AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸದೇ ಹಾಗೆಯೇ ಬರಬಾರದು ಯಾಕೆ?

ದೇವಾಲಯದಲ್ಲಿ ಪ್ರಸಾದವನ್ನು ನಿರ್ಲಕ್ಷಿಸುವುದರಿಂದ ಅಥವಾ ನಿರಾಕರಿಸುವುದರಿಂದ ದೈವಿಕ ಕೃಪೆ ಮತ್ತು ಬಲವು ದೂರವಾಗುತ್ತದೆ. ಪ್ರಸಾದವು ಭಗವಂತನ ದೃಷ್ಟಿಗೆ ಒಳಗಾಗಿ ವಿಶೇಷ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ಭಕ್ತಿಯಿಂದ ಸ್ವೀಕರಿಸುವುದರಿಂದ ಕೀರ್ತಿ, ಶುಭ ಫಲಗಳು ದೊರೆತು ಮಾಟ ಮಂತ್ರ ದೋಷಗಳು ಮತ್ತು ಗ್ರಹಕಾಟಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

Daily Devotional: ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸದೇ ಹಾಗೆಯೇ ಬರಬಾರದು ಯಾಕೆ?
ದೇವಸ್ಥಾನದಲ್ಲಿ ನೀಡುವ ಪ್ರಸಾದImage Credit source: Pinterest
ಅಕ್ಷತಾ ವರ್ಕಾಡಿ
|

Updated on: Apr 30, 2026 | 10:11 AM

Share

ನಮ್ಮ ಕರ್ಮಗಳನ್ನು ತೊಳೆದುಕೊಳ್ಳಲು ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಪಡೆಯಲು ದೇವಾಲಯಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ದೈವಿಕ ಸ್ಥಳಗಳಲ್ಲಿ ಭಗವಂತನಿಗೆ ಅರ್ಪಿಸಿರುವ ಪ್ರಸಾದವನ್ನು ನಿರ್ಲಕ್ಷಿಸುವುದು ಅಥವಾ ನಿರಾಕರಿಸುವುದು ದೊಡ್ಡ ಆಧ್ಯಾತ್ಮಿಕ ಅಪರಾಧ ಎಂದು ಹೇಳಲಾಗುತ್ತದೆ. ಪ್ರಸಾದ ಕೇವಲ ಭೌತಿಕ ಆಹಾರ ಪದಾರ್ಥವಲ್ಲ. ಇದು ದೇವರಿಗೆ ಅರ್ಪಿಸಿದ ಹೂವು, ಕುಂಕುಮ, ವಿಭೂತಿ ಅಥವಾ ಯಾವುದೇ ಭೋಜನ ಪದಾರ್ಥವಾಗಿರಬಹುದು. ಇದನ್ನು ಭಕ್ತಿಯಿಂದ ಸ್ವೀಕರಿಸಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಪ್ರಸಾದವನ್ನು ನಿರ್ಲಕ್ಷಿಸಿದರೆ ಅಥವಾ “ನಾನು ಸ್ಥಿತಿವಂತ, ದೊಡ್ಡ ಸ್ಥಾನದಲ್ಲಿದ್ದೇನೆ, ನನಗೆ ಇವೆಲ್ಲ ಬೇಡ” ಎಂಬ ಅಹಂಕಾರದಿಂದ ತಿರಸ್ಕರಿಸಿದರೆ, ಪ್ರಪ್ರಥಮವಾಗಿ ದೈವಿಕ ಕೃಪೆ ಮತ್ತು ದೈವಬಲವು ಹೊರಟುಹೋಗುತ್ತದೆ. ಪ್ರತಿಯೊಬ್ಬರಿಗೂ ಒಂದು ಪ್ರಭಾವಳಿ ಇರುತ್ತದೆ. ಈ ಪ್ರಭಾವಳಿ ಅಥವಾ ಆಧ್ಯಾತ್ಮಿಕ ಶಕ್ತಿಯೇ ವ್ಯಕ್ತಿಯನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ. ಪ್ರಸಾದ ನಿರಾಕರಣೆಯು ಈ ಪ್ರಭಾವಳಿಯನ್ನು ದುರ್ಬಲಗೊಳಿಸಿ, ಉದ್ಯೋಗ ನಷ್ಟ, ರಾಜಕೀಯದಲ್ಲಿ ಕಷ್ಟಗಳು ಅಥವಾ ಇತರೆ ಅಡ್ಡಿ ಆತಂಕಗಳಿಗೆ ಕಾರಣವಾಗಬಹುದು. ದೇವಾಲಯದಲ್ಲಿ ಎಲ್ಲಾ ಭಕ್ತರು, ಶ್ರೀಮಂತರು ಅಥವಾ ಬಡವರು, ಸಮಾನರು ಎಂಬ ಭಾವನೆಯನ್ನು ಅಳವಡಿಸಿಕೊಳ್ಳಬೇಕು.

ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸುವುದರಿಂದ ಕೀರ್ತಿ, ಪ್ರತಿಷ್ಠೆಗಳು ದೊರೆಯುತ್ತವೆ. ಮಾಟ ಮಂತ್ರ ದೋಷಗಳು, ಗ್ರಹಕಾಟಗಳು ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತವಾಗುತ್ತವೆ. ಭಗವಂತನಿಗೆ ಅರ್ಪಿಸಿದ ಪ್ರಸಾದದ ಮೇಲೆ ಆತನ ದೃಷ್ಟಿ ಬಿದ್ದಿರುತ್ತದೆ. ಇದರಿಂದ ಪ್ರಸಾದಕ್ಕೆ ಒಂದು ವಿಶಿಷ್ಟ ಶಕ್ತಿ ದೊರೆಯುತ್ತದೆ. ಚಿಕ್ಕ ಮಕ್ಕಳಿದ್ದಾಗ, ದೇವಸ್ಥಾನದಲ್ಲಿ ನೀಡುವ ಚಿತ್ರಾನ್ನ ಅಥವಾ ಪುಳಿಯೋಗರೆಯನ್ನು ರುಚಿಕರವಾಗಿ ಭಾವಿಸಿ “ಇನ್ನೂ ಸ್ವಲ್ಪ ಕೊಡಿ ಸ್ವಾಮಿ” ಎಂದು ಕೇಳುತ್ತಿದ್ದೆವು. ಆಧುನಿಕ ನಾಗರಿಕತೆಯ ಪ್ರಭಾವದಿಂದ ಕೆಲವರು ತಮ್ಮ ಮಕ್ಕಳ ಶಿಕ್ಷಣ ಅಥವಾ ಸ್ಥಾನಮಾನದ ಕಾರಣದಿಂದ ಪ್ರಸಾದವನ್ನು ನಿರ್ಲಕ್ಷಿಸುತ್ತಾರೆ. ಇದು ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪುರಾಣಗಳಲ್ಲಿ ದೇವೇಂದ್ರನ ಉದಾಹರಣೆಯನ್ನು ನೋಡಬಹುದು. ಮದ್ಯಪಾನ ಮಾಡಿ ರಂಭೆಯೊಂದಿಗೆ ಇದ್ದಾಗ, ದೂರ್ವಾಸ ಮಹರ್ಷಿಗಳು ಕೈಲಾಸದಿಂದ ತಂದ ಪ್ರಸಾದವನ್ನು ದೇವೇಂದ್ರ ನಿರ್ಲಕ್ಷಿಸಿ ತಳ್ಳಿಬಿಟ್ಟನು. ಇದರ ಪರಿಣಾಮವಾಗಿ, ದೇವೇಂದ್ರ ತನ್ನ ರಾಜ್ಯಭಾರವನ್ನು ಕಳೆದುಕೊಂಡನು, ದೇವತೆಗಳು ಅವನ ವಿರುದ್ಧ ಯುದ್ಧ ಘೋಷಿಸಿದರು ಮತ್ತು ಅವನ ಮನಸ್ಸು ಚಂಚಲವಾಯಿತು. ತನ್ನ ತಪ್ಪನ್ನು ಅರಿತ ನಂತರ, ದೇವೇಂದ್ರ ಮತ್ತೆ ಪ್ರಸಾದವನ್ನು ತಯಾರಿಸಿ ಹಲವರಿಗೆ ಅರ್ಪಿಸಿದನು. ಈ ಕಥೆಯು ಪ್ರಸಾದದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಕುಂಕುಮ ಮತ್ತು ವಿಭೂತಿಯಂತಹ ಪ್ರಸಾದವನ್ನು ದೇವಸ್ಥಾನದ ಬಾಗಿಲಲ್ಲೇ ಬಿಸಾಡುವುದು ಅಥವಾ ಗೋಡೆಗಳಿಗೆ ಹಚ್ಚುವುದು ಸಹ ತಪ್ಪು. ಅದನ್ನು ಮನೆಗೆ ತಂದು ಸ್ನಾನಕ್ಕೆ, ನಿತ್ಯ ಉಪಯೋಗಕ್ಕೆ ಬಳಸಬೇಕು. ಹೆಚ್ಚುವರಿಯಾಗಿದ್ದರೆ, ಅದನ್ನು ನೀರಿನಲ್ಲಿ ಬಿಡಬೇಕು. ಪ್ರಸಾದ ನಿರ್ಲಕ್ಷತೆಯು ಅದೃಷ್ಟವಿದ್ದರೂ ಜೀವನದಲ್ಲಿ ಕಷ್ಟಗಳನ್ನು ತರಬಹುದು ಎಂದು ಗುರೂಜಿ ಎಚ್ಚರಿಸಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us