Varamahalakshmi Vratha 2022: ಲಕ್ಷ್ಮೀ ಹಬ್ಬದ, ಆಚರಣೆ, ಶುಭ ಮುಹೂರ್ತ ಮತ್ತು ಪೂಜಾ ವಿಧಿ ಇಲ್ಲಿದೆ

Varamahalakshmi Vratha 2022; ಕಾಯಕದಲ್ಲಿ ಶೌರ್ಯಲಕ್ಷ್ಮೀ , ಸಕಲ ಗುಣಗಳಲ್ಲಿ ಕೀರ್ತಿಲಕ್ಷ್ಮೀ, ಸರ್ವಾಂಗಗಳಲ್ಲೂ ಸೌಮ್ಯಲಕ್ಷ್ಮೀ ಈ ರೀತಿಯಾಗಿ ಲಕ್ಷ್ಮೀದೇವಿಯು ವರದೆಯಾಗಿ ನನಗೆ ಸೌಭಾಗ್ಯವನ್ನು ಅನುಗ್ರಹಿಸಲಿ ಮತ್ತು ಜೀವನದ ಪರಮೋದ್ದೇಶವಾದ ಧರ್ಮಾರ್ಥ ಕಾಮ ಮೋಕ್ಷಗಳನ್ನು ಕರುಣಿಸಲಿ ಎಂಬುದಾಗಿ ಅವಳ ಸ್ತುತಿ.

Varamahalakshmi Vratha 2022: ಲಕ್ಷ್ಮೀ ಹಬ್ಬದ, ಆಚರಣೆ, ಶುಭ ಮುಹೂರ್ತ ಮತ್ತು ಪೂಜಾ ವಿಧಿ ಇಲ್ಲಿದೆ
Varamahalakshmi Vratha
TV9kannada Web Team

| Edited By: ಅಕ್ಷಯ್​ ಕುಮಾರ್​​

Aug 04, 2022 | 10:37 AM

ಮಾನವರು ಆತ್ಮೋದ್ಧಾರಕ್ಕಾಗಿ ಭಗವಂತನನ್ನು ವಿಧವಿಧವಾಗಿ ಪೂಜಿಸುವುದು, ಪ್ರಾರ್ಥಿಸುವುದು ಆರಾಧಿಸುವುದು ನಮ್ಮ ಸನಾತನ ಸಂಸ್ಕೃತಿಯ ಪದ್ಧತಿ. ಅದರಲ್ಲೂ ಕೆಲವು ವ್ರತಗಳನ್ನು ಇಂತಹದೇ ಮಾಸದಲ್ಲಿ ಮಾಡಬೇಕು ಎಂಬ ನಿಯಮವಿದೆ. ಯಾಕೀ ನಿಯಮ ಎಂದು ಪ್ರಶ್ನೆ ಬರಬಹುದು. ಧರ್ಮಶಾಸ್ತ್ರದ ಪ್ರಕಾರ ಕಾಲಕ್ಕೆ ತುಂಬಾ ಮಹತ್ವವಿದೆ. ಆದ ಕಾರಣ ವ್ರತಗಳನ್ನು ಆಯಾಯ ಮಾಸದಲ್ಲೇ ಮಾಡಿದರೆ ವಿಶೇಷ ಫಲ ಲಭ್ಯವಾಗುತ್ತದೆ. ಅದರಲ್ಲಿ ಶ್ರಾವಣಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮೀ ವ್ರತದ ಬಗ್ಗೆ ಇಂದು ನಾವು ತಿಳಿಯೋಣ. ವ್ರತದ ಕುರಿತಾಗಿ ಶಾಸ್ತ್ರ ಹೀಗೆ ಹೇಳುತ್ತದೆ.

ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾನ್ತ್ಯ ಭಾರ್ಗವೇ | ವರಲಕ್ಷ್ಮ್ಯಾವ್ರತಂ ಕಾರ್ಯಂ ಸರ್ವಸಿದ್ಧಿಪ್ರದಾಯಕಮ್ || ನಭೋ ಮಾಸೇ ಪೂರ್ಣಿಮಾಯಾಮಂತಿಕಸ್ಥೇ ಭೃಗೋರ್ದಿನೇ | ಮತ್ಪೂಜಾ ತತ್ರಕರ್ತವ್ಯಾ ಸರ್ವಸಿದ್ಧಿಪ್ರದಾಯಿನೀ ||

ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಪೂರ್ಣಿಮೆಗೆ ಅತೀ ಹತ್ತಿರದ ಶುಕ್ರವಾರದಂದು ಈ ವರಮಹಾಲಕ್ಷ್ಮೀವ್ರತವನ್ನು ಆಚರಿಸುವ ವಿಧಿಯಿದೆ. ಹಾಗೆಯೇ ಶ್ರಾವಣ ಮಾಸದ ಪೂರ್ಣಿಮೆಯಂದು ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ವಿಧಿಯೂ ಇದೆ. ಇದರಲ್ಲಿ ಹುಣ್ಣಿಮೆಯಂದು ಶುಕ್ರವಾರವಿದ್ದು (ಅಂದು ಸೂರ್ಯೋದಯದಿಂದ ಅಸ್ತದ ವರೆಗೂ ಹುಣ್ಣಿಮೆಯಿದ್ದರೆ ಮಾತ್ರ ಮಾಡುವುದು) ಆಕಾಲದ್ದಲ್ಲಿ ವ್ರತ ಮಾಡುವುದು ತುಂಬಾ ವಿಶೇಷ. ಇದು ಸಾಯಂಕಾಲ ಅಂದರೆ ಸೂರ್ಯಾಸ್ತದ ವೇಳೆಗೆ (ಗೋಧೂಳಿ ಸಮಯದಲ್ಲಿ) ಮಾಡುವ ವ್ರತವಾದ್ದರಿಂದ ಚಂದ್ರನ ಅನುಕೂಲ ತುಂಬಾ ಅವಶ್ಯಕ.

ಈ ಸಲದ ಶ್ರಾವಣ ಮಾಸದಲ್ಲಿ ಹೇಗಿದೆಯೆಂದರೆ – ಶ್ರಾವಣ ಮಾಸದ (29/07/22) ಆರಂಭ ಶುಕ್ರವಾರವೇ ಆಗಿದ್ದು ವಿಶೇಷ. ಆದರೆ ಅಂದು ಚಂದ್ರದರ್ಶನವಿಲ್ಲದಿರುವುದರಿಂದ ಅಂದು ಯಾವುದೇ ರೀತಿಯಲ್ಲೂ ವರಲಕ್ಷ್ಮೀ ಆರಾಧನೆ ಮಾಡುವುದು ಉತ್ತಮವಲ್ಲ. ಎರಡನೇ ಶುಕ್ರವಾರ (5/08/22) ದಂದು ಅಷ್ಟಮೀ ತಿಥಿಯಿದೆ. ಅಂದು ಚಂದ್ರದರ್ಶನ ಇದ್ದೇ ಇದೆ. ಅಲ್ಲದೇ ಅಷ್ಟಮೀ ತಿಥಿಯೆಂಬುದು ಲಕ್ಷ್ಮಿಯ ಆರಾಧನೆಗೆ ವಿಶೇಷ ತಿಥಿ. ಇನ್ನು ಹುಣ್ಣಿಮೆಯಂದು ಶುಕ್ರವಾರವಿದೆಯಾದರೂ ಅಂದು ಕೇವಲ ಎರಡು ಘಳಿಗೆಗಳ ಕಾಲ ಮಾತ್ರ ಹುಣ್ಣಿಮೆಯಿದೆ. ಸೂರ್ಯಾಸ್ತದ ವೇಳೆಗೆ ಪಾಡ್ಯ ಬಂದಿರುತ್ತದೆ (ಕೃಷ್ಣಪಕ್ಷ ಆರಂಭವಾಗಿರುತ್ತದೆ) ಆದ್ದರಿಂದ ಅಂದು ವ್ರತದ ಆಚರಣೆ ಅಷ್ಟೊಂದು ಪ್ರಶಸ್ತವಲ್ಲ. ಈ ಎಲ್ಲ ಸಮಯಗಳನ್ನು ಸರಿಯಾಗಿ ವಿಚಾರ ಮಾಡಿದರೆ 5/08/22ರಂದು ಅಷ್ಟಮಿತಿಥಿಯಿದೆ ಅಂದಿನ ಶುಕ್ರವಾರ (ಹುಣ್ಣಿಮೆಯ ಹತ್ತಿರದ ಶುಕ್ರವಾರವೂ ಹೌದು)ಸಾಯಂಕಾಲ ವರಮಹಾಲಕ್ಷ್ಮೀವ್ರತ ಮಾಡುವುದು ಪ್ರಶಸ್ತ.

ಏನೀ ವರಮಹಾಲಕ್ಷ್ಮೀವ್ರತವೆಂದರೆ ಎಂದು ನೋಡೋಣ – ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ವರಮಹಾಲಕ್ಷ್ಮೀ ಎನಿಸುತ್ತಾಳೆ. “ವರದಾ ಮಹಾಲಕ್ಷ್ಮೀಃ , ವರಾಚ ಲಕ್ಷ್ಮೀಶ್ಚ” ಎಂದು ಶಬ್ದದ ವ್ಯುತ್ಪತ್ತಿ/ ತಾತ್ಪರ್ಯವಾಗಿದೆ. ಲೋಕಮಾತಾ, ಮಂಗಲಮಾತಾ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ದೇವಿಯು ಸರ್ವಜೀವಿಗಳಿಗೂ ತಾಯಿಯಾಗಿ ಸರ್ವಾಭೀಷ್ಟಗಳನ್ನು ಕರುಣಿಸುವ ವರಮಾತೆಯಾಗಿರುವಳು. ಆದ್ದರಿಂದಲೇ ಇವಳು ಸರ್ವಪೂಜ್ಯಳು. ಅಲ್ಲದೇ ಲಕ್ಷ್ಮೀ ಎಂಬ ಪದದ ಅರ್ಥ ಎಲ್ಲದನ್ನು ಎಲ್ಲವನ್ನು ಸದಾ ಲಕ್ಷ್ಯದಲ್ಲಿಟ್ಟುಕೊಂಡಿರುವವಳು ಅರ್ಥಾತ್ ಎಲ್ಲ ಕಡೆ ದೃಷ್ಟಿ ಇರುವವಳು ಎಂದು. ಸರ್ವಶಕ್ತನಾದ ಭಗವಂತನ ನಿತ್ಯಸಹಯೋಗ ಹೊಂದಿರುವುದರಿಂದ ಮತ್ತು ನಾರಾಯಣನ ಹೃದಯವೇ ಲಕ್ಷ್ಮೀ ಆಗಿರುವುದರಿಂದ ಜಗನ್ಮಾತೆಯೇ ಆಕೆ ಎಂಬ ಅರ್ಥವನ್ನು ಆ ಶಬ್ದ ನೀಡುತ್ತದೆ. ಲಕ್ಷ್ಮಿಯ ಕುರುತಾಗಿ ಶಾಸ್ತ್ರ ಹೀಗೆ ಹೇಳುತ್ತದೆ

ವಕ್ತ್ರಾಚ್ಛ್ರೀ ಭಾಗ್ಯಲಕ್ಷ್ಮೀಃ ಕರತಲ ಕಮಲೇ ಸರ್ವದಾ ಧಾನ್ಯಲಕ್ಷ್ಮೀಃ |

ದೋರ್ದಂಡೇ ವೀರಲಕ್ಷ್ಮೀಃ ಹ್ರದಯ ಸರಸಿಜೇ ಭೂತಕಾರುಣ್ಯಲಕ್ಷ್ಮೀಃ ||

ಖಡ್ಗಾಗ್ರೇ ಶೌರ್ಯಲಕ್ಷ್ಮೀಃ ನಿಖಿಲಗುಣಗುಣಾಡಂಬರೇ ಕೀರ್ತಿಲಕ್ಷ್ಮೀಃ |

ಸರ್ವಾಂಗೇ ಸೌಮ್ಯಕ್ಷ್ಮೀಃ ಸಪದಿ ಭವತು ಮೇ ಧರ್ಮಮೋಕ್ಷಾರ್ಥ ಸಿದ್ಧ್ಯೈ ||

ಇಲ್ಲಿ ಮಾನವನ ಸಂಪೂರ್ಣ ಅಂಗಗಳಲ್ಲಿ ಲಕ್ಷ್ಮಿಯ ಸಾನ್ನಿಧ್ಯ ಹೇಗಿದೆ ಎಂಬುದನ್ನು ವಿವರಿಸಲಾಗಿದೆ. ಮನುಷ್ಯನ ಶರೀರವೇ ಲಕ್ಷ್ಮೀಮಯ. ಮುಖದಲ್ಲಿ ಭಾಗ್ಯಲಕ್ಷ್ಮೀ, ಕರಕಮಲದಲ್ಲಿ (ಕೈಯಲ್ಲಿ) ಧಾನ್ಯಲಕ್ಷ್ಮೀ, ತೋಳಲ್ಲಿ ವೀರಲಕ್ಷ್ಮೀ, ಹೃದಯದಲ್ಲಿ ದಯಾಲಕ್ಷ್ಮೀ, ಕೆಲಸದಲ್ಲಿ/ಕಾಯಕದಲ್ಲಿ ಶೌರ್ಯಲಕ್ಷ್ಮೀ , ಸಕಲ ಗುಣಗಳಲ್ಲಿ ಕೀರ್ತಿಲಕ್ಷ್ಮೀ, ಸರ್ವಾಂಗಗಳಲ್ಲೂ ಸೌಮ್ಯಲಕ್ಷ್ಮೀ ಈ ರೀತಿಯಾಗಿ ಲಕ್ಷ್ಮೀದೇವಿಯು ವರದೆಯಾಗಿ ನನಗೆ ಸೌಭಾಗ್ಯವನ್ನು ಅನುಗ್ರಹಿಸಲಿ ಮತ್ತು ಜೀವನದ ಪರಮೋದ್ದೇಶವಾದ ಧರ್ಮಾರ್ಥಕಾಮಮೋಕ್ಷಗಳನ್ನು ಕ್ರಮವಾಗಿ ಕರುಣಿಸಲಿ ಎಂಬುದಾಗಿ ಅವಳ ಸ್ತುತಿ.

ಹೀಗೆ ಈತರನಾದ ಭಾವದಿಂದ ಕೂಡಿ ವ್ರತದ ದಿನ ಪ್ರಾತಃಕಾಲದಲ್ಲಿ ಸ್ನಾನಾದಿಗಳನ್ನು ಮುಗಿಸಿ ಶುಭ್ರವಾದ ಕಲಶದಲ್ಲಿ ಜಲವನ್ನು ತುಂಬಿ ದೇವರ ಮನೆಯಲ್ಲಿಡಬೇಕು. ಅಂದಿನ ದಿನ ಫಲಾಹಾರ ಅಥವಾ ನಿರಾಹಾರವಾಗಿದ್ದು ಸಾಯಂಕಾಲ ಮುತ್ತೈದೆಯರನ್ನು ಆಹ್ವಾನಿಸಿ ಪೂಜೆಮಾಡಬೇಕು. ಈ ದಿನದಂದು ನಾವು ಸಕುಟುಂಬಿಕರಾಗಿ ತಾಯಿಯ ಕುರಿತಾಗಿ ಕಲಶಸ್ಥಾಪನೆ ಮಾಡಿ ಲಕ್ಷ್ಮಿಯ ಸಾನ್ನಿಧ್ಯದಲ್ಲಿ ಆಯುಷ್ಯ,ಆರೋಗ್ಯ, ಸಂತಾನ, ಐಶ್ವರ್ಯ ಕಾರ್ಯಸಿದ್ಧಿ ಮೊದಲಾದ ಸತ್ಫಲಗಳು ಕೈಗೂಡಲಿ ಎಂದು ಸಂಕಲ್ಪಿಸಿ, ಲಕ್ಷ್ಮೀದೇವಿಗೆ ಹಾಲು, ಜೇನುತುಪ್ಪ, ಸೀಯಾಳಗಳಿಂದ ಅಭಿಷೇಕ (ಮೂರ್ತಿಗೆ) ಮಾಡಬೇಕು. ಅನಂತರ ಮೂರ್ತಿಯನ್ನು ತೊಳೆದು ಅದಕ್ಕೆ ಗಂಧ ಅಕ್ಷತೆಗಳನ್ನು ಹಾಕಿ,ಬಟ್ಟೆ ಉಡಿಸಿ ಷೋಡಶೋಪಚಾರಪೂಜೆಗಳನ್ನು ಮಾಡಬೇಕು. ವಿಶೇಷ ಭಕ್ಷ್ಯಗಳನ್ನು ಮಾಡಿ ತಾಯಿಗೆ ನೈವೇದ್ಯ ಮಾಡಬೇಕು.ಆಮೇಲೆ ಮುತ್ತೈದೆಯರೊಡಗೂಡಿ ತುಪ್ಪದಾರತಿ,ಕರ್ಪೂರಾರತಿ ಮಾಡಿ ಮಂತ್ರಪುಷ್ಪ ಸಮರ್ಪಿಸಿ ಈ ರೀತಿಯಾಗಿ ಪ್ರಾರ್ಥಿಸಿ

ನಮಸ್ತೇ ಚಿದ ಚಿದ್ವರ್ಗ ಸಂರಕ್ಷಣ ವಿಚಕ್ಷಣೇ |

ಜಗದ್ವಿಧಾನ ಶಿಲ್ಪಿನ್ಯೈ ವಿಷ್ಣುಪತ್ನ್ಯೈ ನಮೋಸ್ತುತೇ ||

ಲಕ್ಷ್ಮೀನಾರಾಯಣೌ ವಂದೇ ಜಗತಾಮಾದಿದಂಪತೀ |

ಸರ್ವಕಲ್ಯಾಣ ಸಿಧ್ಯರ್ಥಂ ಹ್ರದಯೈಕ್ಯಂ ಸದಾಶ್ರಿತಾ || ಎಂದು. ಇದು ಅತ್ಯಂತ ಮಹತ್ವಪೂರ್ಣ ಪ್ರಾರ್ಥನಾಶ್ಲೋಕ.

ವ್ರತದ ಫಲ ಮತ್ತು ಸ್ವರೂಪ 

ಇದೊಂದು ಅತ್ಯಂತ ಪುಣ್ಯಪ್ರದ ವ್ರತವಾಗಿದೆ. ಇದರ ಸಂಕ್ಷೇಪ ರೂಪ ಇಂತಿದೆ. ಪಾರ್ವತಿಯು ಶಿವನಲ್ಲಿ ಲೋಕಕಲ್ಯಾಣಕ್ಕಾಗಿ ರಹಸ್ಯವಾಗಿರುವ ಸಂಪತ್ತನ್ನು ಕೊಡುವ ವ್ರತವನ್ನು ಹೇಳಿರಿ ಎಂದು ಕೇಳಿದಾಗ ಶಿವನು ಈ ವ್ರತವನ್ನು ಹೇಳುತ್ತಾನೆ. ರಮಣೀಯವಾದ ಕೌಂಡಿನ್ಯವೆಂಬ ನಗರದಲ್ಲಿ ಚಾರುಮತಿಯೆಂಬ ಒಬ್ಬಳು ಸ್ತ್ರೀಯು ತನ್ನ ಮನೆಯಲ್ಲಿ ಪತಿಯ,ಅತ್ತೆಮಾವಂದಿರ ಮತ್ತು ಅತಿಥಿಗಳ ಸೇವೆ ಹಾಗೂ ದೇವತಾಕಾರ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಳು. ಆದರೆ ಅವಳಿಗೆ ಸಂತಾನದ ಕೊರತೆಯಿತ್ತು.

ಅವಳು ಅದಕ್ಕೆಂದೂ ಬೇಸರಿಸದೇ ಭಗವತಿಯ ಪೂಜೆಯನ್ನು ಮಾಡುತ್ತಿದ್ದಳು. ಇದರ ಫಲವೋ ಎಂಬಂತೆ ಒಂದಿರುಳು ಅವಳ ಸ್ವಪ್ನದಲ್ಲಿ ಲಕ್ಷ್ಮಿಯು ಬಂದು ಚಾರುಮತಿಯೇ ನೀನು ಶ್ರಾವಣ ಮಾಸದ ಪೂರ್ಣಿಮೆಯಂದು ಅಥವಾ ಅದರ ಮೊದಲ ಶುಕ್ರವಾರದಂದು ಲಕ್ಷ್ಮಿಯ ಪ್ರತಿಮೆಯನ್ನು ಮತ್ತು ಕಲಶವನ್ನು ಗೋಧಿಯ ರಾಶಿಯ ಮೇಲೆ ಇಟ್ಟು ಅದಕ್ಕೆ ಉತ್ತಮವಾದ ಬಟ್ಟೆಯಿಂದ ಅಲಂಕರಿಸಿ , ಮುತ್ತೈದೆಯರಿಗೆ ಬಾಗೀನ ನೀಡಿ, ಅತಿರಸ,ಪಕ್ವಾನ್ನ ಮೊದಲಾದ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಪೂಜಿಸು ಮತ್ತು ಅಂದು ಕೆಂಪುಬಣ್ಣದ ದಾರವನ್ನು ಪೂಜಿಸಿ ಅದನ್ನು ಮಾಂಗಲ್ಯದೊಂದಿಗೆ ಧರಿಸು. ಇದುವೆ ವರಮಹಾಲಕ್ಷ್ಮೀವ್ರತ ಇದನ್ನು ಮಾಡು ನಿನಗೆ ಮಂಗಲವಾಗುವುದು ಎಂದು ಹರಸುತ್ತಾಳೆ. ಅದರಂತೆ ಚಾರುಮತಿಯು ಶ್ರಾವಣ ಶುಕ್ರವಾರ ಸಾಯಂಕಾಲ ಪೂಜಿಸಿ ಒಳ್ಳೆಯ ಸಂತಾನಗಳನ್ನು ಪಡೆದು ಸೌಭಾಗ್ಯವತಿಯಾದಳು. ಅದರಂತೆ ನಾವೆಲ್ಲ ಲಕ್ಷ್ಮಿಯನ್ನು ಪೂಜಿಸಿ ಧನ್ಯರಾಗೋಣ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

ಇದನ್ನೂ ಓದಿ

S.R.B.S.S College ಹೊನ್ನಾವರ, kkmanasvi@gamail.com

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada