ಕ್ಲರ್ಕ್​​​ನಿಂದ ಕುಬೇರ: ತಿರುಪತಿಯ ಉಪ ಇಒ ಲೋಕನಾಥಮ್ ಮನೆಯಲ್ಲಿ 5ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ!

ಟಿಟಿಡಿ ಉಪ ಇಒ ಮೆಂಡು ಲೋಕನಾಥಮ್ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದೆ. ಸರ್ಕಾರಿ ಅಂದಾಜಿನ ಪ್ರಕಾರ 5 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಬಹಿರಂಗವಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಹತ್ತಾರು ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಸಾಮಾನ್ಯ ಗುಮಾಸ್ತರಾಗಿ ಸೇರಿ ದೇವಸ್ಥಾನದ ಸೇವೆಯ ಮರೆಯಲ್ಲಿ ಬೆಳೆಸಿದ ಅಕ್ರಮ ಸಾಮ್ರಾಜ್ಯ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಲರ್ಕ್​​​ನಿಂದ ಕುಬೇರ: ತಿರುಪತಿಯ ಉಪ ಇಒ ಲೋಕನಾಥಮ್ ಮನೆಯಲ್ಲಿ 5ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ!
ತಿರುಪತಿಯ ಉಪ ಇಒ ಲೋಕನಾಥಮ್

Updated on: Sep 04, 2026 | 9:42 AM

ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಉಪ ಇಒ (Deputy EO) ಹಂತಕ್ಕೇರಿದ ಮೆಂಡು ಲೋಕನಾಥಮ್ ಅವರ ನಿವಾಸ ಹಾಗೂ ಸಂಬಂಧಿಕರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಏಕಕಾಲೀನ ದಾಳಿಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಬೆಳಕಿಗೆ ಬಂದಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, 5 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಗಳು ಬಹಿರಂಗಗೊಂಡಿವೆ.

ಸಾಮಾನ್ಯ ನೌಕರನಿಂದ ಕೋಟ್ಯಧಿಪತಿಯಾದ ಅಧಿಕಾರಿಯ ಪಯಣ:

ಸಾಮಾನ್ಯ ಗುಮಾಸ್ತರಾಗಿ ಟಿಟಿಡಿಗೆ ಸೇರಿದ್ದ ಲೋಕನಾಥಮ್, ಪ್ರಮುಖ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಉಪ ಇಒ ಹುದ್ದೆಗೆ ಬಡ್ತಿ ಪಡೆದಿದ್ದರು. ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳಲ್ಲಿರುವ ಅವರ ನಿವಾಸಗಳು, ಕಚೇರಿ ಹಾಗೂ ಹತ್ತಿರದ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಸರ್ಕಾರಿ ಲೆಕ್ಕಾಚಾರದ ಪ್ರಕಾರ 5 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಆದರೆ, ಪ್ರಸ್ತುತ ಮುಕ್ತ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಹತ್ತಾರು ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಶೋಧದ ವೇಳೆ ವಶಪಡಿಸಿಕೊಂಡ ಆಸ್ತಿಪಾಸ್ತಿಗಳು:

ತನಿಖಾ ತಂಡಗಳು ನಡೆಸಿದ ಪರಿಶೀಲನೆಯಲ್ಲಿ ತಿರುಪತಿ ಸುತ್ತಮುತ್ತಲಿನ ಐಷಾರಾಮಿ ವಿಲ್ಲಾಗಳು, ದುಬಾರಿ ಪ್ಲಾಟ್‌ಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಬೃಹತ್ ಪ್ರಮಾಣದ ಕೃಷಿ ಭೂಮಿಯ ದಾಖಲೆಗಳು ಪತ್ತೆಯಾಗಿವೆ. ಇದರ ಜೊತೆಗೆ ಬ್ಯಾಂಕ್ ಲಾಕರ್‌ಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಇರಿಸಲಾಗಿದ್ದ ಬೃಹತ್ ಪ್ರಮಾಣದ ನಗದು, ಅಪಾರ ಪ್ರಮಾಣದ ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಭಕ್ತರೇ ಎಚ್ಚರ; 259 ನಕಲಿ ವೆಬ್‌ಸೈಟ್‌ಗಳು ಬಂದ್, ಸೈಬರ್ ಕ್ರೈಮ್ ತನಿಖೆ ಚುರುಕು!

ಆಳವಾದ ತನಿಖೆ ಮತ್ತು ಕಠಿಣ ಕ್ರಮದ ಭರವಸೆ:

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಮಾಡಿರುವ ಪಕ್ಕಾ ಮಾಹಿತಿಯ ಆಧಾರದ ಮೇಲೆಯೇ ಈ ಶೋಧ ಕಾರ್ಯ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಬೇನಾಮಿ ಹೆಸರುಗಳಲ್ಲಿರುವ ಆಸ್ತಿಗಳು ಹಾಗೂ ಬ್ಯಾಂಕ್ ವಹಿವಾಟುಗಳ ಬಗ್ಗೆ ಆಳವಾದ ತನಿಖೆ ಮುಂದುವರಿದಿದ್ದು, ಅಧಿಕಾರ ದುರುಪಯೋಗಪಡಿಸಿಕೊಂಡು ಗಳಿಸಿದ ಪ್ರತಿಯೊಂದು ಅಕ್ರಮ ಆಸ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾದ ಪ್ರಕರಣ:

ಸಾಮಾನ್ಯ ನೌಕರನೊಬ್ಬ ಶ್ರೀವಾರಿಯ ಸೇವೆಯ ಹೆಸರಿನಲ್ಲಿ ಇಷ್ಟೊಂದು ಬೃಹತ್ ಮಟ್ಟದ ಸಂಪತ್ತು ಗಳಿಸಿದ್ದು ಹೇಗೆ ಎಂಬ ಬಗ್ಗೆ ಸ್ಥಳೀಯವಾಗಿ ತೀವ್ರ ಚರ್ಚೆ ಮತ್ತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಶಂಕಿತ ವ್ಯಕ್ತಿಗಳ ಜಾಲವನ್ನು ಜಾಲಾಡಲು ಎಸಿಬಿ ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us