ಒಂದು ಕಪ್ಪು ಚುಕ್ಕೆ ಹಾಕಿದಾಗ ಇಡೀ ಬಟ್ಟೆ ಹೇಗೆ ವಿಕಾರವಾಗಿ ಕಾಣಿಸುತ್ತದೆಯೋ, ಹಾಗೆಯೇ ನಮ್ಮ ಜೀವನದಲ್ಲಿ ಕೆಟ್ಟ ಸಹವಾಸಗಳು ನಮ್ಮನ್ನು ಹಾಳುಮಾಡಬಹುದು. ಒಳ್ಳೆಯ ಸಹವಾಸಗಳು ನಮ್ಮನ್ನು ಉತ್ತಮ ವ್ಯಾಪಾರಿಯನ್ನಾಗಿ, ಜ್ಞಾನಿಯನ್ನಾಗಿ, ರಾಜಕೀಯ ವ್ಯಕ್ತಿಯನ್ನಾಗಿ, ಅಥವಾ ಸಮಾಜದಲ್ಲಿ ಗುರುತರವಾದ ವ್ಯಕ್ತಿಯನ್ನಾಗಿ ಮಾಡುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕೆಟ್ಟ ಜನರ ಸಹವಾಸ ಮಾಡುವುದರಿಂದ ತಾತ್ಕಾಲಿಕ ಆನಂದ ಮತ್ತು ಸಂತೋಷ ಸಿಗಬಹುದು, ಆದರೆ ಶಾಶ್ವತವಾಗಿ ಕಂಟಕ ತಪ್ಪಿದ್ದಲ್ಲ. ಅದೇ ಒಳ್ಳೆಯ ಜನರ ಸಹವಾಸ ಮಾಡಿದರೆ, ತತ್ಕಾಲದಲ್ಲಿ ಕಹಿಯೆನಿಸಿದರೂ, ಶಾಶ್ವತವಾಗಿ ಸುಖ ಸಿಗುತ್ತದೆ. ಅದಕ್ಕೆ ದೊಡ್ಡವರು “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಎಂದು ಹೇಳುತ್ತಾರೆ. ನಿಮ್ಮ ಹಣಕ್ಕಾಗಿ, ಜ್ಞಾನಕ್ಕಾಗಿ, ಆಸ್ತಿಗಾಗಿ ನಿಮ್ಮನ್ನು ಹಾಳುಮಾಡಲು ಪ್ರಯತ್ನಿಸುವ ಕೆಲವು ದುಷ್ಟ ಜನರ ಸಹವಾಸದಿಂದ ದೂರವಿರಿ.

ಒಂದು ಆಶ್ರಮಕ್ಕೆ ಹೋಗಿ ಸ್ವಲ್ಪ ಹೊತ್ತು ಕುಳಿತುಕೊಂಡಾಗ ಸಿಗುವ ಆನಂದ, ಒಬ್ಬ ಸ್ವಾಮೀಜಿ, ಮಠಾಧೀಶ, ಜ್ಞಾನಿ, ಅಥವಾ ಗುರುಗಳ ಬಳಿ ಹೋದಾಗ ಐದು ನಿಮಿಷ ಕಳೆದರೂ ನಮ್ಮ ದೇಹಕ್ಕೆ ಧನಾತ್ಮಕ ಶಕ್ತಿ ಬರುತ್ತದೆ. ಸಹವಾಸ ದೋಷವು ಜೀವನವನ್ನು ಹಾಳು ಮಾಡುವುದರ ಜೊತೆಗೆ ಶುಭವನ್ನು ಕೂಡ ಮಾಡುತ್ತದೆ. ಇದನ್ನು ನಾವು ಅರಿತುಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us