ತಿರುಪತಿ ಲಡ್ಡು ಇತಿಹಾಸ ಮತ್ತು ಉತ್ಪಾದನೆ: ಪವಿತ್ರ ಪ್ರಸಾದ ಕುರಿತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ

Tirupati Laddu history, production: ಕೋಟ್ಯಾಂತರ ಭಕ್ತರನ್ನು ಹೊಂದಿರುವ, ಏಳುಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆದವ್ರಿಗೆ ಪ್ರಸಾದವಾಗಿ ಸಿಗುವ ಲಡ್ಡು ಇದೀಗ ಭಾರೀ ಚರ್ಚೆಯಾಗುತ್ತಿದೆ. ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರವಿದ್ದ ಸಮಯದಲ್ಲಿ ತಿರುಪತಿ ದೇವಸ್ಥಾನದ ನೈವೇದ್ಯದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ಅವರು ಗಂಭೀರ ಆರೋಪ ಮಾಡಿದ್ದಾರೆ. ಇದೆಲ್ಲಾ ನಿಮಗೆ ತಿಳಿದಿರುವ ವಿಚಾರ. ಆದರೆ ಲಡ್ಡುವನ್ನೇ ಪ್ರಸಾದವಾಗಿ ನೀಡಿದ್ದು ಏಕೆ? ಲಡ್ಡುವಿನ ಇತಿಹಾಸವೇನು ಎಂಬ ಕುತೂಹಲಕಾರಿ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ತಿರುಪತಿ ಲಡ್ಡು ಇತಿಹಾಸ ಮತ್ತು ಉತ್ಪಾದನೆ: ಪವಿತ್ರ ಪ್ರಸಾದ ಕುರಿತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಪವಿತ್ರ ತಿರುಪತಿ ಪ್ರಸಾದದ ಬಗ್ಗೆ ಕುತೂಹಲಕಾರಿ ಸಂಗತಿಗಳು
Follow us
ಆಯೇಷಾ ಬಾನು
|

Updated on:Oct 01, 2024 | 12:25 PM

ತಿರುಪತಿ ಎಂದಾಕ್ಷಣ ಕಣ್ಣಮುಂದೆ ಬರೋದು ಶ್ರೀವಾರಿಯ ಪ್ರಸಾದ ಲಡ್ಡು. ದೇವರ ದರ್ಶನ ಮಾಡಿ ಬಂದ ಪ್ರತಿಯೊಬ್ಬರೂ ಲಡ್ಡು ಸ್ವೀಕರಿಸದೆ ಮನೆಗೆ ಬರೋದಿಲ್ಲ. ಅಷ್ಟೇ ಏಕೆ ತಿರುಪತಿಗೆ ಸ್ನೇಹಿತರೋ, ಅಕ್ಕಪಕ್ಕದ ಮನೆಯವರೋ ಹೋಗುತ್ತಿದ್ದಾರೆಂದರೆ ನಮಗೂ ಒಂದೆರಡು ಲಡ್ಡು ತಂದುಕೊಡಿ ಅಂತಾರೆ. ಇನ್ನು ಎಷ್ಟೇ ಲಕ್ಷಾಂತರ ಭಕ್ತ ಸಮೂಹವಿದ್ದರೂ, ನೂಕುನುಗ್ಗಲಲ್ಲೇ ಕೆಲವೇ ನಿಮಿಷಗಳಿಗಾದರೂ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಹಂಬಲದಲ್ಲಿ ನಾನಾ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಲಡ್ಡು ಇಲ್ಲದೆ ತೀರ್ಥಯಾತ್ರೆ ಅಪೂರ್ಣ ಎಂಬಂತೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಲಡ್ಡು ಪ್ರಸಾದ ಖರೀದಿಸುತ್ತಾರೆ. ಆದರೆ ಇತ್ತೀಚೆಗೆ ಎದ್ದ ಆ ಆರೋಪವೊಂದು ಭಕ್ತರ ನಂಬಿಕೆಯನ್ನು ಘಾಸಿಗೊಳಿಸಿದೆ, ಆಘಾತ ತಂದಿದೆ, ನೋವುಂಟು ಮಾಡಿದೆ.

ಆಧುನಿಕ ಯುಗದಲ್ಲಿ ಮುಟ್ಟಿದ್ದೆಲ್ಲಾ ಕಲಬೆರಕೆ ಎಂಬಂತಾಗಿದೆ. ಅನ್ನ ಮಾಡುವ ಅಕ್ಕಿ, ಮೊಟ್ಟೆಯಿಂದ ಹಿಡಿದು ಮಸಾಲೆ ಪದಾರ್ಥಗಳು, ಹಣ್ಣು, ದಿನ ನಿತ್ಯ ಬಳಕೆ ವಸ್ತುಗಳಲ್ಲಿ ಬಹುತೇಕ ಎಲ್ಲವೂ ಕಲಬೆರಕೆಯಾಗಿಬಿಟ್ಟಿದೆ. ಕಲಬೆರಕೆ ಇಲ್ಲದ ಪದಾರ್ಥಗಳನ್ನು ಕಂಡುಹಿಡಿಯುವುದೇ ಕಷ್ಟವಾಗಿದೆ. ಇತ್ತ ಪವಿತ್ರ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪವೇ ಕಲಬೆರಕೆಯಾಗಿತ್ತು ಎಂಬ ದೊಡ್ಡ ಆರೋಪ ಕೇಳಿಬಂದಿದೆ. ಇದರಿಂದಾಗಿ ಪವಿತ್ರ, ಭಕ್ತಿ ಪ್ರಧಾನ ಲಡ್ಡುವಿನಲ್ಲಿ ದನ, ಹಂದಿಯ ಕೊಬ್ಬಿನ ಅಂಶ, ಮೀನಿನ ಎಣ್ಣೆ ಅಂಶ ಇರುವುದು ಪತ್ತೆಯಾಗಿದೆ. 1857ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ತನ್ನ ಭಾರತೀಯ ಯೋಧರಿಗೆ ಬಂದೂಕುಗಳನ್ನು ನೀಡಿತ್ತು. ಅದರಲ್ಲಿ ಬಳಸುವ ಗುಂಡುಗಳಿಗೆ ಆಕಳು, ಹಂದಿ ಮಾಂಸದ ಕೊಬ್ಬು ಹಚ್ಚಲಾಗಿದೆ ಎಂಬ ಮಾತು ಯೋಧರ ಕಿವಿಗೆ ಕಾದ ಸೀದಂತೆ ಬಿದ್ದಾಗ ಸಹಜವಾಗಿಯೇ ಅದು ಸಿಪಾಯಿ ದಂಗೆಗೆ ಕಾರಣವಾಗಿತ್ತು. ಇದೀಗ ತಿರುಪತಿ ಲಡ್ಡು ವಿಚಾರದಲ್ಲಿ ಎದ್ದಿರುವ ವದಂತಿ ದೇಶದ್ಯಾಂತ ಇರುವ ಭಕ್ತರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಸದ್ಯ ಈಗ ಈ ಬಗ್ಗೆ 9 ಸದಸ್ಯರ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಲಾಗಿದೆ.

ಇಷ್ಟೆಲ್ಲಾ ಆದರೂ ತಿರುಪತಿಗೆ ಬರುವ ಜನರ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಪ್ರತಿ ದಿನವೂ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀನಿವಾಸನ ದರ್ಶನ ಮಾಡುತ್ತಿದ್ದಾರೆ. ತಿಮ್ಮಪ್ಪ ದೇವರು ಭಕ್ತರ ಪಾಲಿಗೆ ಎಂದಿನಂತೆ ಇದ್ದಾರೆ. ಭಕ್ತರ ಪಾಲಿನ ದೇವರ ಪ್ರಸಾದ ಎಂದೂ ಅಪವಿತ್ರವಾಗದು ಎಂದು ಭಕ್ತರು ಅಖಂಡ/ ಅಚಲ ನಂಬಿಕೆಯೊಂದಿಗೆ ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದ್ರೆ, ಮತ್ತೊಂದೆಡೆ ತಿರುಪತಿ ಲಡ್ಡುವಿನ ಇತಿಹಾಸವೇನು? ತಿರುಪತಿ ಲಡ್ಡು ಮೊದಲ ಬಾರಿಗೆ ತಯಾರಾಗಿದ್ದು ಯಾವಾಗ? ಲಡ್ಡುವನ್ನೇ ಪ್ರಸಾದವಾಗಿ ನೀಡುವುದೇಕೆ? ಎಂಬ ಮಹತ್ವದ ಸಂಗತಿಯನ್ನು ತಿಳಿಯಲು ಇದು ಸಕಾಲವಾಗಿದೆ.

ತಿರುಪತಿ ತಿಮ್ಮಪ್ಪನ ಪ್ರಸಾದವಾಗಿ ಲಡ್ಡುವನ್ನು ಕೈಗೆ ತೆಗೆದುಕೊಳ್ಳುವುದೇ ಒಂದು ಮಹಾ ಭಾಗ್ಯ ಅನ್ನಬಹುದು. ಅದರಲ್ಲೂ ತಿರುಪತಿ ದೇವಸ್ಥಾನದ ಪಾಕಶಾಲೆ ಸುತ್ತಮುತ್ತ ಓಡಾಡಿದರೆ ಸಾಕು ತುಪ್ಪ, ಡ್ರೈ ಫ್ರೂಟ್​​​ಗಳ ಮಿಶ್ರಣದ ಘಮವು ಭಕ್ತರ ಬ್ರೈನ್ ಅನ್ನು ಆ್ಯಕ್ಟಿವೇಟ್​​ ಮಾಡಿಬಿಡುತ್ತೆ. ಒಂದು ಕ್ಷಣ ಅಲ್ಲೇ ನಿಂತು ಆ ಘಮವನ್ನು ಸ್ವಾದಿಸಬೇಕು ಅನಿಸುತ್ತದೆ. ಈ ಪರಿಮಳ ಆಘ್ರಾಣಿಸುವುದು ಮತ್ತೊಂದು ತೆರೆನಾದ ದಿವ್ಯ ಅನುಭವ ನೀಡುತ್ತದೆ. ಇನ್ನು ಆ ಮಹಾಪ್ರಸಾದ ಲಡ್ಡು ಕೈಯಲ್ಲಿಟ್ಟರೆ ಸಾಕು, ಷುಗರು-ಪೊಗರು ಇರುವುದನ್ನೂ ಮರೆತು ಲಡ್ಡು ಮುರಿದುಕೊಂಡು ಬಾಯಿಗೆ ಹಾಕಿಕೊಳ್ಳುವವರೆಗೂ ನಮ್ಮ ಬ್ರೈನ್​​ ಮಾತು ನಾವೇ ಕೇಳುವುದಿಲ್ಲ. ನೇರವಾಗಿ ಹೃದಯದಿಂದ ಕೇಳಿಬಂದ ಮಾತು ಅಲ್ಲಿ ಕೆಲಸ ಮಾಡಿರುತ್ತದೆ.

ಹೌದು, ಮೊದಲು ತಿಮ್ಮಪ್ಪನಿಗೆ ಪರಮ ಭಕ್ತಿಯಿಂದ ಒಂದು ನಮಸ್ಕಾರ ಹಾಕಿ ಅದನ್ನು ಕಣ್ಣಿಗೊತ್ತಿಕೊಂಡು ಬಾಯಿಗೆ ಹಾಕಿಕೊಂಡು ಆಸ್ವಾದಿಸುವಾಗ ಸಿಗುವ ಮಜ ಬೇರೆನೇ ಲೆವೆಲ್. ‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬಂತೆ ತಿಮ್ಮಪ್ಪನ ಸಕಲ ಭಕ್ತರಿಗೂ ಈ ದಿವ್ಯಾನುಭವದ ಪರಿಚಯವಿರುತ್ತದೆ.

ಇನ್ನು ಬಾಯಿಗೆ ಲಡ್ಡು ಇಟ್ಟ ತಕ್ಷಣ ಬಾಯ್ತುಂಬ ಪಸರಿಸಿ ಕರಗಿ ಆಗಾಗ ಸಿಗುವ ದಪ್ಪ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಏಲಕ್ಕಿಯು ಮನಸಿನಲ್ಲಿ ಆಧ್ಯಾತ್ಮದ ಜ್ಯೋತಿ ಬೆಳಗಿಸಿದಂತಿರುತ್ತೆ. ನಾಲ್ಕೈದು ತಾಸು ಸರತಿ ಸಾಲಿನಲ್ಲಿ ನಿಂತು ಅಲ್ಲಲ್ಲಿ ಜೈಲಿನಲ್ಲಿರುವಂತೆ ಬ್ಯಾರಿಕೇಡ್​​​ಗಳಲ್ಲಿ ಬಂಧಿಯಾಗಿ ನೂಕುನುಗ್ಗಲಿನಲ್ಲೂ ಶ್ರೀನಿವಾಸನ ದರ್ಶನ ಮಾಡಿ ಬಂದ ಭಕ್ತರಿಗೆ ಪ್ರಸಾದವಾಗಿ ಸಿಗುವ ಲಡ್ಡು ತನ್ನದೇ ಆದ ಮಹತ್ವವನ್ನು ಹೊಂದಿದೆ.

ತಿರುಪತಿ ಲಡ್ಡುವಿಗಿದೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ

ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ತಿರುಪತಿ ಲಡ್ಡುಗೆ ಸುಮಾರು 310 ವರ್ಷಗಳ ಇತಿಹಾಸ ಇದೆ. 1715ರಲ್ಲಿ ತಿರುಮಲೇಶನಿಗೆ  ಲಡ್ಡು ನೈವೇದ್ಯ, ಪ್ರಸಾದ ನೀಡಲು ಆರಂಭಿಸಲಾಯಿತು. ಆದರೆ ಆರಂಭದಲ್ಲಿ ಅದು ಈಗಿನ ಲಡ್ಡು ಸ್ವರೂಪದಲ್ಲಿ ಇರಲಿಲ್ಲ. 1803ರಲ್ಲಿ ಆಗಿನ ಮದ್ರಾಸ್‌ ಸರ್ಕಾರದಿಂದ ಮೊದಲ ಬಾರಿಗೆ ದೇವಸ್ಥಾನದಲ್ಲಿ ಬೂಂದಿ ಪ್ರಸಾದ ವಿತರಣೆ ಮಾಡಲಾಯ್ತು. ಪಲ್ಲವರ ಕಾಲದಿಂದಲೇ ಪ್ರಸಾದ ಪರಂಪರೆ ಇದೆ ಅನ್ನೋ ಬಗ್ಗೆ ಮಾಹಿತಿ ಇದೆ. ಪಲ್ಲವರ ಕಾಲದಲ್ಲೇ ಶ್ರೀವಾರಿಗೆ ನೈವೇದ್ಯ ಸಲ್ಲಿಕೆ ಸಮಯ ನಿಗದಿ ಮಾಡಲಾಗಿತ್ತು.

ಮುಖ್ಯವಾಗಿ, ಏಳು ಬೆಟ್ಟದ ತಿರುಮಲದಲ್ಲಿ ದೂರದೂರುಗಳಿಂದ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಪ್ರಯಾಸಪಟ್ಟು ಬರುವ ಭಕ್ತರಿಗೆ ಭೋಜನ ವ್ಯವಸ್ಥೆ ಇಲ್ಲದ ಕಾರಣ ದೇವಸ್ಥಾನದ ವತಿಯಿಂದ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಲಡ್ಡು ಪ್ರಸಾದ ತಿಂದೇ ಭಕ್ತ ಜನರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈ ಪ್ರಸಾದಕ್ಕೆ ಮೊದಲು ‘ತಿರುಪ್ಪೊಂಗಂ’, ‘ಸುಖೀಯಂ ಮನೋಹರಪಡಿ’ ಎಂಬ ಹೆಸರು ಇತ್ತು. ವಡೆ ಹೊರತುಪಡಿಸಿ ಬೇರೆ ಆಹಾರ ಹೆಚ್ಚು ದಿನ ಇರುತ್ತಿರಲಿಲ್ಲ. ಹೀಗಾಗಿ ತಿರುಮಲದ ಭಕ್ತರಲ್ಲಿ ವಡೆಗೆ ಹೆಚ್ಚು ಡಿಮ್ಯಾಂಡ್‌ ಶುರುವಾಗಿತ್ತು. “ತಿರುಮಲೈ ಕು ವಡೈ ಅಳಗು” (ತಿರುಮಲಕ್ಕೆ ವಡೆಯೇ ಶೋಭೆ) ಎಂಬಂತೆ ಆಗ ತಿರುಪತಿ ವಡೆ ಫೇಮಸ್ ಆಗಿತ್ತು. ಪೊಂಗಲ್‌ ಅನ್ನು ಕೂಡ ನೈವೇದ್ಯವಾಗಿ ವಿತರಿಸಿದ್ದಕ್ಕೆ ದಾಖಲೆಗಳಿವೆ. 1940ರಿಂದ ಪ್ರಸಾದವಾಗಿ ಭಕ್ತರ ಕೈಗೆ ಲಡ್ಡು ಸೇರ್ಪಡೆ ಆಯ್ತು. 1933ರಲ್ಲಿ ತಿರುಪತಿ ದೇಗುಲ ಧರ್ಮದತ್ತಿ ಮಂಡಳಿ ಸ್ಥಾಪನೆ ಮಾಡಲಾಯ್ತು. ಮುಂದೆ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ -ಟಿಟಿಡಿ ಸ್ಥಾಪನೆಗೊಂಡಿತು. ಅಲ್ಲಿಂದ ಮುಂದೆ, ಟಿಟಿಡಿ ಸಾರಥ್ಯದಲ್ಲಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ವಿತರಣೆ ಹೆಚ್ಚಳವಾಯ್ತು. ಅಲ್ಲಿಗೆ, 1940ರಿಂದ ಬೂಂದಿಯನ್ನ ಲಡ್ಡು ಮಾಡಿ ಹಂಚುವ ಕಾರ್ಯ ಶುರುವಾಯ್ತು ಅನ್ನಬಹುದು.

ತೀರಾ ಇತ್ತೀಚೆಗೆ 2014ರಲ್ಲಿ ಲಡ್ಡುಗೆ ಭೌಗೋಳಿಕ ಗುರುತಿನ (Geographical identification -GI ಟ್ಯಾಗ್) ಸ್ಥಾನಮಾನ ನೀಡಲಾಯ್ತು. ಇನ್ನು ತಿಮ್ಮಪ್ಪನ ದರ್ಶನ ಮಾಡಿ ಬರುತ್ತಿದ್ದಂತೆಯೇ ಅಲ್ಲೇ ತಿನ್ನಲು ಚಿಕ್ಕ ಲಡ್ಡು ಪ್ರಸಾದವನ್ನು ಉಚಿತವಾಗಿ ನೀಡಲಾಗುತ್ತೆ. ಬಳಿಕ ಸರತಿ ಸಾಲಿನಲಿ ನಿಂತು ಕೌಂಟರ್​​​ಗಳಲ್ಲಿ ನಮಗೆ ಬೇಕಾದಷ್ಟು ಲಡ್ಡುಗಳನ್ನು ನಾವು ಖರೀದಿ ಮಾಡಬಹುದು. ತಿಮ್ಮಪ್ಪನ ಸನ್ನಿಧಿಯಲ್ಲಿ 29 ಕೌಂಟರ್​ಗಳಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಲಡ್ಡುಗಳನ್ನ ಮಾರಾಟ ಮಾಡಲಾಗುತ್ತೆ. ಮಧ್ಯಮ ಗಾತ್ರದ ಲಡ್ಡುವಿಗೆ 50 ರೂಪಾಯಿ, ದೊಡ್ಡ ಗಾತ್ರ ಲಾಡುಗೆ 200 ರೂಪಾಯಿ ನಿಗದಿ ಮಾಡಲಾಗಿದೆ. ನಿತ್ಯ 3 ಲಕ್ಷ ಲಡ್ಡುಗಳನ್ನ ತಯಾರಿಸ್ತಿದ್ದು, ಲಡ್ಡುವಿನ ವಾರ್ಷಿಕ ಆದಾಯವೇ 500 ಕೊಟಿ ರೂ ಇದೆ. ಇನ್ನು ಎಲ್ಲ ಭಕ್ತರಿಗೆ ಉಚಿತವಾಗಿ ತಲಾ ಒಂದು ಲಡ್ಡು ನೀಡಲಾಗುತ್ತೆ. ಬಳಿಕ ಭಕ್ತರು ತಮಗೆ ಎಷ್ಟು ಲಡ್ಡು ಬೇಕೋ ಅಷ್ಟು ಲಡ್ಡುವನ್ನು ಖರೀದಿಸಬಹುದು.

ತಿರುಪತಿ ಲಡ್ಡು ತಯಾರಿಸುವುದು ಹೇಗೆ?

ತಿರುಪತಿ ಲಡ್ಡು ಮಾರಾಟದಿಂದ ಟಿಟಿಡಿಗೆ ವರ್ಷಕ್ಕೆ ₹500 ಕೋಟಿ ಆದಾಯ ಬರ್ತಿದೆ. ಇಲ್ಲಿ ಲಡ್ಡು ತಯಾರಿಕೆಗಾಗಿಯೇ ವಿಶೇಷ ಅಡುಗೆ ಮನೆಗಳಿವೆ. ಈ ಹಿಂದೆ ಆರಂಭದಲ್ಲಿ “ಪೋಟು” ಅನ್ನು ಸ್ಥಾಪಿಸಿ ಅವುಗಳಲ್ಲಿ ಲಡ್ಡು ತಯಾರಿಸಲಾಗುತ್ತಿತ್ತು. ಇದನ್ನು ಸಾಮಾನ್ಯವಾಗಿ “ದಿ ಲಾರ್ಡ್ಸ್ ಕಿಚನ್” ಎಂದು ಕರೆಯಲಾಗುತ್ತದೆ, ಈ ಪೋಟುಗಳಲ್ಲಿ ಪ್ರಸಾದವನ್ನು ಉರುವಲುಗಳಿಂದ ಅಂದರೆ ಕಟ್ಟಿಗೆಗಳನ್ನು ಬಳಸಿ ಒಲೆಯಲ್ಲಿ ತಯಾರಿಸಲಾಗುತ್ತಿತ್ತು. 1984ರಿಂದ ಪ್ರತಿದಿನ ಅಗತ್ಯವಿರುವ ಲಡ್ಡುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಎಲ್​ಪಿಜಿ ಬಳಕೆ ಪ್ರಾರಂಭವಾಯಿತು.

ಮತ್ತೊಂದೆಡೆ ತಿರುಪತಿ ಲಡ್ಡುವನ್ನು ವಿಶೇಷ ವಿಧಾನದ ಮೂಲಕ ತಯಾರಿಸಲಾಗುತ್ತದೆ. ಈ ತಯಾರಿಕಾ ವಿಧಾನವನ್ನು ದಿಟ್ಟಂ ಎಂದು ಕರೆಯಲಾಗುತ್ತದೆ. ಇದು ಪ್ರಸಾದವನ್ನು ತಯಾರಿಸಲು ಬಳಸುವ ಪದಾರ್ಥಗಳ ಪಟ್ಟಿ ಮತ್ತು ಅವುಗಳ ಪ್ರಮಾಣವನ್ನು ಒಳಗೊಂಡಿರುತ್ತದೆ. ದಿಟ್ಟಂ ಅನ್ನು ಇದುವರೆಗಿನ ಇತಿಹಾಸದಲ್ಲಿ ಕೇವಲ 6 ಬಾರಿ ಬದಲಾಯಿಸಲಾಗಿದೆ. ಅಂದರೆ ತಿಮ್ಮಪ್ಪನ ಲಡ್ಡು ರುಚಿಯು ಆರು ಬಾರಿ ಮಾರ್ಪಾಡುಗೊಂಡಿದೆ.

Tirupati Laddu prasadam history production and complete details in kannada

ಇನ್ನು 5,100 ಲಡ್ಡು ತಯಾರಿಗೆ 803 ಕೆಜಿ ಪದಾರ್ಥಗಳನ್ನ ಬಳಸುತ್ತಾರೆ. ಹಸುವಿನ ತುಪ್ಪ 165 ಕೆಜಿ, ಕಡಲೆಹಿಟ್ಟು 180 ಕೆಜಿ, ಸಕ್ಕರೆ 400 ಕೆಜಿ, ಒಣದ್ರಾಕ್ಷಿ 18 ಕೆಜಿ, ಕಲ್ಲು ಸಕ್ಕರೆ 8 ಕೆಜಿ, ಏಲಕ್ಕಿ 4 ಕೆಜಿ, ಗೋಡಂಬಿ 30 ಕೆಜಿ ಬಳಸಲಾಗುತ್ತೆ. ನಿತ್ಯವೂ 15 ಟನ್‌ ತುಪ್ಪ ಬಳಕೆ ಮಾಡಿಕೊಂಡು ಲಡ್ಡು ತಯಾರಿ ಮಾಡಲಾಗುತ್ತೆ. ವರ್ಷಕ್ಕೆ ಸುಮಾರು 5 ಸಾವಿರ ಮೆಟ್ರಿಕ್‌ ಟನ್‌ ತುಪ್ಪ ಖರೀದಿಸಲಾಗುತ್ತೆ.

ತಿಂಗಳಿಗೆ 1 ಕೋಟಿಗೂ ಹೆಚ್ಚು ಲಡ್ಡುಗಳನ್ನ ಮಾರಾಟ ಮಾಡಲಾಗುತ್ತೆ. ನಿತ್ಯ ಸುಮಾರು 3ರಿಂದ 3.20 ಲಕ್ಷ ಲಡ್ಡುಗಳನ್ನ ತಯಾರಿಸಲಾಗುತ್ತೆ. ಲಡ್ಡು ಪೊಟ್ಟು ಎಂದು ಕರೆಯಲಾಗುವ ದೇವಸ್ಥಾನದ ಅಡುಗೆ ಕೋಣೆಮನೆಗಳಲ್ಲಿ 3 ಶಿಫ್ಟ್‌ಗಳಲ್ಲಿ 600ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ಕೆಲಸ ಮಾಡ್ತಾರೆ. ಇದರಲ್ಲಿ 150 ಕಾರ್ಮಿಕರು ಖಾಯಂ ಆಗಿದ್ರೆ, 350 ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಾರೆ. ಗುತ್ತಿಗೆ ಕಾರ್ಮಿಕರ ಪೈಕಿ 247 ಜನರು ಅಡುಗೆ ಭಟ್ಟರು ಇದ್ದು, ಟಿಟಿಡಿ ಗಾಗಿ ನಿತ್ಯ ಸರಾಸರಿ 3 ಲಕ್ಷ ಲಡ್ಡು ತಯಾರಿಸಿ ಕೊಡುತ್ತಾರೆ. ಒಟ್ಟಾರೆಯಾಗಿ 8 ಲಕ್ಷ ಲಡ್ಡುಗಳನ್ನ ತಯಾರಿಸುವ ಸಾಮರ್ಥ್ಯವಿರುವ ಮನೆ ಇದಾಗಿದೆ. ಒಂದು ಚಿಕ್ಕ ಲಡ್ಡು ತಯಾರಿಗೆ ಒಟ್ಟು 43 ರೂಪಾಯಿ ಖರ್ಚಾಗುತ್ತೆ. ಚಿಕ್ಕ ಲಡ್ಡು 160 ರಿಂದ 180 ಗ್ರಾಂ ಇರುತ್ತೆ. ಇದರ ಬೆಲೆ 50 ರೂಪಾಯಿ. ದೊಡ್ಡ ಲಡ್ಡು 600 ಗ್ರಾಂ ಇರುತ್ತೆ. ಇದರ ಬೆಲೆ 200 ರೂಪಾಯಿ ಆಗಿದೆ. ಮತ್ತೊಂದೆಡೆ ಇವೆಲ್ಲ ಒಂದು ಕಡೆಯಾದ್ರೆ ಕಲ್ಯಾಣೋತ್ಸವಂ, ಬ್ರಹ್ಮೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೀತಿಯ ಲಡ್ಡುಗಳನ್ನು ತಯಾರಿಸಿ ವಿತರಿಸಲಾಗುತ್ತೆ. 2018 ರಲ್ಲಿ, ಬ್ರಹ್ಮೋತ್ಸವಂ ನಡೆದ ಒಂದೇ ದಿನದಲ್ಲಿ ದಾಖಲೆ ಮಟ್ಟದಲ್ಲಿ 5,13,566 ಲಡ್ಡುಗಳು ಮಾರಾಟವಾಗಿದ್ದವು.

ಇನ್ನು ಇಲ್ಲಿ ಗಮನಿಸುವ ವಿಷಯವೆಂದರೆ ಪ್ರಾಚೀನ ಶಾಸನಗಳ ಪ್ರಕಾರ ಲಡ್ಡು ಅಸ್ತಿತ್ವದಲ್ಲಿ ಇದ್ದುದ್ದನ್ನು 1480 ರಲ್ಲಿ ದಾಖಲಿಸಲಾಗಿದೆ ಮತ್ತು ಇದನ್ನು “ಮನೋಹರಂ” ಎಂದು ಕರೆಯಲಾಗಿದೆ. ತಿರುಮಲೈ ಓಝುಗು (Thirumalai Ozhugu), ತಿರುಮಲ ತಿರುಪತಿ ದೇವಸ್ಥಾನಂ ದಿಟ್ಟಂ, ದಿ ಸ್ಟೋರೀಸ್ ಆಫ್ ತಿರುಪತಿ ಪುಸ್ತಕ ಸೇರಿದಂತೆ ತಮಿಳು ಭಾಷೆಯ ಸಾಹಿತ್ಯಗಳಲ್ಲಿ ತಿರುಪತಿ ಲಡ್ಡು ಬಗೆಗಿನ ಉಲ್ಲೇಖಗಳನ್ನು ಕಾಣಬಹುದು.

ಅಂತಾರಾಷ್ಟ್ರೀಯ ಮಟ್ಟದಲ್ಲೂ ತಿರುಪತಿ ಲಡ್ಡುಗೆ ಬೇಡಿಕೆ ಹೆಚ್ಚಿರುವ ಕಾರಣ ತಿರುಪತಿ ಲಡ್ಡುಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಟಿಟಿಡಿ ಗಮನಕ್ಕೆ ಬಂದಿದೆ. ಇದನ್ನು ಪರಿಹರಿಸಲು, ಟಿಟಿಡಿ ಈ ಚಟುವಟಿಕೆಗಳಲ್ಲಿ ತೊಡಗಿರುವ ಮಧ್ಯವರ್ತಿಗಳನ್ನು ಗುರುತಿಸಿತು ಮತ್ತು ಬ್ಲಾಕ್ ಮಾರ್ಕೆಟಿಂಗ್ ಅನ್ನು ತಡೆಯಲು ಕ್ರಮಗಳನ್ನು ಜಾರಿಗೊಳಿಸಿದೆ. ತಿರುಪತಿಯಲ್ಲಿಯೇ ಭಕ್ತರು ದರ್ಶನ ಟೋಕನ್‌ಗಳನ್ನು ತೋರಿಸಿ ಲಡ್ಡುಗಳನ್ನು ಪಡೆಯಬಹುದು ಮತ್ತು ದರ್ಶನಕ್ಕೆ ಬಂದವರು ಆಧಾರ್ ಕಾರ್ಡ್ ತೋರಿಸಿ ಲಡ್ಡು ಪಡೆಯಬೇಕು. ಇನ್ನು ಟಿಟಿಡಿಯು ಲಡ್ಡುಗಳ ವಿತರಣೆಯನ್ನು ಚೆನ್ನೈ , ಬೆಂಗಳೂರು , ಅಮರಾವತಿ ಮತ್ತು ವಿಶಾಖಪಟ್ಟಣಂನಂತಹ ನಗರಗಳಲ್ಲಿ ಸಂಯೋಜಿತ ದೇವಾಲಯಗಳು ಮತ್ತು ಮಾಹಿತಿ ಕೇಂದ್ರಗಳಲ್ಲಿ ವಿತರಿಸುತ್ತಿದೆ. ಕೆಲವು ದೇವಸ್ಥಾನಗಳು ಬಿಟ್ಟರೆ ಬೇರೆಲ್ಲೂ ತಿಮ್ಮಪ್ಪನ ಪ್ರಸಾದ ಸಿಗುವುದಿಲ್ಲ. ಎಂತದ್ದೇ ಲಡ್ಡುಗಳು ತಿಂದರೂ ತಿರುಪತಿ ಲಡ್ಡುವಿನಂತಹ ರುಚಿ ಸಿಗುವುದಿಲ್ಲ.

ಲಡ್ಡು ಪ್ರಸಾದವನ್ನು ಹೊಟ್ಟೆ ತುಂಬಾ ತಿನ್ನಬಾರದು ಅನ್ನುತ್ತಾರೆ! ಯಾಕೆ?

ಇನ್ನು ಯಾವುದೇ ದೇವರ ಪ್ರಸಾದವಾಗಲಿ ಅದನ್ನು ಹೊಟ್ಟೆ ತುಂಬಾ ತಿನ್ನಬಾರದು ಎಂದು ಹೇಳಲಾಗುತ್ತೆ. ಅದರಲ್ಲೂ ತಿಮ್ಮಪ್ಪನ ಲಡ್ಡು ವಿಚಾರದಲ್ಲಿ ಇದನ್ನು ವಿಶೇಷವಾಗಿ ಹೇಳಲಾಗುತ್ತದೆ. ಏನೆಂದರೆ ಪ್ರಸಾದವಾಗಿ ಲಡ್ಡುವನ್ನು ಹೊಟ್ಟೆಗೆ ತೆಗೆದುಕೊಂಡಾಗ ಹೊಟ್ಟೆ ಸೇರಿ ಜೀರ್ಣವಾಗುವಷ್ಟು ಅದನ್ನು ತಿನ್ನಬಾರದು ಅನ್ನುತ್ತಾರೆ. ಬದಲಿಗೆ ತಿಂದ ಪ್ರಸಾದ ದೇಹದಲ್ಲಿಯೇ ಜೀರ್ಣವಾಗಬೇಕು. ಮಾರನೆಯ ದಿನ ವಿಸರ್ಜನೆಯಾಗಿ ಬರಬಾರದು ಎಂಬುದು ಇದರ ತಾತ್ಪರ್ಯ.

ತಿರುಪತಿಯಲ್ಲಿ ನೀಡಲಾಗುವ ಇತರೇ ಪ್ರಸಾದ

ಈ ಗುಡಿಯಲ್ಲಿ ದೇವರಿಗೆ ಮಾಡಿದ ನಿವೇದನೆಗಳ ಪ್ರಸಾದ ಮಾತ್ರವಲ್ಲದೆ ಹಲವಾರು ಇತರ ಪ್ರಸಾದಗಳನ್ನೂ ಕೊಡುವ ವಾಡಿಕೆಯಿದೆ. ಶುಕ್ರವಾರ ತಿರುಮಂಜನದ ತೀರ್ಥ ಪ್ರಸಿದ್ದವಾದುದು. ದಿನವೂ ಮುಂಜಾನೆಯ ವಿಶ್ವರೂಪ ಸೇವೆಯ ನಂತರ ನಡೆಯುವ ಧರ್ಮದರ್ಶನದಲ್ಲಿ ಕೊಡುವ ತೀರ್ಥ, ರಾತ್ರಿ ದೇವರ ಪಾದಗಳ ನಡುವೆ ಇರಿಸಿದ ಚಂದನದ ಉಂಡೆಗಳಿಂದ ಕೊಡುವ ‘ಶ್ರೀಪಾದ ಚಂದನ. ಬಲಗೈ (ವರದಹಸ್ತದ) ನಡುವೆ ಇರುವ ಮಾಣಿಕ್ಯದ ಮೇಲೆ ಗಂಧವನ್ನು ಒತ್ತಿ ಅದರ ಪ್ರತಿಕೃತಿಯನ್ನು ಮೂಡಿಸಿಕೊಂಡಿರುವ ಚಂದನಮುದ್ರೆ. ದೇವರ ತಿಲಕಕ್ಕೆ ಬಳಸಿದ ಕಸ್ತೂರಿ; ರಾತ್ರಿ ದೇವರ ಪಾದಕವಚವನ್ನು ತೆಗೆದು, ಪುನುಗುತೈಲವನ್ನು ಪಾದಗಳಿಗೆ ಬಳಿದು ಮೇಲೆ ಮುಚ್ಚುವ ಬಟ್ಟೆ, ‘ಶ್ರೀಪಾದವಸ್ತ್ರ’; ದೇವರಿಗೆ ತೊಡಿಸಿದ ರೇಷ್ಮೆ ಸೀರೆ-ಪಂಚೆಗಳು ‘ಶೇಷ-ವಸ್ತ್ರ-ಇವನ್ನೆಲ್ಲ ಭಕ್ತರಿಗೆ ಕೊಡುತ್ತಾರೆ. ಆದರೆ ವಿಶ್ವರೂಪ ತೀರ್ಥವನ್ನು ಬಿಟ್ಟು ಉಳಿದೆಲ್ಲವೂ ಗುತ್ತಿಗೆಯ ಚೌಕಟ್ಟಿನಲ್ಲಿ ಸೇರಿರುವುದರಿಂದ, ಹಣ ಕೊಟ್ಟೇ ಪಡೆಯಬೇಕಾಗುತ್ತದೆ.

ಈ ಕ್ರಮದ ನಿತ್ಯಾರ್ಚನೆಗೆ ‘ತಿರುವಾರಾಧನೆ’ಯೆಂದು ಹೆಸರು. ಯಾವುದೇ ಉತ್ಸವವಾಗಲೀ, ತಿರುವಾರಾಧನೆ ನಡೆದ ಮೇಲೆ ಸಾಮಾನ್ಯ ದಿನಗಳಲ್ಲಿ ಮೊದಲ ಸೇವೆಯಾದ ಸುಪ್ರಭಾತ ಮತ್ತು ವಿಶ್ವರೂಪಸೇವೆ ಮುಂಜಾನೆ ಸುಮಾರು 5 ಗಂಟೆಗೆ ಮೊದಲಾಗಿ, ಧರ್ಮದರ್ಶನ ಸುಮಾರು ಏಳೂವರೆಗಂಟೆಯವರೆಗೆ ನಡೆಯುವ ವಾಡಿಕೆ. ತರುವಾಯ ತೋಮಾಲಸೇವೆ; ಸುಮಾರು ಹನ್ನೊಂದ ಗಂಟೆಯವರೆಗೆ. ಅದಾದಮೇಲೆ ನೈವೇದ್ಯಸಮರ್ಪಣೆ ಮತ್ತಿತರ ವಿಧಿಗಳು ಮುಗಿಯನ ವೇಳೆಗೆ ಹನ್ನೆರಡು ಗಂಟೆ ಹೊಡೆಯುತ್ತದೆ. ಅನಂತರ ಮತ್ತೆ ಧರ್ಮದರ್ಶನ. ದಿನದ ಉಳಿದ ಮುಖ್ಯಸೇವೆಯೆಂದರೆ ರಾತ್ರಿ ಒಂಬತ್ತರ ನಂತರ ನಡೆಯುವ ಏಕಾಂತ ಸೇವೆ ಅಥವಾ ಶಯನೋತ್ಸವ ಎಂದು ಈ ಬಗ್ಗೆ ಇತ್ತೀಚೆಗೆ ಮರುಮುದ್ರಣ ಕಂಡ ಪ್ರೊ. ಎಸ್​ಕೆ ರಾಮಚಂದ್ರರಾವ್​​​ ಅವರ ತಿರುಪತಿ ತಿಮ್ಮಪ್ಪ ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ.

ತಿರುಪತಿ ಲಡ್ಡು ಮೊದಲ ಬಾರಿಗೆ ತಯಾರಿಸಿದ್ದು ಇವರೆ?

ಲಡ್ಡು ಪ್ರಸಾದ ಆರಂಭಿಸಲು ಕಾರಣವಾಗಿದ್ದು ಕಲ್ಯಾಣಂ ಅಯ್ಯಂಗಾರ್ ಎಂಬ ವ್ಯಕ್ತಿ ಎಂದು ಹೇಳಲಾಗುತ್ತೆ. ಇವರನ್ನು ಲಡ್ಡು ರಾಜ ಎಂದು ಕರೆಯಲಾಗುತ್ತೆ. ಈ ಹಿಂದೆ ನೀಡಲಾಗುತ್ತಿದ್ದ ಬೂಂದಿ ಪ್ರಸಾದವನ್ನು ಮೊದಲ ಬಾರಿಗೆ ಲಡ್ಡುವಾಗಿ ಪರಿವರ್ತಿಸಿದ್ದವರಲ್ಲಿ ಅವರ ಕೈಚಳಕ ಇದೆ ಎಂದು ಹೇಳಲಾಗುತ್ತದೆ. ಅವರ ಹೆಸರು ಕನ್ಯಾದಾನಂ ತಾತಾಚಾರ್ಯುಲು. ಅವರು ಮದುವೆ ಸಮಯದಲ್ಲಿ ಬಡವರಿಗೆ ಮಂಗಳಸೂತ್ರ ಮತ್ತು ಹೊಸ ವಸ್ತ್ರಗಳನ್ನು ದಾನ ಮಾಡುತ್ತಿದ್ದುದರಿಂದ ಅವರಿಗೆ ಕಲ್ಯಾಣ ಅಯ್ಯಂಗಾರ್ ಎಂದು ಮದ್ರಾಸ್ ಪ್ರೆಸಿಡೆನ್ಸಿಯ ಪ್ರಧಾನಿಯಾಗಿದ್ದ ಸಿ. ರಾಜಗೋಪಾಲಾಚಾರಿ (ರಾಜಾಜಿ) ಹೆಸರಿಟ್ಟರು.

ಕಲ್ಯಾಣಂ ಅಯ್ಯಂಗಾರ್ ಅವರು ಜನಪ್ರಿಯ ಮಿರಾಸಿದಾರಿ ಪದ್ಧತಿಯನ್ನು ಪರಿಚಯಿಸಿದರು. ಅಡುಗೆ ಮನೆಯಲ್ಲಿ ಲಡ್ಡು ತಯಾರಿಸುವವರನ್ನು ಗೇಮಕರ ಮಿರಾಸಿದಾರರು ಎಂದು ಕರೆಯಲಾಗುತ್ತದೆ. ಈ ಪದ್ಧತಿ ಪ್ರಕಾರ 51 ಲಡ್ಡುಗಳ ಪ್ರತಿ ಲಾಟ್​ನಲ್ಲಿ 11 ಲಡ್ಡುಗಳನ್ನು ಮಿರಾಸಿ ಬ್ರಾಹ್ಮಣ ಕುಟುಂಬಗಳಿಗೆ ನೀಡಲಾಗುತ್ತಿತ್ತು.

2001ರ ನಂತರ ಮಿರಾಸಿ ಪದ್ದತಿ ರದ್ದು

ಇನ್ನು 2001 ರವರೆಗೆ, ಟಿಟಿಡಿ ಸಿಬ್ಬಂದಿ ಲಡ್ಡುಗಳನ್ನು ಸ್ವತಃ ತಯಾರಿಸುತ್ತಿದ್ದರು. ಆದರೆ, ಸಮಯ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾದಂತೆ ಪ್ರತಿದಿನ ಲಡ್ಡು ತಯಾರಿಸುವ ಸಂಖ್ಯೆಯನ್ನು ಹೆಚ್ಚಿಸಬೇಕಾಯಿತು. ಮಿರಾಸಿ ಪದ್ದತಿಯನ್ನು ರದ್ದುಗೊಳಿಸುವಂತೆ ಟಿಟಿಡಿ ಆಡಳಿತ ಮಂಡಳಿಯು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಿ ಗೆದ್ದಿತು. 2001ರಲ್ಲಿ ಮಿರಾಸಿ ಪದ್ದತಿಯನ್ನು ರದ್ದುಗೊಳಿಸಲಾಯಿತು.

ತಿರುಪತಿಯಲ್ಲಿ ವೇಂಕಟೇಶ್ವರ ಸ್ವಾಮಿ ನೆಲೆಸಿದ್ದು ಹೇಗೆ?

ಹಿಂದೂ ಪುರಾಣಗಳ ಪ್ರಕಾರ ಜಗದೊಡೆಯ ವೇಂಕಟೇಶ್ವರನನ್ನು ವಿಷ್ಣುವಿನ ಅವತಾರ ಎಂದು ಹೇಳಲಾಗುತ್ತದೆ. ವರಾಹ ಪುರಾಣ ಮತ್ತು ಭವಿಷ್ಯ ಪುರಾಣಗಳ ಪ್ರಕಾರ ಮಾನವನ ಅವತಾರದಲ್ಲಿ ಜನಿಸಿದ ವಿಷ್ಣುವು ವೇಂಕಟೇಶ್ವರನಾಗಿ ಲಕ್ಷ್ಮಿಯನ್ನು ಹುಡುಕಿ ಹೊರಡುತ್ತಾನೆ. ಅಂದು ಲಕ್ಷ್ಮಿಯನ್ನು ಹುಡುಕಿ ಹೊರಟ ವೇಂಕಟೇಶ್ವರನನ್ನೇ ನಾವಿಂದು ತಿರುಪತಿಯಲ್ಲಿ ಕಾಣಬಹುದಾಗಿದೆ. ವೇಂಕಟೇಶ್ವರ ಎಂದರೆ ವೇಂಕಟಗಳ ಅಧಿಪತಿ. ಅದರ ಅರ್ಥ ಭಗವಾನ್‌ ವೇಂಕಟೇಶ್ವರನು ಭಕ್ತರ ಪಾಪಗಳನ್ನು ನಿವಾರಿಸುತ್ತಾನೆ. ವೇಂಕಟ ಗಿರಿ ಎನ್ನುವುದು ಆಂಧ್ರಪ್ರದೇಶದಲ್ಲಿರುವ ಒಂದು ಬೆಟ್ಟ. ಈಶ್ವರ ಎಂದರೆ ಒಡೆಯ. ಈ ಬೆಟ್ಟಗಳ ಒಡೆಯನೇ ವೇಂಕಟೇಶ್ವರ ಎಂದು ಹೇಳುವುದುಂಟು.

Tirupati Laddu prasadam history production and complete details in kannada

ತಿರುಪತಿಯಿಂದ ಸ್ಥಳೀಯ ಆರ್ಥಿಕತೆಗೂ ಬೆಂಬಲ

ಇನ್ನು ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಯಿಂದಾಗಿ ಸ್ಥಳೀಯ ಆರ್ಥಿಕತೆಗೂ ಬೆಂಬಲ ಸಿಕ್ಕಿದೆ. ಪ್ರತಿನಿತ್ಯ 3 ಲಕ್ಷ ಲಡ್ಡುಗಳು ಅಥವಾ ಅದಕ್ಕಿಂತ ಹೆಚ್ಚು ಪ್ರಸಾದವನ್ನು ತಯಾರಿಸುವುದರಿಂದ ನೂರಾರು ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ. ಸುಮಾರು 600 ಜನರು ದಿನಕ್ಕೆ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ರಹ್ಮೋತ್ಸವದ ಸಮಯದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಲಡ್ಡುಗಳ ಉತ್ಪಾದನೆಯನ್ನು ಹೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ. ವೈಷ್ಣವ ಸಮುದಾಯದ ಕೆಲವು ಸ್ವಯಂಸೇವಕರು ಹಬ್ಬದ ದಿನಗಳಲ್ಲಿ ದೇವಾಲಯದ ಅಡುಗೆಮನೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಾರೆ.

ತಿರುಪತಿ ಪ್ರಸಾದ ಖರೀದಿಸಲು ಜೈವಿಕ ವಿಘಟನೀಯ ಚೀಲಗಳ ಬಳಕೆ

ಇನ್ನು ಭಕ್ತರು ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಲು ಪ್ರಸಾದದ ಕೌಂಟರ್​ಗಳ ಬಳಿಯೇ ಪ್ಲಾಸ್ಟಿಕ್ ಚೀಲಗಳನ್ನೂ ಮಾರಲಾಗುತ್ತೆ. ಭಕ್ತರು ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಲು ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಜೈವಿಕ ವಿಘಟನೀಯ ಚೀಲಗಳೊಂದಿಗೆ ಬದಲಾಯಿಸುವ ಮೂಲಕ ತಿರುಪತಿ ದೇವಸ್ಥಾನದ ಆಡಳಿತವು ಆಗಸ್ಟ್ 2021 ರಲ್ಲಿ ಮಹತ್ವದ ಹೆಜ್ಜೆ ಇಟ್ಟಿತು. ಇವುಗಳಿಗಾಗಿಯೇ ಮೀಸಲಾದ ಕೌಂಟರ್ ಇದ್ದು, ಭಕ್ತರು ಲಡ್ಡು ಕೌಂಟರ್‌ಗಳಿಗೆ ತೆರಳುವ ಮೊದಲು ಈ ಪರಿಸರ ಸ್ನೇಹಿ ಚೀಲಗಳನ್ನು ಖರೀದಿಸಬಹುದು. ಹೈದರಾಬಾದ್‌ನಲ್ಲಿರುವ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಪ್ರಯೋಗಾಲಯದಲ್ಲಿ ಜೋಳದ ಪಿಷ್ಟದಿಂದ ಈ ಚೀಲಗಳನ್ನು ತಯಾರಿಸಲಾಗುತ್ತದೆ. ಈ ಚೀಲಗಳು ಪರಿಸರ ಮತ್ತು ಜಾನುವಾರು ಎರಡಕ್ಕೂ ಹಾನಿಕಾರಕ ಅಲ್ಲ.

ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:33 pm, Mon, 30 September 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ